ಉತ್ತೇಜನಾ ಕೊಡುಗೆ ಕೈಬಿಡಲು ಸಲಹೆ

7

ಉತ್ತೇಜನಾ ಕೊಡುಗೆ ಕೈಬಿಡಲು ಸಲಹೆ

Published:
Updated:
ಉತ್ತೇಜನಾ ಕೊಡುಗೆ ಕೈಬಿಡಲು ಸಲಹೆ

ನವದೆಹಲಿ (ಪಿಟಿಐ):  ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ಕೈಗಾರಿಕಾ ರಂಗಕ್ಕೆ ನೀಡಿದ್ದ ತೆರಿಗೆ ಉತ್ತೇಜನಾ ಕ್ರಮಗಳನ್ನು 2011-12ನೇ ಸಾಲಿನ ಬಜೆಟ್‌ನಲ್ಲಿ ಕೈಬಿಡಬೇಕು ಎಂದು  ಪ್ರಧಾನಿ ಆರ್ಥಿಕ ಸಲಹಾ ಮಂಡಳಿಯು (ಪಿಎಂಇಎಸಿ) ಕೇಂದ್ರ ಸರ್ಕಾರವನ್ನು ಕೇಳಿಕೊಂಡಿದೆ.ನಾವು ಈಗ ವರಮಾನ ವೃದ್ಧಿಯತ್ತ ಗಮನ ಕೇಂದ್ರೀಕರಿಸಬೇಕಾಗಿದ್ದು, ಇದಕ್ಕಾಗಿ ಆರ್ಥಿಕ ಉತ್ತೇಜನಾ ಕೊಡುಗೆಗಳನ್ನು ರದ್ದುಪಡಿಸಬೇಕಾಗಿದೆ ಎಂದು ಮಂಡಳಿಯ ಅಧ್ಯಕ್ಷ ಸಿ. ರಂಗರಾಜನ್ ಅವರು ಸೋಮವಾರ ಇಲ್ಲಿ ಅಭಿಪ್ರಾಯಪಟ್ಟರು. ‘2010-11ನೇ ಸಾಲಿನ ಆರ್ಥಿಕ ಪರಾಮರ್ಶೆ’ ವರದಿ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.ವಿತ್ತೀಯ ಹೊಂದಾಣಿಕೆಯ ಗಮನಾರ್ಹವಾದ ಪಾಲು ಹೆಚ್ಚುವರಿ ತೆರಿಗೆ ಸಂಗ್ರಹದಿಂದ ಬರುತ್ತದೆ. ಈ ಹಿನ್ನೆಲೆಯಲ್ಲಿ ತೆರಿಗೆ ಸುಧಾರಣಾ ಕ್ರಮಗಳನ್ನು, ದುಪ್ಪಟ್ಟು ತೆರಿಗೆ ತಪ್ಪಿಸುವ ಒಪ್ಪಂದಗಳನ್ನು ಜಾರಿಗೆ ತಂದು ವಿದೇಶಿ ಬ್ಯಾಂಕ್‌ಗಳಿಗೆ ಕಪ್ಪು ಹಣ ಸೇರ್ಪಡೆಯಾಗುವುದನ್ನು ತಪ್ಪಿಸಬೇಕಾಗಿದೆ ಎಂದರು.ಹಣದುಬ್ಬರ ನಿಯಂತ್ರಣ: ಹಣದುಬ್ಬರವು ಅಹಿತಕರ ಎನ್ನಬಹುದಾದ ಗರಿಷ್ಠ ಮಟ್ಟದಲ್ಲಿದ್ದು, ಅವಶ್ಯಕ ಸರಕುಗಳ ಬೆಲೆಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ಮಂಡಳಿಯು ಸಲಹೆ ನೀಡಿದೆ.ಸದ್ಯಕ್ಕೆ ಹಣದುಬ್ಬರವು ಗರಿಷ್ಠ ಮಟ್ಟದಲ್ಲಿ ಮುಂದುವರೆದಿದ್ದು, ಅರ್ಥ ವ್ಯವಸ್ಥೆಯನ್ನು ಹಣದುಬ್ಬರದಿಂದ ರಕ್ಷಿಸಲು ಇನ್ನಷ್ಟು ಹಣಕಾಸಿನ ಮತ್ತು ತೆರಿಗೆ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ.ಹಣದುಬ್ಬರಕ್ಕೆ ಕಡಿವಾಣ ಹಾಕುವಲ್ಲಿ ಹಣಕಾಸಿನ ನೀತಿಯು ಮಹತ್ವದ ಪಾತ್ರ ನಿರ್ವಹಿಸುತ್ತಿದ್ದು, ಆರ್‌ಬಿಐ ತನ್ನ ಬಿಗಿ ಕ್ರಮಗಳನ್ನು ಮುಂದುವರೆಸಲಿದೆ. ಕಠಿಣ ಸ್ವರೂಪದ ಹಣಕಾಸು ನೀತಿ ಮುಂದುವರೆಸುವ ಅಗತ್ಯ ಇನ್ನೂ ಇದೆ ಎಂದು ಮಂಡಳಿಯು ಅಭಿಪ್ರಾಯಪಟ್ಟಿದೆ.ಮಾರ್ಚ್ ತಿಂಗಳಾಂತ್ಯಕ್ಕೆ ಹಣದುಬ್ಬರವು  ಈ ಮೊದಲಿನ ಶೇ 6.5ರಷ್ಟು ಅಂದಾಜಿಗಿಂತ ಶೇ 7ರಷ್ಟು ಇರಲಿದೆ ಎಂದೂ ‘ಪಿಎಂಇಎಸಿ’ ಅಂದಾಜು ಮಾಡಿದೆ. ಕೇಂದ್ರೀಯ ಬ್ಯಾಂಕ್ ಮಾರ್ಚ್ 17ರಂದು ತನ್ನ ಮಧ್ಯಂತರ ತ್ರೈಮಾಸಿಕ ಪರಾಮರ್ಶೆ ನೀತಿಯನ್ನು ಪ್ರಕಟಿಸಲಿದೆ. ಕಳೆದ ತಿಂಗಳಷ್ಟೇ ಪ್ರಕಟಗೊಂಡ ಮೂರನೇ ತ್ರೈಮಾಸಿಕ ಪರಾಮರ್ಶೆ ನೀತಿಯಲ್ಲಿ ಅಲ್ಪಾವಧಿ ಬಡ್ಡಿ ದರಗಳನ್ನು ಶೇ 25ರಷ್ಟು ಹೆಚ್ಚಿಸಿದೆ. ಆಹಾರ ಹಣದುಬ್ಬರವು ಡಿಸೆಂಬರ್ ತಿಂಗಳಲ್ಲಿ ಶೇ 18.32 ರಿಂದ ಫೆಬ್ರುವರಿ ತಿಂಗಳಲ್ಲಿ ಶೇ 11ರಷ್ಟಕ್ಕೆ ಕುಸಿದಿದೆ. ಒಟ್ಟಾರೆ ಹಣದುಬ್ಬರವು ಈಗಲೂ ಶೇ 8ಕ್ಕಿಂತ ಹೆಚ್ಚಿಗೆ ಇದೆ. ಇದು ಹಿತಾನುಭವದ ಮಟ್ಟವಾಗಿರುವ ಶೇ 4ರಿಂದ 5ರಷ್ಟಕ್ಕಿಂತ ಹೆಚ್ಚಿಗೆ ಇದೆ.ಅಲ್ಪಾವಧಿಯಿಂದ ಮಧ್ಯಮಾವಧಿಯಲ್ಲಿ ಹಣದುಬ್ಬರವನ್ನು ಸಮರ್ಥವಾಗಿ ನಿಭಾಯಿಸುವುದು ಪ್ರಮುಖ ಸವಾಲು ಆಗಿರುತ್ತದೆ. ಹಣಕಾಸು ಮತ್ತು ವಿತ್ತೀಯ (ತೆರಿಗೆ) ನೀತಿಗಳು ಇಲ್ಲಿ ಪ್ರಮುಖವಾಗಿ ಪರಿಗಣನೆಗೆ ಬರುತ್ತವೆ ಎಂದು ರಂಗರಾಜನ್ ನುಡಿದರು.ಡೀಸೆಲ್ ಬೆಲೆಯನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ಯಾವುದು ಸಕಾಲ? ಎನ್ನುವ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ, ಹಣದುಬ್ಬರವು ಶೇ 6ರಷ್ಟಕ್ಕೆ ಇಳಿದಾಗ, ಆ ನಿರ್ಧಾರ ಕೈಗೊಳ್ಳಬಹುದಾಗಿದೆ’ ಎಂದು ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry