ಉತ್ತರದ ಸಿದ್ಧಗಂಗೆ ಜಾತ್ರೆಗೆ ಸಿದ್ಧ

7

ಉತ್ತರದ ಸಿದ್ಧಗಂಗೆ ಜಾತ್ರೆಗೆ ಸಿದ್ಧ

Published:
Updated:
ಉತ್ತರದ ಸಿದ್ಧಗಂಗೆ ಜಾತ್ರೆಗೆ ಸಿದ್ಧ

ಕೊಪ್ಪಳ: ಈ ಭಾಗದ ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡುತ್ತಿರುವ ಸಂಸ್ಥಾನ ಗವಿಮಠಕ್ಕೆ ಉತ್ತರ ಕರ್ನಾಟಕದ ಸಿದ್ಧಗಂಗೆ ಎಂದರೆ ಅತಿಶಯೋಕ್ತಿಯಲ್ಲ. ಈ ಧಾರ್ಮಿಕ ಕೇಂದ್ರ ಕೇವಲ ಈ ಭಾಗದ ಆರಾಧ್ಯ ದೈವ ಇರುವ ಪೀಠ ಮಾತ್ರವಲ್ಲ, ವಿದ್ಯಾದಾನ ಮಾಡುವ ತಾಣ. ಭಕ್ತರ ಪಾಲಿನ ಮಂದಿರ. ಸರ್ವ ಜನಾಂಗದವರನ್ನೂ ಕೈ ಬೀಸಿ ಕರೆಯುವ ಸಾಮರಸ್ಯ ಸಾರುವ ಹಂದರ.ಇಂತಹ ಸಿದ್ಧಗಂಗೆ ಈಗ ಮತ್ತೊಂದು ಧಾರ್ಮಿಕ ಹಬ್ಬವಾದ ಜಾತ್ರಾ ಮಹೋತ್ಸವಕ್ಕೆ ಸಿದ್ಧವಾಗಿದೆ. ಲಕ್ಷಾಂತರ ಜನ ಭಕ್ತರು ಸಾಕ್ಷಿಯಾಗಲಿರುವ ರಥೋತ್ಸವ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳಿಗಾಗಿ ಶೃಂಗಾರಗೊಳ್ಳುತ್ತಿದೆ.ಜಾತ್ರಾ ಮಹೋತ್ಸವದ ದಿನಗಳಂದು ನಡೆಯುವ ದಾಸೋಹಕ್ಕಾಗಿ ಭಕ್ತರ ಮನ-ಮನೆಗಳಲ್ಲಿ ಸಹ ಸಿದ್ಧತೆಗಳು ನಡೆಯುತ್ತಿವೆ. ಕೆಲವು ಭಕ್ತರು ಮಾದಲಿಯನ್ನು ತಯಾರಿಸುತ್ತಿದ್ದರೆ, ಮತ್ತೆ ಕೆಲವರ ಮನೆಗಳಲ್ಲಿ ರೊಟ್ಟಿಗಳು ಸಿದ್ಧಗೊಳ್ಳುತ್ತಿವೆ. ಜಾತ್ರಾ ಮಹೋತ್ಸವಕ್ಕಾಗಿಯೇ ತಮ್ಮ ಹೊಲಗಳಲ್ಲಿ ವಿವಿಧ ತರಕಾರಿಗಳನ್ನು ಬೆಳೆಯುತ್ತಿರುವ ರೈತರು ಇನ್ನು ಕೆಲವೇ ದಿನಗಳಲ್ಲಿ ಅವುಗಳನ್ನು ಶ್ರೀಮಠಕ್ಕೆ ತಂದು ಸಮರ್ಪಿಸಲಿದ್ದಾರೆ.ಇತ್ತ, ಮಕ್ಕಳ ಆಟಿಕೆ ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡುವವರು ಅಂಗಡಿಗಳನ್ನು ಹಾಕುವ ತಯಾರಿ ನಡೆಸಿದ್ದರೆ, ಮನರಂಜನಾ ಆಟಗಳಿಗಾಗಿ ಸಹ ಶ್ರೀಮಠದ ಮುಂದಿನ ಮೈದಾನ ಸಜ್ಜುಗೊಳ್ಳುತ್ತಿದೆ.ಜ. 29, 30 ಹಾಗೂ 31 ಜಾತ್ರಾ ಮಹೋತ್ಸವದ ಮಹತ್ವದ ದಿನಗಳು. 29ರಂದು ಸಂಜೆ 5 ಗಂಟೆಗೆ ಮಹಾ ರಥೋತ್ಸವ ನೆರವೇರಲಿದ್ದು, ಅಂತಾರಾಷ್ಟ್ರೀಯ ಖ್ಯಾತಿಯ ರವಿಶಂಕರ ಗುರೂಜಿ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ                          `ಗವಿಶ್ರೀ ಸಂಪದ' ಎಂಬ ಸಾಕ್ಷ್ಯ ಚಿತ್ರದ ಬಿಡುಗಡೆ ಸಹ ನಡೆಯಲಿದೆ. ಅದೇ ದಿನ ಸಂಜೆ ಕೈಲಾಸ ಮಂಟಪದಲ್ಲಿ ಸಂಗೀತದ ರಸದೌತಣ                            ಕಾದಿದೆ. ಮುಂಬೈ ಮೂಲದ ಖ್ಯಾತ ಬಾನ್ಸುರಿ ವಾದಕ ಪಂ. ರೋಣು ಮುಜುಂದಾರ್ ಕಾರ್ಯಕ್ರಮ ನಡೆಸಿಕೊಡುವರು.30ರಂದು ಶ್ವಾಸ ಗುರು ವಚನಾನಂದ ಸ್ವಾಮೀಜಿ ಅವರಿಂದ ಉಪದೇಶಾಮೃತ, ಸಂಜೆ 6 ಗಂಟೆಗೆ ಮೈಸೂರು ಮಂಜುನಾಥ ಮತ್ತು ಮೈಸೂರು ನಾಗರಾಜ ಅವರಿಂದ ವಯೋಲಿನ್ ವಾದನ, ರಾತ್ರಿ 10 ಗಂಟೆಗೆ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ. ಕನ್ನಡದ ಪೂಜಾರಿ ಎಂದೇ ಹೆಸರುವಾಸಿಯಾಗಿರುವ ಹಿರೇಮಗಳೂರು ಕಣ್ಣನ್ ಅವರಿಂದ 31ರಂದು ಸಮಾರೋಪ ನುಡಿ. ಸಂಜೆ 6 ಗಂಟೆಗೆ ಪಂ.ರಘುನಾಥ ನಾಕೋಡ ಹಾಗೂ ಡಾ. ರವಿಕಿರಣ ನಾಕೋಡ ಅವರಿಂದ ತಬಲಾ ಸೋಲೊ, ರವೀಂದ್ರ ಸೋರಗಾಂವಿ ಅವರಿಂದ ಸುಗಮ ಸಂಗೀತ ಹಾಗೂ ಬಿ.ಪ್ರಾಣೇಶ, ನರಸಿಂಹ ಜೋಷಿ ಅವರಿಂದ ಹಾಸ್ಯೋತ್ಸವದೊಂದಿಗೆ ಜಾತ್ರಾ ಮಹೋತ್ಸವದ ಪ್ರಮುಖ ಘಟ್ಟಕ್ಕೆ ತೆರೆ ಬೀಳಲಿದೆ.ಫೆ. 1ರಿಂದ 3 ರವರೆಗೆ ಸಾಣೇಹಳ್ಳಿಯ ಶಿವಕುಮಾರ ಕಲಾತಂಡದಿಂದ `ಸದಾರಮೆ', `ಸೂಳೆ ಸಂನ್ಯಾಸಿ' ಹಾಗೂ `ಕಳ್ಳರು-ಬಲುಗಳ್ಳರು' ಎಂಬ ನಾಟಕಗಳ ಪ್ರದರ್ಶನ ನಡೆಯಲಿದೆ. ಕೃಷಿ ಮೇಳ, ಫಲ-ಪುಷ್ಪ ಪ್ರದರ್ಶನ, ಕರಕುಶಲ ವಸ್ತುಗಳ ಪ್ರದರ್ಶನವೂ ಜಾತ್ರೆಗೆ ಕಳೆಕಟ್ಟಲಿವೆ.ನಿತ್ಯ ಜೀವನದ ಜಂಜಡಗಳನ್ನು ಬದಿಗೊತ್ತಿ ಮನಸ್ಸಿಗೆ ಮುದ ನೀಡಲು, ಏಕತಾನತೆಯನ್ನು ದೂರ ಮಾಡಿ ಮೈ-ಮನಗಳನ್ನು ಪುನಶ್ಚೇತನಗೊಳಿಸಲು ಜಾತ್ರೆಯಲ್ಲಿ ಸುತ್ತಾಡಲು, ವೈವಿಧ್ಯಮಯ ಕಾರ್ಯಕ್ರಮಗಳನ್ನು ಮನದಣಿಯೇ ನೋಡಲು ಸಿದ್ಧರಾಗಿ...

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry