ಉತ್ತರಾಧಿಕಾರಿ ಆಯ್ಕೆ ಜಟಿಲ

7

ಉತ್ತರಾಧಿಕಾರಿ ಆಯ್ಕೆ ಜಟಿಲ

Published:
Updated:
ಉತ್ತರಾಧಿಕಾರಿ ಆಯ್ಕೆ ಜಟಿಲ

ಸಾಫ್ಟ್‌ವೇರ್ ದೈತ್ಯ ಸಂಸ್ಥೆ ಇನ್ಫೋಸಿಸ್ ಟೆಕ್ನಾಲಜೀಸ್, ಟಾಟಾ ಗ್ರೂಪ್ ಮತ್ತು ಹೋಟೆಲ್ ಸರಣಿ ಉದ್ಯಮದ ಒಬೆರಾಯ್ ಸಮೂಹದಲ್ಲಿ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ಜಟಿಲಗೊಂಡಿದ್ದು, ದಿನಕ್ಕೊಂದು ಅಚ್ಚರಿದಾಯಕ ಬೆಳವಣಿಗೆಗಳು ನಡೆಯುತ್ತಿವೆ.ಸ್ಥಾಪಕರು ಮತ್ತು ಸಹಸ್ಥಾಪಕರು ಇದುವರೆಗೆ ಉದ್ಯಮ ಸಮೂಹವನ್ನು ಸಮರ್ಥವಾಗಿ, ಯಶಸ್ವಿಯಾಗಿ ಮುನ್ನಡೆಸಿ ಸೇವಾ ನಿವೃತ್ತಿಯ ಅಂಚಿಗೆ ತಲುಪಿದ್ದಾರೆ / ತಲುಪುತ್ತಿದ್ದಾರೆ. ಹೊಸ ತಲೆಮಾರಿನವರಿಗೆ ಅಧಿಕಾರ ಬಿಟ್ಟುಕೊಡುವ ವಿಷಯದಲ್ಲಿ ಯಾವುದೇ ಬಿಕ್ಕಟ್ಟು ಇರದಿದ್ದರೂ, ಯಾರಿಗೆ ಹೊಣೆಗಾರಿಕೆ ಒಪ್ಪಿಸಬೇಕು? ಯಾರು ಸಮರ್ಥರು ಎನ್ನುವ ವಿಚಾರವು ಈ ಬಿಕ್ಕಟ್ಟಿಗೆ ಕಾರಣವಾಗಿದೆ. ಇನ್ಫೋಸಿಸ್ ಮತ್ತು ಟಾಟಾ ಸಮೂಹದ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ಸುಗಮವಾಗಿ ಪೂರ್ಣಗೊಳಿಸಲು ಖ್ಯಾತನಾಮರು ಇರುವ ಸಮಿತಿಗಳನ್ನೇ ರಚಿಸಲಾಗಿದ್ದರೂ, ಆಯ್ಕೆ ಪ್ರಕ್ರಿಯೆಯು ಸಾಕಷ್ಟು ಗೋಜಲಾಗಿದೆ. ಹೊಸ ನಾಯಕತ್ವ ಬದಲಾವಣೆಯ ಮಹತ್ವದ ಘಟ್ಟದಲ್ಲಿಯೇ ಕಾರ್ಪೊರೇಟ್ ದಿಗ್ಗಜಗಳು ಬಿಕ್ಕಟ್ಟಿನ ಸುಳಿಗೆ ಸಿಲುಕಿವೆ.ಇನ್ಫೋಸಿಸ್ ಸಂಸ್ಥೆಯ ಸಹಸ್ಥಾಪಕ ಕೆ.  ದಿನೇಶ್ ಮತ್ತು 16 ವರ್ಷಗಳ ಕಾಲ ಸಂಸ್ಥೆಯ ಏಳಿಗೆಗೆ ಶ್ರಮಿಸಿದ ಮೋಹನ್ ದಾಸ್ ಪೈ, ಸಂಸ್ಥೆಯಿಂದ ಹೊರ ನಡೆಯುವುದಾಗಿ ಹಠಾತ್ತಾಗಿ ಪ್ರಕಟಿಸಿದ್ದಾರೆ. ಒಬೆರಾಯ್ ಸಮೂಹವು ಸದ್ಯಕ್ಕೆ ಉತ್ತರಾಧಿಕಾರಿ ಆಯ್ಕೆ ಪ್ರಶ್ನೆ ಉದ್ಭವಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಪಿಆರ್‌ಎಸ್ ಒಬೆರಾಯ್ (82) ಅವರೇ ಸದ್ಯಕ್ಕೆ  ಇಐಎಚ್  ಲಿಮಿಟೆಡ್‌ನ ಮುಖ್ಯಸ್ಥರಾಗಿ ಮುಂದುವರೆಯುವರು  ಎಂದು ಅವರ ಪುತ್ರ ವಿಕ್ರಂ ಒಬೆರಾಯ್ ಸ್ಪಷ್ಟಪಡಿಸಿದ್ದಾರೆ.ನಿರ್ದೇಶಕ ಮಂಡಳಿಯ ಇಬ್ಬರು ಹಿರಿಯ ಸದಸ್ಯರಾದ ಮೋಹನ್ ದಾಸ್ ಪೈ ಮತ್ತು ಕೆ. ದಿನೇಶ್ - ಸಂಸ್ಥೆ ತೊರೆಯಲು ನಿರ್ಧರಿಸಿದ್ದಾರೆ. ಸಂಸ್ಥೆಯು ತನ್ನ ಹೊಸ ನಾಯಕತ್ವದ ಅನ್ಷೇಷಣೆಯಲ್ಲಿ ಇರುವಾಗಲೇ ಈ ಬೆಳವಣಿಗೆ ನಡೆದಿದೆ. ಈ ಇಬ್ಬರೂ ಹಿರಿಯ ನಿರ್ದೇಶಕರು ಸಂಸ್ಥೆಯಿಂದ ಹೊರ ನಡೆಯಲು ನಿರ್ಧರಿಸಿರುವುದು, ಸಂಸ್ಥೆಯು ಅಸ್ತಿತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದ ಆಡಳಿತ ಮಂಡಳಿ ಪುನರ್ ರಚನೆಯ ಕಸರತ್ತಿಗೆ ಹಾದಿ ಮಾಡಿಕೊಡಲಿದೆ.ಸಂಸ್ಥೆಯ 7 ಜನ ಸಹ ಸ್ಥಾಪಕರಲ್ಲಿ ಒಬ್ಬರಾಗಿರುವ ಕೆ. ದಿನೇಶ್ ಜೂನ್‌ನಲ್ಲಿ ನಿವೃತ್ತರಾಗಲಿದ್ದರೆ. ಇವರ ನಿವೃತ್ತಿಗೆ ಆರೋಗ್ಯ ಸಮಸ್ಯೆ ಕಾರಣ ಎಂದ ಹೇಳಲಾಗಿದೆ. ಮೋಹನ್ ದಾಸ್ ಪೈ- ಬೇರೆಯದೇ  ಕಾರಣಗಳಿಗೆ ಹೊರಬರುತ್ತಿದ್ದಾರೆ. ಸಂಸ್ಥೆಯ ಉನ್ನತ ಅಧಿಕಾರ ಹುದ್ದೆಯ ನೇಮಕಾತಿಗೆ ಸಂಬಂಧಿಸಿದ ಭಿನ್ನಾಭಿಪ್ರಾಯ ಮತ್ತು ವಿವಾದಗಳೇ ಇವರಿಬ್ಬರು ಸಂಸ್ಥೆ ತೊರೆಯಲು ಮೂಲ ಕಾರಣ ಎನ್ನಲಾಗುತ್ತಿದೆ.ಸಾಂಸ್ಥಿಕ ಸ್ವರೂಪದಲ್ಲಿ ಸ್ಥಾಪಕ ಸದಸ್ಯರು ಒಬ್ಬರಾದ ಮೇಲೆ ಒಬ್ಬರು ಮುಖ್ಯ ಕಾರ್ಯನಿರ್ವಹಣಾ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸುವ ಸೂತ್ರ ಅಳವಡಿಸಿಕೊಂಡು ಇದುವರೆಗೆ ಜಾರಿಗೆ ತಂದಿದ್ದ ಸಂಸ್ಥೆಯಲ್ಲಿ, ಶಿಬುಲಾಲ್ ನೇಮಕದ ಮೂಲಕ ಈ ಸುತ್ತು ಕೊನೆಗೊಳ್ಳುವ ಸಂದರ್ಭದಲ್ಲಿ  ಬಿಕ್ಕಟ್ಟು ಉದ್ಭವಿಸಿದೆ.ಸಂಸ್ಥೆಯೊಂದರ ಬೆಳವಣಿಗೆಯ ಹಂತದಲ್ಲಿ, ಸಂಕೀರ್ಣಮಯ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಲ್ಲಿ  ಮೂಲ ತಂಡಕ್ಕೆ ಹೊಸಬರನ್ನು ಸೇರ್ಪಡೆ ಮಾಡಿಕೊಳ್ಳುವುದು ಅನಿವಾರ್ಯವಾಗುವುದು. ವ್ಯಕ್ತಿ ಬೆಳೆಯುವುದಕ್ಕಿಂತ ಸಂಸ್ಥೆ ಬೆಳೆಯುವುದು ಮುಖ್ಯ ವಾಗಿರುತ್ತದೆ. ಸಂಸ್ಥೆಯೊಂದರ ವಿಕಸನದ, ಬೆಳವಣಿಗೆ ಹಾದಿಯಲ್ಲಿ ಕೆಲ ಸ್ಥಾಪಕರೂ ದಿಗ್ಭ್ರಮೆಗೆ ಒಳಗಾಗುವಂತಹ ಬೆಳವಣಿಗೆಗಳೂ ಯಾರ ನಿಯಂತ್ರಣ ಇಲ್ಲದೇ ಘಟಿಸಿ ಬಿಡುತ್ತವೆ. ಹೀಗಾಗಿ ಮಹತ್ವಾಕಾಂಕ್ಷಿಗಳು   ಸಂಸ್ಥೆಯಿಂದ ಹೊರ ನಡೆಯುವುದೇ ಉಳಿದಿರುವ ಮಾರ್ಗವಾಗಿರುತ್ತದೆ.ಒಂದು ವೇಳೆ ಹೊರನಡೆಯಲು ಇಷ್ಟಪಡದಿದ್ದರೆ ಅವರ ಸೀಮಿತ ಗ್ರಹಿಕೆಯಿಂದಾಗಿ, ಸಂಸ್ಥೆಯನ್ನು ಮುನ್ನಡೆಸಲು ವಿಭಿನ್ನ ಆಲೋಚನೆ ಹೊಂದಿರುವವರು  ಅಧಿಕಾರಕ್ಕೆ ಬರಬೇಕಾಗುತ್ತದೆ. ಇದು ಉನ್ನತ ಮಟ್ಟದಲ್ಲಿ  ಭಿನ್ನಾಭಿಪ್ರಾಯಕ್ಕೆ ಎಡೆ ಮಾಡಿಕೊಡುತ್ತದೆ. ಹೀಗಾಗಿ ಕೆಲವರು ಸಂಸ್ಥೆಯಿಂದ ಹೊರ ನಡೆದು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಬಯಸುತ್ತಾರೆ. ತಮ್ಮ ಹಿತಾಸಕ್ತಿಗೆ ಪೂರಕವಾದ ಉದ್ಯಮದಲ್ಲಿ ತೊಡಗಿಕೊಳ್ಳುತ್ತಾರೆ. ಇನ್ಫೋಸಿಸ್‌ನಲ್ಲಿ ಈಗ ಆಗುತ್ತಿರುವುದು ಕೂಡ ಇದೇ ಬೆಳವಣಿಗೆ.ತನ್ನ ಹೊಸ ‘ಸಿಇಒ’ ನೇಮಕ ಮಾಡಿಕೊಳ್ಳುವ ಬಗ್ಗೆ ಸಾಂಸ್ಥಿಕ ವ್ಯವಸ್ಥೆ ಆಯ್ಕೆ ಮಾಡಿಕೊಂಡಿರುವ ಇನ್ಫೋಸಿಸ್‌ನ ನಿರ್ಧಾರ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕೂ ಮೊದಲು ಸಂಸ್ಥೆಯು ತನ್ನ ಉನ್ನತಾಧಿಗಳ ನೇಮಕದಲ್ಲಿ ಸಾಂಸ್ಥಿಕ ನಿಯಮಗಳ ಅನುಗುಣವಾಗಿಯೇ ಒಬ್ಬರ ನಂತರ ಒಬ್ಬರಂತೆ ನೇಮಿಸುತ್ತ ಬಂದಿದೆ. ಸ್ಥಾಪಕ ಅಧ್ಯಕ್ಷ ನಾರಾಯಣಮೂರ್ತಿ ಅವರು ಹುದ್ದೆಯಿಂದ ನಿರ್ಗಮಿಸುವ ಸಮಯ ಹತ್ತಿರ ಬಂದಿರುವಾಗಲೇ ಸಂಸ್ಥೆಗೆ ನಿಜವಾದ ಪರೀಕ್ಷೆ ಎದುರಾಗಿದೆ.ಜಾಗತಿಕ ಐ.ಟಿ ರಂಗದಲ್ಲಿನ ಪ್ರಭಾವಶಾಲಿ ಐ.ಟಿ ಸಂಸ್ಥೆ ಎನ್ನುವ ಹೆಗ್ಗಳಿಕೆ ಕ್ರಮೇಣ ಕ್ಷೀಣಿಸುತ್ತಿದ್ದು, ಸಂಸ್ಥೆಗೆ ಹೊಸ ಚಾಲನೆ ಮತ್ತು ಹೊಸ ದೃಷ್ಟಿಕೋನದ ಅಗತ್ಯ ಇರುವುದು ಸದ್ಯದ ಅಗತ್ಯವಾಗಿದೆ. ಸಂಸ್ಥೆಯ ಪ್ರಭಾವ ಮಸುಕಾಗುತ್ತಿದೆ. ಇದುವರೆಗೆ ತುಂಬ ಗೌರವ, ಅಭಿಮಾನದಿಂದ ಕಾಣಲಾಗುತ್ತಿದ್ದ ಸಂಸ್ಥೆಯನ್ನು ಸಾಮಾನ್ಯ ಸಂಸ್ಥೆ ಎಂಬಂತೆ ಪರಿಗಣಿಸಲಾಗುತ್ತಿದೆ. ಹೀಗಾಗಿ ಮುಂಬೈ ಷೇರುಪೇಟೆಯಲ್ಲಿ ಸಂಸ್ಥೆಯ ಷೇರಿನ ಬೆಲೆ ಮೊನ್ನೆ ಶುಕ್ರವಾರ ಶೇ 10ರಷ್ಟು ಕಡಿಮೆಯಾಗಿದೆ. ಹೂಡಿಕೆದಾರರು ಈ ಸಂಸ್ಥೆ ಮೇಲೆ ಇಟ್ಟುಕೊಂಡಿದ್ದ ನಂಬಿಕೆ  ಹುಸಿಗೊಳ್ಳುತ್ತಿರುವುದು ಇದರಿಂದ ವೇದ್ಯಗೊಳ್ಳುತ್ತಿದೆ.ಕಳೆದ ದಶಕದಲ್ಲಿನ ಸಂಸ್ಥೆಯ ಹಣಕಾಸು ಸಾಧನೆಯು ಸಂಸ್ಥೆಯ ಸುತ್ತ ವಿಶಿಷ್ಟ ಪ್ರಭಾವವಳಿಯನ್ನೇ ಸೃಷ್ಟಿಸಿತ್ತು.ಕಳೆದ 2 ವರ್ಷಗಳ ಹಣಕಾಸು ಸಾಧನೆ, 2012ನೇ ಸಾಲಿನ ಮುನ್ನೋಟದ ಬಗ್ಗೆ ತೃಪ್ತಿ ನೀಡದ ವಿವರಣೆಗಳು ಮತ್ತು ಸಂಸ್ಥೆಯ ಆಡಳಿತ ಮಂಡಳಿ ಪುನರ್ ರಚನೆಗೆ ಸಂಬಂಧಿಸಿದ ಅನಿಶ್ಚಿತತೆಗಳು ಸಂಸ್ಥೆಯ ಪ್ರಭಾವಳಿ ಮಸುಕುಗೊಳಿಸುತ್ತಿವೆ.ಮೂರ್ತಿ ಅವರ ಅಚ್ಚುಮೆಚ್ಚಿನವರಾಗಿದ್ದ ಮೋಹನ್ ದಾಸ್ ಪೈ ಅವರು  ಮುಂದಿನ  ಸಿಒಒ ಮತ್ತು ಆನಂತರ ಸಿಇಒ ಆಗಿ ನೇಮಕಗೊಳ್ಳುವ ಸಾಧ್ಯತೆಗಳಿದ್ದವು. ಆದರೆ, ಹೊಸ ಸಿಇಒ ಆಗಲಿರುವ ಎಸ್ .ಡಿ.  