ಉತ್ಸವಕ್ಕೆ ಸಿದ್ಧವಾದ ಉಕ್ಕಡಗಾತ್ರಿ ಸುಕ್ಷೇತ್ರ

7

ಉತ್ಸವಕ್ಕೆ ಸಿದ್ಧವಾದ ಉಕ್ಕಡಗಾತ್ರಿ ಸುಕ್ಷೇತ್ರ

Published:
Updated:

ಮಲೇಬೆನ್ನೂರು: ಮಲೇಬೆನ್ನೂರು ಹೋಬಳಿ ಸುಕ್ಷೇತ್ರ ಉಕ್ಕಡಗಾತ್ರಿ ಪ್ರಸಕ್ತ ಸಾಲಿನ ಶಿವರಾತ್ರಿ ಮಹಾರಥೋತ್ಸವ ಒಂದು ವಾರಕಾಲದ ಜಾತ್ರಾ ಉತ್ಸವಕ್ಕೆ ಸುಂದರವಾಗಿ ಸಿದ್ಧಗೊಂಡಿದೆ.ಹಿಂದಿನ ಮೈಸೂರು- ಬೊಂಬಾಯಿ ಪ್ರಾಂತ್ಯದ (ಮಹಾರಾಷ್ಟ್ರ)ಗಡಿ ಭಾಗ. `ಉಕ್ಕಡ~ ಎಂದರೆ ಸುಂಕ ವಸೂಲು ಮಾಡುವುದು `ಗಾತ್ರಿ~ ಎಂದರೆ ವೀಳ್ಯದ ಎಲೆ ಬೆಳೆಯುವ ಪ್ರದೇಶದ ನದಿ ದಾಟಿಕೊಂಡು ತೆಪ್ಪ ಬಳಸುತ್ತಿದ್ದ ಪ್ರದೇಶ.ಪವಾಡಪುರುಷ ಜಂಗಮ ಕರಿಬಸವೇಶ್ವರ ಅಜ್ಜಯ್ಯ ಆಯ್ಕೆ ಮಾಡಿಕೊಂಡು ಸಮಾಧಿಸ್ಥರಾದ ಕರ್ಮಭೂಮಿ.

ಪ್ರಸಿದ್ಧ ಧಾರ್ಮಿಕ ಪುಣ್ಯಾಕ್ಷೇತ್ರ, ಮಾನಸಿಕವಾಗಿ ಬಳಲಿದವರು, ನೊಂದವರ ಪಾಲಿನ ನೆಮ್ಮದಿ ತಾಣವಾಗಿ ಸಾಂತ್ವನ ಕೇಂದ್ರವಾಗಿ ರೂಪುಗೊಂಡಿದೆ.ಪ್ರತಿವರ್ಷ ಪಾಲ್ಗುಣ ಮಾಸದ ಅಮಾವಾಸ್ಯೆಯಿಂದ ಸಪ್ತಮಿವರೆಗೆ ಗದ್ದಿಗೆಯಲ್ಲಿ ನಂದಿಧ್ವಜಾರೋಹಣ, ಶಿವರಾತ್ರಿ ಜಾಗರಣೆ, ಭಜನೆ, ಕೀರ್ತನೆ, ಗುಗ್ಗುಳ, ಜಾತ್ರಾ ರಥೋತ್ಸವ, ಅನ್ನದಾನ ನಡೆಯುತ್ತವೆ. ಫಳಾರ ಹಾಕಿಸುವುದು, ಬಯಲು ಕುಸ್ತಿ, ಪಾಲಿಕೋತ್ಸವ ಕೊನೆ ದಿನ ಫಳಾರ ಒಡೆದು ವಿತರಿಸಲಾಗುತ್ತದೆ. 

ಎಲ್ಲ ಧಾರ್ಮಿಕ ವಿಧಿವಿಧಾನಗಳು ನಂದಿಗುಡಿ ವೃಷಭಪುರಿ ಸಂಸ್ಥಾನದ ಸಿದ್ದರಾಮ ಶಿವಾಚಾರ್ಯ ದೇಶಿಕೇಂದ್ರರ ನೇತೃತ್ವದಲ್ಲಿ  ಹಮ್ಮಿಕೊಳ್ಳಲಾಗುತ್ತದೆ.ರಾಜ್ಯದ ವಿವಿಧ ಭಾಗಗಳ ಲಕ್ಷಾಂತರ ಭಕ್ತರು ನದಿಯಲ್ಲಿ ಮಿಂದು ಹರಕೆ, ತುಲಾಭಾರ, ಜವಳ, ಕಾಣಿಕೆ ಸಮರ್ಪಿಸಿ ಪುನೀತರಾಗುವ ಪುಣ್ಯಭೂಮಿ.ಬದಲಾದ ಧರ್ಮಕ್ಷೇತ್ರ:  ಕರಿಬಸವೇಶ್ವರ ಗದ್ದಿಗೆ ಟ್ರಸ್ಟ್ ಸಮಾಜಮುಖಿಯಾಗಿದ್ದು, ಹಲವಾರು ರಂಗಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಕೆರೆಯ ನೀರನು ಕೆರೆಗೆ ಚೆಲ್ಲಿ  ಎಂಬಂತೆ ಸಂಗ್ರಹವಾದ ಧನ ಅನ್ನ, ಜ್ಞಾನ ದಾಸೋಹ ಸಮಾಜಸೇವೆಗೆ ಬಳಸಿ ಧರ್ಮಕ್ಷೇತ್ರವಾಗಿ ಬದಲಾಗಿದೆ. ಪ್ರತಿ ತಿಂಗಳ ಅಮಾವಾಸ್ಯೆ ಜಾತ್ರೆ, ಪ್ರತಿವರ್ಷ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ, ಭಜನೆ ಕೀರ್ತನೆ ಸ್ಪರ್ಧೆ ನಡೆಯುವುದು ವಿಶೇಷ.ಕ್ಷೇತ್ರಕ್ಕೆ ಬರುವವರು ಉಳಿದುಕೊಳ್ಳಲು 200ಕ್ಕೂ ಹೆಚ್ಚು ಸುಸಜ್ಜಿತವಾದ ತುಂಗಭದ್ರ, ಮೃತ್ಯುಂಜಯ ಹೆಸರಿನ ಛತ್ರ ನಿರ್ಮಾಣವಾಗಿದೆ. ಅನ್ನದಾಸೋಹಕ್ಕಾಗಿ ಅಡುಗೆಮನೆ, ಊಟದ ಹಾಲ್, ಕೈತೊಳೆಯುವ ವ್ಯವಸ್ಥೆ ಧರ್ಮಕಾರ್ಯ ನಡೆಸಲು ದೊಡ್ಡ ಕಲ್ಯಾಣ ಮಂದಿರ ಸೇವೆಗೆ ಅರ್ಪಿತವಾಗಿದೆ.ಸಭಾಂಗಣ ಸಹಿತ 56 ನೂತನ ಕೊಠಡಿ, ಉಗ್ರಾಣ ವಿಭಾಗ,  ಶೌಚಾಲಯ, ಕುಡಿಯುವ ನೀರಿಗೆ 1,75,000 ಲೀಟರ್ ಸಾಮರ್ಥ್ಯದ ಮೇಲ್ಮಟ್ಟದ ಸಂಗ್ರಹಾಗಾರ ನಿರ್ಮಾಣಗೊಂಡಿದೆ.ಸುಮಾರು 50ಕ್ಕೂ ಹೆಚ್ಚು ಸಿಬ್ಬಂದಿ ಕ್ಷೇತ್ರದಲ್ಲಿ ನಿಸ್ವಾರ್ಥವಾಗಿ ಜನತಾ ಜನಾರ್ದನನ ಸೇವೆ ಮಾಡುತ್ತಿದ್ದಾರೆ.

ಗ್ರಾಮಾಭಿವೃದ್ದಿಗೆ ಒತ್ತು ನೀಡಿದ್ದು ಸ್ವಾಗತ ಕಮಾನು, ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ, ಅಭಿವೃದ್ದಿಗೆ ರೂಪಿಸಿದ ಹಲವಾರು ಯೋಜನೆ ಕಾರ್ಯರೂಪಕ್ಕೆ ಬರಬೇಕಿದೆ.ಶೈಕ್ಷಣಿಕ ಸೇವೆ: ಧರ್ಮಕ್ಷೇತ್ರದಲ್ಲಿ ಶಿಕ್ಷಣಕ್ಕೆ ಒತ್ತು ನೀಡಿದ್ದು ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರದಿಂದ ಪ್ರಾಥಮಿಕ, ಪ್ರೌಢಶಾಲೆ, ಡಿಇಡಿ ತರಬೇತಿ ಕೇಂದ್ರ, ಮಕ್ಕಳಿಗೆ ಉಚಿತ ಪ್ರಸಾದನಿಲಯ  ನಡೆಸುತ್ತಿದೆ.

ತಾಂತ್ರಿಕ ಶಿಕ್ಷಣ ಕೇಂದ್ರ ಪ್ರಾರಂಭಿಸುವ ನೀಲನಕ್ಷೆ ತಯಾರಾಗಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಸುರೇಶ್ ಮಾಹಿತಿ ನೀಡಿದರು.ಸುತ್ತಿ ಬಳಸಿ ಬರಬೇಕಿದ್ದ ಕ್ಷೇತ್ರಕ್ಕೆ ಸರ್ಕಾರದಿಂದ ನಂದಿಗುಡಿ ಬಳಿ ಸೇತುವೆ ನಿರ್ಮಾಣವಾದ ನಂತರ ಸ್ವಲ್ಪ ಅನುಕೂಲವಾಗಿದೆ, ಆದರೆ ಹರಿಹರ ತಾಲ್ಲೂಕಿನ ಭಾಗದಲ್ಲಿ ಡಾಂಬರ್ ರಸ್ತೆ ನಿರ್ಮಾಣವಾಗಿಲ್ಲ ಎನ್ನುವುದು  ಭಕ್ತರ ಕೊರಗು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry