ಉತ್ತಮ ಸವಾರಿಗೆ ಬೇಕು ಸೂಪರ್ ಟಯರ್!

7

ಉತ್ತಮ ಸವಾರಿಗೆ ಬೇಕು ಸೂಪರ್ ಟಯರ್!

Published:
Updated:

ಸ್ಕಾಟ್‌ಲ್ಯಾಂಡ್‌ನ ಸಂಶೋಧಕ ಜಾನ್ ಬಾಯ್ಡ ಡನ್‌ಲಪ್ 1888 ರಲ್ಲಿ ತನ್ನ ಮಗನ ಸೈಕಲ್‌ಗೆ ಟಯರ್‌ನ್ನು ಕಂಡುಹಿಡಿಯದೇ ಹೋಗಿದ್ದರೆ ವಾಹನ ಲೋಕದಲ್ಲಿ ಇಷ್ಟೆಲ್ಲಾ ಸುಧಾರಣೆ ಆಗುತ್ತಿತ್ತೋ ಇಲ್ಲವೋ ಎಂಬ ಅನುಮಾನ ಆಗಾಗ ಕಾಡುತ್ತದೆ.ಉಕ್ಕಿನ ಚಕ್ರವನ್ನು ಸುತ್ತುವರೆದ ಗಡುಸಾದ ರಬ್ಬರ್‌ನ ಈ ರಚನೆ ಅಚ್ಚರಿಗಳಲ್ಲಿ ಒಂದು ಎಂಬುದು ವರ್ಣಿಸಲಸಾಧ್ಯವಾದುದು. ಟಯರ್‌ನ ಒಳಗೊಂದು ಟ್ಯೂಬ್, ಅದರೊಳಗೆ ಗಾಳಿ, ಅದರಿಂದ ಸರಾಗವಾಗಿ ಚಲಿಸುವ ಚಕ್ರ. ಮಾನವನ ಕಲ್ಪನಾ ಶಕ್ತಿಯ ಅದಮ್ಯ ನನಸೇ ಸರಿ. ಆ ಚಕ್ರವನ್ನು ಸುಧಾರಿಸಿ, ಅದಕ್ಕೆ ಟಯರ್ ಎಂಬ ರಬ್ಬರ್ ಬಟ್ಟೆ ತೊಡಿಸಿದ ಆಧುನಿಕ ತಂತ್ರಜ್ಞಾನಕ್ಕೆ ನಿಜಕ್ಕೂ ಥ್ಯಾಂಕ್ಸ್ ಹೇಳಲೇ ಬೇಕು.ಆದರೆ ಟಯರ್‌ನ ಕೆಲಸ ಕೇವಲ ಚಕ್ರವನ್ನು ಸರಾಗವಾಗಿ ಚಲಿಸುವಂತೆ ಮಾಡುವುದು ಅಲ್ಲ. ಟಯರ್, ಇದೊಂದು ತಂತ್ರಜ್ಞಾನದ ಅದ್ಭುತ ಸೃಷ್ಟಿ. ಆದರೆ ಈ ಟಯರ್‌ನ ಕತೆಯನ್ನು ಹೇಳುವ ಮುನ್ನ ನಾವು ಚಕ್ರದ ಕತೆಯನ್ನು ಹೇಳಬೇಕಾಗುತ್ತದೆ.

 

ಕ್ರಿಸ್ತಪೂರ್ವ 4 ರಲ್ಲೆೀ ಮೆಸಪಟೋಮಿಯಾದಲ್ಲಿ ಚಕ್ರದ ಬಳಕೆ ಇದ್ದದ್ದಕ್ಕೆ ಇಂದು ಪುರಾವೆ ದೊರೆತಿವೆ. ಹಾಗೆಯೇ ಪೋಲೆಂಡ್, ಭಾರತ, ಈಜಿಪ್ಟ್‌ಗಳಲ್ಲಿ ಚಕ್ರವು ಸಮಾನಾಂತರವಾಗಿ ರೂಪಗೊಂಡಿದ್ದು, ಇದು ಯಾರೊಬ್ಬ ವ್ಯಕ್ತಿಯ ಸಂಶೋಧನೆಯೂ ಅಲ್ಲ ಎಂಬ ವಿಶಿಷ್ಟತೆಯನ್ನೂ ಹೊಂದಿದೆ.ಆರಂಭದಲ್ಲಿ ಕಲ್ಲಿನಿಂದಲೂ, ನಂತರ ಮರದಿಂದಲೂ, ಆ ಬಳಿಕ ಕಬ್ಬಿಣ, ಉಕ್ಕಿನಿಂದಲೂ ತಯಾರಾದ ಈ ಚಕ್ರಗಳಿಗೆ ಸಾಮಾನ್ಯವಾದ ತೊಂದರೆಯೊಂದಿತ್ತು. ಅದೇನೆಂದರೆ, ಚಲನೆಯಲ್ಲಿ ಒಡೆದು ಹೋಗುವುದು. ಇದಕ್ಕೆ ಕಾರಣವೇನು? ಬಹಳ ಸರಳ.ಗಡುಸಾದ ರಚನೆಯ ಚಕ್ರಗಳಲ್ಲಿ ಕಂಪನವನ್ನು ತಡೆದುಕೊಳ್ಳುವ ಶಕ್ತಿಯಿಲ್ಲದೆ ಬಿರುಕುಗಳು ಮೂಡುವುದು. ಹಾಗಾದರೆ ಇದಕ್ಕೆ ಪರಿಹಾರವೇನು ಎಂಬ ಚಿಂತೆಕಾಡಲಾರಂಭಿಸಿದಾಗಲೇ ಟಯರ್‌ನ ಆಲೋಚನೆ ಹೊಳೆದದ್ದು.ಈ ಟಯರ್‌ನ ಕೆಲಸ ಮುಖ್ಯವಾಗಿ ಚಕ್ರಕ್ಕೆ ರಸ್ತೆಯಿಂದ ದಾಟಿಕೊಳ್ಳುವ ಕಂಪನವನ್ನು ಕಡಿಮೆ ಮಾಡುವುದು. ಇದರಿಂದ ಮುಖ್ಯವಾಗಿ ಎರಡು ಪ್ರಯೋಜನಗಳಿವೆ. ಚಕ್ರಕ್ಕೆ ಕಂಪನ ಕಡಿಮೆಗೊಳಿಸುವುದು. ಅಷ್ಟೇ ಅಲ್ಲ, ಇಡೀ ವಾಹನಕ್ಕೆ ಆರಾಮದಾಯಕ, ಕುಲುಕಾಟವಿಲ್ಲದ ಪ್ರಯಾಣ ನೀಡುವುದು.ಡನ್‌ಲಪ್ ತನ್ನ ಸೈಕಲ್‌ಗಳಲ್ಲಿ ಮೊದಲು ಟಯರ್ ಅಳವಡಿಸಿ ಯಶಸ್ಸು ಕಂಡು ಪೇಟೆಂಟ್ ಪಡೆದನಾದರೂ ನಂತರ ಅದು, ಎಲ್ಲ ಮಾದರಿಯ ವಾಹನಗಳಿಗೂ ಅಳವಡಿತಗೊಂಡು ವಾಹನ ಲೋಕದಲ್ಲಿ ಕ್ರಾಂತಿಯೇ ಆಯಿತು. ಇಂದು ನಾಗರಿಕ ಸಾರಿಗೆಯಿಂದ ಹಿಡಿದು, ಯುದ್ಧ ವಾಹನಗಳಲ್ಲೂ ಟಯರ್ ಬಳಕೆಯಿದೆ. ಅಷ್ಟೇ ಏಕೆ, ಅನ್ಯಗ್ರಹಗಳಿಗೆ ಕಳುಹಿಸಲ್ಪಡುವ ವಾಹನಗಳಲ್ಲೂ ಅಮೆರಿಕದ ನಾಸಾ ಸಂಸ್ಥೆ ಟಯರ್‌ಗಳನ್ನು ಅಳವಡಿಸಿದೆ ಎಂದರೆ ಟಯರ್‌ನ ಮಹತ್ವ ಅರಿಯಬಹುದು.

 

ಸಸ್ಯಮೂಲವಾದ ರಬ್ಬರ್‌ಗೆ ಇಷ್ಟೆಲ್ಲಾ ಶಕ್ತಿಯಿರುವಾಗ ಬಳಸಿಕೊಂಡಿದ್ದು ಮನುಷ್ಯನ ಜಾಣ್ಮೆ ಅಲ್ಲವೆ?ಕಾಲದಿಂದ ಕಾಲಕ್ಕೆ ಟಯರ್‌ಗಳಲ್ಲಿ ಸುಧಾರಿತ ತಂತ್ರಜ್ಞಾನದ ಅಳವಡಿಕೆಯಾಗಿದೆ. ಆರಂಭದಲ್ಲಿ ಟಯರ್‌ಗಳಲ್ಲಿ ದಾರಗಳನ್ನು ಅಳವಡಿಸಿ, ಗಡಸುತನ ಹಾಗೂ ಬಳಕುತನ ನೀಡಲಾಗುತ್ತಿತ್ತು.ಆದರೆ ಕೆಟ್ಟ ರಸ್ತೆಗಳಲ್ಲಿ ಹೊಡೆತವನ್ನು ತಾಳಿಕೊಳ್ಳುವ ಶಕ್ತಿ ದಾರಕ್ಕೆ ಇಲ್ಲದೇ ಇದ್ದ ಕಾರಣ, ಕಬ್ಬಿಣದ ಎಳೆಗಳನ್ನು ಟಯರ್‌ನಲ್ಲಿ ಹುದುಗಿಸಿ ರೇಡಿಯಲ್ ತಂತ್ರಜ್ಞಾನ ಬಳಸಲಾಯಿತು. ಹೀಗಿದ್ದರೂ, ಟಯರ್‌ಗಳಿಗೆ ತನ್ನದೇ ಆದ ಕೆಲವು ಇತಿ- ಮಿತಿಗಳಿವೆ.

 

ಸಾಮಾನ್ಯವಾಗಿ ಅವು ಟಯರ್‌ನ ಮಿತಿಗಳಾಗಿರದೇ, ಅವನ್ನು ನಿರ್ವಹಿಸುವಲ್ಲಿ ಇರುವ ಮಿತಿಗಳಾಗಿವೆ. ಇವುಗಳನ್ನು ಗಮನದಲ್ಲಿಟ್ಟುಕೊಂಡರೆ ಯಾವುದೇ ವಾಹನಕ್ಕೆ ಅನುಕೂಲಗಳು ಹೆಚ್ಚು. ಈ ಇತಿ- ಮಿತಿಗಳು, ಟಯರ್ ನಿರ್ವಹಣೆಯ ಅನುಕೂಲತೆಗಳು, ನಿರ್ವಹಣೆ ಮಾಡದಿದ್ದರೆ ಆಗುವ ಅನನುಕೂಲತೆಗಳ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗುತ್ತಿದೆ. ಐಯರ್ ಬಳಕೆಯ ಸಂಪೂರ್ಣ ಟಿಪ್ಸ್ ಇಲ್ಲಿ ನೀಡಲಾಗಿದೆ. ಟಯರ್ ಶಾಶ್ವತವಲ್ಲಯಾವುದೇ ಟಯರ್‌ಗೆ ತನ್ನದೇ ಆದ ಕಾಲ ಮಿತಿ ಇದ್ದೇ ಇರುತ್ತದೆ. ಸಾಮಾನ್ಯವಾಗಿ 4 ಚಕ್ರದ ವಾಹನಗಳಲ್ಲಿ ಟಯರ್‌ನ ಅಳತೆ 12 ಇಂಚಿನಿಂದ ಪ್ರಾರಂಭವಾಗಿ 28 ಇಂಚಿನ ಟಯರ್‌ವರೆಗೂ ಇರುತ್ತದೆ. ಕಾರುಗಳಲ್ಲಿ ಗರಿಷ್ಟ 22 ಇಂಚಿನ ಟಯರ್‌ಗಳೂ ಇವೆ. ಅಳತೆಗೆ ತಕ್ಕಂತೆ ದಪ್ಪದ ಅನುಪಾತವಿರುತ್ತದೆ.

 

ಅಷ್ಟೇ ಅಲ್ಲದೇ, ವಿವಿಧ ರಸ್ತೆ ಸ್ಥಿತಿಗತಿಗಳಿಗೆ ತಕ್ಕಂತೆ, ಆನ್ ರೋಡ್ (ನಯವಾದ ರಸ್ತೆ), ಆಫ್ ರೋಡ್ (ಕಚ್ಚಾ ರಸ್ತೆ) ಟಯರ್‌ಗಳಿವೆ. ಆನ್ ರೋಡ್ ಟಯರ್‌ಗಳು ಸರಳ ರಚನೆ ಹೊಂದಿದ್ದು, ವಾಹನದ ಸಮತೋಲನ. ರಸ್ತೆ ಹಿಡಿತ ಕಾಪಾಡಿಕೊಳ್ಳುವಷ್ಟು ಮಸಲ್ (ಸ್ನಾಯು) ಗಳನ್ನು ಹೊಂದಿದ್ದರೆ, ಆಫ್ ರೋಡ್ ಟಯರ್‌ಗಳು ಹೆಚ್ಚುವರಿ ಬಲಶಾಲಿ ಮಸಲ್‌ಗಳನ್ನು ಹೊಂದಿರುತ್ತವೆ.

 

ಎಷ್ಟೇ ಬಲಿಷ್ಠ ಟಯರ್ ಆದರೂ ಅದಕ್ಕೊಂದು ಆಯಸ್ಸು ಇದ್ದೇ ಇರುತ್ತದೆ. ಈ ಆಯಸ್ಸನ್ನು ತಿಳಿದುಕೊಂಡು ನಿರ್ವಹಿಸಿದರೆ, ವಾಹನಕ್ಕೆ, ಸವಾರಿಗೆ ಅನುಕೂಲವುಂಟು. ನಿರ್ವಹಿಸದೇ ಇದ್ದಲ್ಲಿ ಗೋಚರಿಸದ ಸಮಸ್ಯೆಗಳು ಇಲ್ಲದೇ ಇದ್ದರೂ, ಕೆಲವು ಕ್ಲಿಷ್ಟಕರ, ನಿಧಾನಗತಿಯ ಸಮಸ್ಯೆಗಳನ್ನು ಅನುಭವಿಸಬೇಕಾಗುವುದು.ಯಾವುದೇ ಟಯರನ್ನು ಆಯಾ ವಾಹನದ ತೂಕ ಹಾಗೂ ಚಕ್ರದ ವ್ಯಾಸದ ಅನುಪಾತವಾಗಿ ನಿರ್ದಿಷ್ಟ ಕಾಲ ಮಿತಿಯನ್ನು ಅಳವಡಿಸಲಾಗಿರುತ್ತದೆ. ಬೈಕ್‌ಗಳಲ್ಲಿ ಆನ್‌ರೋಡ್ ಟಯರ್‌ಗಳಲ್ಲಿ ಪ್ರತಿ 20 ಸಾವಿರ ಕಿಲೋ ಮೀಟರ್‌ಗೆ ಟಯರ್ ಬದಲಿಸಲೇಬೇಕು.

 

ಆಫ್ ರೋಡ್ ಟಯರ್‌ಗಳನ್ನು ಪ್ರತಿ 15 ಸಾವಿರ ಕಿಲೋ ಮೀಟರ್‌ಗೆ ಬದಲಿಸಬೇಕು. ಇದಕ್ಕೆ ಕಾರಣವಿಷ್ಟೇ. ಟಯರ್‌ಗಳಲ್ಲಿ ಮೇಲೆ ಕಾಣುವಂತೆ ಮೂರು ರೀತಿಯ ಮಸಲ್‌ಗಳು ಇರುತ್ತವೆ. ಟಯರ್‌ನ ಮಧ್ಯದ ಮಸಲ್ , ಅಕ್ಕ- ಪಕ್ಕದ ಮಸಲ್ ಹಾಗೂ ಗೋಡೆ ಅಥವಾ ವಾಲ್ ಮಸಲ್. ವಾಹನವು ರಸ್ತೆಗೆ ಬಿಗಿಹಿಡಿಯುವ (ರೋಡ್ ಗ್ರಿಪ್) ಕೆಲಸ ಮಾಡುವುದು ಮಧ್ಯದ ಮಸಲ್‌ಗಳು.

 

ವಾಹನ ವಾಲಿದಾಗ ಜಾರದಂತೆ ನೋಡಿಕೊಳ್ಳುವುದು ಅಕ್ಕ- ಪಕ್ಕದ ಮಸಲ್‌ಗಳು. ವಾಲ್ ಮಸಲ್‌ಗೆ ಕಂಪನವನ್ನು ತಾಳುವ ಕೆಲಸ. 20 ಸಾವಿರ ಕಿಲೋ ಮೀಟರ್‌ಗೆ ಯಾವುದೇ ಟಯರ್‌ನ ಮಸಲ್‌ಗಳು ಅರ್ಧದಷ್ಟು ಸವೆದಿರುತ್ತವೆ. ನೊಡಲು ಚೆನ್ನಾಗೇ ಕಂಡರೂ, ಅದರ ಆಯಸ್ಸು ಅಲ್ಲಿಗೆ ಮುಗಿಯಿತು. ಅದು ಬದಲಿಸುವ ಸಮಯ.ಬದಲಿಸದೇ ಚಾಲನೆಯನ್ನು ಹೆಚ್ಚುವರಿ 5 ಸಾವಿರ ಕಿಲೋ ಮೀಟರ್‌ನಷ್ಟು ಮಾಡಬಹುದಾದರೂ, ಅದು ಸುರಕ್ಷಿತವಲ್ಲ. ಬದಲಿಸದೇ ಚಾಲನೆ ಮಾಡಿದರೆ ಈ ಕೆಳಕಂಡ ಸಮಸ್ಯೆಗಳು ಎದುರಾಗಬಹುದು. ವಾಹನದ ಸಮತೋಲನ ಹಾಗೂ ರಸ್ತೆ ಹಿಡಿತ ಕಡಿಮೆಯಾಗಿ, ಅಸುರಕ್ಷಿತ *ಚಾಲನೆಯಾಗುವುದು. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚು.* ಸವೆದ ಟಯರ್ ಬಳಸುತ್ತಿದ್ದರೆ ಕುಲುಕಾಟ ಹೆಚ್ಚಾಗಿ ಆರಾಮದಾಯಕ ಸವಾರಿ ಸಿಗದು.* ಕುಲುಕಾಟ ಹೆಚ್ಚಿದರೆ ಆರಾಮದಾಯಕ ಸವಾರಿ ನಷ್ಟವಲ್ಲದೇ, ವಾಹನ ಇತರ ಭಾಗಗಳು ಬೇಗನೇ ಹಾಳಾಗುವ ಸಂಭವ ಹೆಚ್ಚು. ಇದರಿಂದ ವಾಹನದ ಚಾಸಿಸ್ (ಅಡಿಕಟ್ಟು) ಬೆಂಡ್ ಆಗುವುದು, ಬಿರುಕು ಮೂಡುವುದು, ಚಕ್ರ ಒಡೆಯುವ ಸಂಭವವೂ ಇದ್ದು, ವಾಹನದ ಒಟ್ಟಾರೆ ಆಯಸ್ಸು ಕಡಿಮೆಯಾಗುತ್ತದೆ.*ಸವೆದ ಟಯರ್‌ಗಳು ವಾಹನ ಮೈಲೇಜನ್ನು ಕಡಿಮೆ ಮಾಡುತ್ತವೆ. ಯಾವುದೇ ವಾಹನಕ್ಕೆ ಉತ್ತಮ ಮೈಲೇಜ್ ಸಿಗಲು ಉತ್ತಮ ಟಯರ್ ಹಾಗೂ ಗಾಳಿಯ ಪ್ರಮಾಣ ಪೂರಕವಾಗಿರುತ್ತದೆ. ಇವೆರಡರಲ್ಲಿ ಒಂದು ಕಡಿಮೆಯಾದರೂ ಮೈಲೇಜ್ ನಷ್ಟವಾಗುವುದು. ಇಲ್ಲಿ ಕಾರಣ ಸರಳ. ಉತ್ತಮ ಟಯರ್ ರಸ್ತೆಗೆ ಬಿಗಿ ಹಿಡಿದು ಸರಾಗವಾಗಿ ಉರುಳುತ್ತದೆ. ಆದರೆ ಸವೆದ ಟಯರ್ ಜಾರುವುದರಿಂದ ಎಂಜಿನ್‌ಗೆ ಎಳೆಯಲು ಹೆಚ್ಚಿನ ಶ್ರಮವಾಗಿ ಮೈಲೇಜ್ ಕುಸಿಯುತ್ತದೆ.ಈ ಟಿಪ್ ಪಾಲಿಸಿ


* ಟಯರ್ ಕಾಲ ಮಿತಿಗೂ ಮುನ್ನ ಬೇಗ ಸವೆಯದಂತೆ ನೋಡಿಕೊಳ್ಳಲು ಟಯರ್ ಒಳಗಿನ ಗಾಳಿಯ ಪ್ರಮಾಣವನ್ನು ನಿಗದಿತ ಪ್ರಮಾಣದಲ್ಲಿ ನೋಡಿಕೊಳ್ಳಬೇಕು. ಬೈಕ್‌ಗಳಲ್ಲಿ 16 ಇಂಚಿನ ಟಯರ್‌ಗಳಲ್ಲಿ 30 ರಿಂದ 40 ಪಿಎಸ್‌ಐ (ಪೌಂಡ್ ಪರ್ ಸ್ಕ್ವೇರ್ ಇಂಚ್), 20 ಇಂಚಿನ ಟಯರ್‌ಗಳಲ್ಲಿ 45 ರಿಂದ 60 ಪಿಎಸ್‌ಐ, 24 ಇಂಚಿನ ಟಯರ್‌ಗಳಲ್ಲಿ 45 ರಿಂದ 60 ಪಿಎಸ್‌ಐ, 26 ಇಂಚಿನ ಟಯರ್‌ಗಳಲ್ಲಿ 45 ರಿಂದ 100 ಪಿಎಸ್‌ಐ, 27 ಇಂಚಿನ ಟಯರ್‌ಗಳಲ್ಲಿ 45 ರಿಂದ 120 ಪಿಎಸ್‌ಐ ವರೆಗೂ ಗಾಳಿ ತುಂಬಿಸಬೇಕು. ಕಾರುಗಳಲ್ಲಿ ಸಾಮಾನ್ಯವಾಗಿ 30 ರಿಂದ 32 ಪಿಎಸ್‌ಐನ್ನು ನಿಗದಿ ಪಡಿಸಿರಲಾಗಿರುತ್ತದೆ.*ದೂರದ ಪ್ರಯಾಣಕ್ಕೆ ಮುನ್ನ ಟಯರ್‌ನ ಗಾಳಿಯ ಪ್ರಮಾಣವನ್ನು ಪರೀಕ್ಷಿಸುವುದು ಒಳ್ಳೆಯದು. ಕಡಿಮೆಯಿದ್ದರೆ ಸೂಕ್ತ ಪ್ರಮಾಣದ ಗಾಳಿ ತುಂಬಿಸಬೇಕು.* ಕಾರುಗಳಲ್ಲಿ ವೀಲ್ ಅಲೈನ್‌ಮೆಂಟ್ ಹಾಗೂ ವೀಲ್ ಬ್ಯಾಲೆನ್ಸಿಂಗ್ (ಚಕ್ರಗಳ ಸಮತೋಲನ) ಆಗಾಗ ಮಾಡಿಸಬೇಕು. ಚಕ್ರಗಳು ಚಲನೆಯಿಂದಾಗಿ ತಮ್ಮ ಸ್ಥಾನವನ್ನು ಸೂಕ್ಷ್ಮವಾಗಿ ಕಳೆದುಕೊಂಡಿರುತ್ತವೆ. ಇದರಿಂದ ಟಯರ್‌ನ ಯಾವುದೋ ಒಂದು ಭಾಗಕ್ಕೆ ಮಾತ್ರ ಹೆಚ್ಚಿನ ಭಾರ ಬಿದ್ದು, ಸವೆಯಲು ಆರಂಭಿಸುತ್ತದೆ.

