ಉತ್ತರದಲ್ಲಿ ಚಳಿಗಾಳಿಗೆ ಮತ್ತೆ 40 ಬಲಿ

7

ಉತ್ತರದಲ್ಲಿ ಚಳಿಗಾಳಿಗೆ ಮತ್ತೆ 40 ಬಲಿ

Published:
Updated:

ನವದೆಹಲಿ (ಪಿಟಿಐ/ಐಎಎನ್‌ಎಸ್): ಉತ್ತರ ಭಾರತದಲ್ಲಿ ಚಳಿರಾಯನ ಪ್ರತಾಪ ಜೋರಾಗಿದೆ. ಉತ್ತರಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಚಳಿ ಹಾಗೂ ಶೀತಗಾಳಿಗೆ ಹೊಸದಾಗಿ ಕನಿಷ್ಠ 40 ಜನರು ಸಾವನ್ನಪ್ಪಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಇದರಿಂದಾಗಿ ಈವರೆಗೆ ಒಟ್ಟು 57ಕ್ಕೂ ಹೆಚ್ಚು ಜನರು ಚಳಿಗಾಳಿಗೆ ಬಲಿಯಾದಂತಾಗಿದೆ.ಲಖನೌ ವರದಿ: ವೇಗವಾಗಿ ಬೀಸುತ್ತಿರುವ ಚಳಿಗಾಳಿಗೆ ಕಳೆದ 24 ಗಂಟೆಗಳಲ್ಲಿ ಉತ್ತರ ಪ್ರದೇಶ ಒಂದರಲ್ಲೇ 30 ಜನರು ಜೀವ ಕಳೆದುಕೊಂಡಿದ್ದಾರೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ರಾಜ್ಯದಲ್ಲಿ ಕನಿಷ್ಠ ತಾಪಮಾನ 2.6 ಡಿಗ್ರಿ ಸೆಲ್ಸಿಯಸ್ ಇದೆ. ರಾಜ್ಯದ ಬಹುತೇಕ ಕಡೆ ತಾಪಮಾನ ಕನಿಷ್ಠ 4 ಡಿಗ್ರಿ ದಾಖಲಾಗಿದೆ. ವಿವಿಧೆಡೆ ದಟ್ಟವಾದ ಮಂಜು ಆವರಿಸಿದ್ದು, ತೀವ್ರ ಶೀತಗಾಳಿ ಮುಂದುವರೆದಿರುವುದರಿಂದ ಜನರು ಚಳಿಯಿಂದ ನಡುಗುತ್ತಿದ್ದಾರೆ. ಚಳಿ ಸ್ವಲ್ಪ ಬಿಡುವು ನೀಡ್ದ್ದಿದರೂ, ಮುಂಬರುವ ದಿನಗಳು ಹೆಚ್ಚಿನ ಚಳಿಯಿಂದ ಕೂಡಿರುತ್ತವೆ ಎಂದು ಅವರು ಹೇಳಿದ್ದಾರೆ.ಮಂಜು ಆವರಿಸಿಕೊಂಡಿರುವುದರಿಂದ ರೈಲು ಮತ್ತು ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಚಳಿಯಿಂದ ತೊಂದರೆ ಅನುಭವಿಸುತ್ತಿರುವ ಜನರಿಗೆ ಸರ್ಕಾರವು ತಾತ್ಕಾಲಿಕ ಶಿಬಿರಗಳನ್ನು ನಿರ್ಮಿಸಿಕೊಟ್ಟಿದ್ದು, ಕೆಲ ಬಯಲುಗಳಲ್ಲಿ ಬೆಂಕಿ ಹಾಕಿ ಬೆಚ್ಚನೆ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.ರಾಜ್ಯ ಸರ್ಕಾರ ಬಡವರು ಹಾಗೂ ನಿರಾಶ್ರಿತರಿಗೆ ಬ್ಲಾಂಕೆಟ್‌ಗಳನ್ನು ಖರೀದಿಸಲು 15 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದು, ಕೆಲ ಜಿಲ್ಲೆಗಳಲ್ಲಿ ಬ್ಲಾಂಕೆಟ್ ವಿತರಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.ಪಟ್ನಾ ವರದಿ: ಬಿಹಾರದಲ್ಲಿ ಅತಿಯಾದ ಚಳಿಯಿಂದ ಕಳೆದ 24 ಗಂಟೆಗಳಲ್ಲಿ 11 ಜನರು ಸಾವನ್ನಪ್ಪಿದ್ದು, ರಾಜ್ಯದಲ್ಲಿ ಇದುವರೆಗೆ ಒಟ್ಟು 18 ಮಂದಿ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವಾಯವ್ಯ ದಿಕ್ಕಿನಿಂದ ಶೀತ ಗಾಳಿ ಬೀಸುತ್ತಿದ್ದು, 48 ಗಂಟೆಗಳಲ್ಲಿ ಹವಾಮಾನದಲ್ಲಿ ಕೆಲ ಬದಲಾವಣೆ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿ ಎ.ಕೆ. ಸೇನ್ ಹೇಳಿದ್ದಾರೆ.ಗಯಾ ಜಿಲ್ಲೆಯಲ್ಲಿ ಗುರುವಾರ ಕನಿಷ್ಠ ತಾಪಮಾನ 4.6 ದಾಖಲಾಗಿದೆ. ರಾಜ್ಯದಲ್ಲೂ ವಿಮಾನ ಹಾರಾಟ ಮತ್ತು ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.ಪಂಜಾಬ್/ತ್ರಿಪುರಾ ವರದಿ: ಪಂಜಾಬ್‌ನಲ್ಲಿ ಚಳಿಗೆ ಮೂವರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದ್ದು, ಇಬ್ಬರು ಅಮೃತಸರ ಜಿಲ್ಲೆಯವರಾಗಿದ್ದು, ಮತ್ತೊಬ್ಬರು ಹೊರ್ಶಿಪುರ ಜಿಲ್ಲೆಯವರು ಎಂದು ಹೇಳಲಾಗಿದೆ. ತ್ರಿಪುರಾ ರಾಜ್ಯದಲ್ಲೂ ಚಳಿಗೆ ಮೂವರು ಬಲಿಯಾಗಿದ್ದಾರೆ.ಭಿಂದ್ (ಮಧ್ಯಪ್ರದೇಶ) ವರದಿ: ಎರಡು ದಿನಗಳಿಂದ ಬೀಸುತ್ತಿರುವ ಶೀತಗಾಳಿಗೆ ಚಂಬಲ್ ಪ್ರಾಂತ್ಯದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ತಿಂಗಳ 31ರವರೆಗೆ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಭಿಂದ್ ಜಿಲ್ಲೆಯ ಜಿಲ್ಲಾಧಿಕಾರಿ ಅಖಿಲೇಶ್ ಶ್ರೀವಾಸ್ತವ ತಿಳಿಸಿದ್ದಾರೆ.

ರಾಜ್ಯದಲ್ಲಿ 10.2ನಷ್ಟಿದ್ದ ತಾಪಮಾನ ಬುಧವಾರ ಕನಿಷ್ಠ 4.9ಗೆ ಇಳಿದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry