ಶನಿವಾರ, ಮೇ 15, 2021
23 °C

ಉತ್ತಮ ಮಳೆ: ಕೃಷಿ ಚಟುವಟಿಕೆ ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ: ತಾಲ್ಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಉತ್ತಮ ಮಳೆಯ ಹಿನ್ನೆಲೆಯಲ್ಲಿ  ಭತ್ತದ ಕೃಷಿ ಚಟುವಟಿಕೆ ಚುರುಕುಗೊಂಡಿದೆ.ಸಕಾಲದಲ್ಲಿ ಆರಂಭವಾಗಿರುವ ಮುಂಗಾರು ಮಳೆ ರೈತ ಸಮುದಾಯದ ಸಂತಸಕ್ಕೆ ಕಾರಣವಾಗಿದ್ದು,ತಾಲ್ಲೂಕಿನ ಪೂರ್ವಭಾಗದ ಗದ್ದೆ ಬಯಲುಗಳಲ್ಲಿ ಕೃಷಿ ಕಾರ್ಯಕ್ಕೆ ವೇಗದ ಚಾಲನೆ ದೊರೆತಿದೆ. ಇಲ್ಲಿನ ಗದ್ದೆಗಳಲ್ಲಿ ರೈತರು ಅಗೆ ಮಡಿಗಳನ್ನು ತಯಾರಿಸುವುದಕ್ಕಾಗಿ ಉಳುಮೆಯಲ್ಲಿ ನಿರತರಾಗಿರುವ ದೃಶ್ಯ ಸಾಮಾನ್ಯವಾಗಿದೆ.ತಾಲ್ಲೂಕಿನ ಕಾಂವಚೂರು, ಮನಮನೆ, ಶಿರಳಗಿ ಮತ್ತು ಕಾನಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಭತ್ತದ ಕೃಷಿ ಗರಿಗೆದರಿದ್ದು, ಅಗೆ ಮಡಿ ತಯಾರಿ, ಗದ್ದೆಗೆ ಕೊಟ್ಟಿಗೆ ಗೊಬ್ಬರ ಮತ್ತು ಸುಣ್ಣ ಹಾಕುವ ಕೆಲಸ ನಡೆದಿದೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.`ಈ ಸಾರಿ ಮಳೆ ಚೆನ್ನಾಗಿದೆ. ಕಳೆದ ವರ್ಷದಂತೆ ಮಳೆಗಾಲದ ಆರಂಭ ತಡವಾಗಿಲ್ಲ. ಆದ್ದರಿಂದ ಅಗೆ ಮಡಿಗಳಲ್ಲಿ ಭತ್ತದ ಬೀಜದ ಬಿತ್ತನೆ ಮಾಡುತ್ತಿದ್ದೇವೆ. ಸುಮಾರು 120 ದಿನಗಳಲ್ಲಿ ಕೊಯ್ಲಿಗೆ ಬರುವ ಹೊಸತಳಿಯ ಭತ್ತದ ಬೀಜ ಹಾಕಿದ್ದೇವೆ' ಎನ್ನುತ್ತಾರೆ ಹೊಸೂರಿನ ಗೋವಿಂದ ನಾಯ್ಕ.`ಈ  ಗದ್ದೆಗಳಲ್ಲಿ ಈಗಲೇ ಅಗೆ ಹಾಕುವ ಕೆಲಸ ಆರಂಭ ಮಾಡಬೇಕಾಗುತ್ತದೆ.  ತಡಮಾಡಿದರೆ ಭತ್ತ ತೆನೆ ಬಿಡುವ ಮೊದಲೆ ನೀರಿನ ಕೊರತೆ ಆರಂಭವಾಗಿ ಉತ್ತಮ ಬೆಳೆ ಬರಲಾರದು' ಎನ್ನುತ್ತಾರೆ ಈ ಭಾಗದ ರೈತರು.ತಾಲ್ಲೂಕಿನಲ್ಲಿ ಒಟ್ಟು 6200 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಇದರಲ್ಲಿ ಸುಮಾರು 129 ಹೆಕ್ಟೇರ್ ಜಮೀನಿನಲ್ಲಿ ಬೇಸಿಗೆಯಲ್ಲಿ ಒಣ ಬಿತ್ತನೆ ಮಾಡಲಾಗಿದೆ. ಆದರೆ ಈ ಸಾರಿ ಮೇ ತಿಂಗಳಿನಲ್ಲಿ ಉತ್ತಮ ಮಳೆ  ಬಾರದ ಹಿನ್ನೆಲೆಯಲ್ಲಿ ಒಣ ಬಿತ್ತನೆಗೆ ಅನುಕೂಲವಾಗಲಿಲ್ಲ.

`ಈಗ ನಾಟಿ ವಿಧಾನದ ಭತ್ತದ ಕೃಷಿಗೆ ಮಳೆ ಉತ್ತಮವಾಗಿದೆ. ಇದುವರೆಗೆ ಎಲ್ಲಿಯೂ ಗದ್ದೆಗಳಲ್ಲಿ ಮಳೆಯಿಂದ ನೀರು ತುಂಬಿ, ಕೃಷಿಗೆ ತೊಂದರೆಯಾದ ಪರಿಸ್ಥಿತಿ ಉಂಟಾಗಿಲ್ಲ. ಮಳೆ ಹದವಾಗಿದೆ' ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿ ಐ.ಕೆ.ನಾಯ್ಕ.ತಾಲ್ಲೂಕಿನ ಕೃಷಿ ಇಲಾಖೆಯಲ್ಲಿ ಬೀಜದ ಭತ್ತ ಮತ್ತು  ಗೊಬ್ಬರದ ದಾಸ್ತಾನು ಸಾಕಷ್ಟಿದ್ದು, ಕೊರತೆ ಉಂಟಾಗುವ ಸಂಭವವಿಲ್ಲ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.ತಾಲ್ಲೂಕಿನ ಜವಳು ಗದ್ದೆಗಳಲ್ಲಿ ಮತ್ತು ಮಳೆಯನ್ನು ಅಷ್ಟಾಗಿ ಅವಲಂಬಿಸದ ಗದ್ದೆಗಳಲ್ಲಿ  ತಡವಾಗಿ ಅಂದರೆ ಜುಲೈ ತಿಂಗಳ ಮಧ್ಯಭಾಗದ ಹೊತ್ತಿಗೆ ಕೃಷಿ ಕೆಲಸ ಚುರುಕಾಗುವುದು ಸಾಮಾನ್ಯ. ಆದರೆ  ಹೆಚ್ಚು ಭತ್ತ ಬೆಳೆಯುವ ಪ್ರದೇಶದಲ್ಲಿ ಭತ್ತದ ಕೃಷಿಯ ಆರಂಭ ಈ ಬಾರಿ ತಡವಾಗಿಲ್ಲ ಎನ್ನುವುದು ಸಮಾಧಾನದ ಸಂಗತಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.