 

ಇದಕ್ಕೆ ಪರಿಹಾರ ವೀಲ್ ವೀಲ್ ಅಲೈನ್‌ಮೆಂಟ್ ಹಾಗೂ ವೀಲ್ ಬ್ಯಾಲೆನ್ಸಿಂಗ್. ಇದಕ್ಕಾಗೇ ಇರುವ ಕಂಪ್ಯೂಟರ್ ನಿಯಂತ್ರಿತ ಸಾಧನ ಚಕ್ರದ ಸಮತೋಲನವನ್ನು ಸರಿಪಡಿಸುತ್ತದೆ. ಇದಕ್ಕಾಗಿ ವೀಲ್ ವೈಟ್‌ಗಳೆಂಬ ಅಲ್ಯೂಮಿನಿಯಂ ಅಥವಾ ಸತುವಿನ ಬಿಲ್ಲೆಗಳನ್ನು ಚಕ್ರದಲ್ಲಿ ಟಯರ್‌ಗೆ ಅಂಟಿಕೊಂಡಂತೆ ಕೂರಿಸುತ್ತಾರೆ. ಇದರಿಂದ ಕಾರ್‌ನ ಮೈಲೇಜ್ ಸಹ ಹೆಚ್ಚುವುದು. ಈಗೀಗ ಬೈಕ್‌ಗಳಲ್ಲೂ ಈ ವಿಧಾನ ಅಳವಡಿಸಲಾಗುತ್ತಿದೆ.*ಟಯರ್‌ಗೆ ಪ್ರಯಾಣದಲ್ಲಿ ಕೆಲವು ಆಘಾತಗಳಾಗುತ್ತವೆ. ಕಲ್ಲು ಹೊಡೆಯುವುದು, ಮೊನಚಾದ ಕಲ್ಲು ತಾಗಿ ಬಿರುಕು ಮೂಡುವುದು, ಹರಿಯುವುದು ಆಗಬಹುದು. ಇದನ್ನು ಆಗಾಗ ಗಮನಿಸಿ ಟಯರ್ ಹಾಳಾಗಿದ್ದಲ್ಲಿ ಬದಲಿಸುವುದು ಒಳ್ಳೆಯದು.* ಟಯರ್ ಪಂಕ್ಚರ್ ಆದಾಗ ಚಾಲನೆಯಲ್ಲಿ ಕೆಲವೊಮ್ಮೆ ಅರಿವಿಗೆ ಬಾರದೇ ರನ್ ಆಗಿರುತ್ತದೆ. ಆಗ ಟಯರ್ ಚಕ್ರದ ರಿಮ್‌ಗೆ ತಾಗಿ ರಿಮ್ ಹಾಗೂ ಟಯರ್‌ಗಳೆರಡೂ ಹಾಳಾಗುವ ಸಂಭವ ಉಂಟು. ಆದರೆ ಅಂತಹ ಸಂದರ್ಭದಲ್ಲಿ ಟಯರ್‌ನ್ನು ಬದಲಿಸುವುದು ಒಳಿತು. ಇದಕ್ಕಾಗಿ ಕೆಲವು ಅಡ್ಡಮಾರ್ಗಗಳನ್ನು ಪಂಕ್ಚರ್ ಹಾಕುವವರು ಹೇಳಿಕೊಡುತ್ತಾರಾದರೂ, ಅದು ಒಳ್ಳೆಯ ಆಯ್ಕೆಯಲ್ಲ!* ಈಗ ಟ್ಯೂಬ್‌ಲೆಸ್ ಟಯರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಟಯರ್‌ಗಳೂ ಪಂಕ್ಷರ್ ಆಗುತ್ತವೆ. ಆದರೆ ಒಂದೇ ವ್ಯತ್ಯಾಸವೆಂದರೆ ಒಳಗೆ ಟ್ಯೂಬ್ ಇರುವುದಿಲ್ಲ. ಅಲಾಯ್ ವೀಲ್ ಇರುವ ವಾಹನಗಳಲ್ಲಿ ರಿಮ್‌ನಿಂದ ಗಾಳಿ ಸೋರದಂತಹ ರಚನೆಯನ್ನು ಮಾಡಿ, ಟ್ಯೂಬ್‌ನ್ನು ಬಳಸದೇ ಇರುವ ವ್ಯವಸ್ಥೆಯಿದು.ಆದರೆ ಪಂಕ್ಷರ್ ಆದ ಸಂದರ್ಭದಲ್ಲಿ ಟಯರ್‌ನ ಒಳಗಿರುವ ಅಂಟಿನ ದ್ರಾವಣ ಹೊರಬಂದು ರಂಧ್ರವನ್ನು ಮುಚ್ಚಿ, ಗಾಳಿ ಹೊರಹೋಗದಂತೆ ನೋಡಿಕೊಳ್ಳುತ್ತದೆ. ಆದರೆ ಪಂಕ್ಷರ್ ಮಾಡಿದ ಮೊಳೆ ಅಥವಾ ಮುಳ್ಳು ಟಯರ್‌ನಲ್ಲೆೀ ಉಳಿದಿದ್ದರೆ, ಅದನ್ನು ತೆಗೆಸಬೇಕಾಗುತ್ತದೆ. ಅದನ್ನು ತೆಗೆಸುವ ಖರ್ಚು ಹೆಚ್ಚು. ತೆಗೆಸಿದ ನಂತರ ಬೇರೆಯದೇ ರೀತಿಯ ಪಂಕ್ಚರ್ ಹೋಗಿಸುವ ವಿಧಾನವಿದೆ. ಒಳಗೆ ಅಂಟಿನ ದ್ರಾವಣವೂ ಇಲ್ಲದ ಟಯರ್‌ಗಳೂ ಬಂದಿವೆ.* ಏನೇ ಆದರೂ ಟ್ಯೂಬ್ ಇರುವ ಟಯರ್‌ಗಳೇ ಒಳ್ಳೆಯದು. ಏಕೆಂದರೆ ಒಳಗಿನ ಟ್ಯೂಬ್ ಕುಷನ್‌ನಂತೆ ಕೆಲಸ ಮಾಡಿ, ಟಯರ್ ಹಾಳಾಗದಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲದೇ, ಚಕ್ರದ ರಿಮ್‌ನ್ನೂ ಕಾಪಾಡುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry