ಉತ್ತರ ಧ್ರುವದಿಂ ದಕ್ಷಿಣಕೆ

7

ಉತ್ತರ ಧ್ರುವದಿಂ ದಕ್ಷಿಣಕೆ

Published:
Updated:
ಉತ್ತರ ಧ್ರುವದಿಂ ದಕ್ಷಿಣಕೆ

ಕಾಲೇಜು ಸಾಕೆನಿಸಿತ್ತು. ಇನ್ನೇನಿದ್ದರೂ ಬದುಕಿನ ದಾರಿ ಹುಡುಕುವ ಚಿಂತೆ. ಹೃದಯದ ಮೂಲೆಯಲ್ಲೆಲ್ಲೋ ಕೊರೆಯುತ್ತಿದ್ದ ಸಂಗೀತ ಪ್ರೀತಿ...ರಾಶಿ ಕನಸುಗಳನ್ನು ಕಣ್ಣಲ್ಲಿ ತುಂಬಿಕೊಂಡು ಬೆಂಗಳೂರು ಕಡೆಗೆ ಮುಖ ಮಾಡಿದ ಕಾಶ್ಮೀರಿ ತರುಣ ಖಾಲಿದ್‌ಗೆ ಬೆಂಗಳೂರಿನಲ್ಲಿ ಕಾಲಿಡುತ್ತಿದ್ದಂತೆ ಹಿಗ್ಗೋಹಿಗ್ಗು. ಕಾಶ್ಮೀರದಲ್ಲಿ ತನ್ನದೇ ಶಾಲೆಯಲ್ಲಿ ಓದುತ್ತಿದ್ದ ಕಶಿಫ್ ಇಕ್ಬಾಲ್ ಕೂಡಾ ತನ್ನದೇ ಅಭಿರುಚಿಯವನು. ಈತನೂ ಹಾಡುತ್ತಾನೆ ಎಂದು ತಿಳಿಯುತ್ತಿದ್ದಂತೆ ತಡಮಾಡದೆ ಖಾಲಿದ್ ಮ್ಯೂಸಿಕ್ ಬ್ಯಾಂಡ್ ಒಂದನ್ನು ಕಟ್ಟುವ ಆಸೆಯನ್ನು ನನಸಾಗಿಸಿಕೊಂಡ.

ಅಂದು ರೂಪತಾಳಿದ್ದು `ಪರ್ವಾಜ್~.ಪರ್ವಾಜ್ ಮ್ಯೂಸಿಕ್ ಬ್ಯಾಂಡ್‌ಗಿನ್ನೂ ಎರಡರ ಹರೆಯ. ಬ್ಯಾಂಡ್ ಎಂದಮೇಲೆ ಸ್ವಂತ ಕವಿತೆ ಇರಬೇಕು. ಅದಕ್ಕೆ ರಾಗ ಸಂಯೋಜನೆಯೂ ಸ್ವಂತದ್ದಿರಬೇಕು.ಹಾಡುಗಾರಿಕೆಯೊಂದಿಗೆ ಕಾವ್ಯ ರಚನಾ ಕೌಶಲವನ್ನೂ ಬೆಳೆಸಿಕೊಂಡಿದ್ದ ಖಾಲಿದ್ (ಗಾಯನ) ಹಾಗೂ ಕಶಿಫ್ (ಗಿಟಾರ್ ಹಾಗ್ ಹಿನ್ನೆಲೆ ಗಾಯನ) ಹಾಡುಗಳನ್ನು ಗೀಚಿದರು. ಅಲೈ ಉಮರ್ ಎಂಬುವವರು ಕೂಡಾ ಕವಿತೆಯ ಸಾಲು ಉತ್ತಮವಾಗಿಸಲು ಸಹಕರಿಸುತ್ತಾರೆ. ಬೆಂಗಳೂರಲ್ಲಿ ತಂಡವನ್ನು ಹುಟ್ಟು ಹಾಕಿದ್ದಲ್ಲದೆ ಕಾಶ್ಮೀರಿ, ಉರ್ದು ಹಾಗೂ ಹಿಂದಿ ಭಾಷೆಯ ಹಾಡುಗಳ ಸವಿ ಉಣಿಸುವುದು ಇವರ ಗೀಳಾಗಿಹೋಯಿತು.ಕಾಶ್ಮೀರದಲ್ಲೇ ಪದವಿ ಮುಗಿಸಿ ಈಗ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸಮೂಹ ಸಂವಹನ ವಿದ್ಯಾರ್ಥಿಯಾಗಿರುವ ಕಶಿಫ್ ಹಾಗೂ ಬ್ಯಾಂಡ್‌ನ್ನೇ ಪೂರ್ಣಕಾಲಿಕ ವೃತ್ತಿಯಾಗಿಸಿಕೊಂಡಿರುವ ಖಾಲಿದ್ ಅವರ ಬ್ಯಾಂಡ್ ಪಯಣಕ್ಕೆ ಸಚಿನ್ ಬಾನಂದೂರ್ (ಡ್ರಮ್ಸ ಹಾಗೂ ಪರ್ಕಶನ್) ಹಾಗೂ ಫಿಡೆಲ್ (ಬಾಸ್ ಗಿಟಾರ್) ಡಿಸೋಜಾ ಸಾಥಿಯಾದರು.ಸಚಿನ್ ಮೊದಲಿನಿಂದಲೂ ಸಂಗೀತದ ಹಿನ್ನೆಲೆಯಲ್ಲೇ ಬೆಳೆದು ಬಂದವರು. ಬ್ಯಾಂಡ್ ಹೊರತುಪಡಿಸಿ ತಾವು ಪಳಗಿದ ವಾದ್ಯಗಳನ್ನು ಇತರರಿಗೆ ಕಲಿಸುವ ಜವಾಬ್ದಾರಿಯನ್ನೂ ಸಚಿನ್ ವಹಿಸಿಕೊಂಡಿದ್ದಾರೆ. ಫಿಡೆಲ್ ಮ್ಯೂಸಿಕ್ ವೆಬ್‌ಸೈಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ.ಬ್ಯಾಂಡ್ ಕಟ್ಟಿದ ಎರಡೇ ವರ್ಷಗಳಲ್ಲಿ 150ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿರುವ ಈ ತಂಡದ ಸದಸ್ಯರು ದೆಹಲಿ, ಮುಂಬೈ, ಹೈದ್ರಾಬಾದ್, ಪುಣೆ, ಕೇರಳ, ಮುಂತಾದ ಕಡೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಸದ್ಯಕ್ಕೆ ಇಟಲಿಯಲ್ಲಿ ತಮ್ಮ ಸಂಗೀತ ಸುಧೆ ಹರಿಸಿ ಬರಬೇಕೆಂಬ ತವಕ ಈ ಬ್ಯಾಂಡ್‌ನದ್ದು.ಈ ಮೊದಲು `ದಿಲ್ ಖುಶ್~ ಎಂಬ ಒಂದು ಹಾಡಿನ ಆಲ್ಬಂ ಅನ್ನು ರಚಿಸಿದ್ದ ಈ ಯುವಕರು ಜುಲೈನಲ್ಲಷ್ಟೇ `ಬೇಹೋಶ್~ ಎಂಬ ಐದು ಹಾಡಿನ ಅಲ್ಬಂ ಅನ್ನು ಬಿಡುಗಡೆ ಮಾಡಿದ್ದಾರೆ. `ಫುಲ್ ಲೆನ್ತ್ ಆಲ್ಬಂ~ (ಒಂದು ಆಲ್ಬಂನಲ್ಲಿ 8 ಹಾಡು) ಮಾಡಬೇಕು ಎಂಬುದು ಅವರ ಸದ್ಯದ ಗುರಿ.ಬ್ಯಾಂಡ್ ಪ್ರಾರಂಭವಾಗಿ ಎರಡೇ ವರ್ಷವಾಗಿದ್ದರೂ ಇವರ ಜನಪ್ರಿಯತೆಗೆ ಕೊರತೆಯಾಗಿಲ್ಲ. ಮೊದಲಿನಿಂದಲೂ ತಂಡ ಕಟ್ಟಿಕೊಂಡು ಸೈ ಎನಿಸಿಕೊಂಡ ಕೆಲವು ತಂಡಗಳಲ್ಲಿ ಪರ್ವಾಜ್ ಬಗ್ಗೆ ಭರವಸೆಯ ಮಾತುಗಳಿವೆ.ಈ ತಂಡಕ್ಕೆ ನಿಧಾನವಾಗಿ ಸಾಧನೆಯ ಗರಿ ಅಂಟಿಕೊಳ್ಳುತ್ತಲೇ ಇದೆ. ಜೀ ವಾಹಿನಿ ಆಯೋಜಿಸಿದ್ದ ಐಸಿಐಸಿಐ ಆಸ್ಪೈರ್ ಕಾರ್ಯಕ್ರಮದಲ್ಲಿ ಈ ತಂಡ ರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಸಾಧಿಸಿದೆ. 2011ರಲ್ಲಿ ಕಾಲೇಜು ಸ್ಪರ್ಧೆಗಳಲ್ಲಿ ನಿರಂತರವಾಗಿ 15 ಬಾರಿ ಉತ್ತಮ ಬ್ಯಾಂಡ್ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಬಿಗ್ ಜಂಕ್ಷನ್ ಜಾಮ್, ಫೈರ್‌ಫ್ಲೈಸ್, ಕೇರಳದ ರೋಟ್ಸ್ ಉತ್ಸವ ಹಾಗೂ ಕೂರ್ಗ್‌ನ ಸ್ಟಾರ್ಮ್ ಉತ್ಸವಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿ ಸೈ ಎನಿಸಿಕೊಂಡಿದೆ. ಅಲ್ಲದೆ ಎಂಟಿವಿ ವಾಹಿನಿಯಲ್ಲಿ ಕೂಡಾ ಈ ತಂಡದ ಸಾಧನೆ ಕುರಿತಾದ ಕಾರ್ಯಕ್ರಮವೊಂದು ನಿರೂಪಣೆಗೊಂಡಿದೆ.ತಂಡ ಎಂದ ಮೇಲೆ ಏಳುಬೀಳು ಇದ್ದಿದ್ದೆ. ಬೇರೆ ಬೇರೆ ರೀತಿಯ ಮನಸ್ಥಿತಿಗಳು ಸೇರಿದಾಗ ಮಾತ್ರ ಹೊಸ ವಿಚಾರಗಳ ಉದ್ಭವವಾಗುತ್ತದೆ. ಇಲ್ಲಿ ಎಲ್ಲವೂ ತಂಡದಿಂದಲೇ ಆಗಬೇಕು. ತಂಡದಲ್ಲಿ ಬರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಇವರಿಗೆ ಕಷ್ಟವೇ ಅಲ್ಲ. ಆದರೆ ಕೆಲವೊಮ್ಮೆ ಕಾರ್ಯಕ್ರಮಗಳು ಸಿಗದೆ ತಿಂಗಳಾಂತ್ಯಕ್ಕೆ ಕೈಯಲ್ಲಿ ಕಾಸಿಲ್ಲದಾಗ ಮಾತ್ರ ಕಣ್ಣುಗಳು ಮಂಜಾಗುತ್ತವೆ. ಕುಟುಂಬಕ್ಕೆ ಉತ್ತರಿಸಲಾರದೆ ಪೇಚಾಡುವ ಸಂದರ್ಭಗಳೂ ಸಾಕಷ್ಟಿವೆ ಎನ್ನುತ್ತಾ ನೋವಿನ ದಿನಗಳ ನೆನಪನ್ನು ನಿಧಾನವಾಗಿ ತೇಲಿಸಿಬಿಡುತ್ತಾರೆ ತಂಡದ ಸದಸ್ಯರು.ಮೊದಲಿನಿಂದಲೂ ಸಂಗೀತದ ಗೀಳು ಅಂಟಿಸಿಕೊಂಡ ನಮಗೆ ಸಂಗೀತವೇ ಎಲ್ಲ. ಚಿಕ್ಕ ವಯಸ್ಸಿನಿಂದಲೇ ಸಂಗೀತದ ಬಗ್ಗೆ ಪ್ರೀತಿ ಇದ್ದರೂ ಇದನ್ನೇ ವೃತ್ತಿಯನ್ನಾಗಿಸಿಕೊಳ್ಳುತ್ತೇವೆ ಅಂದುಕೊಂಡಿರಲಿಲ್ಲ. ಅದೂ ಅಲ್ಲದೆ ಆಗ ಸಂಗೀತದಿಂದ ದುಡ್ಡು ಮಾಡಬಹುದು ಎಂಬ ಸನ್ನಿವೇಶ ಇರಲಿಲ್ಲ. ಆದರೆ ಈಗ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ದುಡ್ಡು ಕೊಟ್ಟು ಸಂಗೀತ ಕಾರ್ಯಕ್ರಮ ಕೇಳುವ ಮನಸ್ಥಿತಿ ಬೆಳೆದಿದೆ. ಉತ್ತಮ ಹಾಡುಗಳಿವೆ ಎಂದರೆ ದುಡ್ಡು ಕೊಟ್ಟು ಸಿ.ಡಿ.ಗಳನ್ನು ಖರೀದಿಸುತ್ತಾರೆ. ಈ ಬದಲಾವಣೆ ನಿಜವಾಗಿಯೂ ಕಲಾವಿದರಿಗೆ ವರದಾನವೇ ಸರಿ ಎನ್ನುತ್ತಾರೆ ಸಚಿನ್.ಹಿಂದಿ, ಕಾಶ್ಮೀರಿ, ಉರ್ದುವಿನಲ್ಲಿ ಮಾತ್ರ ಹಾಡುತ್ತೀರಿ. ಕನ್ನಡಿಗರಿಗೆ ಕನ್ನಡ ಹಾಡು ಯಾವಾಗ ಕೇಳಿಸುತ್ತೀರಿ ಎಂದರೆ, ಆ ಆಸೆಯೂ ಇದೆ. ಕವಿತೆ ಬರೆಯೋರಿಗೆ ಕನ್ನಡ ಬರೋದಿಲ್ಲವಲ್ಲ. ಹಾಗಾಗಿ ಅದಕ್ಕೆ ಏನಾದರೂ ಬದಲಿ ವ್ಯವಸ್ಥೆ ಮಾಡಬೇಕು ಎಂದು ತಮ್ಮ ಆಸೆಯನ್ನು ಮತ್ತೊಮ್ಮೆ ಹಂಚಿಕೊಳ್ಳುತ್ತದೆ ಪರ್ವಾಜ್ ತಂಡ.  ವೆಬ್‌ಸೈಟ್: www.parvaaz.net                                                    ಸಂಪರ್ಕಕ್ಕೆ: 99166 76539. 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry