ಉತ್ಸಾಹಿ ಪಂಕಜ್

7
ಪಂಚರಂಗಿ

ಉತ್ಸಾಹಿ ಪಂಕಜ್

Published:
Updated:

ನಿರ್ದೇಶಕ ಎಸ್.ನಾರಾಯಣ್ ಪುತ್ರ ಪಂಕಜ್ `ವೀರೂ' ಚಿತ್ರದ ಮೂಲಕ ನಾಯಕರಾದವರು. ನಂತರ ಬಂದ `ಚೆಲುವಿನ ಚಿಲಿಪಿಲಿ', `ಚೈತ್ರದ ಚಂದ್ರಮ' ಚಿತ್ರಗಳು ವಿಫಲವಾದವು. ಆದರೆ `ದುಷ್ಟ' ಅವರಿಗೆ ಹೊರಗಿನ ಅವಕಾಶಗಳನ್ನು ತಂದುಕೊಟ್ಟಿತು. ಆ ಹಾದಿಯಲ್ಲಿ ಬಂದ `ರಣ' ಅವರನ್ನು ಆಕ್ಷನ್ ಬಲ್ಲ ನಾಯಕನನ್ನಾಗಿಸಿತು. ಅದರಿಂದ `ರೆಡ್' ಚಿತ್ರದಲ್ಲಿಯೂ ಅವರಿಗೆ ಆಕ್ಷನ್ ಇರುವ ಪಾತ್ರ ಸಿಕ್ಕಿತು. ಆಕ್ಷನ್ ಮಾಡಬಲ್ಲ ಪಂಕಜ್ ಇತ್ತೀಚೆಗೆ ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ಅದರಿಂದ `ರೆಡ್' ಚಿತ್ರೀಕರಣ ಅರ್ಧಕ್ಕೆ ನಿಂತಿದೆ. ಅವರ ಆರೋಗ್ಯ ಸುಧಾರಿಸಿದ ನಂತರ ಚಿತ್ರೀಕರಣ ಪುನರಾರಂಭವಾಗಲಿದೆಯಂತೆ.`ಚಿಕ್ಕಂದಿನಿಂದಲೂ ಡಾನ್ಸ್ ನನಗಿಷ್ಟ. ಅತಿಯಾಗಿ ಡಾನ್ಸ್ ಮಾಡಿದ್ದೇ ನನ್ನ ಮಂಡಿಯ ಅಸ್ಥಿಮಜ್ಜೆಯ (ಲಿಗಮೆಂಟ್) ಸಮಸ್ಯೆಗೆ ಕಾರಣವಾಯಿತು' ಎನ್ನುವ ಪಂಕಜ್ ಸದ್ಯ ನಾಲ್ಕು ತಿಂಗಳ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೂ ಹಿಪ್‌ಹಾಪ್, ಬ್ಯಾಲೆ ಡಾನ್ಸ್ ಕಲಿಯುತ್ತಿರುವ ಅವರು ತಮ್ಮ ಆರೋಗ್ಯ ಸಮಸ್ಯೆಗೆ ತಕ್ಕಂತೆ ಸಾವಧಾನದಿಂದ ನೃತ್ಯಾಭ್ಯಾಸ ಮಾಡುತ್ತಿದ್ದಾರಂತೆ.`ನೃತ್ಯ ನಿರ್ದೇಶಕ ಮಾಲೂರು ಶ್ರೀನಿವಾಸ್ ಅವರ ಶಾಲೆಯಲ್ಲಿ ನಾನು ನೃತ್ಯ ಕಲಿಯುತ್ತಿರುವೆ. ಅವರಿಗೆ ನನ್ನ ಸಮಸ್ಯೆ ತಿಳಿದಿದೆ. ಅದಕ್ಕೇ ಅವರು ನನಗೆ ಸೂಕ್ತವಾಗುವ ನೃತ್ಯಕ್ರಮಗಳನ್ನು ಹೇಳಿಕೊಡುತ್ತಿದ್ದಾರೆ. ಅದನ್ನು ನಿಲ್ಲಿಸಿ ಬಿಟ್ಟರೆ ಅಭ್ಯಾಸ ಇಲ್ಲದಂತಾಗುತ್ತದೆ. ನಾನು ಆರಿಸಿಕೊಂಡ ವೃತ್ತಿಗೆ ಡಾನ್ಸ್ ಅನಿವಾರ್ಯ' ಎನ್ನುವ ಪಂಕಜ್ ಬಳಿ ಸಾಕಷ್ಟು ಅವಕಾಶಗಳಿವೆ. `ಕೆಜಿಎಫ್‌ನಲ್ಲಿ ನಡೆದ ನೈಜ ಘಟನೆ ಆಧಾರಿತ `ತಂಗಂ' ಚಿತ್ರವನ್ನು ಒಪ್ಪಿಕೊಂಡಿರುವೆ. ಇನ್ನು ಕೆಲವು ಕತೆಗಳ ಚರ್ಚೆ ನಡೆಯುತ್ತಿದೆ' ಎನ್ನುವ ಪಂಕಜ್, ಇದೆಲ್ಲದರ ನಡುವೆ ಯೋಗ್ಯ ಮೈಕಟ್ಟು ನಿರ್ವಹಣೆಯತ್ತಲೂ ಗಮನ ಹರಿಸುತ್ತಿದ್ದಾರೆ.ಪ್ರತಿದಿನ ಎರಡೂವರೆ ಗಂಟೆ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವ ಅವರಿಗೆ ಅದಕ್ಕಿಂತಲೂ ಡಾನ್ಸ್ ಮಾಡುವುದು ಹೆಚ್ಚು ಇಷ್ಟವಂತೆ. `ನನ್ನ ಅಕ್ಕ ಮತ್ತು ಅಮ್ಮ ಮಸಾಲೆ ಇಲ್ಲದ, ಎಣ್ಣೆ ಇಲ್ಲದ ಪದಾರ್ಥಗಳನ್ನು ತಿನ್ನಲು ಕೊಡುತ್ತಾರೆ. ಅದರಿಂದ ದೇಹದಲ್ಲಿ ಹೆಚ್ಚು ಕೊಬ್ಬಿನಂಶ ಸೇರುವುದಿಲ್ಲ.  ನನಗೆ ಚಿಕನ್, ಮೊಟ್ಟೆ ಇಷ್ಟ. ಆದರೆ ಮಸಾಲೆ ಇಲ್ಲದ, ಫ್ರೈ ಮಾಡದ ಚಿಕನ್ ಬದಲು ಬೇಯಿಸಿದ ಚಿಕನ್ ತಿನ್ನುವುದನ್ನು ರೂಢಿ ಮಾಡಿಕೊಂಡಿರುವೆ. ಅದು ಫಿಟ್‌ನೆಸ್‌ಗೆ ಬಹುಮುಖ್ಯ' ಎನ್ನುವ ಪಂಕಜ್ ಮಾಂಸಾಹಾರ ಪ್ರಿಯ.ದೂರ ಶಿಕ್ಷಣದ ಮೂಲಕ ಬಿಕಾಂ ಪದವಿ ಓದುತ್ತಿರುವ ಅವರಿಗೆ `ತೆರೆಯ ಮೇಲೆ ಸುಂದರವಾಗಿ ಕಾಣಲು ನಟರಿಗೆ ವ್ಯಾಯಾಮದ ಅಗತ್ಯ ಇರುವಂತೆ ವಯಸ್ಸಾದರೂ ಫಿಟ್ ಆಗಿ ಕಾಣಲು, ಆರೋಗ್ಯವಂತರಾಗಿ ಇರಲು ಸಾಮಾನ್ಯರಿಗೂ ವ್ಯಾಯಾಮ ಅತ್ಯಗತ್ಯ' ಎನಿಸಿದೆ.ತಮಗೆ ಸಿಕ್ಸ್‌ಪ್ಯಾಕ್ ಅಗತ್ಯ ಇರುವ ಪಾತ್ರ ಬಂದರೆ ಸಾಕಷ್ಟು ಸಮಯಾವಕಾಶ ಕೇಳುವುದಾಗಿ ಹೇಳುವ ಪಂಕಜ್, ದಿಢೀರನೆ ಆ ರೀತಿ ಮೈಕಟ್ಟು ಮಾಡಿಕೊಂಡರೆ ಅಡ್ಡ ಪರಿಣಾಮವಾಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನೂ ಬಲ್ಲವರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry