ಉತ್ತಮ ಸೇವೆ ನೀಡುವ ವೈದ್ಯನೇ ದೇವ

7

ಉತ್ತಮ ಸೇವೆ ನೀಡುವ ವೈದ್ಯನೇ ದೇವ

Published:
Updated:

ಹುಬ್ಬಳ್ಳಿ: `ವೈದ್ಯರು ಹಾಗೂ ಪೊಲೀಸರ ಕಾರ್ಯವೈಖರಿ, ಅವರು ಎದುರಿಸುವ ಸಮಸ್ಯೆ ಇತ್ಯಾದಿಗಳಲ್ಲಿ ಸಮಾನತೆ ಇದೆ. ಆದರೆ ವೈದ್ಯರಿಗೆ ಸಮಾಜ ಹೆಚ್ಚು ಗೌರವ ನೀಡುತ್ತದೆ. ಉತ್ತಮ ಸೇವೆ ನೀಡಿದರೆ ವೈದ್ಯರನ್ನು ಜನರು ದೇವರೆಂದು ಕರೆಯುತ್ತಾರೆ, ಅವರನ್ನು ಪೂಜಿಸಲು ಸಮಾಜ ಮುಂದಾಗುತ್ತದೆ~ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷ್ನರ್ ಡಾ. ಕೆ. ರಾಮಚಂದ್ರ ರಾವ್ ಅಭಿಪ್ರಾಯಪಟ್ಟರು.ಭಾರತೀಯ ವೈದ್ಯಕೀಯ ಸಂಘ (ಐಎಂಎ), ವೈದ್ಯಕೀಯ ಸೇವೆಗೆ ಸಂಬಂಧಿಸಿ ಹಮ್ಮಿಕೊಂಡಿರುವ ಎರಡು ದಿನಗಳ ಕಾರ್ಯಾಗಾರದ ಅಂಗವಾಗಿ ಕಿಮ್ಸ ಆವರಣದಲ್ಲಿ ಶನಿವಾರ ನಡೆದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.`ವೈದ್ಯರು ರೋಗಿಗೆ ಸರಿಯಾದ ಚಿಕಿತ್ಸೆ ನೀಡುವುದರ ಜೊತೆಯಲ್ಲಿ ಅವರ ಸಂಬಂಧಿಕರಿಗೆ ಪೂರಕ ಮಾಹಿತಿಯನ್ನು ನೀಡಲು ಮುಂದಾದರೆ ರೋಗಿಗೆ ಪ್ರಾಣಾಪಾಯ ಸಂಭವಿಸಿದ ಸಂದರ್ಭದಲ್ಲಿ ವೈದ್ಯರ ಮೇಲೆ ಉಂಟಾಗುವ ಅಪನಂಬಿಕೆಯನ್ನು ತಪ್ಪಿಸಬಹುದು~ ಎಂದು ಅವರು ತಿಳಿಸಿದರು.`ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ಬೆಳೆಯುತ್ತಿದ್ದಂತೆ ಅಪರಾಧಗಳು ಹೆಚ್ಚಾಗುತ್ತಿವೆ. ಇದು ಪೊಲೀಸರ ಕೆಲಸದ ಒತ್ತಡವನ್ನು ಹೆಚ್ಚಿಸುತ್ತಿದೆ~ ಎಂದು ಅವರು ಹೇಳಿದರು.ಹಿರಿಯ ಪತ್ರಕರ್ತ ಶಿವಾನಂದ ಜೋಶಿ ಮಾತನಾಡಿ ಪತ್ರಕರ್ತರು, ಪೊಲೀಸರು, ವೈದ್ಯರು ಹಾಗೂ ವಕೀಲರು ಪರಸ್ಪರ ಪೂರಕವಾಗಿ ಕೆಲಸ ಮಾಡಿದರೆ ಎಂಥ ಕಠಿಣ ಪರಿಸ್ಥಿತಿಯನ್ನು ಕೂಡ ನಿಭಾಯಿಸಲು ಸಾಧ್ಯ ಎಂದು ಹೇಳಿದರು.ವಕೀಲ ಅಜಿತ್ ಎಸ್. ಪರ್ವತೀಕರ, ವಿವಿಧ ರಾಜ್ಯಗಳಲ್ಲಿ ಜಾರಿಯಲ್ಲಿರುವ ವೈದ್ಯಕೀಯ ರಕ್ಷಣಾ ಕಾನೂನು ಕರ್ನಾಟಕದಲ್ಲೂ ಜಾರಿಗೆ ತರಲು ಐಎಂಎ ರಾಜ್ಯ ಶಾಖೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಸಲಹೆ ನೀಡಿದರು. ಡಾ. ಶಿವಕುಮಾರ ಎಫ್. ಕುಂಬಾರ ಮಾತನಾಡಿ, ವೈದ್ಯರ ಮೇಲೆ ಆಕ್ರಮಣ ಆದ ಸಂದರ್ಭದಲ್ಲಿ ಮಾಧ್ಯಮಗಳು ಏಕಮುಖ ವರದಿ ಮಾಡಬಾರದು ಎಂದು ಹೇಳಿದರು. ಗೋಷ್ಠಿಯನ್ನು ಕಿಮ್ಸ ನಿರ್ದೇಶಕಿ ಡಾ. ವಸಂತಾ ಕಾಮತ್ ಉದ್ಘಾಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry