ಸೋಮವಾರ, ಆಗಸ್ಟ್ 2, 2021
26 °C

ಉತ್ತರಾಖಂಡಕ್ಕೆ 4,000 ಟನ್ ಧಾನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪ್ರವಾಹ ಪೀಡಿತ ಉತ್ತರಾಖಂಡಕ್ಕೆ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 4,000 ಟನ್ ಗೋಧಿ ಹಾಗೂ ಅಕ್ಕಿ ಮಂಜೂರು ಮಾಡಿದೆ.ತಲಾ 2,000 ಟನ್ ಅಕ್ಕಿ ಹಾಗೂ ಗೋಧಿಯನ್ನು `ಮಿತವ್ಯಯ ಬೆಲೆ'ಯಲ್ಲಿ ಉತ್ತರಾಖಂಡಕ್ಕೆ ರವಾನಿಸುವಂತೆ ಆಹಾರ ಸಚಿವಾಲಯದಿಂದ ಆದೇಶ ಬಂದಿದೆ ಎಂದು ಭಾರತ ಆಹಾರ ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಕನಿಷ್ಠ ಬೆಂಬಲ ಬೆಲೆ ಹಾಗೂ ಖರೀದಿ- ಸಂಗ್ರಹ ವೆಚ್ಚವನ್ನು ಸೇರಿಸಿ ಎರಡೂ ಧಾನ್ಯಗಳ `ಮಿತವ್ಯಯ ಬೆಲೆ' ನಿಗದಿ ಮಾಡಲಾಗುತ್ತದೆ. ಪ್ರಸ್ತುತ ಗೋಧಿಯ `ಮಿತವ್ಯಯ ಬೆಲೆ' ಪ್ರತಿ ಕಿಲೋಗೆ 19 ರೂಪಾಯಿ ಇದ್ದರೆ, ಅಕ್ಕಿ 24ರಿಂದ 25 ರೂಪಾಯಿ ಇದೆ.ಮುಂದಿನ 50 ದಿನಗಳ ಅವಧಿಯೊಳಗೆ ಈ ಧಾನ್ಯವನ್ನು ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಿಕೊಳ್ಳುವಂತೆ ಉತ್ತರಾಖಂಡ ಸರ್ಕಾರಕ್ಕೆ ಸೂಚಿಸಲಾಗಿದೆ. ಇದಲ್ಲದೇ, ಪ್ರವಾಹ ಪೀಡಿತ ಪ್ರದೇಶದ ಸಂತ್ರಸ್ತರಿಗೆ ವಿತರಿಸಲು ಸೂಕ್ತ ವ್ತವಸ್ಥೆ ಮಾಡುವಂತೆಯೂ ತಿಳಿಸಲಾಗಿದೆ.ಪ್ರವಾಹಕ್ಕೆ ಸಿಲುಕಿದ ಉತ್ತರಾಖಂಡಕ್ಕೆ ಹೆಚ್ಚುವರಿ ಆಹಾರಧಾನ್ಯ ನೀಡುವುದಾಗಿ ಕೇಂದ್ರ ಆಹಾರ ಸಚಿವ ಕೆ.ವಿ.ಥಾಮಸ್ ಪ್ರಕಟಿಸಿದ್ದರು. `ನಮ್ಮ ಗೋದಾಮುಗಳಲ್ಲಿ ಸಾಕಷ್ಟು ಧಾನ್ಯ ಸಂಗ್ರಹವಿದೆ. ಹೆಚ್ಚಿನ ಪ್ರಮಾಣದ ಆಹಾರ ಧಾನ್ಯವನ್ನು ಉತ್ತರಾಖಂಡಕ್ಕೆ ವಿತರಿಸಲು ಕ್ರಮ ಕೈಗೊಳ್ಳಲಿದ್ದೇವೆ' ಎಂದೂ ಅವರು ಭರವಸೆ ನೀಡಿದ್ದರು.ಬಿಎಸ್‌ಎಫ್‌ನಿಂದ 16 ಕೋಟಿ ದೇಣಿಗೆ

ನವದೆಹಲಿ (ಐಎಎನ್‌ಎಸ್):
ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದ ಉತ್ತರಾಖಂಡದಲ್ಲಿ ಕೈಗೊಳ್ಳುವ ಪರಿಹಾರ ಕಾರ್ಯಕ್ಕೆ ಗಡಿ ಭದ್ರತಾ ಪಡೆಯು 16 ಕೋಟಿ ರೂಪಾಯಿ ದೇಣಿಗೆ ನೀಡಿದೆ.`ಪಡೆಯ ಎಲ್ಲ ಸಿಬ್ಬಂದಿಯ ಒಂದು ದಿನದ ವೇತನವನ್ನು ದೇಣಿಗೆಯಾಗಿ ಕೊಡಲಿದ್ದೇವೆ' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರವಾಹಕ್ಕೆ ತುತ್ತಾದ ಕೆಲವು ಹಳ್ಳಿಗಳನ್ನು ದತ್ತು ಸ್ವೀಕರಿಸಿ, ಅಲ್ಲಿನ ಜನರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದೂ  ತಿಳಿಸಿದೆ.ಪರಿಹಾರ ಕಾರ್ಯಾಚರಣೆಯಲ್ಲಿ ಮೃತಪಟ್ಟ ಹಾಗೂ ಕಾಣೆಯಾದ ಉತ್ತರಾಖಂಡ ಪೊಲೀಸ್ ಹಾಗೂ ಇಂಡೋ ಟಿಬೆಟನ್ ಗಡಿ ಪೊಲೀಸ್ ಸಿಬ್ಬಂದಿ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ವಿತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.ಜಿಂದಾಲ್‌ನಿಂದ ಹೆಲಿಕಾಪ್ಟರ್, ವಿಮಾನ

ನವದೆಹಲಿ (ಪಿಟಿಐ):
ಪ್ರವಾಹ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿರುವ ಜಿಂದಾಲ್ ಸ್ಟೀಲ್ ಅಂಡ್ ಪವರ್ಸ್‌ ಲಿಮಿಟೆಡ್, ಯಾತ್ರಾರ್ಥಿಗಳ ರಕ್ಷಣೆಗೆ ಎರಡು ಹೆಲಿಕಾಪ್ಟರ್ ಹಾಗೂ ಒಂದು ಕಿರುವಿಮಾನ ನಿಯೋಜಿಸಿದೆ.ನವೀನ್ ಜಿಂದಾಲ್ ನೇತೃತ್ವದ ಕಂಪೆನಿಯು ನೀಡಿದ ಕಿರುವಿಮಾನವು 37 ಆಸನ ಸಾಮರ್ಥ್ಯ ಹೊಂದಿದ್ದು, ರಸ್ತೆಯಲ್ಲಿ ಪ್ರಯಾಣಿಸಲು ಸಾಧ್ಯವಾಗದ ಜನರನ್ನು ಡೆಹ್ರಾಡೂನಿನಿಂದ ದೆಹಲಿಗೆ ಕರೆದೊಯ್ಯಲಿದೆ. ಇದರಲ್ಲೇ ವೈದ್ಯರು ಹಾಗೂ ಇತರ ಸಿಬ್ಬಂದಿ ಇರಲಿದ್ದು, ಅಗತ್ಯ ಚಿಕಿತ್ಸೆ ನೀಡಲಿದ್ದಾರೆ.ಎರಡು ಹೆಲಿಕಾಪ್ಟರ್‌ಗಳು ಜೋಶಿಮಠ ಹಾಗೂ ಸಹಸ್ರಧಾರದಿಂದ ಯಾತ್ರಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಿವೆ. ಮೂರನೇ ಹೆಲಿಕಾಪ್ಟರ್ ಅನ್ನು ಶೀಘ್ರವೇ ನಿಯೋಜಿಸುವುದಾಗಿ ಕಂಪೆನಿಯು ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ಕಂಪೆನಿಯ ಸಿಬ್ಬಂದಿಯು ಐದು ಕೋಟಿ ರೂಪಾಯಿಗಳನ್ನು ಎರಡು ದಿನಗಳ ಹಿಂದಷ್ಟೇ ದೇಣಿಗೆಯಾಗಿ ನೀಡಿದ್ದಾರೆ ಎಂದೂ ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.