`ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಿ'

7

`ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಿ'

Published:
Updated:

ಬೆಂಗಳೂರು: `ಪ್ರತಿಯೊಬ್ಬರು ಉತ್ತಮವಾದ ಸಮಾಜವನ್ನು ಕಟ್ಟಲು ಉತ್ತಮ ಕೊಡುಗೆಗಳನ್ನು ನೀಡಬೇಕು' ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಹೇಳಿದರು.ಅಜಂತಾ ಸಾಂಸ್ಕೃತಿಕ ವಿದ್ಯಾಸಂಸ್ಥೆ ಮತ್ತು ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಈಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಬಿ.ಎಂ.ಶ್ರೀ ಸಹೋದರಿ `ಧೀಮಂತ ಮಹಿಳೆ ದಿ.ನಂಜಮ್ಮ' ಕೃತಿ ಬಿಡುಗಡೆ ಮಾಡಿ ಮಾತನಾಡಿದರು.`ಸಮಾಜಕ್ಕಾಗಿ ನಾನೇನು ಮಾಡಿದ್ದೇನೆ ಎಂದು ಎಲ್ಲರೂ ಪ್ರಶ್ನಿಸಿಕೊಳ್ಳಬೇಕು. ನಾವು ಹುಟ್ಟಿರುವ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕಾಗಿದ್ದು ಎಲ್ಲರ ಕರ್ತವ್ಯವಾಗಿದೆ. ಸಮಾಜದಲ್ಲಿರುವ ಕೆಟ್ಟತನವನ್ನು ಎಣಿಸಿ ಮಾತನಾಡುವ ಬದಲು ನಮ್ಮ ಕಾರ್ಯವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುತ್ತ ಸಾಗಬೇಕು' ಎಂದರು.`ಸಮಾಜಕ್ಕೆ ಉತ್ತಮವಾದ ಆದರ್ಶಗಳನ್ನು ನೀಡಿದವರಲ್ಲಿ ಬಿಎಂಶ್ರೀ ಅವರ ಸಹೋದರಿ ದಿ. ನಂಜಮ್ಮನವರೂ ಬರುತ್ತಾರೆ. 1925 ರಿಂದ 1930 ರ ಸಮಯದಲ್ಲಿ ಒಬ್ಬ ಬ್ರಾಹ್ಮಣ ವಿಧವೆಯಾಗಿ ಸಮಾಜ ವಿಧಿಸಿರುವ ಕಟ್ಟಳೆಗಳನ್ನು ದಾಟಿ ಸಮಾಜದ ಮಹಿಳೆಯರಿಗೆ ಆದರ್ಶಪ್ರಾಯವಾಗಿ ಬದುಕಿದರು' ಎಂದರು.`ಕೆಂಪು ಚೆಲುವಾಜಮ್ಮಣ್ಣಿ ಮಹಿಳಾ ಸಮಾಜವನ್ನು ಸ್ಥಾಪಿಸಿ ಅಸಹಾಯಕ ಮಹಿಳೆಯರಿಗೆ ನೆರವಾಗುವಂತೆ ಬಿಎಂಶ್ರೀ ಅವರು ಪ್ರೇರಣೆ ನೀಡಿದರು. ಹಾಗೆಯೇ ಅಣ್ಣ ನಡೆಸಿದ ದಾರಿಯಲ್ಲಿ ನಡೆದು ಆಗಿನ ಸಮಾಜದ ಮಹಿಳೆಯರಿಗೆ ಸ್ವಾವಲಂಬಿ ಬದುಕನ್ನು ತೋರಿಸಿಕೊಟ್ಟರು' ಎಂದರು.ಇತಿಹಾಸ ತಜ್ಞ ಡಾ.ಸೂರ್ಯನಾಥ ಕಾಮತ್ ಮಾತನಾಡಿ, `ಸಮಾಜದ ನಂಜಮ್ಮನೆಂದೇ ಪ್ರಸಿದ್ಧಿಯಾದ ನಂಜಮ್ಮರ ಬದುಕು ಆದರ್ಶನೀಯವಾಗಿದೆ. ಅವರು ಸಮಾಜದಲ್ಲಿರುವ ನಿರ್ಗತಿಕ ಮಹಿಳೆಯರಿಗೆ ಹೊಲಿಗೆ, ನೂಲುವುದು, ಬುಟ್ಟಿ ಹೆಣೆಯುವುದು, ಸಂಗೀತ ತರಬೇತಿ, ಕಸೂತಿ ಕೆಲಸವನ್ನು ಮಹಿಳೆಯರಿಗೆ ಕಲಿಸಿ ಅವರು ಸ್ವಾವಲಂಬಿಗಳಾಗಿ ಬದುಕಲು ಪ್ರೇರಕ ಶಕ್ತಿಯಾದರು' ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry