ಸೋಮವಾರ, ಅಕ್ಟೋಬರ್ 14, 2019
29 °C

ಉತ್ತರಾಖಂಡದಲ್ಲಿ ಮತ್ತೆ ಅಧಿಕಾರಕ್ಕೆ: ಬಿಜೆಪಿ

Published:
Updated:

ಡೆಹ್ರಾಡೂನ್ (ಪಿಟಿಐ): ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ಆಡಳಿತಾರೂಢ ಬಿಜೆಪಿ ಶುಕ್ರವಾರ ವ್ಯಕ್ತಪಡಿಸಿದೆ. ಮುಖ್ಯಮಂತ್ರಿ ಬಿ.ಸಿಖಂಡೂರಿ ರಾಜ್ಯಕ್ಕೆ ನೀಡಿದ ಕಳಂಕರಹಿತ ಆಡಳಿತ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲಿದೆ ಎಂದಿದೆ.`ಈಗಿನ ಅಧಿಕಾರಾವಧಿಯಲ್ಲಿ ಪಕ್ಷವು ಜನರಿಗೆ ನೀಡಿದ್ದ ಎಲ್ಲಾ ಭರವಸೆಗಳನ್ನು ನೆರವೇರಿಸಿದೆ.ಹಾಗಾಗಿ ಚುನಾವಣೆಯಲ್ಲಿ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯಲಿದೆ~ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.ರಾಜ್ಯದಲ್ಲಿ ಸ್ವಚ್ಛ ಆಡಳಿತ ನೀಡುವುದಕ್ಕಾಗಿ ಸರ್ಕಾರ ಕೈಗೊಂಡಿರುವ ಹಲವು ಕ್ರಮಗಳನ್ನು ಪ್ರಸ್ತಾಪಿಸಿ, ಭ್ರಷ್ಟಾಚಾರವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಪ್ರಬಲ ಮತ್ತು ಪರಿಣಾಮಕಾರಿಯಾದ ಲೋಕಾಯುಕ್ತ ಮಸೂದೆ ಮತ್ತು ಸಾರ್ವಜನಿಕ ಸೇವಾ ಹಕ್ಕು ಕಾಯ್ದೆಗಳನ್ನು ಸರ್ಕಾರ ಜಾರಿಗೆ ತಂದಿದೆ ಎಂದು ವಿವರಿಸಿದರು.ಬೆಟ್ಟ ಪ್ರದೇಶಗಳಲ್ಲಿ ವಾಸಿಸುವ ನಾಗರಿಕರ ಸಮಸ್ಯೆಗಳಿಗೆ ಅಂತ್ಯ ಹಾಡುವ ಉದ್ದೇಶದಿಂದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಅಭಿವೃದ್ಧಿ ತರಲು ಹಲವು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದೂ ತಿಳಿಸಿದರು. ಅಧಿಕಾರಕ್ಕೆ ಬಂದರೆ ನಿರುದ್ಯೋಗ ಭತ್ಯೆ ನೀಡುವುದಾಗಿ ಭರವಸೆ ನೀಡಿರುವ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ಮಾಡಿದ ಅವರು, ಅನುದಾನಿತ ಕೈಗಾರಿಕಾ ಪ್ಯಾಕೇಜ್ ಅನ್ನು ಮೊಟಕುಗೊಳಿಸುವ ಮೂಲಕ ಲಕ್ಷಾಂತರ ಉದ್ಯೋಗಗಳಿಗೆ ಕಾಂಗ್ರೆಸ್ ತಡೆ ಒಡ್ಡುತ್ತಿದೆ ಎಂದು ಆರೋಪಿಸಿದರು.

Post Comments (+)