ಶುಕ್ರವಾರ, ಜೂನ್ 18, 2021
21 °C

ಉತ್ತರ ಪ್ರದೇಶದಲ್ಲಿ ಸೈಕಲ್ ಸವಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಉತ್ತರ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆಯ ಹೊಡೆತಕ್ಕೆ ಆಡಳಿತಾರೂಢ ಬಹುಜನ ಸಮಾಜ ಪಕ್ಷದ `ಆನೆ ನಡೆಯುವ ದಾರಿ~ ಕೊಚ್ಚಿ ಹೋಗಿದೆ. ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸಮಾಜವಾದಿ ಪಕ್ಷದ ಕನಸು ನನಸಾಗಿದೆ. ಪಂಜಾಬ್‌ನಲ್ಲಿ ಸತತ ಎರಡನೇ ಬಾರಿಗೆ ಅಕಾಲಿದಳ- ಬಿಜೆಪಿ ಮೈತ್ರಿಕೂಟವು ಅಚ್ಚರಿಯ ಗೆಲುವು ಸಾಧಿಸಿದೆ. ನಿರೀಕ್ಷೆಯಂತೆ ಗೋವಾದ ಮತದಾರರು `ಕೈ~ ಬಿಟ್ಟು `ಕಮಲ~ಕ್ಕೆ ಮನಸೋತಿದ್ದಾರೆ. ಮಣಿಪುರದಲ್ಲಿ ಸತತ ಮೂರನೇ ಬಾರಿಗೆ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿದೆ. ಉತ್ತರಾಖಂಡದಲ್ಲಿ  ಕಾಂಗ್ರೆಸ್ ಹಾಗೂ ಬಿಜೆಪಿ ಪರಸ್ಪರ ಸಮಬಲದಲ್ಲಿದ್ದರೂ ಎರಡೂ ಸ್ವತಂತ್ರವಾಗಿ ಸರ್ಕಾರ ರಚಿಸುವ ಸ್ಥಿತಿಯಲ್ಲಿ ಇಲ್ಲ.ಇಡೀ ದೇಶ ಕುತೂಹಲದಿಂದ ನೋಡುತ್ತಿದ್ದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದೇ ತಡ ಆಯಾ ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಗಳ ಹೆಸರುಗಳೂ ಪ್ರಕಟವಾಗುತ್ತಿವೆ. ಸಮಾಜವಾದಿ ಪಕ್ಷವು ಮುಲಾಯಂ ಸಿಂಗ್ ಅವರ ಕೈಗೆ ಆಡಳಿತ ಚುಕ್ಕಾಣಿ ಕೊಡಲು ನಿರ್ಧರಿಸಿದೆ. ಪಂಜಾಬ್‌ನಲ್ಲಿ ಪ್ರಕಾಶ್ ಸಿಂಗ್ ಬಾದಲ್ 4ನೇ ಬಾರಿಗೆ ಸಿ.ಎಂ ಗದ್ದುಗೆ ಏರಲಿದ್ದಾರೆ.ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ 224 ಸ್ಥಾನಗಳಲ್ಲಿ ಜಯ ಗಳಿಸಿದೆ. ಇಲ್ಲಿ ಬಿಎಸ್‌ಪಿ ಹಾಗೂ ಬಿಜೆಪಿ  ಕ್ರಮವಾಗಿ 2 ಹಾಗೂ 3ನೆಯ ಸ್ಥಾನದಲ್ಲಿವೆ. ಮುಲಾಯಂ ಸಿಂಗ್ ಅವರು ಸತತ ನಾಲ್ಕನೆಯ ಬಾರಿ ಮುಖ್ಯಮಂತ್ರಿಯಾಗಲು ವೇದಿಕೆ ಸಜ್ಜಾಗಿದ್ದರೂ, ಎಸ್‌ಪಿಯ ಹೊಸ ನಾಯಕನಾಗಿ ಹೊರಹೊಮ್ಮಿರುವ ಅಖಿಲೇಶ್ ಯಾದವ್ ರಾಜ್ಯದ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

 

ಸೋಲಿನ ಹೊಣೆ ಹೊತ್ತ ರಾಹುಲ್
ನವದೆಹಲಿ (ಪಿಟಿಐ): ಉತ್ತರ ಪ್ರದೇಶದಲ್ಲಿ ಪಕ್ಷದ ಹೀನಾಯ ಸೋಲಿನ ಹೊಣೆಯನ್ನು ತಾವೇ ಹೊರುವುದಾಗಿ ಹೇಳಿಕೊಂಡಿರುವ ರಾಹುಲ್ ಗಾಂಧಿ, ಇದು ತಮಗೆ ಪಾಠ ಕಲಿಸಿದೆ ಎಂದಿದ್ದಾರೆ.`ಇಲ್ಲಿ ಪ್ರಚಾರದ ರೂವಾರಿ ನಾನೇ ಆಗಿದ್ದೆ. ಆದ ಕಾರಣ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ನಾವು ಇಲ್ಲಿ ಒಟ್ಟಾಗಿಯೇ ಹೋರಾಡಿದ್ದೆವು. ಆದರೆ ಫಲಿತಾಂಶ ಮಾತ್ರ ಚೆನ್ನಾಗಿಲ್ಲ. ಇಲ್ಲಿ ಪಕ್ಷದ ಸಂಘಟನೆ ಹೇಗಿರಬೇಕೋ ಹಾಗೆ ಇಲ್ಲ. ಈ ನಿಟ್ಟಿನಲ್ಲಿ ನಾವು ಇನ್ನಷ್ಟು ಕೆಲಸ ಮಾಡಬೇಕಿದೆ. ಆಗ ಮಾತ್ರ ಇಲ್ಲಿ ಒಂದಲ್ಲ ಒಂದು ದಿನ ನಾವು ಗೆಲ್ಲುತ್ತೇವೆ~ ಎಂದು ಅವರು ಆತ್ಮಾವಲೋಕನ ಮಾಡಿಕೊಂಡಿದ್ದಾರೆ.ಸೋಲಿಗೆ ಇನ್ನೊಂದು ಕಾರಣವನ್ನು ನೀಡುತ್ತಾ, `ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಬುನಾದಿ ದುರ್ಬಲವಾಗಿದೆ. ಅಲ್ಲದೇ ಮತದಾರರ ಒಲವು ಸಮಾಜವಾದಿ ಪಕ್ಷದ ಕಡೆಗೇ ಇತ್ತು~ ಎಂದೂ ಅವರು ಸುದ್ದಿಗಾರರಿಗೆ ತಿಳಿಸಿದರು.`ಈ ದೇಶದ ರಾಜಕೀಯ ವ್ಯವಸ್ಥೆಯನ್ನು ಸುಧಾರಿಸುವ ಯತ್ನದಲ್ಲಿ ನಾನು ಸೋಲು-ಗೆಲುವು ಎರಡನ್ನೂ ನಿರೀಕ್ಷಿಸಿದ್ದೆ. ಈಗಲೂ ಇಲ್ಲಿ ಜನರಿಗಾಗಿ ಕೆಲಸ ಮಾಡುವುದನ್ನು ನಾನು ನಿಲ್ಲಿಸುವುದಿಲ್ಲ~ ಎನ್ನುವುದನ್ನೂ ಅವರು ಹೇಳಲು ಮರೆಯಲಿಲ್ಲ.

ಪಂಜಾಬ್‌ನಲ್ಲಿ ಅಕಾಲಿ- ಬಿಜೆಪಿ ಮೈತ್ರಿಯು ಸರಳ ಬಹುಮತದ ನಿರೀಕ್ಷೆಯನ್ನೂ ಮೀರಿ ಗೆಲುವು ಸಾಧಿಸುವುದೆಂದು ಮತಗಟ್ಟೆ ಸಮೀಕ್ಷೆ ಕೂಡ ಹೇಳಿರಲಿಲ್ಲ. ಉತ್ತರಾಖಂಡದಲ್ಲಿ ಕಾಂಗ್ರೆಸ್ 32 ಹಾಗೂ ಬಿಜೆಪಿ 31 ಸ್ಥಾನಗಳಲ್ಲಿ ಗೆದ್ದಿದ್ದು, ಎರಡೂ ಪಕ್ಷಗಳು ಸ್ವತಂತ್ರವಾಗಿ ಸರ್ಕಾರ ರಚಿಸುವ ಸ್ಥಿತಿಯಲ್ಲಿ ಇಲ್ಲ. ಅಧಿಕಾರಕ್ಕಾಗಿ ಇಲ್ಲಿ ತುರುಸಿನ `ರಾಜಕೀಯ~ ನಡೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.ಇನ್ನು ಗೋವಾದಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ನೆಲಕಚ್ಚಿದ್ದು, ಬಿಜೆಪಿ ವಿಜಯ ಪತಾಕೆ ಹಾರಿಸಿದೆ. ಪಕ್ಷದ ನಾಯಕ ಮನೋಹರ್ ಪರಿಕ್ಕರ್ ಅವರು ಬುಧವಾರ ಸರ್ಕಾರ ರಚಿಸುವ ಹಕ್ಕು ಮಂಡಿಸುವ ಸಾಧ್ಯತೆ ಇದೆ.ಒಟ್ಟಾರೆ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿಗೆ ತುಸು ನೆಮ್ಮದಿಯನ್ನು ತಂದಿರುವುದು ಮಣಿಪುರದ ಫಲಿತಾಂಶ. 60 ಸದಸ್ಯ ಬಲದ ವಿಧಾನಸಭೆಯಲ್ಲಿ ಪಕ್ಷವು 42 ಸ್ಥಾನಗಳನ್ನು ಗೆದ್ದು ಅಧಿಕಾರ ಸೂತ್ರ ಹಿಡಿಯುವತ್ತ ಮುಖ ಮಾಡಿದೆ. ಇಲ್ಲಿ ಪ್ರಮುಖ ವಿರೋಧ ಪಕ್ಷವಾಗಲು ಮುಂದಾಗಿರುವ ತೃಣಮೂಲ ಕಾಂಗ್ರೆಸ್ 7 ಸ್ಥಾನಗಳಲ್ಲಿ ಗೆದ್ದಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.