ಶುಕ್ರವಾರ, ನವೆಂಬರ್ 22, 2019
22 °C

ಉತ್ಸಾಹ ವಿಷಾದಗಳ ಅಮೋಘ ಸಂಗಮ

Published:
Updated:

ಪ್ರಾಚೀನ ಕನ್ನಡ ಸಾಹಿತ್ಯದ ಆರಂಭದ ಘಟ್ಟದಲ್ಲಿ ಚಂಪೂವಿನದೇ ದರ್ಬಾರು. ಹಳಗನ್ನಡದ ಕವಿಗಳಿಗೆಲ್ಲ ಚಂಪೂ ಆಡುಂಬೊಲವಾಯಿತು. ಇದರಲ್ಲಿ ಜೈನಕವಿಗಳದೇ ಹೆಚ್ಚಿನ ಪಾತ್ರ. ಚಂಪೂ ಇಡಿಯಾಗಿ ಒಂದು ಸಾಹಿತ್ಯ ಪ್ರಕಾರವೇ ಹೊರತು, ಛಂದೋ ಪ್ರಕಾರವಲ್ಲ; ಏಕೆಂದರೆ ವೃತ್ತ, ಕಂದ ಮತ್ತು ವಚನಗಳ ಮುಪ್ಪುರಿಯಿಂದಾದುದು ಇದು. ವೃತ್ತ ಮತ್ತು ಕಂದಗಳು ಪ್ರತ್ಯೇಕ ಛಂದೋರೂಪಗಳೆಂಬುದು ಸ್ಪಷ್ಟವೇ ಇದೆ. ಹಳಗನ್ನಡ ಕವಿಗಳು ಈ ವೃತ್ತ  ಮತ್ತು ಕಂದ ರೂಪಗಳನ್ನು ಗರಿಷ್ಠ ಪ್ರಮಾಣದಲ್ಲಿ ದುಡಿಸಿಕೊಂಡ ಕೀರ್ತಿಗೆ ಭಾಜನರಾಗಿದ್ದಾರೆ. ಚಂಪೂ ಷಡಕ್ಷರಿಯವರೆಗೆ ದೀರ್ಘ ಇತಿಹಾಸವನ್ನು ಹೊಂದಿದ್ದರೂ, ಸಾಂದ್ರವಾಗಿ ಮಡುಗಟ್ಟಿ ವಿಜೃಂಭಿಸಿದ್ದು ಹತ್ತನೇ ಶತಮಾನದಲ್ಲಿಯೇ. ಚಂಪೂ ಕಾವ್ಯಗಳು ಸಂಸ್ಕೃತ ಮತ್ತು ಕನ್ನಡದ ಸಮಮಿಶ್ರಣ ಶೈಲಿಗೆ ಪ್ರಸಿದ್ಧವಾದುವು; ಇದನ್ನು ಮಾರ್ಗ ಮತ್ತು ದೇಸಿಗಳ ಸಮಾವೇಶವೆಂದರೂ ಆದೀತು. ದೇಸಿಯ ಹೆಚ್ಚಿನ ಅಭಿವ್ಯಕ್ತಿಯಲ್ಲಿ ವೃತ್ತಕ್ಕಿಂತ ಕಂದ ಪದ್ಯ ಸ್ಥಾನ ಪಡೆದಿದ್ದು ಅದರ ಆಕೃತಿ ವಿಶೇಷವೆಂದೇ ಭಾವಿಸಬೇಕು.  ಮಾರ್ಗ  ಮಧ್ಯದಲ್ಲಿ ದೇಸಿ  ವಿಜೃಂಭಿಸಿದ್ದಕ್ಕೆ ಎರಡು ಉದಾಹರಣೆಗಳು ಇಲ್ಲಿವೆ:ಕಟ್ಟಿದ ಪಟ್ಟಮೆ ಸರವಿಗೆ/ ನೆಟ್ಟನೆ ದೊರೆ ಪಿಡಿದ ಬಿಲ್ಲೆ ದಂಟಿಂಗೆಣೆ ಕ/ ಣ್ಗೆಟ್ಟ ಮುದುಪಂಗೆ ಪಗೆವರ/ ನಿಟ್ಟೆಲ್ವಂ ಮುಱಿವೊಡೆನಗೆ ಪಟ್ಟಂಗಟ್ಟಾಮುಟ್ಟುಗಿಡೆ ತಾನೆ ತನ್ನಂ/ ಕಟ್ಟಿಸಿಕೊಳ್ವಂತೆ ಬೀರವಟ್ಟಮನಾಗಳ್/ ಕಟ್ಟಿಸಿಕೊಂಡಂ ಶಲ್ಯಂ/ ಕಟ್ಟಿದುದಂ ಕಳೆಯಲಾರ್ಗಮೇಂ ತೀರ್ದಪುದೇ`ಪಂಪಭಾರತ'ವೆಂದು ಸುವಿಖ್ಯಾತವಾದ ಕನ್ನಡದ ಮೊದಲ ಮಹಾಕಾವ್ಯವಾದ ಪಂಪನ  `ವಿಕ್ರಮಾರ್ಜುನ ವಿಜಯಂ'ದಲ್ಲಿನ ಪದ್ಯಗಳಿವು. ಇಲ್ಲಿ ಪಟ್ಟಕಟ್ಟುವ ಅಥವಾ ಪಟ್ಟ ಕಟ್ಟಿಸಿಕೊಂಡ ಎರಡು ಸನ್ನಿವೇಶಗಳಿವೆ - ಒಂದು: ಭೀಷ್ಮನಿಗೆ ಪಟ್ಟಕಟ್ಟುವಾಗ ಕರ್ಣ ಹೇಳವುದು; ಎರಡು - ಶಲ್ಯನಿಗೆ ಪಟ್ಟಕಟ್ಟುವಾಗ ಕವಿ ಹೇಳುವುದು. ಪಟ್ಟ ಕಟ್ಟಿಸಿಕೊಳ್ಳುವುದು  `ಸರವಿ'ಗೆ ಸಮಾನ ಎಂಬುದು ಮೊದಲ ಅರ್ಥ; ಹುಲ್ಲಿನ ಹಗ್ಗದಂತೆ ವ್ಯರ್ಥ ಎನ್ನುವುದರ ಸೂಚನೆ. ಹಿಡಿದ ಬಿಲ್ಲು  `ದಂಟಿಗೆ'  ಸಮಾನ ಎಂದು ಹೇಳುವ ಎರಡನೆಯ ಹೋಲಿಕೆ ಕೂಡ ಹಾಗೆಯೇ - ಯುದ್ಧಕ್ಕೆ ಬಳಸುವ  `ವೀರತ್ವ'ದ ಸಂಕೇತವಾದ  `ಬಿಲ್ಲು' ಈಗ ಊಟಕ್ಕೆ ಬಳಸುವ ದಂಟಿನಂತಹ ತರಕಾರಿಗೆ ಸಮಾನ-ಮುರಿಯಲು ಸುಲಭ ಎಂದು ಅರ್ಥ.  `ಮುದುಪ'  ಎಂಬ ಪದ ಬಳಕೆಯಲ್ಲಿ  `ಮುದುಕ' ನಾದ ಭೀಷ್ಮನ ಬಗೆಗಿನ ನಿರ್ಲಕ್ಷ್ಯ ತೋರುವ, ಒಂದು ರೀತಿ ಧಿಕ್ಕರಿಸುವ ಯತ್ನಕ್ಕೆ ಸಂಬಂಧಿಸಿದುದು. ಶತ್ರುಗಳ  `ನಿಟ್ಟೆಲ್ವ' ಮುರಿಯಲು ತನಗೆ ಪಟ್ಟಕಟ್ಟು ಎಂಬುದು ಕರ್ಣನ ಒತ್ತಾಯ; ` ನಿಟ್ಟೆಲ್ವ'  ಪದ- ನಿಡಿದಾದ ಎಲುಬು - ಬಿಲ್ಲಿಗೆ ಹೋಲಿಕೆ. ಎರಡನೆಯ ಪದ್ಯ ತಾರಕ ಸ್ಥಿತಿಯದು; ತರ್ಕಾತೀತ ರೀತಿಯದು; ಹೆಚ್ಚು ಸಂಕೀರ್ಣವಾದುದು ಕೂಡ. ಆಯುಧ ನಾಶದಿಂದ ಶಲ್ಯ ಬಂಧನಕ್ಕೆ ಒಳಪಡುವಂತೆ  `ವೀರಪಟ್ಟ'ವನ್ನು ಕಟ್ಟಿಸಿಕೊಂಡ ಎನ್ನುವಲ್ಲಿನ ವ್ಯಂಗ್ಯ ಗಮನಿಸುವಂಥದು. ಈಗಾಗಲೇ ಕಟ್ಟಿದುದನ್ನು ಕಳೆಯಲು ಯಾರಿಗೆ ಸಾಧ್ಯವಿದೆ ಎಂದು ಹೇಳುವುದರ ಮೂಲಕ  `ವಿಧಿತತ್ವ'ಕ್ಕೆ ವರ್ಗಾಯಿಸಿ ವಾಸ್ತವ ಕ್ರಿಯೆಯನ್ನು ಅತಿಮಾನುಷ ಲೇಪನವಿರುವ ನಿರ್ಣಾಯಕ ಕ್ರಿಯೆಗೆ ಪದ್ಯವನ್ನು ದಾಟಿಸಲಾಗುವುದು.ಪದ್ಯಗಳ ಪ್ರಕ್ರಿಯೆಯನ್ನು ನೋಡಿದರೆ, ವೈಯಕ್ತಿಕ ಅನುಭವವನ್ನು ಸಾರ್ವತ್ರಿಕವಾಗಿಸುವ, ಸಾರ್ವತ್ರಿಕ ಅನುಭವವನ್ನು ವೈಯಕ್ತಿಕವಾಗಿಸುವ ಅಭಿವ್ಯಕ್ತಿಯ ವಿಶೇಷ ವರ್ಚಸ್ಸನ್ನೇ ಅಡಗಿಸಿರುವಂತಿದೆ. ಮೊದಲನೆಯದರಲ್ಲಿ ಪಟ್ಟಕಟ್ಟುವ ಪ್ರಕ್ರಿಯೆಗೆ  ಪ್ರೋತ್ಸಾಹದ ಆವೇಗವಿದ್ದರೆ, ಎರಡನೆಯದರಲ್ಲಿ ಪಟ್ಟಬಂಧ ಮತ್ತು ಅದರ ವಿಮೋಚನೆಯ ಕಲ್ಪನೆಯಿದೆ. ಮೊದಲನೆಯದರಲ್ಲಿ ಉತ್ಸಾಹ ಭಾವವೂ, ಎರಡನೆಯದರಲ್ಲಿ ವಿಷಾದದ ಭಾವವೂ ತುಂಬಿಕೊಂಡಿದೆ; ಒಂದರ್ಥದಲ್ಲಿ ಮೊದಲನೆಯದರ ಬೆಳವಣಿಗೆ ಎರಡನೆಯದು ಎನ್ನಬೇಕು. ಪಟ್ಟಾಭಿಷೇಕಕ್ಕೆ ಭೀಷ್ಮ ಅರ್ಹನಲ್ಲ ಎಂಬುದನ್ನು ಮೊದಲನೆಯದು ಹೇಳಿದರೆ, ಶಲ್ಯ ಅದಕ್ಕೆ ಅರ್ಹನಾದರೂ ಸಂದರ್ಭದ ದೃಷ್ಟಿಯಿಂದ ಅದು ವ್ಯರ್ಥ ಎನ್ನುವುದನ್ನು ಎರಡನೆಯದು ಹೇಳುತ್ತದೆ. ಮೊದಲನೆಯದರಲ್ಲಿ ಕರ್ಣ ಅದನ್ನು ಸಮರ್ಥಿಸಿದರೆ, ಎರಡನೆಯದರಲ್ಲಿ ಕವಿಯೇ ಆ ಅಭಿಪ್ರಾಯಕ್ಕೆ ಬರುವುದನ್ನು ಕಾಣುತ್ತೇವೆ. `ಪಂಪಭಾರತ'ದ ಕರ್ಣನ ಪಾತ್ರದಲ್ಲಿ ಕಂಡುಬರುವ ಈ ಆತುರ ಮತ್ತು ಸಿಡುಕು ಸಂದರ್ಭದಿಂದ ಬಂದುದೆಂಬುದನ್ನು ಮರೆಯಲಾಗದು.  ಭೀಷ್ಮನ  ಪಟ್ಟ ಕೌರವನಿಗೆ ನ್ಯಾಯ ದೊರಕಿಸಲಾರದೆಂಬ ಶಂಕೆಯಿಂದ ಇದು ವ್ಯಕ್ತವಾದಂತೆ ತೋರುವುದು. ಶಸ್ತ್ರಾಸ್ತ್ರಗಳೆಲ್ಲ ಸೋತುಹೋದುದರ ಎರಡನೆಯ ಪದ್ಯದ ಕಲ್ಪನೆ ಮಹಾಭಾರತ ಯುದ್ಧ ಅವಸಾನ ಸ್ಥಿತಿಗೆ ಬಂದುದನ್ನು ಸಮರ್ಥವಾಗಿ ಸೂಚಿಸುತ್ತದೆ. ಮೊದಲನೆಯದು ಇನ್ನೂ ಆರಂಭದ ಸ್ಥಿತಿಯನ್ನು ಹೇಳುತ್ತಿರುವುದರಿಂದ  `ಯುದ್ಧೋತ್ಸಾಹ'ದ ನೆಲೆಯಲ್ಲಿಯೇ ನಿಂತಿದೆ. ಎರಡರಲ್ಲೂ ಬರುವ  `ಪಟ್ಟ'ದ ಪ್ರಶ್ನೆ ಮುಖ್ಯ. ಯುದ್ಧದಲ್ಲಿ ಸೇನಾನಿಯ ಪಟ್ಟ ಮಾತ್ರ ಪ್ರಾಪ್ತವಾಗುತ್ತದೆ; ಗೆಲವಲ್ಲ ಎಂಬುದಕ್ಕೆ ಇದು ಸೂಚನೆ ನೀಡುವಂತಿದೆ. ಎರಡೂ ಪದ್ಯಗಳಲ್ಲಿ `ಪಟ್ಟ'  ಪ್ರಶ್ನೆಯಾಗುವುದು  `ಕೌರವರ'  ಕಡೆಯಲ್ಲಿ ತಾನೆ? ಪಾಂಡವರಲ್ಲಿ  `ಸೇನಾಪತಿ' ಬದಲಾಗುವುದಿಲ್ಲ.ಎರಡೂ ಪದ್ಯಗಳಲ್ಲಿ ಪುನರಾವರ್ತನೆಗೊಳ್ಳುವ  `ಟ' ಕಾರ ಯುದ್ಧದ ಆರ್ಭಟ, ಅಬ್ಬರ, ಸಡಗರಗಳನ್ನಲ್ಲದೆ, ಅವುಗಳ ವ್ಯರ್ಥ ಸಾಹಸವನ್ನೂ ಹೇಳುತ್ತದೆ. ವೀರರ ಹೋರಾಟ, ಯುದ್ಧ ಪ್ರಸಕ್ತಿಗಳನ್ನು ಎರಡೂ ಪದ್ಯಗಳು ಹೇಳುತ್ತವೆ. ಜೊತೆಗೆ  `ಜೀವನೋತ್ಸಾಹ'ವನ್ನು ಪದ್ಯಗಳು ತುಳುಕಿಸುತ್ತವೆ. ವಿಷಾದವೊಂದೇ ಜೀವನವಲ್ಲ ಎಂದು ಹೇಳುತ್ತಲೇ ವಿಷಾದದ ಕಡೆಗೆ ಚಲಿಸುವುದು ಮುಖ್ಯ.ಕಡೆಗೆ  `ಪಟ್ಟ'  ಒಂದು `ಬಂಧನ' ವನ್ನಾಗಿ ಮಾರ್ಪಡಿಸಿದ ಕವಿ  `ವಿಧಿವಾದ'ವನ್ನು ಪ್ರತಿಪಾದಿಸಲು ಹೊರಡುತ್ತಾನೆ. ಮೊದಲೇ ನಿರ್ಧರಿತವಾದಂತೆ ಜೀವನ ಸಾಗುತ್ತದೆ ಎಂಬ ಈ ವಾದ ಆಪ್ಯಾಯಮಾನಕರವಲ್ಲದಿದ್ದರೂ, ಒಂದು ಅನಿವಾರ‌್ಯ ಚಲನೆ ಎಂಬ ತರ್ಕಕ್ಕೆ ಕವಿ ಶರಣು ಹೋಗುತ್ತಾನೆ. ಅಷ್ಟೇ ಅಲ್ಲ, `ಕಳೆಯುವುದ'ಕ್ಕಾಗಿಯೇ  `ಕಟ್ಟು' ಎಂಬ ತೀರ್ಮಾನಕ್ಕೆ ಬಂದಿರುವುದರಲ್ಲಿ ಕವಿ ತಾರ್ಕಿಕನಾದಂತೆ ಕಾಣುತ್ತಾನೆ.  `ಕಟ್ಟಿದುದಂ ಕಳೆಯಲಾರ್ಗಮೇಂ  ತೀರ್ದಪುದೇ'  ಎಂಬುದು ಮಹತ್ವದ ಮಾತು, ನಿರ್ಧಾರದ ಸೂಚಕ. ನಿರ್ಧರಿತವಾದ ಭವಿಷ್ಯವನ್ನು ಯಾರೂ ಬದಲಾಯಿಸಲು ಸಾಧ್ಯವಾಗದು ಎಂದು ಅರ್ಥ. ಯುದ್ಧದ ಪರಿಣಾಮ ನಿರ್ಧರಿತ; ಅದನ್ನು ಶಲ್ಯ ಬದಲಿಸಲಾರ ಎಂಬುದು ಇದರ ತರ್ಕ.  `ಕಟ್ಟಿ' ದ  `ಪಟ್ಟ' ವನ್ನು ಕಳೆಯಬಹುದು ಎಂಬುದು ಒಂದು ಅರ್ಥ; ಅದರ ವಿಧಿಯನ್ನು ಯಾರೂ ಕಳೆಯಲಿಕ್ಕೆ ಸಾಧ್ಯವಿಲ್ಲ ಎನ್ನುವುದು ಇನ್ನೊಂದು ಅರ್ಥ. ಕರ್ಣನ ಸ್ವಾಭಿಮಾನದ ಪ್ರದರ್ಶನವೂ ಮೊದಲನೆಯದರಲ್ಲಿ ವ್ಯಕ್ತ, ತನ್ನಲ್ಲಿರುವ ಸಾಮರ್ಥ್ಯದ ಬಹಿರಂಗ ಪ್ರದರ್ಶನ; ತಿರಸ್ಕಾರಕ್ಕೆ ಗುರಿಯಾಗುತ್ತಿದ್ದವನ ಆತ್ಮಪ್ರತ್ಯಯದ ಒಂದ ಭಂಗಿ ಕೂಡ. ಸೇನಾನಾಯಕನ ಪಟ್ಟವನ್ನು ಕಟ್ಟಿಸಿಕೊಳ್ಳುವುದರ ಮೂಲಕ ತನ್ನನ್ನು ತಾನೆ ನಿರ್ಬಂಧಕ್ಕೆ ಒಳಪಡಿಸಿಕೊಂಡ ವಿಚಾರ ಎರಡನೆಯ ಪದ್ಯದಲ್ಲಿದೆ. ಶಲ್ಯನ ಆವರೆಗಿನ  `ಶೂರತ್ವ' ಕ್ಕೆ ಈಗ ಒಂದು ನಿಕಷ ಒದಗಿದೆ ಎಂಬ ಅಭಿಪ್ರಾಯವೂ ಸೂಚಿತವಾಗುವುದು.ನಿಯತವಾದ ಪದ, ಪಾದ ಮತ್ತು ಗಣವಿನ್ಯಾಸದೊಳಗೆ ಎಂತಹ ವೈವಿಧ್ಯವನ್ನು ತರಬಹುದು ಎಂಬುದಕ್ಕೆ ಎರಡೂ ಪದ್ಯಗಳು ಸಾಕ್ಷಿಯಾಗಿವೆ. ಕವಿ ಸಮರ್ಥನಾಗಿದ್ದರೆ ತನ್ನ ಸ್ವೋಪಜ್ಞತೆಯಿಂದ ಮತ್ತು ವೈಯಕ್ತಿಕ ಪ್ರತಿಭಾ ಶಕ್ತಿಯಿಂದ ನಾಟಕೀಯ ವಿಡಂಬನೆಯನ್ನೂ, ಪದ್ಯಗಳಲ್ಲಿ ದೃಶ್ಯವನ್ನು ಸೃಷ್ಟಿಸಿ ಅಭಿನಯಿಸಿ ತೋರಿಸುವುದನ್ನೂ, ದೂರಗಾಮಿ ಅರ್ಥ ವಿಶೇಷವನ್ನು ಹೊಂದಿರುವ ದರ್ಶನವನ್ನೂ ಪುಟ್ಟ ಕಂದಪದ್ಯಗಳಲ್ಲಿ ಇಟ್ಟು ಸ್ಫೋಟಿಸಬಲ್ಲ ಎಂಬುದಕ್ಕೆ ಈ ಪದ್ಯಗಳು ಅಪರೂಪದ ನಿದರ್ಶನಗಳಾಗಿವೆ. 

ಪ್ರತಿಕ್ರಿಯಿಸಿ (+)