ಭಾನುವಾರ, ಮಾರ್ಚ್ 7, 2021
20 °C
ಗ್ರಾ.ಪಂ. ಸದಸ್ಯರ ಸನ್ಮಾನ ಕಾರ್ಯಕ್ರಮ,ಕೇಂದ್ರ ಸಚಿವ ಸಿದ್ದೇಶ್ವರ ಹೇಳಿಕೆ

ಉತ್ಪಾದನಾ ವಲಯಕ್ಕೆ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ಪಾದನಾ ವಲಯಕ್ಕೆ ಆದ್ಯತೆ

ಬೀದರ್: ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಘೋಷಣೆಯಡಿ ಉತ್ಪಾದನಾ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಬೃಹತ್ ಕೈಗಾರಿಕೆ ಖಾತೆ ರಾಜ್ಯ ಸಚಿವ ಜಿ.ಎಂ.ಸಿದ್ದೇಶ್ವರ ಹೇಳಿದರು.ಇಲ್ಲಿಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಜನಕಲ್ಯಾಣ ಪರ್ವ ಕಾರ್ಯಕ್ರಮ ಹಾಗೂ ನೂತನ ಗ್ರಾಮ ಪಂಚಾಯಿತಿ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಉದ್ಯಮ ವಲಯಕ್ಕೆ ಅವಕಾಶ ಕಲ್ಪಿಸಿದ್ದರಿಂದ 12 ಕೋಟಿ (120 ದಶಲಕ್ಷ) ಜನರಿಗೆ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಕೇಂದ್ರದಲ್ಲಿ ನರೇಂದ್ರ ಮೋದಿ  ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಅರ್ಥ ವ್ಯವಸ್ಥೆಯಲ್ಲಿ ಬೆಳವಣಿಗೆ ಕಂಡು ಬಂದಿದೆ. ವಿಶ್ವ ಬ್ಯಾಂಕ್ ವರದಿ ಪ್ರಕಾರ ಭಾರತವು ಗಣನೀಯ ಪ್ರಮಾಣದಲ್ಲಿ ಆರ್ಥಿಕ ಪ್ರಗತಿ  ಸಾಧಿಸುತ್ತಿದೆ ಎಂದು ತಿಳಿಸಿದರು.ಪಕ್ಷವು ದೇಶಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರ ನಂತರ ನರೇಂದ್ರ ಮೋದಿ ಅವರನ್ನು ನೀಡಿದೆ. ಮೋದಿ ಅವರು ವಿದೇಶಗಳ ನಡುವಿನ ಸಂಬಂಧಗಳನ್ನು ಬಲಪಡಿಸಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿ ವಿಶ್ವವೇ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ್ದಾರೆ ಎಂದು ಬಣ್ಣಿಸಿದರು.ಯುಪಿಎ ಸರ್ಕಾರ ಆಡಳಿತದಲ್ಲಿದ್ದಾಗ ವಿದೇಶಿ ಪ್ರವಾಸಿಗರ ಸಂಖ್ಯೆ 8.73 ಲಕ್ಷ ಇತ್ತು. 2014ರಲ್ಲಿ 74 ಲಕ್ಷಕ್ಕೆ ಏರಿತು. ಬಜೆಟ್ ಪೂರ್ವದಲ್ಲಿ ನೀಡಿದ 39 ಭರವಸೆಗಳ ಪೈಕಿ 36 ಭರವಸೆಗಳನ್ನು ಈಡೇರಿಸಲಾಗಿದೆ. ರೈಲ್ವೆ  ಗೇಜ್್ ಪರಿವರ್ತನೆ ಕಾರ್ಯವನ್ನು 300 ರಿಂದ 460 ಕಿ.ಮೀ.ಗೆ ಹೆಚ್ಚಿಸಲಾಗಿದೆ ಎಂದು ವಿವರಿಸಿದರು.ಮೊದಲು ಪ್ರತಿ  ದಿನ 5.3 ಕಿ.ಮೀ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿತ್ತು. ಬಿಜೆಪಿ ಸರ್ಕಾರ ಅದನ್ನು 10 ಕಿ.ಮೀಗೆ ಹೆಚ್ಚಿಸಿದೆ. ಬರುವ ದಿನಗಳಲ್ಲಿ 30 ಕಿ.ಮೀಗೆ ಹೆಚ್ಚಿಸುವ  ಉದ್ದೇಶ ಹೊಂದಿದೆ. ಪ್ರಕೃತಿ ವಿಕೋಪದಲ್ಲಿ ಶೇ. 50ರಷ್ಟು ಹಾನಿಯಾದರೆ ಮಾತ್ರ ಪರಿಹಾರ ವಿತರಿಸಲಾಗುತ್ತಿತ್ತು. ಈಗ ಶೇ 33ರಷ್ಟು ಹಾನಿಗೊಳಗಾದವರಿಗೂ ಪರಿಹಾರ ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ ಮಾಧವ ಅವರು ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಒಂದು ವರ್ಷದ ಅವಧಿಯಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿ ಕೈಪಿಡಿ ಬಿಡುಗಡೆ ಮಾಡಿದರು.ನಂತರ ಮಾತನಾಡಿದ ರಾಮಮಾಧವನ್, ಇಂದಿನ ಯುವಕರಿಗೆ ಸರಿಯಾದ ಶಿಕ್ಷಣ ದೊರೆಯುತ್ತಿಲ್ಲ. ಹೀಗಾಗಿ ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ. ಅವರಿಗೆ ಉದ್ಯೋಗ ಕಲ್ಪಿಸುವ ದಿಸೆಯಲ್ಲಿ ಕೌಶಲವನ್ನು ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಸಂಸದ ಭಗವಂತ ಖೂಬಾ ಮಾತನಾಡಿ, ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾಧ್ಯವಿರುವಷ್ಟು ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲಾಗಿದೆ. ಅಗತ್ಯ ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡಲಾಗಿದೆ ಎಂದು ಹೇಳಿದರು.ಬೀದರ ನಿಂದ ಮಹಾರಾಷ್ಟ್ರದ ಶಿರೂರ್, ತಾಜಬಂದ್ ವರೆಗಿನ ರಾಜ್ಯ  ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ.  ಈ ಸಂಬಂಧ ನೌಬಾದ್ ಹಾಗೂ ಕಮಲನಗರ ಬಳಿ ರೈಲ್ವೆ ಕೆಳ ಸೇತುವೆ ನಿರ್ಮಿಸಲು ಮಂಜೂರಾತಿ ಪಡೆಯಲಾಗಿದೆ ಎಂದು ತಿಳಿಸಿದರು.   ಸಂಸದ ಭಗವಂತ ಖೂಬಾ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಗಂದಗೆ, ಔರಾದ್ ಶಾಸಕ ಪ್ರಭು ಚವ್ಹಾಣ, ಮಾಜಿ ಶಾಸಕರಾದ ಸುಭಾಷ ಕಲ್ಲೂರ, ರಾಜೇಂದ್ರ ವರ್ಮಾ, ಪ್ರಕಾಶ ಖಂಡ್ರೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ವಡ್ಡೆ, ಪ್ರಮುಖರಾದ  ಬಸವರಾಜ್ ರಾಠೋಡ, ಬಾಬುರಾವ ನಂದಕಟ್ಟಿ, ಶೈಲೇಂದ್ರ ಬೆಲ್ದಾಳೆ, ಗುರುನಾಥ ಜಾಂತಿಕರ ಇದ್ದರು.ಮುಖ್ಯಾಂಶಗಳು

* ಬೀದರ್ ವರೆಗೆ ಲಾತೂರ್‌-ಮುಂಬೈ ರೈಲು ಮನವಿ

* ವಿವಿಧ ಯೋಜನೆಗಳ ಬಗ್ಗೆ ಭರವಸೆ

* ದೇಶದ ಸಮಗ್ರ ಪ್ರಗತಿಗೆ ದಾಪುಗಾಲು

ರೈತರ ಅನುಕೂಲಕ್ಕಾಗಿ ಸಣ್ಣ ಕೆರೆಗಳನ್ನು ನಿರ್ಮಾಣ ಮಾಡುವಂತೆ ಕೇಂದ್ರ ಸರ್ಕಾರದ ಸಣ್ಣ ನೀರಾವರಿ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ.

ಭಗವಂತ ಖೂಬಾ,
ಸಂಸದ

ಅಂಕೆ ಅಂಖ್ಯೆ

30 ಕೋಟಿ ಬೀದರ್ - ಕಲಬುರ್ಗಿ ರೈಲು ಮಾರ್ಗಕ್ಕೆ ಹೆಚ್ಚುವರಿ ಅನುದಾನ

69 ರಸ್ತೆ ನಿರ್ಮಾಣದ  ನೂತನ ಯೋಜನೆಗಳಿಗಾಗಿ ಪ್ರಸ್ತಾವ ಸಲ್ಲಿಕೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.