ಶಿಬುಲಾಲ್ ಜತೆಗಿನ ಭಿನ್ನಾಭಿಪ್ರಾಯವೇ ಪೈ ಅವರು ಸಂಸ್ಥೆಯಿಂದ ಹೊರ ನಡೆಯುವ ನಿರ್ಧಾರಕ್ಕೆ ಬರಲು ಮುಖ್ಯ ಕಾರಣ ಎನ್ನಲಾಗುತ್ತಿದೆ. ಅದರೆ, ಈ ಆರೋಪವನ್ನು ಪೈ ನಿರಾಕರಿಸುತ್ತಾರೆ. ಸ್ಥಾಪಕರಲ್ಲಿ ಒಬ್ಬರಾಗಿರದಿದ್ದರೂ ಮೋಹನ್ ದಾಸ್ ಪೈ ಅವರು, ಮೂರ್ತಿ ಅವರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಅಷ್ಟೇ ಅಲ್ಲದೇ ಸಿಇಒ ಕ್ರಿಸ್ ಗೋಪಾಲಕೃಷ್ಣ ಅವರಿಗಿಂತ ಹೆಚ್ಚು ಪ್ರಚಾರದಲ್ಲಿದ್ದರು.‘ನಾನು ಸಂಸ್ಥೆಯಿಂದ ಹೊರ ನಡೆಯುವುದನ್ನು ಇಚ್ಛಿಸದ ಮೂರ್ತಿ ನನ್ನನ್ನು ‘ಸಿಒಒ/ ಸಿಇಒ’ ಆಗಲು ಇಷ್ಟ ಇದೆಯೇ? ಎಂದು ಕೇಳಿಕೊಂಡಿದ್ದರು. ಆದರೆ, ನನಗಿಂತ ಕಿರಿಯರು ಸಂಸ್ಥೆ ಮುನ್ನಡೆಸಲು ನೆರವಾಗುವ ದೃಷ್ಟಿಯಿಂದ ನಾನು ಸಂಸ್ಥೆಯಿಂದ ಹೊರ ನಡೆಯಲು ನಿರ್ಧರಿಸಿದ್ದೇನೆ’ ಎಂದೇ ಪೈ  ಹೇಳಿಕೊಂಡಿದ್ದಾರೆ.ಮೂರು ದಶಕಗಳ ಹಿಂದೆ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಅವರ ರೂ. 10 ಸಾವಿರದಷ್ಟು ಉಳಿತಾಯದ ಮೂಲ ಧನದಿಂದ ಸ್ಥಾಪಿತಗೊಂಡಿರುವ ಇನ್ಫೋಸಿಸ್ ಸದ್ಯಕ್ಕೆ 600 ಕೋಟಿ ಡಾಲರ್‌ಗಳಷ್ಟು  (ರೂ. 27,000 ಕೋಟಿ) ಸಂಪತ್ತಿನ ಸಂಸ್ಥೆಯಾಗಿ ದೈತ್ಯಾಕಾರದಲ್ಲಿ ಬೆಳೆದಿದೆ. 10 ವರ್ಷಗಳ ಹಿಂದೆ ಕೇವಲ 50 ಕೋಟಿ ಡಾಲರ್‌ಗಳಷ್ಟಿದ್ದ ಸಂಸ್ಥೆಯ (ರೂ. 2250 ಕೋಟಿ) ವಹಿವಾಟು ಈಗ ಹಲವಾರು ಪಟ್ಟು ಹೆಚ್ಚಳಗೊಂಡಿದೆ.ಸಂಸ್ಥೆಯ ಅತಿದೊಡ್ಡ ಪ್ರತಿಸ್ಪರ್ಧಿ ಸಂಸ್ಥೆ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್) ತನ್ನ ಮುನ್ನಡೆ ಹೆಚ್ಚಿಸಿಕೊಂಡಿರುವಾಗ, ನಾಲ್ಕನೇ ಸ್ಥಾನದಲ್ಲಿ ಇರುವ ಕಾಗ್ನಿಜಂಟ್ ಟೆಕ್ನಾಲಜೀಸ್, 3ನೇ ಸ್ಥಾನದಲ್ಲಿ ಇರುವ ವಿಪ್ರೊ ಟೆಕ್ನಾಲಜೀಸ್ ಅನ್ನು ಹಿಂದಿಕ್ಕುವ ಧಾವಂತದಲ್ಲಿ ಇರುವಾಗಲೇ ಈ ಬೆಳವಣಿಗೆಗಳು ನಡೆದಿರುವುದು ಇನ್ಫೋಸಿಸ್‌ನ  ಭವಿಷ್ಯದ ಮೇಲೆ ಕರಿನೆರಳು ಬೀರಿದೆ.ಅತ್ಯಂತ ತ್ವರಿತ ನಿರ್ಧಾರಕ್ಕೆ ಹೆಸರಾಗಿರುವ ಮೂರ್ತಿ ಅವರು, ನಿವೃತ್ತಿ ನಂತರ ಮೂರ್ತಿ ಅವರು ‘ನಿವೃತ್ತ ಅಧ್ಯಕ್ಷ’ರಾಗಿ  (chairman emeritus) ಮುಂದುವರೆಯಲಿದ್ದಾರೆ. ನಿರ್ದೇಶಕ ಮಂಡಳಿಯಲ್ಲಿ ಅಥವಾ ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಅವರಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಅಂದರೆ ಅಧಿಕೃತ ಹೊಣೆಗಾರಿಕೆಯಿಂದ ಮುಕ್ತರಾಗಲಿದ್ದಾರೆ.ಮೂರ್ತಿ ಉತ್ತರಾಧಿಕಾರಿ ನೇಮಕ ಮಾಡಲು ರಚನೆಗೊಂಡಿರುವ ಸಮಿತಿಯು ಏಪ್ರಿಲ್ 30ರಂದು ಹೊಸ ಉತ್ತರಾಧಿಕಾರಿ ಹೆಸರು ಪ್ರಕಟಿಸಲಿದೆ.

ಜೆಫ್ ಸಮಿತಿಯು ಅರ್ಹತೆ ಒಂದನ್ನೆ ಮಾನದಂಡವಾಗಿ ಪರಿಗಣಿಸಲಿದ್ದು, ಅರ್ಹತೆಯು ಮೌಲ್ಯ, ಸಾಮರ್ಥ್ಯ, ಚುರುಕು ಎಲ್ಲವನ್ನೂ ಒಳಗೊಂಡಿರಲಿದೆ. ಅತ್ಯುತ್ತಮ ನಾಯಕನನ್ನೇ ಆಯ್ಕೆ ಮಾಡಲಿದೆ ಎಂದು ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

 

ಈ ಆಶಯ ನಿಜವಾಗಲಿ. ಸಮರ್ಥ ನಾಯಕ ಇಲ್ಲವೇ ತಂಡಕ್ಕೆ ನಾಡಿನ ಹೆಮ್ಮೆಯ ಸಂಸ್ಥೆ ಮುನ್ನಡೆಸುವ ಜವಾಬ್ದಾರಿ ದೊರೆಯಲಿ. ಈ ಸಂಸ್ಥೆ ಜಾಗತಿಕ ಸ್ಪರ್ಧೆಯಲ್ಲಿ ಮುನ್ನಡೆಯುವಂತಾಗಲಿ. ಹೊಸ ನಾಯಕತ್ವ ವಹಿಸಿಕೊಳ್ಳುವವರು ಸಂಸ್ಥೆಯನ್ನು ಜಾಗತಿಕ ಮಟ್ಟದ ಮೂರು ಮುಂಚೂಣಿ ಸಂಸ್ಥೆಗಳಲ್ಲಿ ಒಂದಾಗಿ ಬೆಳೆಸುವಂತಾಗಲಿ ಎಂದು ಶುಭ ಹಾರೈಸಿರುವ ಮೋಹನ್ ದಾಸ್ ಪೈ ಅವರ ಹಾರೈಕೆ ನಿಜವಾಗಲಿ.ರತನ್ ಟಾಟಾ ಉತ್ತರಾಧಿಕಾರಿ ಯಾರು?

