ಉತ್ತರ ಭಾರತದ್ದೇ ಪಾರಮ್ಯ

ಮೈಸೂರು: ಮೀರಟ್ನ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯ ತಂಡದವರು ಮೈಸೂರು ವಿ.ವಿ ಆಶ್ರಯದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕುಸ್ತಿ ಚಾಂಪಿಯನ್ಷಿಪ್ನ ಪುರುಷರ ವಿಭಾಗದಲ್ಲಿ ಚಾಂಪಿಯನ್ ಆದರು.
ವಿಶ್ವವಿದ್ಯಾಲಯದ ಜಿಮ್ನಾಷಿಯಂ ಹಾಲ್ನಲ್ಲಿ ಶುಕ್ರವಾರ ಕೊನೆಗೊಂಡ ಚಾಂಪಿಯನ್ಷಿಪ್ನ ಪುರುಷರ ಫ್ರೀಸ್ಟೈಲ್ ವಿಭಾಗದಲ್ಲಿ ಈ ತಂಡದವರು 55 ಪಾಯಿಂಟ್ ಕಲೆಹಾಕಿದರು. ಎರಡನೇ ಸ್ಥಾನ ರೋಹ್ಟಕ್ನ ಮಹರ್ಷಿ ದಯಾನಂದ ವಿ.ವಿ (45 ಪಾಯಿಂಟ್) ಪಾಲಾಯಿತು.
ಮಹಿಳೆಯರ ವಿಭಾಗದಲ್ಲಿ ರೋಹ್ಟ ಕ್ನ ಮಹರ್ಷಿ ದಯಾನಂದ ವಿ.ವಿ ತಂಡದವರು 76 ಪಾಯಿಂಟ್ ಸಂಗ್ರಹಿಸಿ ಚಾಂಪಿಯನ್ ಆದರು. ದ್ವಿತೀಯ ಸ್ಥಾನವನ್ನು ಚೌಧರಿ ಚರಣ್ ಸಿಂಗ್ ವಿ.ವಿ (40 ಪಾಯಿಂಟ್) ಪಡೆಯಿತು.
ಪುರುಷರ ಗ್ರೀಕೊ ರೋಮನ್ ವಿಭಾಗದ ತಂಡ ಪ್ರಶಸ್ತಿ ಮಹರ್ಷಿ ದಯಾನಂದ ವಿ.ವಿ (59 ಪಾಯಿಂಟ್) ಪಾಲಾಯಿತು. ಸಮಗ್ರ ಚಾಂಪಿಯನ್ ಪಟ್ಟವೂ ಈ ವಿ.ವಿಗೆ ಒಲಿಯಿತು. ಚಂಡೀಗಡದ ಪಂಜಾಬ್ ವಿ.ವಿ (43 ಪಾಯಿಂಟ್) ಎರಡನೇ ಸ್ಥಾನ ಗಳಿಸಿತು.
ಅಂತಿಮ ದಿನ ನಡೆದ ಪುರುಷರ ಫ್ರೀಸ್ಟೈಲ್ನ 125 ಕೆ.ಜಿ ವಿಭಾಗದಲ್ಲಿ ಮೀರಟ್ನ ದೇವರತ್ ಚೌಧರಿ ಚಿನ್ನದ ಪದಕ ಜಯಿಸಿದರು. ಅವರು ಫೈನಲ್ನಲ್ಲಿ ಔರಂಗಾಬಾದ್ನ ಎನ್. ಸಂತೋಷ್ ವಿರುದ್ಧ ಗೆದ್ದರು. ಪಟಿಯಾಲದ ಜತಿಂದರ್ ಸಿಂಗ್ ಮತ್ತು ರೋಹ್ಟಕ್ನ ಮನ್ದೀಪ್ ತೃತೀಯ ಸ್ಥಾನ ಪಡೆದರು.
ಪುರುಷರ ಗ್ರೀಕೊ-ರೋಮನ್ ವಿಭಾಗದ 130 ಕೆ.ಜಿ ಫೈನಲ್ನಲ್ಲಿ ಮಹರ್ಷಿ ದಯಾನಂದ ವಿ.ವಿಯ ಸೋನು 8-0 ಪಾಯಿಂಟ್ಗಳಿಂದ ಚೌಧರಿ ಚರಣ್ ಸಿಂಗ್ ವಿ.ವಿಯ ಗ್ಯಾನಿಂದರ್ ಎದುರು ಗೆದ್ದು ಚಿನ್ನದ ಪದಕ ಪಡೆದರು. ಪಟಿಯಾಲದ ಹುಸನ್ ಪಾಲ್ ಸಿಂಗ್ ಹಾಗೂ ಅಮೃತಸರದ ಸಿಮರ್ ಸಿಂಗ್ ತೃತೀಯ ಸ್ಥಾನ ಪಡೆದರು.
ಮಹಿಳೆಯರ ಫ್ರೀಸ್ಟೈಲ್ನ 75 ಕೆ.ಜಿ ವಿಭಾಗದಲ್ಲಿ ಮಹರ್ಷಿ ದಯಾನಂದ ವಿ.ವಿಯ ಪೂಜಾ ಚಿನ್ನ ಜಯಿಸಿದರು. ಅವರು ಫೈನಲ್ನಲ್ಲಿ 8–0 ಪಾಯಿಂಟ್ಗಳಿಂದ ಚಂಡೀಗಡದ ಸುಕ್ಪಾಲ್ ಕೌರ್ ಎದುರು ಜಯ ಗಳಿಸಿದರು.
ರಾಜ್ಯಕ್ಕೆ 5 ಪದಕ: ಈ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕದ ಐದು ಮಂದಿ ಕುಸ್ತಿಪಟುಗಳು ಪದಕ ಗೆದ್ದರು. ದಾವಣಗೆರೆ ವಿಶ್ವವಿದ್ಯಾಲಯದ ಎಲ್. ಆನಂದ್ (ಬೆಳ್ಳಿ), ಕಾರ್ತಿಕ್ ಕಾಟಿ (ಕಂಚು), ಕರ್ನಾಟಕ ವಿಶ್ವವಿದ್ಯಾಲಯದ ಸತೀಶ್ ಫಡತರೆ (ಚಿನ್ನ), ಮಂಗಳೂರು ವಿಶ್ವವಿದ್ಯಾಲಯದ ಎಂ.ಎಸ್. ಆತ್ಮಶ್ರೀ (ಬೆಳ್ಳಿ ) ಹಾಗೂ ಧನುಶ್ರೀ (ಕಂಚು) ಪದಕ ಜಯಿಸಿದರು. ಮೈಸೂರಿನಲ್ಲಿ ಎರಡನೇ ಬಾರಿಗೆ ಈ ಚಾಂಪಿಯನ್ ಷಿಪ್ ನಡೆಯಿತು. 115 ವಿ.ವಿಗಳ 1200 ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.