ಶುಕ್ರವಾರ, ಆಗಸ್ಟ್ 23, 2019
21 °C
ಆ್ಯಷಸ್ ಕ್ರಿಕೆಟ್: ನಾಯಕ ಕ್ಲಾರ್ಕ್ ಶತಕ

ಉತ್ತಮ ಮೊತ್ತದತ್ತ ಆಸೀಸ್

Published:
Updated:
ಉತ್ತಮ ಮೊತ್ತದತ್ತ ಆಸೀಸ್

ಮ್ಯಾಂಚೆಸ್ಟರ್ (ಎಎಫ್‌ಪಿ): ಸರಣಿ ಜಯಿಸುವ ತಮ್ಮ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿರುವ ಆಸ್ಟ್ರೇಲಿಯಾ ತಂಡದವರು ಗುರುವಾರ ಇಲ್ಲಿ ಆರಂಭವಾದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಉತ್ತಮ ಮೊತ್ತ ಕಲೆಹಾಕುವತ್ತ ದಾಪುಗಾಲಿರಿಸಿದ್ದಾರೆ.ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆ್ಯಷಸ್ ಟೆಸ್ಟ್ ಸರಣಿಯ ಈ ಪಂದ್ಯದ ಮೊದಲನೇ ದಿನ ಪ್ರವಾಸಿ ಆಸ್ಟ್ರೇಲಿಯಾ 80 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 269 ರನ್ ಗಳಿಸಿದೆ. ನಾಯಕ ಮೈಕರ್ಲ್ ಕ್ಲಾರ್ಕ್ ಗಳಿಸಿದ ಶತಕ ಈ ತಂಡಕ್ಕೆ ಆಸರೆಯಾಯಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭ ಲಭಿಸಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶೇನ್ ವಾಟ್ಸನ್ ಹಾಗೂ ಕ್ರಿಸ್ ರೋಜರ್ಸ್‌ ಆತಿಥೇಯ ವೇಗಿಗಳನ್ನು ಸಮರ್ಥವಾಗಿ ಎದುರಿಸಿದರು.

ಆದರೆ ಉತ್ತಮ ಆರಂಭದ ಪೂರ್ಣ ಲಾಭ ಪಡೆಯುವಲ್ಲಿ ವಾಟ್ಸನ್ ವಿಫಲರಾದರು. ನಂತರ ಬಂದ ಉಸ್ಮಾನ್ ಖವಾಜಾ ಕೂಡ ಎಡವಟ್ಟು ಮಾಡಿಕೊಂಡರು. ಈ ಹಂತದಲ್ಲಿ ಜೊತೆಗೂಡಿದ ರೋಜರ್ಸ್‌(84; 114 ಎ, 14 ಬೌಂ.) ಹಾಗೂ ಕ್ಲಾರ್ಕ್ ಜೊತೆಯಾಟವೂ ಹೆಚ್ಚು ಹೊತ್ತ ಬಾಳಲಿಲ್ಲ. ಆದರೆ ಕ್ಲಾರ್ಕ್ ಹಾಗೂ ಸ್ಮಿತ್ ಯಾವುದೇ ಅಪಾಯಕ್ಕೆ ಆಸ್ಪದ ನೀಡಲಿಲ್ಲ. ಇವರಿಬ್ಬರು ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಈಗಾಗಲೇ 140 ರನ್ ಸೇರಿಸಿದ್ದಾರೆ. ಕ್ಲಾರ್ಕ್ (ಬ್ಯಾಟಿಂಗ್ 111; 183ಎ, 15 ಬೌಂ.) ಪಾಲಿಗೆ ಇದು 24ನೇ ಶತಕ. ಅವರಿಗೆ ಸ್ಮಿತ್ ಉತ್ತಮ ಬೆಂಬಲ ನೀಡಿದರು.ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 80 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 269 (ಶೇನ್ ವಾಟ್ಸನ್ 19, ಕ್ರಿಸ್ ರೋಜರ್ಸ್‌ 84, ಮೈಕಲ್ ಕ್ಲಾರ್ಕ್ ಬ್ಯಾಟಿಂಗ್ 111, ಸ್ಟೀವನ್ ಸ್ಮಿತ್ ಬ್ಯಾಟಿಂಗ್ 50; ಟಿಮ್ ಬ್ರೆಸ್ನನ್ 48ಕ್ಕೆ1, ಗ್ರೇಮ್ ಸ್ವಾನ್ 79ಕ್ಕೆ2).

Post Comments (+)