ಇನ್ನೊಂದೆಡೆ ಟಾಟಾ ಸಮೂಹದ ಅಧ್ಯಕ್ಷರಾಗಿರುವ ರತನ್ ಟಾಟಾ ಅವರ ಉತ್ತರಾಧಿಕಾರಿ ಶೋಧಿಸುವಲ್ಲಿ ಆಯ್ಕೆ ಸಮಿತಿಯು ವಿಫಲವಾಗಿದೆ. 2012ರ ಡಿಸೆಂಬರ್‌ಗೆ 75 ವರ್ಷದವರಾಗಲಿರುವ ರತನ್ ಟಾಟಾ ಸೇವಾ ನಿವೃತ್ತಿ ಆಗಲಿದ್ದಾರೆ. ಟಾಟಾ ಅವರ ಉತ್ತರಾಧಿಕಾರಿ ಗುರುತಿಸಲು ಎಂಟು ತಿಂಗಳ ಹಿಂದೆ ಈ ಸಮಿತಿ ರಚಿಸಲಾಗಿತ್ತು. ಟಾಟಾ ಸಮೂಹದ ಬದಲಿ ಮುಖ್ಯಸ್ಥನನ್ನು ಶೋಧಿಸುವಲ್ಲಿ ನಾವು ವಿಫಲರಾಗಿದ್ದೇವೆ ಎನ್ನುವ ತೀರ್ಮಾನಕ್ಕೆ  ಸಮಿತಿ ಬಂದಿದೆ.ರತನ್ ಟಾಟಾ ಅವರ ಉತ್ತರಾಧಿಕಾರಿ ಶೋಧಿಸುವಲ್ಲಿ ನಮ್ಮಿಂದ ಸಾಧ್ಯವಾಗಿಲ್ಲವೆಂದು ಸಮಿತಿ ನಿರ್ಧಾರಕ್ಕೆ ಬಂದಿದೆ ಎಂದು ಟಾಟಾ ಸನ್ಸ್‌ನ ನಿರ್ದೇಶಕರಾಗಿರುವ ಮತ್ತು ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿರುವ ಆರ್. ಕೆ. ಕೃಷ್ಣಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಸಂಸ್ಥೆಯ ಅಂತರ್‌ಜಾಲ ತಾಣದಲ್ಲಿ ಪ್ರಕಟಿಸಲಾದ ಸಂದರ್ಶನದಲ್ಲಿ ಅವರು ಈ ಸಂಗತಿ ಬಹಿರಂಗಪಡಿಸಿದ್ದಾರೆ.ಟಾಟಾ ಸಮೂಹದ ಅಂಗಸಂಸ್ಥೆಯಾಗಿರುವ ಟಾಟಾ ಸನ್ಸ್, ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಉತ್ತರಾಧಿಕಾರಿ ಶೋಧನಾ ಸಮಿತಿ ರಚಿಸಿತ್ತು.

 ಟಾಟಾ ಸಮೂಹದ ಮುಖ್ಯಸ್ಥನ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ಜಟಿಲಗೊಂಡಿದ್ದರೂ, ಶೀಘ್ರದಲ್ಲಿಯೇ ಅದಕ್ಕೆ ಪರಿಹಾರ ಕಂಡುಕೊಳ್ಳಲಾಗುವ ಬಗ್ಗೆ ರತನ್ ಟಾಟಾ ಸುಳಿವು ನೀಡಿದ್ದಾರೆ.ನಾನು ನಿವೃತ್ತಿಯಾಗುವ ಮುಂಚೆಯೇ ನನ್ನ ಉತ್ತರಾಧಿಕಾರಿ ಆಯ್ಕೆ ಸಮಸ್ಯೆ ಬಗೆಹರಿಸಲಾಗುವುದು. ನನ್ನ ಮಲ ಸಹೋದರ ನೋಯೆಲ್ ಟಾಟಾ (53) ಕೂಡ ಅರ್ಹ ಅಭ್ಯರ್ಥಿಯಾಗಿದ್ದಾರೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry