ಮಂಗಳವಾರ, ನವೆಂಬರ್ 19, 2019
23 °C

ಉದಾಸಿ, ತಹಶೀಲ್ದಾರ್ ಜುಗಲ್‌ಬಂದಿ

Published:
Updated:

ಹಾನಗಲ್ ಕ್ಷೇತ್ರ ಪರಿಚಯ

ಹಾವೇರಿ: ಅರೆಮಲೆನಾಡು ಪ್ರದೇಶ ಹಾಗೂ ಮಹಾರಭಾರತದ ವಿರಾಟ ನಗರ ಎಂಬ ಖ್ಯಾತಿ ಹೊಂದಿರುವ ಹಾನಗಲ್ ತಾಲ್ಲೂಕು ರಾಜಕೀಯ ಮುತ್ಸದ್ದಿಗಳನ್ನು ರಾಜಕಾರಣಕ್ಕೆ ಪರಿಚಯಿಸಿದೆ. ಪಕ್ಷಕ್ಕಿಂತ ವ್ಯಕ್ತಿ ರಾಜಕಾರಣಕ್ಕೆ ಮಹತ್ವ ನೀಡುವ ಈ ಕ್ಷೇತ್ರ ಜಿಲ್ಲೆಯ ರಾಜಕಾರಣದಲ್ಲಿಯೇ ಅತ್ಯಂತ ವೈಶಿಷ್ಟ್ಯತೆ ಮೆರೆದ ಕ್ಷೇತ್ರವಾಗಿದೆ.ಹಾನಗಲ್ ವಿಧಾನಸಭಾ ಕ್ಷೇತ್ರವು 1952ರಿಂದ 2008 ರವರೆಗಿನ ಚುನಾವಣೆಗಳಲ್ಲಿ 1968 ರ ಒಂದು ಉಪ ಚುನಾವಣೆ ಸೇರಿದಂತೆ ಒಟ್ಟು 14 ಸಾರ್ವತ್ರಿಕ ಚುನಾವಣೆಗಳನ್ನು ಎದುರಿಸಿದೆ. ಇವುಗಳಲ್ಲಿ ಕೇವಲ ಐವರು ಮಾತ್ರ ಶಾಸಕರಾಗುತ್ತಾ ಬಂದಿದ್ದಾರೆ. 1978 ರಿಂದ ಮನೋಹರ ತಹಶೀಲ್ದಾರ್ ಹಾಗೂ ಸಿ.ಎಂ. ಉದಾಸಿಯವರನ್ನು ಬಿಟ್ಟರೆ ಮೂರನೆ ವ್ಯಕ್ತಿಗೆ ಇಲ್ಲಿನ ಮತದಾರರು ಯಾವುದೇ ಒಂದು ಚುನಾವಣೆಯಲ್ಲಿ ಮಾನ್ಯತೆ ನೀಡಿಲ್ಲ.ಎದುರಿಸಿದ 14 ಚುನಾವಣೆಗಳಲ್ಲಿ ಆರು ಐದು ಬಾರಿ ಕಾಂಗ್ರೆಸ್, ಒಂದು ಬಾರಿ ಇಂದಿರಾ ಕಾಂಗ್ರೆಸ್, ಮೂರು ಬಾರಿ ಪಕ್ಷೇತರ, ತಲಾ ಒಂದು ಬಾರಿ ಜನತಾ ಪಕ್ಷ, ಜನತದಾಳ, ಎರಡು ಬಾರಿ ಬಿಜೆಪಿಗೆ ಗೆಲುವು ದೊರೆತಿದೆ. 1978ರ ನಂತರ ನಡೆದ 8 ಚುನಾವಣೆಗಳಲ್ಲಿ 3 ಸಲ ಕಾಂಗ್ರೆಸ್‌ನ ಮನೋಹರ ತಹಶೀಲ್ದಾರ್ ಆಯ್ಕೆಯಾಗಿದ್ದರೆ, ಐದು ಬಾರಿ ಗೆಲವು ಸಾಧಿಸಿರುವ ಸಿ.ಎಂ.ಉದಾಸಿ ಅವರು ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಚುನಾವಣಾ ಇತಿಹಾಸ:

1957 ರ ಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಬಿ.ಆರ್. ಪಾಟೀಲ 13,152 ಮತಗಳಿಸಿ ಜಯಸಾಧಿಸಿದರೆ, 1962 ರ ಚುನಾವಣೆಯಲ್ಲಕಾಂಗ್ರೆಸ್‌ನ ಜಿ.ಎನ್. ದೇಸಾಯಿ 19,843 ಮತಗಳಿಸಿ ಜಯಗಳಿಸಿದರು. 1967 ರ ಚುನಾವಣೆಯಲ್ಲಿ ಬಿ.ಆರ್. ಪಾಟೀಲರು ಮತ್ತೆ ಪಕ್ಷೇತರರಾಗಿ ಆಯ್ಕೆಯಾದರೆ, ಬಿ.ಆರ್.ಪಾಟೀಲರು ನಿಧನರಾದ ಹಿನ್ನೆಲೆಯಲ್ಲಿ ನಡೆದ 1968 ರಲ್ಲಿ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಜಿ.ಎನ್.ದೇಸಾಯಿ 20,759 ಮತಗಳಿಸಿ ಜಯಗಳಿಸಿದರು.1972 ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪಿ.ಸಿ. ಶೆಟ್ಟರ್ 31,348 ಮತಗಳಿಸಿ ಆಯ್ಕೆಯಾದರು.1978 ರ ಚುನಾವಣೆಯಲ್ಲಿ ಕಾಂಗೈನಿಂದ ಪ್ರಥಮ ಬಾರಿಗೆ ಸ್ಪರ್ಧೆಗಿಳಿದ ಮನೋಹರ ತಹಶೀಲ್ದಾರ್ 35,228 ಮತಗಳಿಸಿ ಆಯ್ಕೆಯಾದರು. 1983 ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸಿ.ಎಂ.ಉದಾಸಿ 35,617 ಮತಗಳಿಸಿ ವಿಧಾನಸಭೆಗೆ ಪ್ರವೇಶ ಪಡೆದರು. 1985 ರ ಚುನಾವಣೆಯಲ್ಲಿ ಜನತಾಪಕ್ಷದಿಂದ ಸ್ಪರ್ಧಿಸಿದ ಸಿ.ಎಂ. ಉದಾಸಿ 39,264 ಮತಗಳಿಸಿ ಪುನರಾಯ್ಕೆಯಾದರು. 1989ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮನೋಹರ ತಹಶೀಲ್ದಾರ್ 54,348 ಮತಗಳಿಸಿ ಆಯ್ಕೆಯಾದರೆ, 1994 ರ ಚುನಾವಣೆಯಲ್ಲಿ ಜನತಾದಳದಿಂದ ಸ್ಪರ್ಧೆಗಿಳಿದ ಸಿ.ಎಂ.ಉದಾಸಿ 56,348 ಮತಗಳಿಸಿ ಮೂರನೇ ಬಾರಿಗೆ ಜಯ ಸಾಧಿಸಿದರು. 1999 ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮನೋಹರ ತಹಶೀಲ್ದಾರ್ 59,628 ಮತಗಳಿಸಿ ಮೂರನೇ ಬಾರಿಗೆ ಆಯ್ಕೆಯಾದರು. 2004 ರ ಚುನಾವಣೆಯಲ್ಲಿ ಸಿ.ಎಂ.ಉದಾಸಿ ಬಿಜೆಪಿಯಿಂದ ಸ್ಪರ್ಧಿಸಿ 61,167 ಮತಗಳಿಸಿ ಆಯ್ಕೆಯಾದರೆ, 2008 ರ ಚುನಾವಣೆಯಲ್ಲಿ 60,025 ಮತಪಡೆದು ಬಿಜೆಪಿಯಿಂದ ಸಿ.ಎಂ. 2ನೇ ಬಾರಿಗೆ ಆಯ್ಕೆಯಾದರು.ಹಣಾಹಣಿಗೆ ಸಜ್ಜು

2013ನೇ ಸಾವತ್ರಿಕ ಚುನಾವಣೆಗೆ ಹಾನಗಲ್ ಕ್ಷೇತ್ರದಿಂದ ಮಾಜಿ ಸಚಿವ ಸಿ.ಎಂ.ಉದಾಸಿ ಅವರು ಕೆಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಮನೋಹರ್ ತಹಶೀಲ್ದಾರ್ ಕಾಂಗ್ರೆಸ್ ಅಭ್ಯರ್ಥಿಯಾಗುವ ಪ್ರಯತ್ನದಲ್ಲಿದ್ದಾರೆ. ತಹಶೀಲ್ದಾರ್‌ಗೆ ಟಿಕೆಟ್ ದೊರೆತರೆ ಉದಾಸಿ ಹಾಗೂ ತಹಶೀಲ್ದಾರ್ ನಡುವೆ ಎಂಟನೇ ಬಾರಿ ಹಣಾಹಣಿಗೆ ಕ್ಷೇತ್ರ ಸಜ್ಜಾಗಲಿದೆ.

1.67,845 ಮತದಾರರು

ಹಾನಗಲ್ ವಿಧಾನಸಭಾ ಕ್ಷೇತ್ರವು ಒಂದು ಪುರಸಭೆ ಸೇರಿದಂತೆ 156 ಗ್ರಾಮಗಳನ್ನು ಒಳಗೊಂಡಿದೆ. ಕ್ಷೇತ್ರದಲ್ಲಿ 89,469 ಪುರುಷ, 78,376 ಮಹಿಳಾ ಮತದಾರರು ಸೇರಿ ಒಟ್ಟು 1.67,845 ಮತದಾರರಿದ್ದಾರೆ. ಕ್ಷೇತ್ರದಲ್ಲಿ ಒಟ್ಟು ಒಂದು ಹೆಚ್ಚುವರಿ ಮತಗಟ್ಟಿ ಸೇರಿ 223 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಅವುಗಳಲ್ಲಿ 78 ಸೂಕ್ಷ್ಮ, 30 ಅತೀ ಸೂಕ್ಷ್ಮ ಹಾಗೂ 115 ಸಾಮಾನ್ಯ ಮತಗಟ್ಟೆಗಳಿವೆ.

 

ಪ್ರತಿಕ್ರಿಯಿಸಿ (+)