ಉತ್ತಮ ಮಳೆ: ಬೆಳೆಗೆ ಜೀವ ಕಳೆ

ಬುಧವಾರ, ಜೂಲೈ 24, 2019
27 °C

ಉತ್ತಮ ಮಳೆ: ಬೆಳೆಗೆ ಜೀವ ಕಳೆ

Published:
Updated:

ಕಂಪ್ಲಿ: ವರುಣನ ಮುನಿಸು ವಾಯುದೇವನ ಆರ್ಭಟಕ್ಕೆ ಕಳೆದ ರೋಹಿಣಿಯಲ್ಲಿ ಬಿತ್ತನೆ ಮಾಡಿದ್ದ ಬಹುತೇಕ ಬೆಳೆಗಳು ಬಾಡಿ ರೈತ ಮುಗಿಲ ಕಡೆ ಮುಖ ಮಾಡಿ ದೇವರ ಮೊರೆ ಹೋಗಿದ್ದ.ವರುಣ ಕೃಪೆ ತೋರದಿದ್ದಲ್ಲಿ ಮಳೆಯನ್ನೇ ನೆಚ್ಚಿಕೊಂಡು ಬಿತ್ತನೆ ಮಾಡಿದ್ದ ಸೂರ್ಯಕಾಂತಿ, ಸಜ್ಜೆ, ತೊಗರಿ, ಅಕ್ಕಡಿ ಬೆಳೆಗಳು ನೆಲಕಚ್ಚುವ ಹಂತದಲ್ಲಿದ್ದವು. ಕಳೆದ ಎರಡು ದಿನಗಳ ಹಿಂದೆ ಉತ್ತಮ ಮಳೆಯಾಗಿದ್ದು, ಮಳೆಯಾಶ್ರಿತ ಪ್ರದೇಶದ ರೈತರು ಶುಕ್ರವಾರ ಖುಷಿಯಿಂದ ಬೆಳೆ ಮಧ್ಯೆ ಕುಂಟೆ ಹೊಡೆಯುತ್ತಿದ್ದ ದೃಶ್ಯ ಕಂಡು ಬಂತು.ಈಗಲಾದರೂ ಮಳೆರಾಯ ಕಣ್ತೆರೆದಿದ್ದರಿಂದ ನಮ್ಮ ಬೆಳೆಗಳಿಗೆ ಜೀವ ಕಳೆ ಬಂದಿದೆ. ಇದೇ ರೀತಿ ಮುಂದಿನ ಮಳೆನಕ್ಷತ್ರಗಳಲ್ಲಿ ಸಕಾಲಕ್ಕೆ ವರುಣ ಕೃಪೆ ತೋರಲಿ ಎಂದು ನೇಗಿಲಯೋಗಿಗಳು ದೇವರನ್ನು ಬೇಡಿಕೊಳ್ಳುತ್ತಾರೆ.ಸ್ಥಳೀಯ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ಸುಮಾರು ಒಂದು ಸಾವಿರ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶವಿದ್ದು, ಉಪ್ಪಾರಹಳ್ಳಿ, ಮೆಟ್ರಿ, ದೇವಸಮುದ್ರ, ಕಣವಿ ತಿಮ್ಮೋಲಾಪುರ ಪ್ರದೇಶದಲ್ಲಿ 233 ಹೆಕ್ಟೇರ್ ಪ್ರದೇಶದಲ್ಲಿ ಸಜ್ಜೆ, ಸೂರ್ಯಕಾಂತಿ, ತೊಗರಿ, ಅಕ್ಕಡಿ ಕಾಳುಗಳ ಬಿತ್ತನೆಯಾಗಿದೆ.ಕೊಳವೆಬಾವಿ ನೀರಾವರಿ ಮೂಲಕ 63 ಹೆಕ್ಟೇರ್ ಪ್ರದೇಶದಲ್ಲಿ ಸಜ್ಜೆ, 55 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 0.5 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, 30 ಹೆಕ್ಟರ್ ಪ್ರದೇಶದಲ್ಲಿ ಸೂರ್ಯಕಾಂತಿ, 80 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ.ತುಂಗಭದ್ರಾ ನದಿ ನೀರು ಬಳಸಿಕೊಂಡು ಏತ ನೀರಾವರಿ ಮೂಲಕ 550 ಹೆಕ್ಟರ್ ಪ್ರದೇಶದಲ್ಲಿ ಭತ್ತ, 115 ಹೆಕ್ಟರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಪಂಪ್‌ಸೆಟ್ ಮೂಲಕ 100 ಹೆಕ್ಟೇರ್ ಪ್ರದೇಶದಲ್ಲಿ ಹೈಬ್ರಿಡ್ ಹತ್ತಿ ಬಿತ್ತನೆ ಮಾಡಲಾಗಿದೆ ಎಂದು ರೈತ ಸಂಪರ್ಕ ಕೇಂದ್ರ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry