ಉತ್ಸವಕ್ಕೆ ರೂ. 1.20 ಕೋಟಿ ಖರ್ಚು

7

ಉತ್ಸವಕ್ಕೆ ರೂ. 1.20 ಕೋಟಿ ಖರ್ಚು

Published:
Updated:

ಬೀದರ್: ಈ ಬಾರಿಯ ಬೀದರ್ ಉತ್ಸವಕ್ಕೆ ಒಟ್ಟು 1 ಕೋಟಿ 2 ಲಕ್ಷ ರೂಪಾಯಿ ವೆಚ್ಚ ಆಗಲಿದೆ ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ತಿಳಿಸಿದರು.ಉತ್ಸವಕ್ಕಾಗಿ ಈಗಾಗಲೇ 270 ಪ್ಲಾಟಿನಂ, 40 ಪ್ಲಾಟಿನಂ ಟಾಪ್ ಅಪ್, 919 ಡೈಮಂಡ್ ಹಾಗೂ 1901 ಗೋಲ್ಡ್ ಕಾರ್ಡ್‌ಗಳನ್ನು ಹಂಚಿಕೆ ಮಾಡಲಾಗಿದೆ. ಇವುಗಳ ಮೂಲಕ ಈವರೆಗೆ 45 ಲಕ್ಷ ರೂಪಾಯಿ ಸಂಗ್ರಹವಾಗಿದೆ ಎಂದು ಹೇಳಿದರು.ಉತ್ಸವದಲ್ಲಿ ಬೀದರ್‌ನ ಇತಿಹಾಸದ ಬಗ್ಗೆ ಬರಹ ಮತ್ತು ಚಿತ್ರಗಳನ್ನು ಒಳಗೊಂಡಿರುವ 50 ಪುಟಗಳ ಪುಸ್ತಕ ಹೊರತರಲು ಉದ್ದೇಶಿಸಲಾಗಿದೆ. ಆಕರ್ಷಕ ವೇದಿಕೆ ಸೇರಿದಂತೆ ಈ ಬಾರಿ ಉತ್ಸವದ ಯಶಸ್ಸಿಗಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.ಉತ್ಸವದಲ್ಲಿ ಒಟ್ಟು 100 ಆಹಾರ ಮಳಿಗೆಗಳು ಇರಲಿವೆ. ಪ್ರತಿ ಮಳಿಗೆ 5 ಸಾವಿರ ರೂಪಾಯಿ ಬಾಡಿಗೆ ನಿಗದಿಪಡಿಸಲಾಗಿದೆ. ಇದಲ್ಲದೇ ಆರೋಗ್ಯ, ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಮಳಿಗೆಗಳೂ ಇರಲಿವೆ ಎಂದು ಹೇಳಿದರು.ವೈವಿಧ್ಯಮಯ ಕಾರ್ಯಕ್ರಮ ಹಾಗೂ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕೋಟೆ ಒಳಗೆ ಪ್ರವೇಶಿಸುವ ರಸ್ತೆಯಲ್ಲಿ ಧೂಳು ಏಳದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಕೋಟೆಯ ಒಳಗಿನ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಪೊಲೀಸ್ ಇಲಾಖೆಗೆ 5 ವಿಡಿಯೋ ಕ್ಯಾಮೆರಾಗಳನ್ನು ನೀಡಲು ಉದ್ದೇಶಿಸಲಾಗಿದೆ. ಇವುಗಳನ್ನು ವಿವಿಧ ಕಡೆಗಳಲ್ಲಿ ಅಳವಡಿಸಲಾಗುತ್ತದೆ ಎಂದು ಹೇಳಿದರು.ಕೋಟೆಯ ಒಳಗೆ ಹೈಮಾಸ್ಟ್ ಬಲ್ಬಗಳನ್ನು ಅಳವಡಿಸಿ ವಿದ್ಯುತ್ ಅಲಂಕಾರ ಮಾಡಲಾಗುತ್ತದೆ. ಈಗಾಗಲೇ ಉತ್ಸವದ ವೇಳೆ ರಿಯಾಯಿತಿ ದರದಲ್ಲಿ ಆಹಾರ ನೀಡುವಂತೆ ಹೋಟೆಲ್‌ಗಳ ಮಾಲೀಕರಲ್ಲಿ ಮನವಿ ಮಾಡಲಾಗಿದೆ. ಉತ್ಸವದ ಸಂದರ್ಭದಲ್ಲಿ ಕೋಟೆಯ ಒಳಗೆ 15 ರೂಪಾಯಿಗೆ ಊಟ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.ಗಾಯಕಿ ಅಲ್ಕಾ ಯಾಜ್ಞಿಕ್, ಶಾನ್, ದಲೇರ್ ಮಹಂದಿ, ಚಿತ್ರನಟ ಉಪೇಂದ್ರ ಮತ್ತಿತರ ಕಲಾವಿದರ ಉತ್ಸವಕ್ಕೆ ಕಳೆ ತಂದುಕೊಡಲಿದ್ದಾರೆ ಎಂದು ಹೇಳಿದರು.

ಉತ್ಸವಕ್ಕೆ ಜನರನ್ನು ಆಹ್ವಾನಿಸಲು ಫೆಬ್ರುವರಿ 13 ರಿಂದ ಜಿಲ್ಲೆಯಲ್ಲಿ ಜ್ಯೋತಿ ಯಾತ್ರೆಗಳು ಸಂಚಾರ ಆರಂಭಿಸಲಿದ್ದು, ಫೆಬ್ರುವರಿ 18 ರಂದು ನಗರಕ್ಕೆ ಆಗಮಿಸಲಿವೆ ಎಂದು ತಿಳಿಸಿದರು.ಸಾಂಸ್ಕತಿಕ ಮೆರವಣಿಗೆ: ಬೀದರ್ ಉತ್ಸವದ ಅಂಗವಾಗಿ ಈ ಬಾರಿ ಭಿನ್ನವಾದ ಸಾಂಸ್ಕತಿಕ ಮೆರವಣಿಗೆ ಆಯೋಜಿಸಲಾಗುವುದು. ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಕಡೆಗಳಿಂದ 17ಕಲಾ ತಂಡ ಗಳು ಭಾಗವಹಿಸಲಿವೆ. ಇದರೊಂದಿಗೆ ಜಿಲ್ಲೆಯ ವೇಷ ಭೂಷಣ, ಸಂಸ್ಕತಿಯನ್ನು ಪ್ರತಿಬಿಂಬಿಸುವ ತಂಡಗಳು ಮೆರವಣಿಗೆಗೆ ಕಳೆ ನೀಡಲಿವೆ. ಹಲಗೆ ವಾದನ, ಡೊಳ್ಳು, ಮುಖವಾಡ, ವೀರಗಾಸೆ, ಗೋದಳಿ, ಕೋಲಾಟ, ಕೀಲು ಕುದುರೆ, ಕರಗ, ಯಕ್ಷಗಾನ ಗೊಂಬೆ, ಸೋಮನ ಕುಣಿತ, ಗಾರುಡಿ ಗೊಂಬೆ, ಮಹಿಳಾ ವೀರಗಾಸೆ, ಜಗ್ಗಲಿಗೆ ಮೇಳ, ಪೂಜಾ ಕುಣಿತ, ಷಟ್ಪದ ಕುಣಿತ, ಚಂಡಿ ನಗಾರಿ, ಮರ್ಫಾ ತಂಡಗಳು ಭಾಗವಹಿಸಲಿವೆ.   ಮೆರವಣಿಗೆ ಬರೀದಶಾ ಉದ್ಯಾನವನದಿಂದ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಇದರಲ್ಲಿ ಎಲ್ಲಾ ಧರ್ಮಗುರುಗಳು, ಸ್ಥಳೀಯ ಕಲಾವಿದರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry