ಶನಿವಾರ, ಮೇ 15, 2021
25 °C

ಉತ್ತರ ಪ್ರದೇಶ ಬಿಎಸ್‌ಪಿ ಸ್ಮಾರಕ, ಉದ್ಯಾನ ನಿರ್ವಹಣೆ: 48 ಅಧಿಕಾರಿಗಳ ಎತ್ತಂಗಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ (ಪಿಟಿಐ): ಹಿಂದಿನ ಮಾಯಾವತಿ ಸರ್ಕಾರದಲ್ಲಿ ಬಿಎಸ್‌ಪಿ ಸ್ಮಾರಕಗಳು ಹಾಗೂ ಉದ್ಯಾನಗಳನ್ನು ನಿರ್ವಹಿಸುತ್ತಿದ್ದ ರಾಜಕೀಯ ನಿರ್ಮಾಣ ನಿಗಮಕ್ಕೆ (ಆರ್‌ಎನ್‌ಎನ್) ಸೇರಿದ 48 ಹಿರಿಯ ಅಧಿಕಾರಿಗಳನ್ನು ಉತ್ತರಪ್ರದೇಶ ಲೋಕೋಪಯೋಗಿ ಸಚಿವ ಶಿವಪಾಲ ಸಿಂಗ್ ಯಾದವ್ ಶನಿವಾರ ಅವರವರ ಸ್ಥಾನಗಳಿಂದ ತೆರವುಗೊಳಿಸಿ ಮಾತೃಸಂಸ್ಥೆಗೆ ವಾಪಸ್ ಕಳುಹಿಸಿದ್ದಾರೆ.ಲಖನೌ ಹಾಗೂ ನೊಯಿಡಾದಲ್ಲಿ ಈ ಸ್ಮಾರಕಗಳನ್ನು ನಿರ್ಮಿಸಲಾಗಿದೆ. ಎತ್ತಂಗಡಿಯಾದವರಲ್ಲಿ ನಿಗಮದ ಐವರು ಪ್ರಧಾನ ವ್ಯವಸ್ಥಾಪಕರು  ಸೇರಿದ್ದಾರೆ. ಈ ಸ್ಮಾರಕಗಳ ನಿರ್ಮಾಣ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ವ್ಯಾಪಕ ಅವ್ಯವಹಾರಗಳ ಕುರಿತು ಸಹ ತನಿಖೆಗೆ ಸಚಿವರು ಆದೇಶ ನೀಡಿದ್ದಾರೆ ಎಂದು ಅಧಿಕೃತ ವಕ್ತಾರರೊಬ್ಬರು ತಿಳಿಸಿದ್ದಾರೆ.15 ಎಂಜಿನಿಯರ್ ಅಮಾನತು: ರಸ್ತೆ ವಿಸ್ತರಣೆ ಕಾಮಗಾರಿಯಲ್ಲಿ ಅವ್ಯವಹಾರ ಎಸಗಿದ ಆರೋಪದ ಮೇಲೆ ಉತ್ತರ ಪ್ರದೇಶ ಲೋಕೋಪಯೋಗಿ ಇಲಾಖೆಯ 15 ಎಂಜಿನಿಯರ್‌ಗಳನ್ನು ಅಮಾನತು ಮಾಡಲಾಗಿದೆ. ಒಬ್ಬ ಕಾರ್ಯನಿರ್ವಾಹಕ ಮತ್ತು ನಾಲ್ವರು ಸಹಾಯಕ ಎಂಜಿನಿಯರ್‌ಗಳು ಅಮಾನತುಗೊಂಡವರಲ್ಲಿ ಸೇರಿದ್ದಾರೆ.ಲಖನೌದಿಂದ ಹರದೊಯಿವರೆಗಿನ ರಸ್ತೆ ವಿಸ್ತರಣೆ ಕಾಮಗಾರಿ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ ಲೋಕೋಪಯೋಗಿ ಸಚಿವ ಶಿವಪಾಲ ಸಿಂಗ್ ನಂತರ ಈ ಕ್ರಮ ಜರುಗಿಸಿದ್ದಾರೆ. 22 ಕಿಮೀ ಉದ್ದದ ಈ ರಸ್ತೆ ವಿಸ್ತರಣೆ ಕಾಮಗಾರಿಗೆ ನಿಗದಿಪಡಿಸಲಾದ ಮೊತ್ತ ರೂ 300 ಕೋಟಿ.ನೇಮಕಾತಿ ರದ್ದು: ಹಿಂದಿನ ಬಿಎಸ್‌ಪಿ ಸರ್ಕಾರದಲ್ಲಿ ಉತ್ತರಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪಂಗಡ ಆಯೋಗಕ್ಕೆ ಮಾಡಲಾದ ಎಲ್ಲ ನೇಮಕಾತಿಗಳನ್ನು ಈಗಿನ ಸರ್ಕಾರ ರದ್ದುಗೊಳಿಸಿದೆ.ಪ್ರಧಾನಿ ಭೇಟಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಶನಿವಾರ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರನ್ನು ಭೇಟಿಯಾಗಿ, ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಸುಮಾರು ಒಂದು ಗಂಟೆ ಚರ್ಚಿಸಿದರು.ರಾಜ್ಯಕ್ಕೆ ವಿಶೇಷ ಪ್ಯಾಕೇಜ್‌ನಂತಹ ಯಾವುದೇ ಬೇಡಿಕೆಯನ್ನು ಈ ಸಂದರ್ಭದಲ್ಲಿ ಮಂಡಿಸಲಾಗದಿದ್ದರೂ ಮುಂಬರುವ ಕುಂಭ ಮೇಳ, ಗಂಗಾ ನದಿ ಶುದ್ಧೀಕರಣ ಹಾಗೂ ಕಲ್ಲಿದ್ದಲು ಪೂರೈಕೆಗೆ ಅಗತ್ಯ ಸಹಕಾರಕ್ಕೆ ಮನವಿ ಮಾಡಿಕೊಳ್ಳಲಾಯಿತು.ನಮ್ಮ ಎಲ್ಲ ಪ್ರಸ್ತಾಪಗಳನ್ನು ಪ್ರಧಾನಿ ಸೌಜನ್ಯದಿಂದ ಪರಿಶೀಲಿಸಿದ್ದು ಸಾಧ್ಯವಿರುವ ಎಲ್ಲ ಸಹಕಾರ ನೀಡುವುದಾಗಿ ಭರವಸೆ ನೀಡಿದರು ಎಂದು ಅಖಿಲೇಶ್ ತಿಳಿಸಿದರು.ಮಾಯಾವತಿ ಎಚ್ಚರಿಕೆ: ಎಸ್‌ಪಿ ತಿರುಗೇಟು


ತಮ್ಮ ಅವಧಿಯಲ್ಲಿ ನಿರ್ಮಾಣವಾದ ಸ್ಮಾರಕಗಳ ಕುರಿತು ಯಾವುದೆ ಬದಲಾವಣೆ ಮಾಡಿದಲ್ಲಿ ಅದರಿಂದ ಕಾನೂನು ಸುವ್ಯವಸ್ಥೆಗೆ ಭಂಗವುಂಟಾಗುತ್ತಿದ್ದು ಈ ಯತ್ನ ಕೈಬಿಡುವಂತೆ ಮಾಜಿ ಮುಖ್ಯಮಂತ್ರಿ ಮಾಯಾವತಿ ಎಸ್‌ಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರೆ, `ರಾಷ್ಟ್ರ ನಾಯಕರ ಹೆಸರಿನಲ್ಲಿ ಲೂಟಿ ನಡೆಯಲು ತಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ~ ಎಂದು ಆಡಳಿತಾರೂಢ ಸಮಾಜವಾದಿ ಪಕ್ಷ ಮಾಯಾ ಹೇಳಿಕೆಗೆ ತಿರುಗೇಟು ನೀಡಿದೆ.ಹಿಂದಿನ ಸರ್ಕಾರ ಉದ್ಯಾನ, ಸ್ಮಾರಕ ನಿರ್ಮಿಸಿದರೆ ತಮ್ಮ ಸರ್ಕಾರ ವಿವಿಧ ಕಂಪೆನಿಗಳನ್ನು ಆಕರ್ಷಿಸಲು ಐಟಿ ಪಾರ್ಕ್ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಯಾವತಿ, ಸ್ಮಾರಕಗಳನ್ನು ಬದಲಾಯಿಸಿದಲ್ಲಿ ಉತ್ತರಪ್ರದೇಶ ಮಾತ್ರವಲ್ಲ ಇಡೀ ದೇಶದಲ್ಲಿ ಶಾಂತಿಗೆ ಭಂಗವುಂಟಾಗುತ್ತದೆ ಎಂದು ಎಚ್ಚರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.