ಶನಿವಾರ, ಮೇ 28, 2022
26 °C

ಉತ್ತಮ ಮಳೆ: ಕೃಷಿ ಚಟುವಟಿಕೆ ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ಕಳೆದ ಮೂರು ದಿನಗಳಿಂದ ಬಿದ್ದ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ಭೂಮಿ ಹಸನುಗೊಳಿಸಿದ್ದ ರೈತರಿಗೆ ಮುಂಗಾರು ನಿರೀಕ್ಷೆಯನ್ನು ಹುಸಿ ಮಾಡಿಲ್ಲ.ಕಾರಹುಣ್ಣಿಮೆ ನಂತರ ಮಳೆ ಬರುವ ವಿಶ್ವಾಸದಿಂದ ತಾಲ್ಲೂಕಿನ ಕಲ್ಲೂರ ಕಠ್ಠಳ್ಳಿ, ಸಿಂಧನಕೇರಾ, ಗಡವಂತಿ ಮತ್ತು ಹುಡಗಿ ಗ್ರಾಮಗಳಲ್ಲಿ ಬೆರಳೆಣಿಕೆ ರೈತರು ಬಿತ್ತನೆ ಪೂರೈಸಿ ಮಳೆ ನಿರೀಕ್ಷೆಯಲ್ಲಿದ್ದರು. ಶೇ 95ಪ್ರತಿಶತ ರೈತರು ಬಿತ್ತನೆಗೆ ಬೇಕಾಗುವ ಸೋಯಾಬೀನ್, ತೊಗರಿ, ಉ್ದ್ದದು ಮೊದಲಾದ ಬೀಜ ಮತ್ತು ರಸಗೊಬ್ಬರ ಸಂಗ್ರಹಿಸಿ ಮಳೆ             ನಿರೀಕ್ಷೆಯಲ್ಲಿದ್ದರು.ಜೂನ್ ಮಧ್ಯದಲ್ಲಿ ಸುರಿದ ಧಾರಾಕಾರ ಮಳೆ ತಾಲ್ಲೂಕಿನ ರೈತರಿಗೆ ಸಂತಸ ತಂದಿದೆ. ಕೃಷಿಭೂಮಿ ಜಲಾವೃತ್ತಗೊಂಡಿದ್ದವು. ಭೂಮಿ ಬಿತ್ತನೆಗೆ ಹದವಾಗುವದಕ್ಕಾಗಿ ಕೆಲವು ರೈತರು ಕಾಯುತ್ತಿದ್ದು, ಕಲವು ರೈತರು ಬಿತ್ತನೆಯಲ್ಲಿ ಮಗ್ನರಾಗಿದ್ದಾರೆ.ಮಳೆ ಪ್ರಮಾಣ: ತಾಲ್ಲೂಕಿನ ಚಿಟಗುಪ್ಪ ಹೋಬಳಿಯಲ್ಲಿ- 151ಎಂ.ಎಂ. ನಿರ್ಣಾ- 203, ಹುಮನಾಬಾದ್- 103, ದುಬಲಗುಂಡಿ- 102, ಬೆಮಳಖೇಡಾ- 172, ಹಳ್ಳಿಖೇಡ    (ಬಿ)- 92ಎಂ.ಎಂ ಮಳೆ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಮಳೆ ಪ್ರಮಾಣ ಸಾಕಷ್ಟು ವೃದ್ಧಿ ಕಂಡಿದೆ.ಕಳೆದ ವರ್ಷ ಸೋಯಾಬೀನ್ ಬಿತ್ತನೆ ಅಷ್ಟಕಷ್ಟೆ ಆಗಿದ್ದ ಕಾರಣ ಬೀಜ ಕೊರತೆಯಿಂದ ಈ ಬಾರಿ ಕ್ವಿಂಟಲ್ ಸೋಯಾಗೆ 4ರಿಂದ 5ಸಾವಿರ ಬೆಲೆ ಇದೆ. ಆದರೂ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದೆ. ತಾಲ್ಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ದಾಸ್ತಾನಿದೆ ಕೊರತೆ ಇಲ್ಲ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಅಧಿಕಾರಿ ಮಲ್ಲಿಕಾರ್ಜುನ.ಇನ್ನೂ ರಸಗೊಬ್ಬರ ಪೂರೈಕೆ ಜವಾಬ್ದಾರಿ ಸರ್ಕಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ವಹಿಸಿಕೊಟ್ಟಿದೆ. ಒಟ್ಟಾರೆ ಈ ಬಾರಿ ತಾಲ್ಲೂಕಿನ ರೈತರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ.

-ಶಶಿಕಾಂತ ಭಗೋಜಿ.ಭಾಲ್ಕಿ: ಕೃಷಿ ಚಟುವಟಿಕೆಯಲ್ಲಿ ಲವಲವಕೆ


ಭಾಲ್ಕಿ: ಮುಂಗಾರು ಬಿತ್ತನೆಯ ಪೂರ್ವ ಸಿದ್ಧತಾ ಕಾರ್ಯಗಳು ಚುರುಕುಗೊಂಡಿದೆ. ಕೃಷಿ ಚಟುವಟಿಕೆಗಳಲ್ಲಿ ಲವಲವಿಕೆ ಕಂಡು ಬಂದಿದೆ. ಬಿತ್ತನೆ ಮಾಡುವ ಕೂರ್ಗಿ, ನೇಗಿಲು,  ಹಗ್ಗ, ಕಣ್ಣಿ, ಜತ್ಗಿ ಮುಂತಾದ ಉಪಕರಣಗಳ ಮಾರಾಟ ಜೋರಾಗಿದೆ. ಕೃಷಿ ಸೇವಾ ಕೇಂದ್ರಗಳಲ್ಲಿ ಬೀಜ ಮತ್ತು ಗೊಬ್ಬರದ ಖರೀದಿಗಾಗಿ ರೈತರ ಸಾಲು ಬಲೂ ದೂರಸಾಗಿದೆ.ತಾಲ್ಲೂಕಿನಲ್ಲಿ 72,740 ಹೆಕ್ಟೇರ್ ಕೃಷಿ ಭೂಮಿಯ ಕ್ಷೇತ್ರವಿದೆ. ಇದರಲ್ಲಿ ಸುಮಾರು 5 ಲಕ್ಷ 36 ಸಾವಿರ 469 ಮೆಟ್ರಿಕ್ ಟನ್‌ನಷ್ಟು ವಾರ್ಷಿಕ ಸರಾಸರಿ ಇಳುವರಿ ಉತ್ಪಾದನೆಯ ಗುರಿ ಇದೆ. 12ಸಾವಿರ ಹೆಕ್ಟೇರ್ ವಿಸ್ತೀರ್ಣ ಪ್ರದೇಶದಲ್ಲಿ 39,850 ಮೆಟ್ರಿಕ್ ಟನ್‌ನಷ್ಟು ಏಕದಳ ಧಾನ್ಯ       ಗಳಾದ ಭತ್ತ, ಜೋಳ, ಮುಸುಕಿನ ಜೋಳ, ಸಜ್ಜೆ ಮುಂತಾದ ಪದಾರ್ಥಗಳನ್ನು ಬೆಳೆಗಳು ತೆಗೆಯಲಾಗುತ್ತದೆ.ದ್ವಿದಳ ಧಾನ್ಯಗಳಾದ ತೊಗರಿ, ಉದ್ದು, ಹೆಸರು, ಹುರಳಿ, ಅಲಸಂದಿ, ಅವರೆಕಾಳು ಮುಂತಾದ ಧಾನ್ಯಗಳನ್ನು ಸುಮಾರು 32,750 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಇದರಿಂದ ವಾರ್ಷಿಕ ಸುಮಾರು 36,638 ಮೆಟ್ರಿಕ್ ಟನ್‌ನಷ್ಟು ದ್ವಿದಳ ಧಾನ್ಯಗಳ ಉತ್ಪಾದನೆಯಾಗಬಲ್ಲದು. ಜೊತೆಗೆ 21,890 ಹೆಕ್ಟೆರ್ ಭೂಮಿಯಲ್ಲಿ ಟನ್ ಶೇಂಗಾ, ಸೂರ್ಯಕಾಂತಿ, ಎಳ್ಳು, ಔಡಲ, ಸೋಯಾ, ಫುಂಡಿ ಮುಂತಾದ ಎಣ್ಣೆ ಕಾಳು ಬೆಳೆಯುವ ಗುರಿ ಇದೆ. ಸುಮಾರು 5200 ಹೆಕ್ಟೇರ್‌ನಲ್ಲಿ ವಾಣಿಜ್ಯ ಬೆಳೆ ಕಬ್ಬು ಬೆಳೆ ಇದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸೂರ್ಯಕಾಂತ ಬಿರಾದಾರ ತಿಳಿಸಿದ್ದಾರೆ.  ಭಾಲ್ಕಿ ತಾಲ್ಲೂಕಿನಲ್ಲಿ ಕೃಷಿಕರಿಗೆ ಅಗತ್ಯವಿರುವ ಬಿತ್ತನೆ ಬೀಜಗಳ ದಾಸ್ತಾನು ಸಾಕಷ್ಟಿದ್ದು, ರೈತರು ಆತಂಕ ಪಡಬೇಕಿಲ್ಲ ಎಂಬುದು ಕೃಷಿ ಇಲಾಖೆಯ ಅಧಿಕಾರಿಗಳ ವಿವರಣೆ.ಸುಮಾರು 20,805 ಕ್ವಿಂಟಾಲ್ ವಿವಿಧ ಬೀಜಗಳ ಬೇಡಿಕೆ ಇದೆ. ತಾಲ್ಲೂಕಿನ 6 ರೈತ ಸಂಪರ್ಕ ಕೇಂದ್ರಗಳು ಹಾಗೂ 14 ಹೆಚ್ಚುವರಿ ಮಾರಾಟ ಮತ್ತು ವಿತರಣಾ ಕೇಂದ್ರಗಳಲ್ಲಿ ದಾಸ್ತಾನಿದೆ. ಬೀಜಗಳ ಜೊತೆಗೆ ಮಣ್ಣು ಮತ್ತು ಬೆಳೆಗಳ ಲಘು ಪೋಷಕಾಂಶಗಳಾದ ಜಿಪ್ಸಂ, ಜಿಂಕ್, ಬೋರಾನ್‌ಗಳುಳ್ಳ ಜೈವಿಕ ರಸ ಗೊಬ್ಬರಗಳು ಪಡೆಯುವಂತೆ ತಿಳಿಸಲಾಗಿದೆ.

 -ಎಸ್.ಜಿ. ಮುದ್ದಾ.

ಮುಂಗಾರು ವಿಳಂಬ: ತಗ್ಗದ ಉತ್ಸಾಹ

ಚಿಟಗುಪ್ಪಾ: ಮುಂಗಾರು ಹಂಗಾಮು ವಿಳಂಬವಾಗಿದ್ದರೂ, ಈ ಭಾಗದಲ್ಲಿ ಕೃಷಿ ಚಟುವಟಿಕೆಯಲ್ಲಿ ಉತ್ಸಾಹ ತಗ್ಗಿಲ್ಲ. ಪ್ರತಿ ವರ್ಷ ರೈತ ಸಂಪರ್ಕ ಕೇಂದ್ರಗಳಲ್ಲಿ ಜೂನ್ ಆರಂಭವಾಗುತ್ತಿದ್ದಂತೆ ರೈತರು ಉತ್ಸಾಹದಿಂದ ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಬೀಜ ಕೊಂಡುಕೊಳ್ಳುತ್ತಿದ್ದರು.ಜೂನ್ ಮಧ್ಯಭಾಗದಲ್ಲಿಯೇ ಮಳೆ ಶುರುವಾಗಿದ್ದು, ನಿರೀಕ್ಷೆಗಿಂತಲೂ ಹೆಚ್ಚು ಮಳೆಯಾಗಿದೆ. ಆದರೆ, ಬಹುತೇಕ ಕಪ್ಪು ಮಣ್ಣು ಇರುವ ಕಾರಣ ಇನೂ ಬಿತ್ತನೆಗೆ ಬೇಕಾದಷ್ಟು ಹಸನಾಗಿಲ್ಲ ಎಂಬುದು ಬಹುತೇಕ ರೈತರ ಅನಿಸಿಕೆ.

ಮಳೆ ಸಮಧಾನಕರವಾಗಿದ್ದು, ಮಳೆ ಆಶ್ರಿತ ಬೆಳೆಯಾಗಿ ಸಜ್ಜೆ, ಮೆಕ್ಕೆ ಜೋಳ, ಸೂರ್ಯಕಾಂತಿ ಬಿತ್ತನೆ ಮಾಡಬಹುದು ಎಂದು ನಿರ್ಣಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶಾಂತವೀರಯ್ಯ ಲೇವಡಿಗಾರ್ ಅವರು ಸಲಹೆ ನೀಡುತ್ತಾರೆ. ದ್ವಿದಳ ಧಾನ್ಯಕ್ಕೆ ಪ್ರತಿ ಎಕರೆಗೆ 200 ರೈಜೊಬಿಯಮ್ ನಿಂದ ಹಾಗೂ  ಪ್ರತಿ ಕೆಜಿ ಬೀಜಕ್ಕೆ 4ಗ್ರಾಂ ಡ್ರೈಕೊಡರ್ಮಾ ಬಳಸಿ ಬಿತ್ತನೆ ಕೈಗೊಳ್ಳುವುದರಿಂದ ಅಧಿಕ ಪ್ರಮಾಣದಲ್ಲಿ ಬೀಜಗಳು ಮೊಳಕೆ ಒಡೆಯುತ್ತವೆ. ಬಿತ್ತನೆ ಸಂದರ್ಭ 2ಕೆಜಿ ಬೋರಾನ್, 5ಕೆಜಿ ಜಿಂಕ್, 200 ಕೆಜಿ ಜಿಪ್ಸಂ ಲಘುಪೋಷಕಾಂಶ ನೀಡಬಹುದು ಎನ್ನುತ್ತಾರೆ.ಬರ ಪರಿಸ್ಥಿತಿ ಇದ್ದಹಿನ್ನೆಲೆಯಲ್ಲಿ ಸರಕಾರ ರೈತರಿಗೆ ಉಚಿತವಾಗಿ ಬೀಜ ವಿತರಿಸಬೇಕು, ಬಿತ್ತನೆಗಾಗಿ ಪ್ರೋತ್ಸಾಹ ಧನ ನೋಡಬೇಕು ಎಂದು ರೈತರಾದ ಶಂರರೆಪ್ಪ, ಭೀಮರಾವ ತಿಳಿಸುತ್ತಾರೆ.

-ವೀರೇಶ್.ಎನ್.ಮಠಪತಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.