ಭಾನುವಾರ, ಮಾರ್ಚ್ 7, 2021
30 °C
ಮಾಹಿತಿ ಆಯುಕ್ತ ಸುಚೇತನ ಸ್ವರೂಪ್ ಅಭಿಪ್ರಾಯ

ಉತ್ತರ ರಾಮಾಯಣ ಬರೆದವರು ಪಿಶಾಚಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತರ ರಾಮಾಯಣ ಬರೆದವರು ಪಿಶಾಚಿಗಳು

ತುಮಕೂರು: ‘ಉತ್ತರ ರಾಮಾಯಣ’ ಎಂಬುದು ಕುಹಕಿಗಳು, ಯಾರೋ ಪಿಶಾಚಿಗಳು ಬರೆದಿರುವಂಥದ್ದು ಎಂದು ಮಾಹಿತಿ ಆಯೋಗದ ಆಯುಕ್ತ ಸುಚೇತನ ಸ್ವರೂಪ್ ಹೇಳಿದರು.ಗುರುವಾರ  ಮಹಿಳಾ ಸಮಾಜದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ‘ಕಾಳಿದಾಸನ ರಘುವಂಶ’ ಹಿನ್ನೆಲೆಯಲ್ಲಿ ರಾಮಾಯಣ ಮತ್ತು ಮಹಾಭಾರತ ಕುರಿತು ಮಾತನಾಡಿದರು.‘ರಾಮಾಯಣದಲ್ಲಿ ಎದುರಾದ ಪ್ರಶ್ನೆಗಳಿಗೆ ಅದರಲ್ಲಿಯೇ ಉತ್ತರಗಳನ್ನು ಮೂಲ ರಾಮಾಯಣ ಕೃತಿಯಲ್ಲಿ ಕೊಡಲಾಗಿದೆ. ಆದರೆ, ರಾಮಾಯಣವನ್ನು ನಮ್ಮ ಜನ ತಿರಸ್ಕರಿಸಿದ್ದಾರೆ. ಒಳ್ಳೆಯ ಅಂಶಗಳನ್ನು ಗಮನಿಸುವ ಪ್ರಯತ್ನ ಆಗಿಲ್ಲ. ಈ ತಿರಸ್ಕಾರ ಮನೋಭಾವದವರೇ ಉತ್ತರ ರಾಮಾಯಣ ಬರೆದಿದ್ದಾರೆ’ ಎಂದು ವಿಶ್ಲೇಷಿಸಿದರು.‘ಮೂಲರಾಮಾಯಣ ಓದಿದ ಬಳಿಕ ಉತ್ತರ ರಾಮಾಯಣ ಓದಿದರೆ ನದಿಯಿಂದ ಚರಂಡಿಗೆ ಬಿದ್ದ ಅನುಭವವಾಗುತ್ತದೆ. ಅಷ್ಟೊಂದು ಕೆಟ್ಟದಾಗಿ ಚಿತ್ರಿಸಲಾಗಿದೆ. ರಾಮಾಯಣದಲ್ಲಿ ರಾಮ ಮತ್ತು ಸೀತೆ ಮತ್ತೆ ಒಂದಾಗಿ ಬದುಕುತ್ತಾರೆ ಎಂಬುದನ್ನೇ ಸಮಾಜ ಒಪ್ಪಿಕೊಳ್ಳಲು ಸಿದ್ಧವಿಲ್ಲ. ಜಗತ್ತು ಎಷ್ಟೇ ಕೆಟ್ಟು ಹೋದರೂ ರಾಮ ಮತ್ತು ಸೀತೆಯಂಥವರು ಇದ್ದೇ ಇರುತ್ತಾರೆ’ ಎಂದು ನುಡಿದರು.‘ರಾಮಾಯಣ ಮತ್ತು  ಮಹಾಭಾರತ  ಕೃತಿಗಳ ಬಗ್ಗೆ  ತುಂಬಾ ಅಧ್ಯಯನ ಆಗಿವೆ. ವಿಶೇಷವಾಗಿ ಪಾಶ್ಚಿಮಾತ್ಯರೇ ಹೆಚ್ಚು ಅಧ್ಯಯನ ಮಾಡಿದ್ದಾರೆ. ಮಹಾಭಾರತ ರಾಮಾಯಣಕ್ಕಿಂತ ಬಹಳಷ್ಟು ಹಳೆಯದು ಎಂಬದೂ ಸಂಶೋಧನೆಗಳಿಂದ ತಿಳಿದಿದೆ. ಭಗವದ್ಗೀತೆ ಮಹಾಭಾರತದ ಭಾಗವಲ್ಲ’ ಎಂದು ವಿವರಿಸಿದರು.‘ಜಗತ್ತಿನಲ್ಲಿ ನಡೆಯುವ ಕೆಲ ಅನ್ಯಾಯಗಳಿಗೆ ಉತ್ತರಗಳೇ ಇಲ್ಲ. ನಂಬಿಲಿಕ್ಕೆ ಸಾಧ್ಯವಿಲ್ಲವಾದರೂ ಇದು ಸತ್ಯ. ಏಕಲವ್ಯ, ಕರ್ಣ, ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೂ ಅಧಿಕಾರ ನಡೆಸದ ಪರಿಸ್ಥಿತಿ ಎದುರಿಸಿದ ಅಲ್ಗೆರೊ  ಹೀಗೆ ಅನೇಕ ಉದಾಹರಣೆಗಳಿವೆ’ ಎಂದರು.‘ಮಹಾಭಾರತ, ರಾಮಾಯಣ ಕಾಲದಲ್ಲಿ ಜಾತಿ ಇರಲಿಲ್ಲ.  ಕರ್ಣನಿಗೆ ಅನ್ಯಾಯ ಆಗಿದ್ದು ಜಾತಿ ಕಾರಣಕ್ಕಲ್ಲ ’ಎಂದು ನುಡಿದರು.‘ಕಾಳಿದಾಸ ರಘುವಂಶದಲ್ಲಿ 18 ತಲೆಮಾರಿನ ರಾಜವಂಶದ ಕಥೆಗಳನ್ನು ಹೇಳಿದ್ದಾನೆ. ರಘುವಂಶದಲ್ಲಿ ರಾಮ ಆದರ್ಶಪುರುಷನಂತೆ ಕಂಡರೆ ಅದೇ ವಂಶದಲ್ಲಿ ಹಿಂದೆ ಆಗಿ ಹೋದ ಅಗ್ನಿವರ್ಣ ಎಂಬ ರಾಜ ಅಧಿಕಾರ ಅಹಮ್ಮಿನ ಅತಿರೇಕದ ವರ್ತನೆಗಳನ್ನೂ ಚಿತ್ರಿಸಲಾಗಿದೆ. ಈಗಿನ ದಿನಗಳಲ್ಲಿ ಅಧಿಕಾರದಲ್ಲಿರುವವರು ಬಹುತೇಕರು ಅಂಥವರನ್ನೇ ಕಾಣುತ್ತಿದ್ದೇವೆ’ ಎಂದು ಹೇಳಿದರು.‘ಹೆಣ್ಣುಮಕ್ಕಳನ್ನು ಸಮಾಜದಲ್ಲಿ ಸಮಾನ ರೀತಿ ಕಾಣುವ ಮನೋಭಾವ ಇನ್ನೂ ಬಂದಿಲ್ಲ. ಬಹಳಷ್ಟು ಜನ ಇತಿಹಾಸದಿಂದ ಏನೂ ಪ್ರಯೋಜನವಿಲ್ಲ ಎಂದು ಭಾವಿಸಿದ್ದಾರೆ. ಆದರೆ, ನಮ್ಮನ್ನು ನಿಯಂತ್ರಣ ಮಾಡುತ್ತಿರುವುದೇ ಇತಿಹಾಸ. ರಾಮನ ಹೆಸರು ಹೇಳಿಕೊಂಡೇ ತುಂಬಾ ಬದಲಾವಣೆ ತರಲು ಮುಂದಾದ ನಿದರ್ಶನಗಳು ಇವೆ’ ಎಂದು ತಿಳಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಬಾ.ಹ.ರಮಾಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಘಟಕ ಅಧ್ಯಕ್ಷೆ ಅನ್ನಪೂರ್ಣಾ ವೆಂಕಟನಂಜಪ್ಪ ಸ್ವಾಗತಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.