ಉದರ ದೈವಕ್ಕೆ ಎದುರು ದೈವ ಅದೆಲ್ಲಿ?

7
ಹಾಸ್ಯ ಪ್ರಬಂದ

ಉದರ ದೈವಕ್ಕೆ ಎದುರು ದೈವ ಅದೆಲ್ಲಿ?

Published:
Updated:

ಸದ್ದಿಲ್ಲದೇ ಉಬ್ಬಿ ಹೋಗಿ ದಿನಾ ಕನ್ನಡಿಯಲ್ಲಿ ನೋಡಿಕೊಳ್ಳುವಾಗ ನಮ್ಮ ಗಮನಕ್ಕೇ ಬಾರದಂತೆ ಇದ್ದುಬಿಡುವ ಉದರ, ಅಪರೂಪಕ್ಕೆ ಸಿಗುವ ಸ್ನೇಹಿತರು `ಸ್ವಾಮೀ ನಿಮಗೆಷ್ಟು ತಿಂಗಳು' ಎಂದು ಕಿಚಾಯಿಸಿದಾಗ ಮಾತ್ರ ಕಿಸಕ್ಕೆಂದು ನಗುತ್ತದೆ!   

 

`ಎಲ್ಲಾರು ಮಾಡುವುದು ಹೊಟ್ಟೆಗಾಗಿ...' ಎಂದು ದಾಸವರೇಣ್ಯ ಕನಕದಾಸರು ಹಾಡಿದಂತೆ, ನಮ್ಮೆಲ್ಲರ ಬಹುತೇಕ ಕೃತಿ- ಕರ್ತೃಗಳು ಉದರ ಕೇಂದ್ರೀಕೃತವೇ ಆಗಿವೆ. ದೇಹದಲ್ಲಿಯೂ ಉದರದ ಉಪಸ್ಥಿತಿ ಕೇಂದ್ರ ಭಾಗದಲ್ಲೇ. ನಮ್ಮೆಲ್ಲರ ನೆಚ್ಚಿನ ದೈವ, ಆದಿ ಪೂಜಿತ, ವಿನಾಯಕನ ಪ್ರಮುಖ ಆಕರ್ಷಣೆ ಅವನ ಹೊಟ್ಟೆಯೇ.

ಹೊಟ್ಟೆಯ ನೇರ ಅವಶ್ಯಕತೆಯ ಪೂರೈಕೆಗೆ ಪ್ರಪಂಚದ ಅತಿ ದೊಡ್ಡ ಉದ್ಯಮಗಳಲ್ಲಿ ಒಂದಾದ ಹೋಟೆಲ್ ಉದ್ಯಮವೇ ಇದೆ. ರೋಟಿ-  ಕಪಡಾ- ಮಕಾನ್ ಎಂಬ ಮೂಲಭೂತ ಅವಶ್ಯಕತೆಗಳಲ್ಲಿ ಮೊದಲ ಆದ್ಯತೆ ಸಹ ಉದರದ್ದೇ. ಯಾವುದೇ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ, ಊಟದ ಮೆನು ಚೆನ್ನಾಗಿರಬೇಕೆಂಬುದು ಅನುಭವಿ ಆಯೋಜಕರ ಅಭಿಪ್ರಾಯ. ಅದಕ್ಕೇ ಡಿ.ವಿ.ಜಿ ಅವರು,

ಉದರದ ದೈವಕ್ಕೆ ಜಗದೊಳೆದುರು ದೈವವದೆಲ್ಲಿ?ಮೊದಲದರ ಪೂಜೆ, ಮಿಕ್ಕೆಲ್ಲವದರಿಂದ,

ಮದಿಸುವುದಾದರಿಸೆ, ಕುದಿವುದು ನಿರಾಕರಿಸೆ

ಹದದೊಳಿರಿಸುವುದೆಂತೋ ಮಂಕುತಿಮ್ಮಎಂದು ಜಗತ್ತಿನಲ್ಲಿ ಸಾಟಿ ಇರದ ದೈವವೆಂದರೆ ಹೊಟ್ಟೆಯೇ ಎಂದು ಹೇಳಿದ್ದಾರೆ. ಹೀಗಾಗಿ ಅಗ್ರ ಪೂಜೆಗೆ ಭಾಜನವಾಗಬೇಕಾದದ್ದು ಹೊಟ್ಟೆಯೇ. ಉದರಕ್ಕೆ ಉಪಚಾರ ಹೆಚ್ಚಾದರೆ ಮನಸ್ಸಿನ ಮದ ಹೆಚ್ಚುತ್ತದೆ, ಏನೂ ಕೊಡದೆ ನಿರಾಕರಿಸಿದರೆ ಕುದಿತಕ್ಕೆ ಎಡೆ ಮಾಡಿಕೊಡುತ್ತದೆ. ಇದರ ಹದವನ್ನು ಸಾಧಿಸುವುದೇ ಬದುಕಿನ ದೊಡ್ಡ ಪ್ರಶ್ನೆ ಎಂದು ಉದರದ ತುಡಿತಕ್ಕೆ ಇರುವ ಜೀವನ ದರ್ಶನದ ಕೊಂಡಿಯನ್ನು, ಸ್ವತಃ ಭೋಜನ ಪ್ರಿಯರಾದ ಡಿ.ವಿ.ಜಿ ಅವರು ಅರ್ಥಪೂರ್ಣವಾಗಿ, ತಿಳಿಹಾಸ್ಯದೊಡನೆ ನಿವೇದಿಸುತ್ತಾರೆ.

`ಉದರ ನಿಮಿತ್ತಂ ಬಹುಕೃತ ವೇಷಂ' ಎಂಬ ಮಾತು ನನಗೆ ಇನ್ನೊಂದು ಅರ್ಥದಲ್ಲಿ ಹೊಳೆಯಲಾರಂಭಿಸಿದ್ದು, ಮುಂಜಾವಿನ ಚಳಿಯಲ್ಲಿ ಜಾಗಿಂಗ್ ಎಂಬ ಅನಿವಾರ್ಯ ಕಾರ್ಯಕ್ರಮವನ್ನು ಒಲ್ಲದ ಮನಸ್ಸಿಂದ ಮಾಡುವಾಗ! ಸರಿಯಾಗಿ ಬೆಳಕು ಮೂಡುವ ಮೊದಲೇ ವಿವಿಧ ರೀತಿಯ ವೇಷಭೂಷಣಗಳೊಡನೆ, ಮುಂಜಾವಿನ ವಾಯು ವಿಹಾರ ಹೋಗುವ ನಾನಾ ತರಹದ ಮಂದಿಯನ್ನು ನೋಡಿದಾಗ. ಇವರೆಲ್ಲಾ ಮಾಡ್ತಾ ಇರೋದು `ಉದರ ನಿಮಿತ್ತಂ' ಎಂದೆನಿಸಿತು! ಬೇಡ ಎಂದ್ರೂ ಮುಂದೆ ಬರ‌್ತಾ ಇರೋ ಉದರವನ್ನು ಹಿಂದಕ್ಕೆ ತಳ್ಳಲು ತಾನೇ, ಈ ಕ್ಲಿಷ್ಟ ಕಾಯಕವನ್ನು ಕಷ್ಟಪಟ್ಟಾದ್ರೂ ಕೈಗೊಳ್ಳೋದು!ಹೊಟ್ಟೆ ಎಂಬುದು ಅರಿವಿಗೆ ಬರದೇ ಹೊರಹೊಮ್ಮಿ ಬಿಡುವ ಸೋಜಿಗ! ದಿನನಿತ್ಯ ಕನ್ನಡಿ ಎದುರು ನಿಂತು ನೋಡುವಾಗ ತಿಳಿಯದೇ ಹೋಗುವ ವ್ಯತ್ಯಾಸ, ತೊಡುವ ಉಡುಗೆಗಳು ಏಕಾಏಕಿ ಟೈಟ್ ಆಗಲಾರಂಭಿಸಿದಾಗ ಗಮನಕ್ಕೆ ಬರಲಾರಂಭಿಸುವುದು ಎಲ್ಲಾ ಸ್ಥೂಲ ಉದರಿಗಳ ಅನುಭವ.

