ಉತ್ಸವಕ್ಕೆ ಸಜ್ಜಾದ ಕೆಂಪು ಮೆಣಸಿನಕಾಯಿ ಪಟ್ಟಣ

7

ಉತ್ಸವಕ್ಕೆ ಸಜ್ಜಾದ ಕೆಂಪು ಮೆಣಸಿನಕಾಯಿ ಪಟ್ಟಣ

Published:
Updated:

ಹಾವೇರಿ: ಐದನೇ ಹಾವೇರಿ ಜಿಲ್ಲಾ ಉತ್ಸವಕ್ಕೆ ಅಂತರರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಮೆಣಸಿಕಾಯಿ ಘಾಟಿನ ಪಟ್ಟಣವೆಂದೇ ಖ್ಯಾತಿ ಪಡೆದ ಜಿಲ್ಲೆಯ ಬ್ಯಾಡಗಿ ಪಟ್ಟಣ ಸಂಪೂರ್ಣ ಸಜ್ಜಾಗಿದ್ದು, ಬರದ ಭವಣೆ ಹಾಗೂ ಹತ್ತು ಹಲವು ಸಂಘಟನೆಗಳ ವಿರೋಧದ ನಡುವೆಯೂ ತಾಲ್ಲೂಕು ಕ್ರೀಡಾಂಗಣದಲ್ಲಿ ನಿರ್ಮಿಸಲಾದ ಉತ್ಸವದ ಬೃಹತ್ ವೇದಿಕೆ ಜನರನ್ನು ಕೈಬೀಸಿ ಕರೆಯುತ್ತಿದೆ.ಉತ್ಸವಕ್ಕಾಗಿ ಬ್ಯಾಡಗಿ ಪಟ್ಟಣದಲ್ಲಿ ಮೂರು ವೇದಿಕೆಗಳನ್ನು ನಿರ್ಮಿಸಲಾಗಿದ್ದು, ಮುಖ್ಯ ವೇದಿಕೆಗೆ ಸಂತ ಕನಕದಾಸ ವೇದಿಕೆ ಎಂದು ನಾಮಕರಣ ಮಾಡಿದ್ದರೆ, ಬಿಇಎಸ್‌ಎಂ ಕಾಲೇಜು ಆವರಣದಲ್ಲಿ ನಿರ್ಮಿಸಿದ ವೇದಿಕೆಗೆ ತ್ರಿಪದಿ ಕವಿ ಸರ್ವಜ್ಞ, ಎನ್‌ಬಿಬಿ ಲಯನ್ಸ್ ಶಾಲಾ ಆವರಣದಲ್ಲಿ ನಿರ್ಮಿಸಿದ ವೇದಿಕೆಗೆ ಆಧುನಿಕ ವಚನಕಾರ ಮಹಾದೇವ ಬಣಕಾರ ವೇದಿಕೆ ಎಂದು ನಾಮಕರಣ ಮಾಡಲಾಗಿದೆ.ಉತ್ಸವಕ್ಕೆ ಆಗಮಿಸುವ ಜನರಿಗಾಗಿ ಮುಖ್ಯ ವೇದಿಕೆಯಲ್ಲಿ 10 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಹಿಂದೆ ಕುಳಿತ ಜನರಿಗೆ ವೇದಿಕೆ ಮೇಲೆ ನಡೆಯುವ ಎಲ್ಲ ಕಾರ್ಯಕ್ರಮಗಳು ಸ್ಪಷ್ಟವಾಗಿ ಕಾಣಬೇಕೆಂಬ ಉದ್ದೇಶದಿಂದ ಸರ್ಕಿಟ್ ಟಿವಿ ವ್ಯವಸ್ಥೆ ಮಾಡಲಾಗಿದೆ.ಫೆ. 11 ರಂದು ಸಂಜೆ ಐದು ಗಂಟೆಗೆ ತಾಲ್ಲೂಕು ಕ್ರೀಡಾಂಗಣದ ಕನಕದಾಸ ವೇದಿಕೆಯಲ್ಲಿ ಉತ್ಸವದ ಉದ್ಘಾಟನೆ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಉತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ.ಉದಾಸಿ `ಕನಕ~ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ವಸ್ತು ಪ್ರದರ್ಶನ ಹಾಗೂ ಮಳಿಗೆಗಳ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಸುರೇಶಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.ಅಂದು ಮಧ್ಯಾಹ್ನ 1.30 ಕ್ಕೆ ಪಟ್ಟಣದ ತಹಶೀಲ್ದಾರ ಕಚೇರಿಯಿಂದ ಜಿಲ್ಲಾ ಉತ್ಸವದ ವೇದಿಕೆವರೆಗೆ ಶೋಭಾಯಾತ್ರೆ ನಡೆಯಲಿದೆ. ಜಿಲ್ಲೆಯ ಸಾಂಸ್ಕೃತಿಕ ವೈಭವ ಬಿಂಬಿಸುವ ಸ್ತಬ್ದ ಚಿತ್ರಗಳು ಹಾಗೂ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಸಂಸದ ಶಿವಕುಮಾರ ಉದಾಸಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.ಅದೇ ದಿನ ಸಂಜೆ 6 ಗಂಟೆಯಿಂದ ಮೂರು ದಿನಗಳ ಕಾಲ ಎಸ್‌ಜೆಜೆಎಂ ಕಾಲೇಜು ಆವರಣದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗಳು ಜರುಗಲಿವೆ.ಗೋಷ್ಠಿ ಹಾಗೂ ನಾಟಕೋತ್ಸವ: ಪಟ್ಟಣದ ಬಿಇಎಸ್‌ಎಂ ಕಾಲೇಜು ಆವರಣದಲ್ಲಿನ ಸರ್ವಜ್ಞ ವೇದಿಕೆಯಲ್ಲಿ ಫೆ.12 ಮತ್ತು 13 ರಂದು ವಿವಿಧಗೋಷ್ಠಿ ಹಾಗೂ ನಾಟಕೋತ್ಸವ ಜರುಗಲಿವೆ. ಮಕ್ಕಳ ಕವಿ ಗೋಷ್ಠಿ, ಸಂಕೀರ್ಣ ಗೋಷ್ಠಿ, ಹಿರಿಯರ ಕವಿ ಗೋಷ್ಠಿ ಜಿಲ್ಲಾದರ್ಶನ ಗೋಷ್ಠಿ ಮಹಿಳಾಗೋಷ್ಠಿ ಹಾಗೂ ಕೃಷಿ ಗೋಷ್ಠಿಗಳು ನಡೆಯಲಿವೆ.ಇದೇ ವೇದಿಕೆಯಲ್ಲಿ ನಾಟಕೋತ್ಸವ ಜರುಗಲಿದ್ದು, ಎರಡು ತಂಡಗಳು ಪ್ರತಿ ದಿನ ರಾತ್ರಿ ಮೂರು ನಾಟಕದಂತೆ ಒಟ್ಟು 9 ನಾಟಕಗಳ ಪ್ರದರ್ಶನ ನಡೆಯಲಿದೆ. ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಫೆ.11 ರಿಂದ 13 ರವರಗೆ ಛಾಯಾಚಿತ್ರ ಪ್ರದರ್ಶನ, ಪುರಸಭೆ ಸಭಾಭವನದಲ್ಲಿ ಚಿತ್ರಕಲಾ ಪ್ರದರ್ಶನ ಹಾಗೂ ಶಿಬಿರವನ್ನು ಏರ್ಪಡಿಸಲಾಗಿದೆ.ಸಾಂಸ್ಕೃತಿಕ ಕಾರ್ಯಕ್ರಮ: ತಾಲ್ಲೂಕು ಕ್ರೀಡಾಂಗಣದ ಮುಖ್ಯ ವೇದಿಕೆಯಲ್ಲಿ ಮೂರು ದಿನಗಳ ಕಾಲ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಗೀತಸಂಜೆ, ನಗೆಹಬ್ಬ, ನೃತ್ಯ ರೂಪಕ ಪ್ರದರ್ಶನ, ವೀರಗಾಸೆ ಹಾಗೂ ಸಂಗೀತ ಕಾರ್ಯಕ್ರಮಗಳು ಜರುಗಲಿವೆ. ಚಿತ್ರನಟ ಗುರುಕಿರಣ್, ಗಾಯಕಿ ಮಂಜುಳಾ ಗುರುರಾಜ್, ಹಾಸ್ಯಗಾರ ರಿಚರ್ಡ್ ಲೂಯಿಸ್ ಮುಂತಾದ ಖ್ಯಾತ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಉತ್ಸವದ ಎಲ್ಲ ಸಿದ್ಧತೆಗಳನ್ನು ವೀಕ್ಷಿಸಿದ ನಂತರ ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಎಲ್ಲ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ನಡೆಯುವಂತೆ ಕಾರ್ಯಕ್ರಮಗಳ ವಿಂಗಡಣೆ ಮಾಡಲಾಗಿದೆ. ಪ್ರಸಕ್ತ ಸಾಲಿನ ಉತ್ಸವದ ಪ್ರಮುಖ ಆಕರ್ಷಣೆ ಎಂದರೆ, ಉದ್ಯೋಗ ಮೇಳ. ಇದರಲ್ಲಿ ರಾಜ್ಯ ಹಾಗೂ ಪರ ರಾಜ್ಯದ 10ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸಿ, ಜಿಲ್ಲೆಯ ನಿರುದ್ಯೋಗ ಯುವಕ, ಯುವಕತಿಯನರನ್ನು ಉದ್ಯೋಗಕ್ಕಾಗಿ ಆಯ್ಕೆ ನಡೆಸಲಿದ್ದಾರೆ.

 

ಜಿಲ್ಲೆಯ ವಿದ್ಯಾವಂತ ನಿರುದ್ಯೋಗ ಯುವಕ, ಯುವತಿಯರು ಈ ಮೇಳದ ಪ್ರಯೋಜನ ಪಡೆದುಕೊಳ್ಳಬೇಕೆಂದು ಅವರು ವಿನಂತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry