ಸೋಮವಾರ, ಮೇ 17, 2021
26 °C

ಉತ್ತರ ಪೆಸಿಫಿಕ್ ಮೇಲೆ ಚದುರಿಬಿದ್ದ ಉಪಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹ್ಯೂಸ್ಟನ್ (ಪಿಟಿಐ): ಆರು ವರ್ಷಗಳಿಂದ ಭೂಮಿಯನ್ನು ನಿಷ್ಕ್ರಿಯವಾಗಿ ಭ್ರಮಿಸುತ್ತಿದ್ದ 6500 ಕೆ.ಜಿ. ತೂಕದ ಕೃತಕ ಉಪಗ್ರಹವು ಅಮೆರಿಕದ ಪಶ್ಚಿಮ ಕರಾವಳಿಯಾಚೆಯ ದೂರದ ಪೆಸಿಫಿಕ್ ಸಾಗರದಲ್ಲಿ ಬಿದ್ದಿರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.ಉಪಗ್ರಹದ ಅವಶೇಷಗಳು ಕೆನಡಾ ಅಥವಾ ಬೇರೆಡೆಯ ಭೂಪ್ರದೇಶದ ಮೇಲೆ ಬಿದ್ದಿರಬಹುದೆಂದು ಅಂತರ್ಜಾಲದಲ್ಲಿ ಹರಿದಾಡಿದ ಸುದ್ದಿಗೆ ಇದು ವ್ಯತಿರಿಕ್ತವಾಗಿದೆ.ಭೂ ವಾತಾವರಣದ ಮೇಲ್ಪದರದ ಸಂಶೋಧನೆಗಾಗಿ ಉಡಾವಣೆಗೊಂಡಿದ್ದ ಈ ಉಪಗ್ರಹವು ಸ್ಥಳೀಯ ಕಾಲಮಾನದ ಪ್ರಕಾರ, ಶುಕ್ರವಾರ- ಶನಿವಾರಗಳ ನಡುರಾತ್ರಿ 11.23ರಿಂದ 1.09ರ ನಡುವಿನ ಅವಧಿಯಲ್ಲಿ ಭೂಮಿಗೆ ಅಪ್ಪಳಿಸಿದೆ. ಇದಕ್ಕೆ ಮುನ್ನ ಅದು ಹಿಂದೂ ಮಹಾಸಾಗರ ಮತ್ತು ಆಫ್ರಿಕಾಗಳ ಮೇಲೆ ಹಾದು ಹೋಯಿತು ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ. ಆದರೆ ಪೆಸಿಫಿಕ್ ಸಾಗರದ ಯಾವ ಜಾಗದಲ್ಲಿ ಉಪಗ್ರಹದ ಅವಶೇಷಗಳು ಬಿದ್ದಿವೆ ಎಂಬುದನ್ನು ನಿಖರವಾಗಿ ಅಂದಾಜಿಸಲು ಸಾಧ್ಯವಿಲ್ಲ.  ಸಾಗರದ ಉತ್ತರ ಭಾಗದ 800 ಕಿ.ಮೀ. ವ್ಯಾಪ್ತಿಯಲ್ಲಿ ಇದರ ಅವಶೇಷದ ತುಣುಕುಗಳು ಚದುರಿ ಬಿದ್ದಿರಬಹುದು.ಈ ಅವಶೇಷಗಳು ಮನುಷ್ಯನಿಗೆ ಬಡಿಯುವ ಸಾಧ್ಯತೆ ಕಡಿಮೆ, ಅಂದರೆ 3200 ಅಂಶಗಳಲ್ಲಿ ಒಂದಶದಷ್ಟು ಮಾತ್ರ ಎಂದು ವಿಜ್ಞಾನಿಗಳು ಲೆಕ್ಕಾಚಾರ ಹಾಕಿದ್ದರು. ಅದೇ ಪ್ರಕಾರ, ಭೂಮಿಯ ಮೇಲಿನ ಯಾವೊಬ್ಬ ವ್ಯಕ್ತಿ ಗಾಯಗೊಂಡಿರುವ ಅಥವಾ ಯಾವುದೇ ಆಸ್ತಿಪಾಸ್ತಿಗೆ ನಷ್ಟವಾಗಿರುವ ವರದಿಗಳು ಈವರೆಗೆ ಬಂದಿಲ್ಲ.ಉಪಗ್ರಹದ ಬಿಡಿಭಾಗಗಳು ಭೂಪ್ರದೇಶದ ಮೇಲೆ ಬಿದ್ದಿರುವ ಕುರುಹು ಕೂಡ ಕಂಡುಬಂದಿಲ್ಲ ಎಂದು ನಾಸಾ ತಜ್ಞರು ಸ್ಪಷ್ಟಪಡಿಸಿದ್ದಾರೆ.ಭೂಮಿಯ ಮೇಲೆ ಇರಿಸಲಾಗಿದ್ದ ದೂರಸಂವೇದಿಗಳು ಹಾಗೂ ಇನ್ನಿತರ ಕಣ್ಗಾವಲು ಉಪಕರಣಗಳು ಉಪಗ್ರಹ ಯಾವ ತಾಣದಲ್ಲಿ ಛಿದ್ರಗೊಳ್ಳಲು ಆರಂಭವಾಯಿತು ಹಾಗೂ ತುಣುಕುಗಳು ಎಲ್ಲಿ ಭೂಮಿಗೆ ಲಂಬವಾಗಿ ಬೀಳಲು ಆರಂಭಿಸಿತು ಎಂಬುದನ್ನು ಸುಮಾರಾಗಿ ಅಂದಾಜಿಸಲಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.