ಪ್ರತಿ ದಿನ ನೋಡುವವರ ಗಮನಕ್ಕೆ ಬರದ ಈ ಬೆಳವಣಿಗೆಯನ್ನು ಥಟ್ಟನೇ ಗುರುತಿಸಿ ಬಿಡುವವರೆಂದರೆ, ಅಪರೂಪಕ್ಕೆ ಸಿಗುವ ಆತ್ಮೀಯರು. `ಏನ್ರೀ ಇದು, ಈ ಥರಾ ಆಗಿಬಿಟ್ಟಿದ್ದೀರಿ?!' `ಒಡೆದು ಹೋದೀತೋ ಮಾರಾಯ ಜೋಪಾನ!' `ಸ್ವಾಮೀ, ತಮಗೆಷ್ಟು ತಿಂಗಳು?' ಎಂಬಿತ್ಯಾದಿ ಕಾಮೆಂಟುಗಳನ್ನು ಸಾರ್ವಜನಿಕವಾಗಿ ಎಸೆದಾಗಲೇ,  ಮಧ್ಯಮಾ ದೇವನಂತೆ ಉಪಸ್ಥಿತವಾಗಿರುವ ಈ ಅಂಗದ ಮೇಲೆ ಮಹಾಕೋಪ ಬರುವುದು!ಆಗ ಬಲಾತ್ಕಾರವಾಗಿ ಉಸಿರೆಳೆದುಕೊಂಡು, ಉದರ ಮಹಾಶಯನನ್ನು ಹಿಂದಕ್ಕಿರಿಸಿಕೊಳ್ಳಲು ಯತ್ನಿಸಿ, `ಇಲ್ವಲ್ಲಾ, ಹಾಗೇ ಇದ್ದೀನಲ್ಲ...' ಎಂಬಿತ್ಯಾದಿ ಸಮಜಾಯಿಷಿ ನೀಡಿ ತಪ್ಪಿಸಿಕೊಳ್ಳಲು ಯತ್ನಿಸುವುದು ಮಹೋದರಿಗಳ ಪರಿ. ಆರಂಭದಲ್ಲಿ ಕೆಲವರು ಇದನ್ನು ಪ್ರಗತಿಯ ಸಂಕೇತ ಎಂದು ಪ್ರಶಂಸಿಸುತ್ತಾರಾದರೂ ಅದು ಮಧುಮೇಹ, ಬಿ.ಪಿ.ಗಳಂತಹ, ಬಂದರೆ ಹೋಗದ ಕಾಯಿಲೆಗಳ ಸ್ನೇಹಿತನೂ ಹೌದೆಂಬ ಸತ್ಯದ ಅರಿವಾಗಿ, ಅದನ್ನಿಳಿಸುವ ಸರ್ಕಸ್‌ಗಳನ್ನು ಪ್ರಾರಂಭಿಸಬೇಕಾಗುತ್ತದೆ.ಬೆಳಗಿನ ಚಳಿಯಲ್ಲಿ ಮುಂಜಾವಿನ ಸವಿ ನಿದ್ದೆಯನ್ನು ವರ್ಜಿಸಿ  ಓಡಬೇಕಾದಾಗ, ಈ ಹಾಳು ಹೊಟ್ಟೆಯ ದೆಸೆಯಿಂದ ಕೈ, ಕಾಲು, ಚರ್ಮ ಎಲ್ಲವನ್ನೂ ದಣಿಸಬೇಕಾಗುತ್ತದೆ! ಅಂತೆಯೇ ರಾತ್ರಿಯ ಉಪವಾಸ, ಮಿತಾಹಾರ ಇತ್ಯಾದಿಗಳನ್ನೂ ಶುರು ಮಾಡಿ, ಜಿಹ್ವೆಗೂ ಕಡಿವಾಣ ಹಾಕಬೇಕಾಗಿ ಬಂದು, `ಎಲ್ಲಾ ಈ ದರಿದ್ರ ಹೊಟ್ಟೆಯಿಂದಲೇ' ಎಂದು ಉದರಕ್ಕೆ ಶಾಪ ಹಾಕ ಬೇಕಾಗುತ್ತದೆ.ಮಹೋದರವು ಕೆಲವು ಮಹೋದಯರ ಪ್ರತಿಷ್ಠೆಯ ಲಾಂಛನವೂ ಹೌದು! ಸ್ವಾತಂತ್ರ್ಯ ಪೂರ್ವದ ದೇಶಭಕ್ತರು ಗಾಂಧಿ ಟೋಪಿ, ಸೊರಗಿದ ಶರೀರಗಳಿಂದ ಗುರುತಿಸಿಕೊಂಡರೆ, ಸ್ವಾತಂತ್ರ್ಯೋತ್ತರದ ದೇಶಭಕ್ತರು ತಮ್ಮ ಮಹೋದರದಿಂದಲೇ ಜನಜನಿತರಾಗಿದ್ದಾರೆ. ಅಂತೆಯೇ ಇವರ (ಕು)ಕೃತ್ಯಗಳೆಲ್ಲಾ, `ಉದರ ನಿಮಿತ್ತಂ'ಗಾಗಿಯೇ! ದೊಡ್ಡ ಹೊಟ್ಟೆ ಹೊತ್ತವರು ನಮ್ಮ ದೇಶದ ಜನನಾಯಕರು ಮಾತ್ರವಲ್ಲ.ಕಂಬಾರರು `ಮರೆತೇನೆಂದರ ಮರೆಯಲಿ ಹ್ಯಾಂಗ...' ಎಂದು ನೆನಪಿಸಿಕೊಳ್ಳುವಾಗ ಚೀನಾದ ಕ್ರಾಂತಿಕಾರಿ ನಾಯಕ ಮಾವೋತ್ಸೆ ತುಂಗರ ದೊಡ್ಡ ಹೊಟ್ಟೆಯ ಕುಳ್ಳ ಶರೀರವನ್ನು ನೆನಪಿಸಿಕೊಳ್ಳುತ್ತಾರೆ!

