ಮಂಗಳವಾರ, ಜೂನ್ 15, 2021
25 °C

ಉತ್ತರಾಖಂಡ: ಪ್ರಮಾಣ ವಚನ ವೇಳೆ ರಾವತ್ ಬಣ ಗೈರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್ (ಪಿಟಿಐ): ಉತ್ತರಾಖಂಡ ಕಾಂಗ್ರೆಸ್‌ನಲ್ಲಿ ನಾಯಕತ್ವ  ವಿಚಾರವಾಗಿ ಬಿಕ್ಕಟ್ಟು ಸೃಷ್ಟಿಯಾಗಿದೆ.  ಪಕ್ಷದ ಒಟ್ಟು 32 ಶಾಸಕರಲ್ಲಿ ಕೇಂದ್ರ ಸಚಿವ ಹರೀಶ್ ರಾವತ್ ಅವರ ಬೆಂಬಲಿಗ 17 ಶಾಸಕರು ಗುರುವಾರ ನಡೆದ ಪ್ರಮಾಣ ವಚನ ಸಮಾರಂಭದಿಂದ ದೂರ ಉಳಿಯುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ.

ವಿಧಾನಸಭೆಯಲ್ಲಿ ಸ್ವೀಕರ್ ಮೋಹನ್ ಸಿಂಘಾಲ್ ನೇತೃತ್ವದಲ್ಲಿ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಒಟ್ಟು 15 ಶಾಸಕರು  ಪ್ರಮಾಣ ವಚನ ಸ್ವೀಕರಿಸಿದರು.

ರಾವತ್ ಬೆಂಬಲಿಗ ಶಾಸಕರು ನವದೆಹಲಿಯಲ್ಲಿ ಇನ್ನೂ ಪ್ರತಿಭಟನೆ ನಡೆಸುತ್ತಿರುವುದರಿಂದ ಗುರುವಾರ ಪ್ರಮಾಣ ವಚನ ಸ್ವೀಕರಿಸಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಉತ್ತರಾಖಂಡದ ಹೊಸ ಮುಖ್ಯಮಂತ್ರಿಯಾಗಿ ವಿಜಯ್ ಬಹುಗುಣ ಅವರನ್ನು ನೇಮಿಸುತ್ತಿದ್ದಂತೆಯೇ ತಮಗೆ 17 ಶಾಸಕರ ಬೆಂಬಲವಿದೆ ಎಂದು ಹರೀಶ್ ರಾವತ್ ಹೇಳಿಕೊಂಡಿದ್ದಾರೆ.

ಈ ಮಧ್ಯೆ, ದೆಹಲಿಯಲ್ಲಿ ಹೈಕಮಾಂಡ್ ಮುಂದೆ ನಡೆಸುತ್ತಿರುವ ಪ್ರತಿಭಟನೆಯನ್ನು ರಾವತ್ ಬೆಂಬಲಿಗ ಶಾಸಕ ಪ್ರೀತಮ್ ಸಿಂಗ್ ಸಮರ್ಥಿಸಿಕೊಂಡಿದ್ದಾರೆ. `ಇದು ಬಂಡಾಯ ಅಲ್ಲ. ಸೋನಿಯಾ ಗಾಂಧಿ ನಮ್ಮ ನಾಯಕಿಯಾಗಿದ್ದು, ನಮ್ಮ ಸಮಸ್ಯೆಗಳನ್ನು ಹೈಕಮಾಂಡ್ ಮುಂದೆ ಹೇಳಿಕೊಳ್ಳುವುದಕ್ಕಾಗಿ ಈ ಪ್ರತಿಭಟನೆ~ ಎಂದು ಅವರು ಹೇಳಿದ್ದಾರೆ.

ಇತರ ಶಾಸಕರು ಯಾಕೆ ಪ್ರಮಾಣ ವಚನ ಸ್ವೀಕರಿಸಲಿಲ್ಲ ಎಂದು ಕೇಳಿದ ಪ್ರಶ್ನೆಗೆ, ತಮಗೆ ಅದರ ಕಾರಣ ತಿಳಿದಿಲ್ಲ ಎಂದು ಹೇಳಿ ಅವರು ನುಣುಚಿಕೊಂಡರು.

ಈ ಮಧ್ಯೆ, ಬಹುಗುಣ ಅವರಿಗೆ ಬೆಂಬಲ ನೀಡಿರುವ ಕೆಲವು ಶಾಸಕರೂ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿಲ್ಲ. ಇದಕ್ಕೆ ಏನು ಕಾರಣ ಎಂಬುದು ತಕ್ಷಣಕ್ಕೆ ತಿಳಿದು ಬಂದಿಲ್ಲ.

ಗುರುವಾರ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ಮೂವರು ಪಕ್ಷೇತರ, ಬಿಜೆಪಿಯ 31 ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇಂದು ದೆಹಲಿಗೆ ಬಹುಗುಣ

ನಾಯಕತ್ವ ವಿಚಾರದ ಸಂಬಂಧ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಉತ್ತರಾಖಂಡದ ನೂತನ ಮುಖ್ಯಮಂತ್ರಿ ವಿಜಯ್ ಬಹುಗುಣ ಅವರು ಶುಕ್ರವಾರ ದೆಹಲಿಗೆ ತೆರಳಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಚರ್ಚಿಸಲಿದ್ದಾರೆ ಎಂದು ಬಹುಗುಣ ಅವರಿಗೆ ಆಪ್ತರಾಗಿರುವ ಶಾಸಕ ಸುಬೋಧ್ ಉನ್ನಿಯಾಲ್ ಹೇಳಿದ್ದಾರೆ.

ಈ ನಡುವೆ, ಮಾರ್ಚ್ 25ರಂದು ನಡೆಯಲಿರುವ ವಿಶ್ವಾಸ ಮತದ ಸಂದರ್ಭದಲ್ಲಿ ಬಹುಮತ ಸಾಬೀತು ಪಡಿಸುವುದಾಗಿ ಹೇಳಿರುವ ಬಹುಗುಣ ಅವರು, ಐದು ವರ್ಷಗಳ ಆಡಳಿತಾವಧಿಯನ್ನು ಪೂರ್ಣಗೊಳಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.