ಉತ್ಸವಕ್ಕೆ ಐತಿಹಾಸಿಕ ಕೋಟೆ ಸಜ್ಜು

7

ಉತ್ಸವಕ್ಕೆ ಐತಿಹಾಸಿಕ ಕೋಟೆ ಸಜ್ಜು

Published:
Updated:

ಬೀದರ್: ಮೂರು ದಿನಗಳ ಕಾಲ ಅದ್ದೂರಿ ‘ಬೀದರ್ ಉತ್ಸವ’ಕ್ಕೆ ನಗರದ ಐತಿಹಾಸಿಕ ಕೋಟೆ ಸಜ್ಜುಗೊಂಡಿದೆ. ಫೆಬ್ರುವರಿ 18 ರಂದು ಸಂಜೆ 5.30 ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ್ ಬೆಳಮಗಿ ಮುಖ್ಯ ವೇದಿಕೆಯಲ್ಲಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ತಿಳಿಸಿದ್ದಾರೆ. ಉತ್ಸವಕ್ಕೆ ಬೀದರ್ ಕೋಟೆ ಮದುವೆ ಮನೆಯ ರೀತಿಯಲ್ಲಿ ಸಿಂಗಾರಗೊಂಡಿದ್ದು, ಕೋಟೆಯ ಒಳಗಿನ ಸ್ಮಾರಕಗಳಿಗೆ ಹಾಕಲಾಗಿರುವ ಆಕರ್ಷಕ ಬೆಳಕಿನ ಚಿತ್ತಾರ ಗಮನ ಸೆಳೆಯುತ್ತಿದೆ. ಈ ಬಾರಿ ಗುಂಬಜ್ ದರವಾಜಾ ಹಾಗೂ ಚೌಕಂಡಿ ಪ್ರತಿಕೃತಿಗಳ ಬೃಹತ್ ವೇದಿಕೆ ಪ್ರಮುಖ ಆಕರ್ಷಣೆಯಾಗಿದೆ.ಮುಖ್ಯ ವೇದಿಕೆಯ ಮುಂಭಾಗದಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ 15 ಸಾವಿರ ಕುರ್ಚಿಗಳನ್ನು ಸಜ್ಜುಗೊಳಿಸಲಾಗಿದೆ. ವೇದಿಕೆಯ ಮುಂಭಾಗದಲ್ಲಿ ಮೇಲೇರುವ ಬೃಹತ್ ಬಿಸಿಗಾಳಿ ಬಲೂನು, ಅದರ ಹಿಂಭಾಗದಲ್ಲಿ ಆಹಾರ ಮಳಿಗೆಗಳನ್ನು ಸಜ್ಜುಗೊಳಿಸಲಾಗಿದೆ. ಸಾಹಸ ಕ್ರೀಡೆಗಳು ಚಾಂದಿನಿ ಚಬೂತರ್ ಮುಂಭಾಗದಲ್ಲಿ ನಡೆಯಲಿವೆ. ವಿವಿಧ ಇಲಾಖೆಗಳ ಹಾಗೂ ವ್ಯಾಪಾರಿ ಮಳಿಗೆಗಳು, ಮಕ್ಕಳಿಗಾಗಿ ಮನೋರಂಜನೆಗೆ ಈ ಬಾರಿ ಆಯೋಜಿಸಲಾಗಿರುವ ಕಿಡ್ ಜೋನ್ ಬೊಮ್ಮಗೊಂಡೇಶ್ವರ ಕೆರೆಗೆ ಹೋಗುವ ಹಾದಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.ವಾರ್ತಾ ಇಲಾಖೆ ವತಿಯಿಂದ ರಂಗೀನ ಮಹಲ್ ಮುಂಭಾಗದ ಕಟ್ಟಡದಲ್ಲಿ ಮೂರು ದಿನಗಳ ಕಾಲ ನಿಸರ್ಗ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ ಎಂದು ಹೇಳಿದ್ದಾರೆ. ಉತ್ಸವದ ಪ್ರಯುಕ್ತ ಮಧ್ಯಾಹ್ನ 2 ಗಂಟೆಗೆ ಬರೀದಶಾಹಿ ಉದ್ಯಾನದಿಂದ ಮೆರವಣಿಗೆ ಆರಂಭವಾಗಲಿದೆ. ಸಂಜೆ 7.30 ಗಂಟೆಗೆ ಕೋಟೆ ಆವರಣದಲ್ಲಿ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ರಾತ್ರಿ ಶಿಫಾಲಿ ಜರಿವಾಲ್ ತಂಡದಿಂದ ನೃತ್ಯ ಹಾಗೂ ಖ್ಯಾತ ಪಾಪ್ ಗಾಯಕ ದಲೇರ್ ಮೆಹಂದಿ ಅವರ ಸಂಗೀತ ಸಂಜೆ ಕಾರ್ಯಕ್ರಮ ಮನೋರಂಜನೆ ಒದಗಿಸಲಿವೆ ಎಂದು ತಿಳಿಸಿದ್ದಾರೆ. ಆರೋಗ್ಯ ಮೇಳ, ಕೃಷಿ ಮೇಳ, ವಾರ್ತಾ ಇಲಾಖೆಯಿಂದ ಸರ್ಕಾರದ ಸಾಧನೆಗಳನ್ನು ಪ್ರತಿಬಿಂಬಿಸುವ ವಸ್ತು ಪ್ರದರ್ಶನ ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry