ಸೋಮವಾರ, ಅಕ್ಟೋಬರ್ 14, 2019
24 °C

ಉತ್ಸವಮೂರ್ತಿ ಸುತ್ತಾಡಿದಷ್ಟೂ ವಿಗ್ರಹ ಶಕ್ತಿ ಕಡಿಮೆ

Published:
Updated:

ಕಾರ್ಕಳ: ಉತ್ಸವಮೂರ್ತಿ ಊರಲ್ಲಿ ಸುತ್ತಾಡಿದಷ್ಟೂ ಮೂಲ ವಿಗ್ರಹದ ಶಕ್ತಿ ಕಡಿಮೆಯಾಗುತ್ತದೆ ಎಂಬ ಮಾತು ಉಲ್ಲೇಖಿಸಿದ ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್.ಎಲ್ ಭೈರಪ್ಪ, ಸರ್ಕಾರ ಸಾಹಿತ್ಯಕ್ಕೆ ಹಣ ಹಾಕಲಾರಂಭಿಸುತ್ತದೆಯೋ ಅಲ್ಲಿಂದ ಸಾಹಿತ್ಯ ತನ್ನ ಸ್ವಾತಂತ್ರ್ಯ ಕಳೆದುಕೊಳ್ಳುತ್ತದೆ ಎಂದು ತಿಳಿಸಿದರು.ಇಲ್ಲಿನ ಸಾಹಿತ್ಯ ಸಂಘ ಆಶ್ರಯದಲ್ಲಿ ಅನಂತಶಯನದ ಹೊಟೇಲ್ ಪ್ರಕಾಶದ ಸಂಭ್ರಮ ಸಭಾಂಗಣದಲ್ಲಿ ಸೋಮವಾರ ನಡೆದ ಸತ್ಸಂಗ, ಸಂವಾದದಲ್ಲಿ ಅವರು ಮಾತನಾಡಿದರು.ಹಿಂದೆ ರಾಜ್ಯಾಧಿಕಾರ ಸಾಹಿತ್ಯವನ್ನು ಪ್ರೋತ್ಸಾಹಿಸುತ್ತಿತ್ತು. ನಂತರ ಈಗ ಸರ್ಕಾರ ಆ ಕೆಲಸವನ್ನು ಮಾಡುತ್ತಿದೆ. ಸರ್ಕಾರದಲ್ಲಿ ಕೋಟಿಗಟ್ಟಲೆ ಹಣವಿರಬಹುದು. ಅದನ್ನು ಸಾಹಿತ್ಯಕ್ಕೆ ಹಾಕಬಾರದು. ಹಣದಿಂದ  ಸಾಹಿತ್ಯ ಬೆಳೆಯುವುದಿಲ್ಲ. ಭಾರತದಲ್ಲಿ ಶಾಸ್ತ್ರೀಯ ಸಂಗೀತ ಮೊದಲಾದ ಕಲೆ ಉಳಿದಿರುವುದು ಅಲ್ಲಲ್ಲಿರುವ ಸಂಗೀತ ಸಭಾಗಳಿಂದಾಗಿ. ಆ ಸಭಾದವರು ಕಾರ್ಯಕ್ರಮಕ್ಕೆ ಬೇಕೆನಿಸುಷ್ಟು ಚಂದಾ ಎತ್ತುತ್ತಾರೆ, ಚೆನ್ನಾಗಿ ಕೆಲಸ ಮಾಡುತ್ತಾರೆ. ಸಾಹಿತ್ಯವೂ ಕೂಡಾ ಹಾಗೇ. ಜನರು ತಾವು ಮೆಚ್ಚಿದ ಸಾಹಿತ್ಯವನ್ನು ತಾವೇ ಕೊಂಡುಕೊಳ್ಳುತ್ತಾರೆ. ಮೆಚ್ಚಿಕೊಂಡ  ಸಾಹಿತ್ಯವನ್ನು ಪ್ರೀತಿ ಅಭಿಮಾನದಿಂದ ಕೊಂಡಾಡುತ್ತಾರೆ. ಕೃತಿಕಾರನನ್ನು ಗೌರವಿಸಿ ಅಭಿನಂದಿಸುತ್ತಾರೆ.  ಇದರಿಂದ ಹೆಚ್ಚು ಸನ್ಮಾನ ಪಡೆಯುವುದೂ ಕಷ್ಟದ ಸಂಗತಿ ಎಂದರು.ಶತಾವಧಾನಿ ಆರ್.ಗಣೇಶ್, ಭೈರಪ್ಪ ಅವರ ಸಾಹಿತ್ಯ ವೈಶಿಷ್ಟ್ಯ ತಿಳಿಸಿದರು. ಸಂವಾದದಲ್ಲಿ ಉಡುಪಿಯ ಪ್ರೊ.ವಿ.ಅರವಿಂದ ಹೆಬ್ಬಾರ್, ಡಾ.ಗಿರೀಶ್ ಭಟ್ ಅಜಕ್ಕಳ, ಕಾರ್ಕಳದ ಡಾ.ನಂದಾ ಜೆ.ಪೈ, ಮೂಡುಬಿದಿರೆಯ ಸುಧಾರಾಣಿ ಭಾಗವಹಿಸಿದ್ದರು. ಎಸ್.ಎಲ್ ಭೈರಪ್ಪ ಅವರನ್ನು ಸನ್ಮಾನಿಸಲಾಯಿತು.ಶಾಸಕ ಗೋಪಾಲ ಭಂಡಾರಿ, ಅನಿವಾಸಿ ಭಾರತೀಯ ಒಕ್ಕೂಟ ಉಪಾಧ್ಯಕ್ಷ ಗಣೇಶ್ ಕಾರ್ಣಿಕ್, ಏರ್ಯ ಲಕ್ಷ್ಮೀನಾರಾಯಣ ಆಳ್ವ, ಸಂಘ ಕೋಶಾಧಿಕಾರಿ ಎಸ್.ನಿತ್ಯಾನಂದ ಪೈ, ಸಾಹಿತ್ಯ ಸಂಘ ಅಧ್ಯಕ್ಷ ಆರ್.ತುಕಾರಾಮ ನಾಯಕ್, ಪ್ರೊ.ಎಂ.ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಪ್ರೊ.ಪದ್ಮನಾಭ ಗೌಡ ಇದ್ದರು.

Post Comments (+)