ಉದನೂರುನಿದ್ದೆ ಕಸಿದ ಗುಲ್ಬರ್ಗ ಕಸ!
ಗುಲ್ಬರ್ಗ: ನಗರ ಹೊರವಲಯದ ಉದನೂರು ಗ್ರಾಮದ ಸಮೀಪ ಎಂಟು ವರ್ಷಗಳಿಂದ ಮಹಾನಗರ ಪಾಲಿಕೆ ವಿಲೇವಾರಿ ಮಾಡುತ್ತಿರುವ ತ್ಯಾಜ್ಯವು ಗ್ರಾಮಸ್ಥರ ನೆಮ್ಮದಿ ಕಸಿದುಕೊಂಡಿದೆ.
ಯಾವುದೇ ವೈಜ್ಞಾನಿಕ ವಿಲೇವಾರಿ ಪದ್ಧತಿ ಅನುಸರಿಸದೆ 2005ರಿಂದಲೇ ತ್ಯಾಜ್ಯ ಸುರಿಯುತ್ತಾ ಬಂದಿರುವುದರಿಂದ, ಇದೀಗ ಅದು ಬೆಟ್ಟದರೂಪ ತಾಳಿ ವಿವಿಧ ಕ್ರಿಮಿ ಕೀಟಗಳ ತಾಣವಾಗಿ ಮಾರ್ಪಟ್ಟಿದೆ. ಅಲ್ಲಿಂದ ಒಂದು ಕಿಲೋ ಮೀಟರ್ ಅಂತರದಲ್ಲಿರುವ ಗ್ರಾಮವನ್ನೆಲ್ಲ ವ್ಯಾಪಿಸಿಕೊಂಡಿವೆ.
ಈ ಮೊದಲು, ದುರ್ವಾಸನೆ ಹರಡಿಸಿಕೊಂಡು ಭರ್ತಿ ಕಸದೊಂದಿಗೆ ಗ್ರಾಮದೊಳಗೆ ನುಗ್ಗುತ್ತಿದ್ದ ಹತ್ತಾರು ಟ್ರ್ಯಾಕ್ಟರ್ಗಳ ಸದ್ದಿನಿಂದ ಪಾರಾಗಲು ಇಡೀ ಗ್ರಾಮಸ್ಥರು ಹೋರಾಟ ಮಾಡಿದ್ದರು. ಹೀಗಾಗಿ ತ್ಯಾಜ್ಯ ಸಾಗಿಸುವ ಮಾರ್ಗ ಬದಲಾಯಿತು. ಆದರೆ ಕಸ ಸಂಗ್ರಹದಿಂದ ಉಂಟಾಗುವ ಸಮಸ್ಯೆಯಿಂದ ಪಾರಾಗಲು ಅವರಿಗೆ ಸಾಧ್ಯವಾಗುತ್ತಿಲ್ಲ.
ಆರಂಭದಲ್ಲಿ ಗ್ರಾಮಸ್ಥರಲ್ಲಿ ಅಷ್ಟೊಂದು ಭಯವಿರಲಿಲ್ಲ. ಆದರೆ ಗ್ರಾಮದಲ್ಲಿ ಹರಡಿಕೊಳ್ಳುತ್ತಿರುವ ನೊಣ ಹಾಗೂ ಸೊಳ್ಳೆಗಳ ಕಾಟ, ಸ್ವಚ್ಛ ಪರಿಸರವಿಲ್ಲದೆ ನಿದ್ದೆ ಕಳೆದುಕೊಂಡಿರುವ ಗ್ರಾಮದ ಜನರು, ಕಸ ವಿಲೇವಾರಿ ಜಾಗ ಬದಲಿಸುವಂತೆ ಪಟ್ಟು ಹಿಡಿದಿದ್ದಾರೆ.
ಕಸದ ಮೇಲೆ ಮುಚ್ಚಳಿಕೆ ಅಥವಾ ಹೊದಿಕೆ ಹಾಕಬೇಕು ಎನ್ನುವ ನಿಯಮವನ್ನು ತೀರಾ ಇತ್ತೀಚಿಗೆ ಪಾಲಿಕೆ ಜಾರಿಗೊಳಿಸಿದೆ.
ಇದಕ್ಕೂ ಮೊದಲು ಸತ್ತ ಪ್ರಾಣಿಗಳು, ಕೊಳೆತ ತರಕಾರಿ, ಪ್ಲಾಸ್ಟಿಕ್ ತ್ಯಾಜ್ಯವು ಗ್ರಾಮದ ರಸ್ತೆಯುದ್ದಕ್ಕೂ ಹರಡಿಕೊಳ್ಳುತ್ತಿತ್ತು. ಗ್ರಾಮದ ಹಿರಿಯರೆಲ್ಲ ತಮ್ಮ ಆರೋಗ್ಯದ ಮೇಲಿನ ಕಾಳಜಿಗಿಂತ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಚಿಂತಾಕ್ರಾಂತರಾಗಿದ್ದಾರೆ. ಪ್ರತಿನಿತ್ಯ ಕಲುಷಿತ ಗಾಳಿ ಉಸಿರಾಡಿ ಏನೇನು ದುಷ್ಪರಿಣಾಮವಾಗುತ್ತಿದೆಯೋ ಎನ್ನುವ ಆತಂಕ ಎಲ್ಲರ ಮನಸ್ಸಿನಲ್ಲಿ ಮನೆಮಾಡಿದೆ.
ಗ್ರಾಮೀಣ ಪರಿಸರದಲ್ಲಿ ಸಾಮಾನ್ಯವಾಗಿ ಕಾಣುವ ರಸ್ತೆ, ಕುಡಿಯುವ ನೀರು, ಶೌಚಾಲಯ ಇತ್ಯಾದಿ ಸಮಸ್ಯೆಗಳು ಇಲ್ಲಿ ಹಾಸುಹೊಕ್ಕಾಗಿವೆ.
ಇವೆಲ್ಲ ಸಮಸ್ಯೆಗಳ ಬಗ್ಗೆ ಜನ ತಲೆಕೆಡಿಸಿಕೊಂಡಿಲ್ಲ. ವಿಶಾಲವಾದ 28 ಎಕರೆ ಪ್ರದೇಶದಲ್ಲಿ ದಿನೇ ದಿನೇ ಬೆಟ್ಟದಂತೆ ಬೆಳೆಯುತ್ತಿರುವ ತ್ಯಾಜ್ಯದ ಬಗ್ಗೆ ಇಡೀ ಗ್ರಾಮಸ್ಥರು ಗುಲ್ಬರ್ಗ ಪಾಲಿಕೆಗೆ ಶಾಪ ಹಾಕುತ್ತಿದ್ದಾರೆ.
ಗ್ರಾಮದ ಜನರೆಲ್ಲ ಶಾಪಕ್ಕೆ ಒಳಗಾದ ರೀತಿ ಪಾಪಪ್ರಜ್ಞೆ ಬೆಳೆಸಿಕೊಂಡಿದ್ದಾರೆ. ಈ ಮಧ್ಯೆ ರೀಯಲ್ ಎಸ್ಟೇಟ್ಗೆ ಜಮೀನು ಮಾರಿಕೊಂಡಿರುವ ಕೆಲ ಗ್ರಾಮಸ್ಥರು ಗುಲ್ಬರ್ಗದಲ್ಲಿ ಮನೆ ಮಾಡಿಕೊಂಡು ವಾಸ ವಾಗಿದ್ದಾರೆ.
ಆದರೆ ಕೃಷಿಯನ್ನೆ ನಂಬಿಕೊಂಡವರು ಹಾಗೂ ಕೂಲಿ ಕಾರ್ಮಿಕರು ಮಾತ್ರ ಉದನೂರಿನಲ್ಲಿ ನೆಲೆಯೂರಿದ್ದಾರೆ. ರಿಂಗ್ರಸ್ತೆಯಿಂದ 3 ಕಿ.ಮೀ. ಅಂತರದಲ್ಲಿರುವ ಉದನೂರು ನಂದಿಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲಿದೆ.
ಹೀಗಾಗಿ ಸಮಸ್ಯೆ ಸೃಷ್ಟಿಸಿದ್ದು ಪಾಲಿಕೆಯಾದರೆ, ಪರಿಹಾರ ಕಂಡುಕೊಳ್ಳಬೇಕಾಗಿದ್ದು ನಂದಿಕೂರು ಗ್ರಾಮ ಪಂಚಾಯಿತಿಯಲ್ಲಿ ಎನ್ನುವ ಆಡಳಿತಾತ್ಮಕ ಇಬ್ಬಗೆ ನೀತಿಯಿಂದ ಗ್ರಾಮಸ್ಥರು ಮತ್ತಷ್ಟು ಅಧೀರರಾಗಿದ್ದಾರೆ.
ಉದನೂರು ಗ್ರಾಮದ ಬಳಿ ಸುರಿದ ಕಸದ ರಾಶಿಯನ್ನು ಅರಸಿಕೊಂಡು ಅನೇಕ ಪ್ರಾಣಿ-ಪಕ್ಷಿಗಳ, ಕ್ರಿಮಿ-ಕೀಟಗಳ ಸಂಕುಲವೇ ಬಂದಿದೆ. ಅವುಗಳಿಂದ ಜನರು ಅನುಭವಿಸುತ್ತಿರುವ ಸಂಕಟ ದೊಡ್ಡದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.