ಸೋಮವಾರ, ಏಪ್ರಿಲ್ 12, 2021
29 °C

ಉತ್ಸವ ಸ್ಥಳದ ಬಗ್ಗೆ ಅಪಸ್ವರ: ಕೊನೆಗೂ ರಾಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಗುಲ್ಬರ್ಗ ಉತ್ಸವವನ್ನು ಮತ್ತೆ ಆರಂಭಿಸುತ್ತಿರುವ ಜಿಲ್ಲಾಡಳಿತ ಕ್ರಮವನ್ನು ಗುಲ್ಬರ್ಗದ ಕನ್ನಡಪರ, ಹೈ.ಕ.ಪರ, ದಲಿತ ಪರ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸ್ವಾಗತಿಸಿದವು. ಆದರೆ, ನಗರದ ಬಹುಮನಿ ಕೋಟೆ ಜಾಗದ ಬದಲಾಗಿ ಉಪ್ಪಿನ ತೋಟದಲ್ಲಿ ಉತ್ಸವ ನಡೆಸುವ ನಿರ್ಧಾರಕ್ಕೆ ಸಂಘಟನೆಗಳ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದರು.‘ಗುಲ್ಬರ್ಗ ಉತ್ಸವ’ದ ಬಗ್ಗೆ ಚರ್ಚಿಸಲು ಪ್ರಾದೇಶಿಕ ಆಯುಕ್ತ ಡಾ. ರಜನೀಶ ಗೋಯಲ್ ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕರೆದಿದ್ದ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಈ ವಿಚಾರ ವ್ಯಕ್ತವಾಯಿತು.ಮಹಾರಾಜರುಗಳಿಗೆ ರಕ್ಷಣೆ ನೀಡಿರುವ ಸುಭದ್ರ ಕೋಟೆ ನಗರದಲ್ಲೇ ಇರುವಾಗ, ಉತ್ಸವವನ್ನು ಊರ ಹೊರಗೆ ಸರ್ಕಾರಕ್ಕೆ ಸಂಬಂಧವಿಲ್ಲದ ಜಾಗದಲ್ಲಿ ಇಟ್ಟುಕೊಳ್ಳುವುದು ಔಚಿತ್ಯವಲ್ಲ. ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಅಥವಾ ಎನ್.ವಿ. ಮೈದಾನದಲ್ಲಿ ಉತ್ಸವ ನಡೆಸಬಹುದು. ಅಲ್ಲದೆ ಸೂಫಿ ಸಂತರು, ಬಸವಣ್ಣನವರು ಹಾಗೂ ಪ್ರಮುಖ ಕ್ರಾಂತಿಕಾರರು ಹೇಳಿದ ವಾಖ್ಯೆಗಳು ಮತ್ತು ಅವರ ಭಾವಚಿತ್ರಗಳನ್ನು ಉತ್ಸವದಲ್ಲಿ ಪ್ರಮುಖವಾಗಿ ಬಿಂಬಿಸುವಂತಾಗಬೇಕು ಎಂದು ವಿವಿಧ ಮುಖಂಡರು ಹೇಳಿದರು.ಜಾಗತೀಕರಣ ಹೊಡೆತದಲ್ಲಿ ಜಾನಪದ ಕಲೆ ನಶಿಸುತ್ತಿದೆ. ಉತ್ಸವದ ಮೂಲಕ ಇಂತಹ ಕಲೆಗಳನ್ನು ಎತ್ತಿ ಹಿಡಿಯುವ ಕೆಲಸ ನಡೆಯಬೇಕು. ಹೊರಗಿನಿಂದ ಕಲಾವಿದರನ್ನು ಕರೆತರುವ ಬದಲಿಗೆ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುವಂತಾಗಬೇಕು. ಗುಲ್ಬರ್ಗ ಉತ್ಸವ ಎಂಬುದು ‘ಉಪ್ಪಿನ ಉತ್ಸವ’ವಾಗದಿರಲಿ. ಜನಸಾಮಾನ್ಯರು ಸಂಚಾರ ವೆಚ್ಚ ಭರಿಸಿಕೊಂಡು ಉತ್ಸವದಲ್ಲಿ ಪಾಲ್ಗೊಳ್ಳುವುದು ಅಸಾಧ್ಯದ ಮಾತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಈ ಎಲ್ಲ ಸಂಘಟನೆಗಳ ಮುಖಂಡರ ಮಾತುಮೀರಿ ಉತ್ಸವವನ್ನು ಉಪ್ಪಿನ ತೋಟದಲ್ಲೇ ನಡೆಸಿದರೆ. ಗುಲ್ಬರ್ಗ ಉತ್ಸವವು ಬರೀ ಅಧಿಕಾರಿಗಳ, ಪ್ರಾಯೋಜಕರ ಕಾರ್ಯಕ್ರಮವಾಗಿ ಮಾರ್ಪಡುತ್ತದೆ ಎಂದು ಸಂಘಟನೆಗಳ ಮುಖಂಡರು ಕಿಡಿಕಾರಿದರು.ನೆಪ ಮಾತ್ರಕ್ಕೆ ಸಭೆ: ಗುಲ್ಬರ್ಗದ ಸಂಘ-ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಿಸುವ ನಿಜವಾದ ಒಲವು ಇದಿದ್ದರೆ ಸಭೆಯನ್ನು ಉತ್ಸವ ಯೋಜನೆಯ ಪೂರ್ವದಲ್ಲಿ ಕರೆಯಬೇಕಿತ್ತು. ಉತ್ಸವದ ಬಗ್ಗೆ ಎಲ್ಲ ಸಿದ್ಧತೆಗಳನ್ನು ಮುಗಿಸಿಕೊಂಡು ಈಗ ಸಭೆ ಕರೆದಿರುವುದು ಎಷ್ಟು ಔಚಿತ್ಯಪೂರ್ಣ. ಇದು ನೆಪಕ್ಕೆ ಕರೆಯಲಾದ ಸಭೆ ಎಂದು ಛೇಡಿಸಿದರು.ಗುಲ್ಬರ್ಗ ನಂ.1 ಆಗುವುದು ಬೇಡವೆ?: ಉತ್ಸವದ ಕುರಿತು ಎಲ್ಲ ಸಂಘಟನೆಗಳ ಮುಖಂಡರು ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಪ್ರಾದೇಶಿಕ ಆಯುಕ್ತರು, ‘ಉತ್ಸವವನ್ನು ಬಹುಮನಿ ಕೋಟೆಯಲ್ಲೇ ನಡೆಸುವುದು ನಮ್ಮ ಮೊದಲ ಆದ್ಯತೆಯಾಗಿತ್ತು. ಆದರೆ, ಅನೇಕ ವರ್ಷಗಳಿಂದ ಹಾಳುಬಿದ್ದ ಕೋಟೆಯ ಸಂರಕ್ಷಣೆಯ ಕಾರ್ಯ ಈಗ ನಡೆಯುತ್ತಿದೆ. ಅದು ಪೂರ್ಣಗೊಂಡಿಲ್ಲ. ಉತ್ಸವ ನಡೆಸಲು ತರಾತುರಿಯಲ್ಲಿ ಕೋಟೆಯನ್ನು ಸಿದ್ಧಗೊಳಿಸುವುದು ಸ್ವತಃ ದೇವರೆ ಬಂದರೂ ಸಾಧ್ಯವಿಲ್ಲದ ಸ್ಥಿತಿ ಇದೆ. ಯಾರ ಆಕ್ರಮಣಕ್ಕೂ ಒಳಗಾಗದ ಸುಭದ್ರಕೋಟೆ ಗುಲ್ಬರ್ಗದಲ್ಲಿದೆ. ಮುಂದಿನ ವರ್ಷದ ‘ಗುಲ್ಬರ್ಗ ಉತ್ಸವ’ ಖಂಡಿತವಾಗಿಯೂ ಕೋಟೆಯಲ್ಲೇ ನಡೆಸಲಾಗುವುದು’ ಎಂದರು.‘ರಾಜ್ಯದಲ್ಲಿ ಮೊದಲ ಗುಮ್ಮಟ ಇಲ್ಲಿ ನಿರ್ಮಾಣವಾಗಿದೆ. ಮೊದಲ ಕನ್ನಡ ಕವಿತೆ ಈ ನೆಲದಲ್ಲಿ ರಚನೆಯಾಗಿದೆ. ಹೀಗೆ ಅನೇಕ ವಿಷಯಗಳಲ್ಲಿ ಮೊದಲ ಸ್ಥಾನದಲ್ಲಿದ್ದ ಗುಲ್ಬರ್ಗ ಜಿಲ್ಲೆ ಈಗೇಕೆ ಕೊನೆಯ ಸ್ಥಾನಕ್ಕೆ ಹೋಗಿದೆ ಎಂಬುದನ್ನು ಎಲ್ಲ ಸಂಘಟನೆಗಳ ಮುಖಂಡರು ಯೋಚಿಸಬೇಕು. ಜಾಗತೀಕರಣದ ಈ ಸಂದರ್ಭದಲ್ಲಿ ಪ್ರತಿಯೊಂದು ಆರ್ಥಿಕ ಬಲವನ್ನು ಕೇಂದ್ರವಾಗಿಟ್ಟುಕೊಂಡು ಮುನ್ನಡೆಯುತ್ತಿದೆ. ಹೀಗಾಗಿ ಸ್ಥಳೀಯ ಸಂಪನ್ಮೂಲಗಳಿಗೆ ಪ್ರಚಾರ ನೀಡಿ, ಪ್ರವಾಸಿಗರನ್ನು ಸೆಳೆಯುವುದು ಬಹಳ ಅಗತ್ಯವಿದೆ. ಈ ದಿಶೆಯಲ್ಲಿ ಜಿಲ್ಲಾ ಉತ್ಸವ ಬಹಳ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ತಿಳಿಸಿದರು.‘ಇಲ್ಲಿ ಸೇರಿದ ಪ್ರತಿಯೊಬ್ಬರ ವಿಚಾರಗಳಿಗೂ ಮನ್ನಣೆ ಇದೆ. ಅಭಿವೃದ್ಧಿಯಲ್ಲಿ ಎಲ್ಲರ ಪಾಲು ಬೇಕು. ಹೋರಾಟಗಾರರು ಸಮಸ್ಯೆಗಳ ಬಗ್ಗೆ ಗಮನ ಸೆಳೆಯಬೇಕು. ಈ ಭಾಗದ ಅಭಿವೃದ್ಧಿ; ನಿಮ್ಮಲ್ಲಿನ ನಿಜವಾದ ತುಡಿತ ಎಂಬುದು; ನೀವು ವ್ಯಕ್ತಪಡಿಸುವ ಮುಕ್ತ ಮನಸ್ಸಿನ ಅಭಿಪ್ರಾಯಗಳಿಂದ ತಿಳಿಯುತ್ತದೆ’ ಎಂದರು.ಉತ್ಸವಕ್ಕೆ ಸರ್ಕಾರ ನೀಡಿದ್ದು ರೂ. 19 ಲಕ್ಷ: ಗುಲ್ಬರ್ಗ ಉತ್ಸವ ನಡೆಸಲು ಸರ್ಕಾರವು ರೂ. 19 ಲಕ್ಷ ಮಾತ್ರ ನೀಡುತ್ತಿದೆ. ಇನ್ನುಳಿದ ಹಣವನ್ನೆಲ್ಲ ಪ್ರಯೋಜಕತ್ವದ ಮೂಲಕ ಸಂಗ್ರಹಿಸಲಾಗುತ್ತಿದೆ. ಉತ್ಸವದ ಸಂದರ್ಭದಲ್ಲಿ ಇಡೀ ಕೋಟೆಯನ್ನು ರೂ. 60 ಲಕ್ಷ ವೆಚ್ಚದಲ್ಲಿ ದೀಪಾಲಂಕಾರ ಮಾಡಿಕೊಡಲು ಫಿಲಿಪ್ಸ್ ಕಂಪೆನಿ ಮುಂದೆ ಬಂದಿದೆ. ಹೀಗೆ ಉತ್ಸವಕ್ಕೆ ಪ್ರಾಯೋಜಕರ ಉದಾರತೆಯೂ ಪ್ರಮುಖವಾಗಿದೆ ಎಂದು ತಿಳಿಸಿದರು.ಸಂಘಟನೆಗಳ ಬೆಂಬಲ: ಉತ್ಸವಕ್ಕಾಗಿ ಉತ್ಸವವಾಗದೇ ಮುಂಬರುವ ವರ್ಷಗಳಲ್ಲಿಯೂ ಅದರಿಂದ ಈ ಭಾಗಕ್ಕೆ ಪ್ರಯೋಜನವಾಗಬೇಕು ಎನ್ನುವ ಪ್ರಾದೇಶಿಕ ಆಯುಕ್ತರ ಅಭಿಪ್ರಾಯಕ್ಕೆ ನಗರದ ವಿವಿಧ ಸಂಘಟನೆಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದರು.ಹೈದರಾಬಾದ್-ಕರ್ನಾಟಕ ಭಾಗದ ಅಭಿವೃದ್ಧಿಗೆ ಡಾ. ರಜನೀಶ ಗೋಯಲ್ ಹಾಗೂ ಡಾ. ಶಾಲಿನಿ ರಜನೀಶ್ ಅವರು ಕಳಕಳಿ ಪೂರ್ವಕ ಶ್ರಮಿಸುತ್ತಿರುವುದನ್ನು ಎಲ್ಲ ಮುಖಂಡರು ಶ್ಲಾಘಿಸಿದರು. ಮುಂಬರುವ ಎಲ್ಲ ಅಭಿವೃದ್ಧಿಪರ ಕಾರ್ಯಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿಯೂ ಇದೇ ಸಂದರ್ಭದಲ್ಲಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.