ಬುಧವಾರ, ಮೇ 25, 2022
31 °C

ಉತ್ತೇಜನಕಾರಿ: ಆಡಳಿತ ಸುಧಾರಣೆಗೆ ಒತ್ತು

-ಎಸ್. ಬಾಬು . ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ (ಎಫ್‌ಕೆಸಿಸಿಐ) ಮಾಜಿ ಅಧ್ಯಕ್ಷ . Updated:

ಅಕ್ಷರ ಗಾತ್ರ : | |

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಆಡಳಿತ ಸುಧಾರಣೆಗೆ ಹೆಚ್ಚು ಒತ್ತು ಕೊಡಲಾಗಿದ್ದು, ಇದು ಖಂಡಿತವಾಗಿಯೂ ಉತ್ತೇಜನಕಾರಿಯಾಗಿದೆ.ಬಜೆಟ್‌ನ ಇನ್ನೊಂದು ಮುಖ್ಯ ಅಂಶವೆಂದರೆ, ಯೋಜನೆ ಅನುಷ್ಠಾನದ ಬಗ್ಗೆ ಪ್ರತಿ ಮೂರು ತಿಂಗಳಿಗೆ ಒಮ್ಮೆ ಪರಿಶೀಲನೆ ನಡೆಸುವುದು. ಪರಿಶೀಲನೆಯ ಬಳಿಕ ಲಭ್ಯವಾಗುವ ಅಂಶಗಳನ್ನು ಪ್ರಕಟಿಸಿ, ಆ ಕುರಿತು ಚರ್ಚಿಸಿದರೆ ಮಾತ್ರ ಇದು ಉತ್ತಮ ಫಲಿತಾಂಶ ಕೊಡಬಹುದು.ಪ್ರಗತಿ ಆಧಾರಿತ ಬಜೆಟ್ ಕುರಿತು ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ್ದಾರೆ. ಆದರೆ, ಪ್ರಸ್ತುತ ಸಂದರ್ಭಕ್ಕೆ ಅಗತ್ಯವಾದ ಉದ್ಯೋಗಾಧಾರಿತ ಯೋಜನೆ ಕುರಿತು ಅವರು ಸಾಕಷ್ಟು ಒತ್ತು ನೀಡಿಲ್ಲ. ಈ ಬಗ್ಗೆ ಸ್ಪಷ್ಟಪಡಿಸುವುದು ಅಗತ್ಯ. ಸಮಾಜ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಗಮನ ಹರಿಸಲಾಗಿದೆ. 

ಜನತೆಗೆ ಯಾವುದೇ ಲಾಭವಿಲ್ಲದಂತೆ ಗ್ರಾಮೀಣ ಅಭಿವೃದ್ಧಿ ಹೆಸರಿನಲ್ಲಿ ಹಣ ಪೋಲು ಮಾಡಿರುವುದು ಈ ಹಿಂದಿನ ದಾಖಲೆಗಳನ್ನು ಪರಿಶೀಲಿಸಿದಾಗ ಗೊತ್ತಾಗುತ್ತದೆ. ಈ ಹಿಂದಿನ ಸರ್ಕಾರ ಪ್ರಕಟಿಸಿದ್ದ ಯೋಜನೆಗಳೇ ಈ ಬಜೆಟ್‌ನಲ್ಲಿವೆ.`ಅಕ್ರಮ- ಸಕ್ರಮ' ಯೋಜನೆಗಳು ಹಾಗೂ ಕೈಗಾರಿಕೆ ಸ್ಥಾಪನೆಗೆ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವ ಕುರಿತು ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ. ಜನಪ್ರಿಯ ಯೋಜನೆ ಅನುಷ್ಠಾನಕ್ಕೆ ಬೇಕಾಗುವ ಹಣವನ್ನು ಹೇಗೆ ಕ್ರೋಡೀಕರಿಸಲಾಗುವುದು ಎಂಬ ಪ್ರಶ್ನೆಗೂ ಉತ್ತರವಿಲ್ಲ.ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಲಭ್ಯ ಸುಧಾರಣೆ, ಚಾಮರಾಜನಗರದಲ್ಲಿ ಮೆಗಾ ಡೈರಿ ಯೋಜನೆ, ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡಲು ಜಪಾನ್, ಅಮೆರಿಕ ಹಾಗೂ ಜರ್ಮನಿ ದೇಶಗಳಿಗೆ ಆಹ್ವಾನ ನೀಡುವುದು, ಚಾಮರಾಜನಗರದಲ್ಲಿ ಗ್ರಾನೈಟ್      ಪಾರ್ಕ್ ಸ್ಥಾಪನೆ ಹಾಗೂ `ಕರ ಸಮಾಧಾನ' - ಇವು ಬಜೆಟ್‌ನ ಉತ್ತಮ ಅಂಶಗಳು.ಸರ್ಕಾರಿ- ಖಾಸಗಿ ಸಹಭಾಗಿತ್ವ ವಿಧಾನದಲ್ಲಿ ಮೂಲಸೌಲಭ್ಯ ಸುಧಾರಣೆಗೆ ಆದ್ಯತೆ ನೀಡಲಾಗಿದೆ. ಕೃಷಿ ವಲಯಕ್ಕೆ ಹಂಚಿಕೆ ಮಾಡಲಾದ ಹಣಕಾಸು ನೆರವು, ರೈತ ಸಮುದಾಯದ ಆತ್ಮವಿಶ್ವಾಸ ವೃದ್ಧಿಸಬೇಕಿದೆ.ಮೂಲ ಸೌಕರ್ಯ:  ಕೈಗಾರಿಕಾ ವಲಯಗಳಲ್ಲಿ ಮೂಲಸೌಲಭ್ಯ ಕಲ್ಪಿಸಲು ಗಮನ ಹರಿಸಲಾಗಿದ್ದು, ಬಜೆಟ್‌ನಲ್ಲಿ ಮೀಸಲಿಟ್ಟ ರೂ30 ಕೋಟಿ  ನೆರವು ಉದ್ದಿಮೆಗಳ ಅನೇಕ ಸಮಸ್ಯೆಗಳನ್ನು ಪರಿಹರಿಸಬಲ್ಲವು. ಹೊಸ ಯೋಜನೆಗಳನ್ನು ಉತ್ತೇಜಿಸಲು ರೂ15 ಕೋಟಿ  ಗಳನ್ನು ಮೀಸಲಿಡಲಾಗಿದೆ. ಹೊಸ ವೈಮಾನಿಕ ನೀತಿ ಅನ್ವಯ ಸ್ಥಾಪಿಸಲು ಉದ್ದೇಶಿಸಲಾದ `ಏರೋಸ್ಪೇಸ್ ಪಾರ್ಕ್'ಗೆ ರೂ10 ಕೋಟಿ  ಹಂಚಿಕೆ ಮಾಡಲಾಗಿದ್ದು, ಇದರಿಂದ ಬೆಂಗಳೂರು ವಿಶ್ವ ವೈಮಾನಿಕ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಪಡೆಯಲಿದೆ.ಯೋಗಕ್ಷೇಮಕ್ಕೆ ಆದ್ಯತೆ: ಗ್ರಾಮೀಣಾಭಿವೃದ್ಧಿ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಪಶುಸಂಗೋಪನೆ, ಮೀನುಗಾರಿಕೆ, ಸಾರಿಗೆ, ಶಿಕ್ಷಣ, ನಗರಾಭಿವೃದ್ಧಿ, ಆರೋಗ್ಯ, ಕಂದಾಯ, ವಸತಿ ಯೋಜನೆಗಳಿಗೆ ಮಾಡಲಾದ ಅನುದಾನ ಹಂಚಿಕೆ  ಗಮನಿಸಿದರೆ, ಸರ್ಕಾರವು ಜನರ ಯೋಗಕ್ಷೇಮಕ್ಕೆ ಆದ್ಯತೆ ನೀಡಿರುವುದು ಕಂಡುಬರುತ್ತದೆ.ಕೌಶಲ ಅಭಿವೃದ್ಧಿ ಹಾಗೂ ಕೈಗಾರಿಕಾ ಪಾರ್ಕ್ ಸುಧಾರಣೆಗೆ ಒತ್ತುಕೊಟ್ಟಿರುವುದು ಆ ವಲಯದ ಅಭಿವೃದ್ಧಿಗೆ ನೆರವಾಗಲಿದೆ. ಡೀಸೆಲ್ ಮೇಲೆ ವಿಧಿಸಲಾಗಿದ್ದ ಸೆಸ್ ಅನ್ನು ಬರೀ 51 ಪೈಸೆಗಳಷ್ಟು ಇಳಿಸಲಾಗಿದೆ. ಇಂಧನ ಕ್ಷೇತ್ರದ ಪೈಕಿ ಸೌರಶಕ್ತಿ ಬಳಕೆಗೆ ಉತ್ತೇಜನಕಾರಿ ಕ್ರಮ ಕೈಗೊಳ್ಳಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. `ಕರ ಸಮಾಧಾನ' ಯೋಜನೆಯು ವ್ಯಾಪಾರಿಗಳಿಗೆ ತೆರಿಗೆ ಪಾವತಿಗೆ ಸಂಬಂಧಿಸಿದ ಲೆಕ್ಕಪತ್ರಗಳನ್ನು ಪರಿಷ್ಕರಿಸಿಕೊಳ್ಳಲು ಅನುಕೂಲ ಮಾಡಿಕೊಡಲಿದೆ.ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಂಪನ್ಮೂಲ ಕೇಂದ್ರ ಸ್ಥಾಪನೆಗೆ ರೂ5 ಕೋಟಿ   ಹಾಗೂ ರೂ3 ಕೋಟಿ  ವೆಚ್ಚದಲ್ಲಿ ಬಾಗಲಕೋಟೆಯಲ್ಲಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪಿಸಲು ನಿರ್ಧರಿಸಿರುವುದು ಶ್ಲಾಘನೀಯ ಸಂಗತಿಯಾಗಿದೆ.ಸಮಗ್ರ ಶೈಕ್ಷಣಿಕ ನಿರ್ವಹಣಾ ಮಾಹಿತಿ ವ್ಯವಸ್ಥೆ, ಅನುದಾನ, ವಿಸ್ತರಣಾ ಕೇಂದ್ರಗಳನ್ನು ಮಂಡ್ಯದಲ್ಲಿ ಸ್ಥಾಪಿಸಲು ರೂ30 ಕೋಟಿ   ಹಾಗೂ ಈ ಉದ್ದೇಶಕ್ಕಾಗಿ ಒಟ್ಟಾರೆ ರೂ3,243 ಕೋಟಿ  ವಿನಿಯೋಗಿಸುವುದು ಸ್ವಾಗತಾರ್ಹ ವಿಚಾರ. ಮೌಲ್ಯವರ್ಧಿತ ತೆರಿಗೆ (ವ್ಯಾಟ್) ದರವನ್ನು ಈ ಹಿಂದಿನ ಪ್ರಮಾಣದಷ್ಟೇ ನಿಗದಿ ಮಾಡಿರುವುದು ಸ್ವಾಗತಾರ್ಹ.

ಆದರೆ, ಕನಿಷ್ಠ 2014ನೇ ಹಣಕಾಸು ವರ್ಷದಿಂದಲಾದರೂ ಈ ದರವನ್ನು ಕಡಿಮೆ ಮಾಡಬೇಕು ಎಂಬುದು ಕೈಗಾರಿಕಾ ವಲಯದ ಆಶಯವಾಗಿದೆ. ರಾಜ್ಯ ತೆರಿಗೆಗಳ ಸಲಹಾ ಮಂಡಳಿಯನ್ನು ಚುರುಕುಗೊಳಿಸುವುದು ಸದ್ಯದ ಅಗತ್ಯವೂ ಹೌದು.ಒಟ್ಟಾರೆಯಾಗಿ ರಾಜ್ಯ ಬಜೆಟ್, ಪ್ರಗತಿಗೆ ಅವಕಾಶ ಕಲ್ಪಿಸುವ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ವಹಿವಾಟಿಗೆ ನೆರವಾಗುವ ನಿರೀಕ್ಷೆ ಇದೆ. ಬಜೆಟ್‌ನಲ್ಲಿ ಪ್ರಕಟಿಸಲಾದ ಹಲವು ಯೋಜನೆಗಳು ಕರ್ನಾಟಕವನ್ನು ಅಗ್ರ ಸ್ಥಾನಕ್ಕೆ ಕೊಂಡೊಯ್ಯಬಹುದು. ಅಂತಿಮವಾಗಿ, ಸರ್ಕಾರದ ಆಶಯವನ್ನು ಅನುಷ್ಠಾನಕ್ಕೆ ತರುವುದೇ ಈ ಬಜೆಟ್‌ನ ಅಂತಿಮ ಉದ್ದೇಶವಾಗಬೇಕಿದೆ.

-ಎಸ್. ಬಾಬು . ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ (ಎಫ್‌ಕೆಸಿಸಿಐ) ಮಾಜಿ ಅಧ್ಯಕ್ಷ .

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.