ಶುಕ್ರವಾರ, ಏಪ್ರಿಲ್ 16, 2021
31 °C

ಉದ್ಘಾಟನೆಯಾದರೂಉಪಯೋಗವಾಗದ ಕಟ್ಟಡ

ಪ್ರಜಾವಾಣಿ ವಾರ್ತೆ/ ಬಸವರಾಜ ಹವಾಲ್ದಾರ Updated:

ಅಕ್ಷರ ಗಾತ್ರ : | |

ಮಂಡ್ಯ: ಉದ್ಘಾಟನೆಗೊಂಡು ಏಳು ತಿಂಗಳು ಕಳೆದರೂ ಜಿಲ್ಲಾಧಿಕಾರಿ ಕಚೇರಿ ಕೂಗಳತೆ ದೂರದ ಕಟ್ಟಡ ಬಳಕೆಯಾಗುತ್ತಿಲ್ಲ. ಪರಿಣಾಮ ಹಲವಾರು ಇಲಾಖೆಗಳು ಇಂದಿಗೂ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.



 ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿಗಾಗಿ ಪ್ರವಾಸೋದ್ಯಮ ಇಲಾಖೆಯ ಪಕ್ಕದ ಜಾಗದಲ್ಲಿ 4 ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯ ಬಂಗಲೆಯೊಂದು ತಲೆ ಎತ್ತಿ ನಿಂತಿದೆ.



ಈ ಕಟ್ಟಡವನ್ನು 2011ರ ನವೆಂಬರ್ ತಿಂಗಳಿನಲ್ಲಿ ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಉದ್ಘಾಟಿಸಿದ್ದಾರೆ. ಉದ್ಘಾಟನೆಯ ನಂತರ ಈ ಕಟ್ಟಡದತ್ತ ಯಾರೂ ತಲೆ ಎತ್ತಿಯೂ ಕೂಡ ನೋಡುತ್ತಿಲ್ಲ.



ಉಪ ವಿಭಾಗಾಧಿಕಾರಿ ಕಚೇರಿಯೂ ಜಿಲ್ಲಾಧಿಕಾರಿಗಳ ಕಚೇರಿಯ ಒಂದು ಮೂಲೆಯಲ್ಲಿದೆ ಹಾಗೂ ಈಗಿರುವ ತಹಶೀಲ್ದಾರ ಕಚೇರಿಯೂ ಹಳೆಯದಾಗಿದೆ. ಜನ ಸಂಪರ್ಕ ಹೆಚ್ಚು ಹೊಂದಿರುವ ಈ ಎರಡೂ ಕಚೇರಿಗಳಿಗೆ ಸುಸಜ್ಜಿತ ಕಟ್ಟಡ ಒದಗಿಸುವ ಉದ್ದೇಶದಿಂದ ಹೊಸ ಕಟ್ಟಡ ಕಟ್ಟಲಾಗಿದೆ.



ಮಂಡ್ಯ ಜಿಲ್ಲೆ ರಚನೆಯಾಗಿ 60ಕ್ಕೂ ಹೆಚ್ಚು ವರ್ಷಗಳಾಗಿವೆ. ಈಗಲೂ ಸರ್ಕಾರದ ಅರ್ಧದಷ್ಟು ಕಚೇರಿಗಳು ಖಾಸಗಿ ಕಟ್ಟಡದಲ್ಲಿಯೇ ಕಾರ್ಯ ನಿರ್ವ ಹಿಸುತ್ತಿವೆ. ಅವು ದಿಕ್ಕಿಗೊಂದರಂತೆ ಇರುವುದರಿಂದ ಗ್ರಾಮೀಣ ಪ್ರದೇಶದಿಂದ ಬರುವ ಸಾರ್ವಜನಿಕರಿಗೂ ತೀವ್ರ ತೊಂದರೆಯಾಗುತ್ತಿದೆ.



ಸಹಕಾರ ಇಲಾಖೆ, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ತೂಕ ಮತ್ತು ಮಾಪನ ಇಲಾಖೆ ಸೇರಿದಂತೆ ಬಹಳಷ್ಟು ಇಲಾಖೆಗಳು, ಪ್ರತಿ ತಿಂಗಳೂ ಸಾವಿರಾರು ರೂಪಾಯಿ ತೆತ್ತು ಖಾಸಗಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ.



ಹೊಸ ಕಟ್ಟಡಕ್ಕೆ ಮೇಲಿನ ಎರಡು ಕಚೇರಿ ಸ್ಥಳಾಂತರಗೊಂಡರೆ ಖಾಸಗಿ ಕಟ್ಟಡಗಳಲ್ಲಿರುವ ನಾಲ್ಕಾರು ಕಚೇರಿ ಗಳಿಗೆ ಇಲ್ಲಿ ಸ್ಥಳಾವಕಾಶವಾಗು ತ್ತದೆ. ಇವು ಜಿಲ್ಲಾಧಿಕಾರಿ ಕಚೇರಿಯಿಂದ ಕೂಗಳತೆ ದೂರದಲ್ಲಿ ಬರುವುದರಿಂದ ಜನರಿಗೂ ಅನುಕೂಲವಾಗುತ್ತದೆ.



ಕಟ್ಟಡದ ವೈರಿಂಗ್ ಕಾಮಗಾರಿ ಬಾಕಿ ಇದೆ ಎಂದು ಹೆಸರು ಹೇಳಲಿಚ್ಛಿಸಿದ ಅಧಿಕಾರಿಯೊಬ್ಬರು ಹೇಳುತ್ತಾರೆ. ಕಾಮಗಾರಿ ಬಾಕಿ ಇದ್ದರೂ ತರಾತುರಿ ಯಲ್ಲಿ ಯಾಕೆ ಉದ್ಘಾಟನೆ ಮಾಡಲಾ ಯಿತು ಎಂಬುದು ಯಕ್ಷ ಪ್ರಶ್ನೆ.



ಮೂಢನಂಬಿಕೆ: ಕಟ್ಟಡದ ವಾಸ್ತು ಸರಿಯಾಗಿಲ್ಲ ಎನ್ನುವುದು ಸ್ಥಳಾಂತರವಾಗದಿರುವುದಕ್ಕೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತವೆ. ಇದಕ್ಕೆ ಪುರಾವೆ ಎಂಬಂತೆ, ಈ ಹಿಂದೆ ತಹಶೀಲ್ದಾರರು ಮಧ್ಯರಾತ್ರಿ ಈ ಕಟ್ಟಡದಲ್ಲಿ ಹೋಮ ಮಾಡಿಸಿದ್ದರು !



ರಾಜ್ಯ ಸರ್ಕಾರ 4 ಕೋಟಿ ರೂಪಾಯಿ ಖರ್ಚು ಮಾಡಿ ಕಟ್ಟಿಸಿದ ಕಟ್ಟಡವೊಂದು ಹಾಗೆಯೇ ಖಾಲಿ ಬಿದ್ದಿದೆ. ಇನ್ನಷ್ಟು ದಿನಗಳು ಕಳೆದರೆ ನಿರ್ವಹಣೆಯ ಕೊರತೆಯಿಂದಾಗಿ ಪಾಳು ಕಟ್ಟಡವಾಗುತ್ತದೆ. ಸಾರ್ವಜನಿಕರ ಹಣದ ಪೋಲು ತಪ್ಪಿಸಲು ಅಧಿಕಾರಿಗಳು ಮುಂದಾಗುವರೇ?.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.