ಬುಧವಾರ, ಮೇ 18, 2022
27 °C

ಉತ್ತರಿಸಲಾಗದೇ ತಬ್ಬಿಬ್ಬಾದ ಅಧಿಕಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜಿಲ್ಲೆಯ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರತ್ಯಕ್ಷ ನಿದರ್ಶನಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತಿದ್ದಂತೆ ನೆರೆದಿದ್ದ ಹಲವು ಇಲಾಖೆ ಅಧಿಕಾರಿಗಳು ಸೂಕ್ತ ಉತ್ತರ ನೀಡಲಾಗದೇ ಬೆವತು ಹೋದ ಘಟನೆ ಶುಕ್ರವಾರ ನಗರದ ವಿಶ್ವೇಶ್ವರಯ್ಯ ಭವನದಲ್ಲಿ  ನಡೆಯಿತು.ಜಿಲ್ಲೆಯನ್ನು ಕಾಡುತ್ತಿರುವ ಮಕ್ಕಳ ಹಕ್ಕುಗಳ ಉಲ್ಲಂಘನೆ ಸಮಸ್ಯೆ ಕುರಿತಂತೆ ಸಮಾಜಿಕ ಪರಿವರ್ತನಾ ಜನಾಂದೋಲನಾ ಸಮಿತಿಯು ಹಲವು ಪ್ರತ್ಯಕ್ಷ ನಿದರ್ಶನಗಳನ್ನು ಸಾದರಪಡಿಸುವ ಮೂಲಕ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು. ಮುಖ್ಯ ಅತಿಥಿಯಾಗಿ ಮಾತನಾಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ನೀನಾ ಪಿ. ನಾಯಕ, ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಸರ್ಕಾರ, ಸರ್ಕಾರೇತರ ಸಂಸ್ಥೆಗಳ ಜೊತೆಗೆ ಸಾರ್ವಜನಿಕರು ಕೈ ಜೋಡಿಸಬೇಕು. ಸಮುದಾಯ ಸಶಕ್ತವಾದಾಗಲೇ ಸಮಸ್ಯೆಗಳನ್ನು ಹತ್ತಿಕ್ಕಲು ಸಾಧ್ಯ ಎಂದರು.ಹೆಚ್ಚುವರಿ ಹೊಣೆಗಾರಿಕೆ ಹೊರಲು ಎಲ್ಲ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಅದರ ನಿವಾರಣೆಗೆ ಸರ್ಕಾರದ ಜತೆ ಚರ್ಚಿಸಿ ಪ್ರಯತ್ನ ಮಾಡಲಾಗುವುದು. ಇಂದು ಜಿಲ್ಲೆಯಲ್ಲಿ ಕಂಡುಬಂದ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ ಜತೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು.ಕಾರ್ಮಿಕ, ಆರೋಗ್ಯ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹೀಗೆ ಜಿಲ್ಲೆಯ ಎಲ್ಲ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲೆಯ ವಸತಿ ನಿಲಯ, ಪ್ರಾಥಮಿಕ ಶಾಲೆಗಳ ಕುಂದುಕೊರತೆಗಳು, ಅಂಗನವಾಡಿ ಕೇಂದ್ರಗಳ ಅಪೌಷ್ಟಿಕ ಆಹಾರ, ಬಾಲಕಾರ್ಮಿಕದಂಥ ಸಮಸ್ಯೆಗಳ ಕುರಿತು ಮಕ್ಕಳು ತಮ್ಮ ಅಳಲನ್ನು ಸಭೆಯ ಮುಂದೆ ತೋಡಿಕೊಂಡಾಗ, ಕೆಲ ಅಧಿಕಾರಿಗಳು ಸಮರ್ಥ ಕಾರಣ ನೀಡದೇ ಹಾರಿಕೆ ಉತ್ತರ ನೀಡಿದ ಘಟನೆ ಜರುಗಿತು.ತಬ್ಬಿಬ್ಬಾರ ಅಧಿಕಾರಿ: ಜಿಲ್ಲೆಯ ಕುಡ್ಕಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯ ಅವ್ಯವಸ್ಥೆ, ಕಮಲಾನಗರ ಮಕ್ಕಳ ಸಾವಿಗೆ ಪರಿಹಾರ, ಕಡಣಿ ಗ್ರಾಮದ ಕಿಡಕಿ, ಬಾಗಿಲುಗಳಿಲ್ಲದ ಶಾಲೆ, ಶೌಚಾಲಯ, ನೀರಿನ ಸೌಲಭ್ಯ ಕಾಣದ ಶಾಲೆಗಳ ಸಮಸ್ಯೆ ಹೀಗೆ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೂರುಗಳು ಬಂದಾಗ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎಸ್. ಪರಮೇಶ ಸಮರ್ಥನೆ ಮಾಡಿಕೊಳ್ಳುವ ರೀತಿಯಲ್ಲಿ ತಡಬಡಿಸಿದರು. ಎಲ್ಲ ಸಮಸ್ಯೆಗೂ ಪರಶೀಲಿಸುವ ಭರವಸೆಯೊಂದೇ ಸಿದ್ಧ ಉತ್ತರವಾಗಿತ್ತು. ಅಲ್ಲದೇ ಯಾವ ಪ್ರಶ್ನೆ ಕೇಳಿದರೂ ನನ್ನ ಗಮನಕ್ಕೆ ಬಂದಿಲ್ಲ. ಇನ್ನೂ ಮುಂದೆ ಕ್ರಮ ಕೈಗೊಳ್ಳಲಾಗುವುದು ಎಂಬ ಮಾತು ಪದೇ ಪದೇ ಕೇಳಿ ಬಂದದ್ದು ಆಚ್ಚರಿ ಮೂಡಿಸಿತು. ಇನ್ನೂ 15 ದಿನದಲ್ಲಿ ಶೈಕ್ಷಣಿಕ ಸಮಸ್ಯೆಯನ್ನು ನಿವಾರಿಸುವುದಾಗಿ ತಿಳಿಸಿದರು.ಪತ್ರಕರ್ತ ಟಿ.ವಿ. ಶಿವಾನಂದನ್, ಮ್ಯಾಥ್ಯೂ  ಪಿಲಿಪ್, ವಕೀಲ ವಿಲಾಸಕುಮಾರ, ಜೆ.ಬಿ.ರಾಜು ತೀರ್ಪು ಮಂಡಳಿ ಸದಸ್ಯರಾಗಿ ಪಾಲ್ಗೊಂಡಿದ್ದರು. ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಕೆ.ನೀಲಾ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ರಾಜ್ಯ ಸಂಘಟಕ ವೈ.ಮರಿಸ್ವಾಮಿ, ಸಂಘಟಕ ವಿಠಲ ಟಿ.ಚಿಕಣಿ, ರಾಜ್ಯ ಸಮಿತಿ ಸದಸ್ಯ ಜೆ.ಬಿ.ರಾಜು ಹಾಗೂ ಮತ್ತಿತರರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.