ತನ್ನ ಲಂಬೋದರದಿಂದಲೇ ಖ್ಯಾತನಾಗಿರುವ ಗಣೇಶನನ್ನು ಭಜಿಸುವಾಗ, ಅವನ ಉದರವೇ ಸೌಂದರ‌್ಯವಾಗಿ ವರ್ಣನೆಗೆ ಒಳಗಾಗುತ್ತದೆ.

ಆದರೆ ಭಕ್ತ ಮಹಾಶಯರ ಉದರವು ವಿನಾಯಕನ ಉದರದಂತೆ ಆಗತೊಡಗಿದಾಗ ಮಾತ್ರ ಹಾಸ್ಯ, ವ್ಯಂಗ್ಯದ ವಸ್ತುವಾಗಿ ಬಿಡುತ್ತದೆ. ತುಂಬಿದ ಬಸ್ಸಲ್ಲಿ, ಹೊಟ್ಟೆ ಅದನ್ನು ಹೊತ್ತವರಿಗೂ, ಸುತ್ತಮುತ್ತ ನಿಂತವರಿಗೂ, ಅಡಚಣೆಯ ವಸ್ತುವಾಗಿ ಕಾಡಲಾರಂಭಿಸುತ್ತದೆ. ಇಬ್ಬರು ಕೂರೋ ಸೀಟಲ್ಲಿ, ಮಹೋದರಿಗಳು ಆಸೀನರಾದರೆ, ಮತ್ತೊಬ್ಬರಿಗೆ ಸಿಗೋದು ಅರ್ಧ ಸೀಟು ಮಾತ್ರ. ಹೀಗಾಗಿ, `ಇವನಿಗೆ ಎರಡು ಟಿಕೇಟು ತಗೋಬೇಕು ಮಾರಾಯ' ಎಂಬುದು ಸ್ನೇಹಿತರೊಡನೆ ಪ್ರಯಾಣ ಹೊರಟಾಗ ಸ್ಥೂಲಕಾಯಿಗಳು ಕೇಳಲೇಬೇಕಾದ ಕಾಮೆಂಟ್.ಇಂದಿನ ಶುಗರ್ ಫ್ರೀ ಯುಗದಲ್ಲಿ ಎಲ್ಲರೂ ಸ್ಲಿಮ್- ಟ್ರಿಮ್ ಆಗಿ ಇರಬಯಸುತ್ತಾರಾದ್ದರಿಂದ, `ಹೊಟ್ಟೆ ನಿನ್ನಿಂದ ನಾ ಕೆಟ್ಟೆ' ಎಂದು ಕೂಳು ದಕ್ಕದವರು ಮಾತ್ರವಲ್ಲ, ಹೊಟ್ಟೆಯಿಂದಲೇ ಅವಿವಾಹಿತರಾಗಿ ಉಳಿದಿರುವ ಮಹೋದರಿಗಳೂ ಗೋಳಿಡುತ್ತಾರೆ!ಹೊಟ್ಟೆಯ ಹಸಿವೆಂಬುದು ಸಮಾನತೆಯ ಪ್ರತಿರೂಪ. ಪ್ರಮಾಣ ಬೇರೆ ಬೇರೆ ಆಗಿರಬಹುದು, ಇದು ಎಲ್ಲ ವರ್ಗದವರನ್ನೂ ಕಾಡುವಂಥಾದ್ದು. ಬಡವ- ಶ್ರೀಮಂತ, ಜಾಣ- ದಡ್ಡ, ಗಂಡು- ಹೆಣ್ಣು, ಹೀಗೆ ಯಾವುದೇ ಭೇದವಿರದೆ ಎಲ್ಲರ ಒಡಲೊಳಗಿಂದಲೂ ಕೇಳಿ ಬರುವ ಹಸಿವಿನ ಕೂಗು ಏಕ ರೀತಿಯದ್ದು. ಸನ್ನಿವೇಶದ ಗಾಂಭೀರ‌್ಯ ಏನೇ ಇರಲಿ, ಹೊಟ್ಟೆ ತೃಪ್ತವಾಗಿದ್ದಾಗ ಮಾತ್ರ ಸರಿಯಾದ ಪ್ರತಿಕ್ರಿಯೆ ನಿರೀಕ್ಷಿಸಬಹುದು.

ಅದಕ್ಕಾಗಿಯೇ ದ.ರಾ. ಬೇಂದ್ರೆಯವರು, `ಯಾರಿಗೆ ಬೇಕಾಗೈತೋ ನಿನ್ನ ಕವಿ ತಾ? ಮೊದಲು ರೊಟ್ಟಿ ತಾ, ಅದರ ಮೇಲೆ ಬೆಣ್ಣಿ ತಾ?' ಎಂದು ಮಾರ್ಮಿಕವಾಗಿ ಹೇಳಿರುವುದು. ಹೊಟ್ಟೆ ತಣ್ಣಗಾದ ಮೇಲೆ ತಾನೇ ಕಥೆ-ಕವಿತೆ ಕೇಳುವ ತಾಳ್ಮೆ?ಹುಟ್ಟಿದ ಮಗು ಅತ್ತು ಕರೆದು ಅಲವತ್ತು ತೋಡಿಕೊಳ್ಳುವುದು ಹೊಟ್ಟೆಗಾಗಿಯೇ. ಅಲ್ಲಿಂದ ಆರಂಭವಾಗುವ ಉದರದ ನಿರಂತರ ತುಡಿತ ನಿಲ್ಲುವುದು ಉಸಿರು ನಿಂತಾಗಲೇ. ಹೀಗಾಗಿಯೇ ನನ್ನ ಪಾಲಿಗೆ ಉದರವೇ ಜಗತ್ತಿನಲ್ಲಿ ಸಾಟಿ ಇರದ ದೇವರು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry