ಬುಧವಾರ, ಮೇ 19, 2021
22 °C

ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಧಾರವಾಡ, ಬೆಳಗಾವಿ ಮತ್ತು ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ಬುಧವಾರ ಆಲಿಕಲ್ಲು ಸಮೇತ ಭಾರಿ ಮಳೆಯಾಗಿದೆ. ವಿಜಾಪುರ ಜಿಲ್ಲೆಯ ಕೆಲವೆಡೆ ಮಳೆಯಾಗಿದೆ.ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಜಿಲ್ಲೆಯ ಖಾನಾಪುರ, ಹುಕ್ಕೇರಿ ಮತ್ತು ರಾಮದುರ್ಗ ಜಿಲ್ಲೆಯ ಬಟಕುರ್ಕಿಯಲ್ಲಿಯೂ ಆಲಿಕಲ್ಲು ಸಮೇತ ಭಾರಿ ಮಳೆಯಾಗಿದೆ. ಬಟಕುರ್ಕಿ ಗ್ರಾಮದ ಸುತ್ತಮುತ್ತ ಬುಧವಾರ ಲಿಂಬಿಕಾಯಿ ಗಾತ್ರದ ಆಲಿಕಲ್ಲುಗಳು ಬಿದ್ದವು. ಇದರಿಂದಾಗಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ರಾಯಬಾಗ ಸಮೀಪ ಚಿಂಚಲಿ ರಸ್ತೆಯಲ್ಲಿ ಮಂಗಳವಾರ ರಾತ್ರಿ ಮಳೆಯಾದಾಗ ಸಿಡಿಲು ಬಡಿದು ಗುಡಿಸಲೊಂದು ಸುಟ್ಟಿದೆ. ಆದರೆ ಯಾವುದೇ ಜೀವಹಾನಿ ಸಂಭವಿಸಿಲ್ಲ.ಬೆಳಗಾವಿ ನಗರದಲ್ಲಿ ಮಧ್ಯಾಹ್ನ ಸುಮಾರು ಎರಡು ಗಂಟೆಯ ಹೊತ್ತಿಗೆ ಗುಡುಗು- ಮಿಂಚಿನೊಂದಿಗೆ ಮಳೆ ಸುರಿಯಲು ಆರಂಭಿಸಿತು. ಕೆಲ ಕ್ಷಣಗಳಲ್ಲೇ ಮಳೆಯ ರಭಸ ಹೆಚ್ಚುವುದರೊಂದಿಗೆ ಆಲಿಕಲ್ಲುಗಳು ಬೀಳಲು ಆರಂಭಿಸಿದವು. ಗಾಳಿ-ಮಳೆ ಆಗಿದ್ದರಿಂದ ನಗರದಲ್ಲಿ ಸುಮಾರು 3-4 ಗಂಟೆ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಲಾಗಿತ್ತು.ಅಥಣಿ ತಾಲ್ಲೂಕಿನಲ್ಲಿ ಮಂಗಳವಾರ ಸಂಜೆಯೇ ಸುಮಾರು ಒಂದು ಗಂಟೆ ಕಾಲ ಮಳೆ ಸುರಿದಿತ್ತು. ಬುಧವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ಪುನಃ ಆರಂಭವಾದ ಮಳೆಯು ಬಿಟ್ಟು, ಬಿಟ್ಟು ಸುರಿಯುತ್ತಿದೆ. ಬರದಿಂದ ಕಂಗೆಟ್ಟಿದ್ದ ಅಥಣಿಯಲ್ಲಿ ಮಳೆಯು ಭೂಮಿಯನ್ನು ತಂಪಾಗಿಸಿತು. ಮುರುಗುಂಡಿ ಗ್ರಾಮದಲ್ಲಿ ಉತ್ತಮ ಮಳೆಯಾಗಿದೆ.ವಿಜಾಪುರ ವರದಿ: ಇಂಡಿ ತಾಲ್ಲೂಕಿನ ಚಡಚಣ, ಬಸವನ ಬಾಗೇವಾಡಿ ತಾಲ್ಲೂಕಿನ ಹೂವಿನ ಹಿಪ್ಪರಗಿ, ಕುದರಿ ಸಾಲವಾಡಗಿಯಲ್ಲಿ ಬುಧವಾರ ಮಳೆ ಸುರಿದಿದೆ.ಕುದರಿ ಸಾಲವಾಡಗಿಯಲ್ಲಿ ಸಿಡಿಲು ಬಡಿದು ಒಂದು ಎತ್ತು ಮೃತಪಟ್ಟಿದ್ದು, ರೈತ ದೇವೇಂದ್ರಪ್ಪ ಬಾಲಪ್ಪ ಕಳ್ಳಿಮನಿ (ಮಾದರ) ಎಂಬವರಿಗೆ ಗಾಯಗಳಾಗಿವೆ.ತಿಕೋಟಾ ಹತ್ತಿರದ ಹರನಾಳ ಗ್ರಾಮದಲ್ಲಿ ಸಿಡಿಲು ಬಡಿದು ಜೋಳದ ಕಣಕಿಯ ಬಣಿವೆಗೆ ಬೆಂಕಿ ಬಿದ್ದಿತ್ತು. ಇಂಡಿ, ಸಿಂದಗಿ ಪಟ್ಟಣದಲ್ಲಿ ಸಂಜೆ ಸ್ವಲ್ಪ ತುಂತುರು ಮಳೆಯಾಯಿತು. ವಿಜಾಪುರ ನಗರದಲ್ಲಿ ಮೋಡ ಮುಸುಕಿದ ವಾತಾವರಣವಿತ್ತು.ಗದಗ ವರದಿ: ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಬೆಳವಣಕಿ ಸುತ್ತಮುತ್ತ ಆಲಿಕಲ್ಲು ಮಳೆಯಾಗಿದೆ. ಗದಗ ನಗರದಲ್ಲಿ ಸುಮಾರು ಅರ್ಧ ತಾಸು ರಭಸದ ಮಳೆಯಾಗಿದೆ. ಜಿಲ್ಲೆಯ ಬೆಟಗೇರಿ, ಹುಲಕೋಟಿ ಮತ್ತು ಕುರ್ತುಕೋಟಿಯಲ್ಲಿಯೂ ಮಳೆಯಾಗಿದೆ.ಬಾಗಲಕೋಟೆ ವರದಿ:
ಬಾಗಲಕೋಟೆ ಜಿಲ್ಲೆಯ ತೇರದಾಳ, ಮಹಾಲಿಂಗಪುರ, ಮುಧೋಳದಲ್ಲಿ ಬುಧವಾರ ಸಂಜೆ ಸುಮಾರು 10 ನಿಮಿಷಗಳ ಕಾಲ ತುಂತುರು ಮಳೆ ಸುರಿಯಿತು. ಬೀಳಗಿ ಪಟ್ಟಣದಲ್ಲಿ ಆಲಿಕಲ್ಲು ಮಳೆ  ಸುರಿದಿದೆ.ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಆಲಿಕಲ್ಲು ಮಳೆಯಾಗಿದೆ. ನವಲಗುಂದದಲ್ಲಿ ಹಾಗೂ ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ತುಂತುರು ಮಳೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.