ಉದ್ಘಾಟನೆ ಭಾಗ್ಯ ಕಾಣದ ವಸತಿ ನಿಲಯ

7

ಉದ್ಘಾಟನೆ ಭಾಗ್ಯ ಕಾಣದ ವಸತಿ ನಿಲಯ

Published:
Updated:

ಮುಂಡರಗಿ: ತಾಲ್ಲೂಕಿನ ಶಿಂಗಟಾಲೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮೆಟ್ರಿಕ್ ಪೂರ್ವ ವಸತಿ ನಿಲಯದ ಕಟ್ಟಡ ಕಾಮಗಾರಿ ಪೂರ್ಣಗೊಂಡು ಎರಡು ವರ್ಷ ಕಳೆದರೂ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ದಿಂದಾಗಿ ಈವರೆಗೂ ಉದ್ಘಾಟನೆ ಭಾಗ್ಯ ಕಾಣದೆ ಹಾಳು ಸುರಿಯತೊಡಗಿದೆ.ವಸತಿ ನಿಲಯದ ನೂತನ ಕಟ್ಟಡ ಉದ್ಘಾಟನೆಯಾಗದೇ ಇರುವುದರಿಂದ ಹಾಸ್ಟೆಲ್‌ನಲ್ಲಿರುವ ನೂರಾರು ವಿದ್ಯಾರ್ಥಿಗಳು ಶೌಚಾಲಯ, ಸ್ನಾನ ಗೃಹಗಳಂತಹ ಮೂಲ ಸೌಲಭ್ಯ ಗಳಿಂದ ವಂಚಿತರಾಗಿ ಬಾಡಿಗೆ ಕಟ್ಟಡದಲ್ಲಿ ಕಾಲಕಳೆಯಬೇಕಾಗಿದೆ.ಶಿಂಗಟಾಲೂರ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಳೆದ ಸುಮಾರು 25ವರ್ಷಗಳಿಂದ ದೇವಸ್ಥಾನದ ಕಿರಿದಾದ ಬಾಡಿಗೆ ಕಟ್ಟಡದಲ್ಲಿ ಬಿಸಿಎಂ ಹಾಸ್ಟೆಲ್ ಕಾರ್ಯ ನಿರ್ವಹಿಸುತ್ತಿದ್ದು, ಈಗ ಹೊಸಶಿಂಗಟಾಲೂರ ಗ್ರಾಮದ ಮುಖ್ಯರಸ್ತೆಗೆ ಅಂಟಿಕೊಂಡಂತೆ ಭವ್ಯವಾದ ನೂತನ ಹಾಸ್ಟೆಲ್ ಕಟ್ಟಡ ಪೂರ್ಣಗೊಂಡಿದ್ದರೂ ವಿದ್ಯಾರ್ಥಿಗಳಿಗೆ ನೂತನ ಕಟ್ಟಡದಲ್ಲಿ ವಾಸಿಸುವ ಭಾಗ್ಯ ವಿಲ್ಲದಂತಾಗಿದೆ.ನೂತನ ಹಾಸ್ಟೆಲ್ ಕಟ್ಟಡವನ್ನು ಉದ್ಘಾಟನೆಗೊಳಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಆದೇಶ ನೀಡಿ ಹೋಗಿದ್ದರು.ಅದರಂತೆ ಹಾಸ್ಟೆಲ್ ಕಟ್ಟಡ ಉದ್ಘಾಟಿಸಲು ಎರಡು ಬಾರಿ ಆಮಂತ್ರಣ ಪತ್ರಿಕೆ ಮುದ್ರಿಸಲಾಗಿತ್ತು. ಕಳೆದ ಐದು ತಿಂಗಳ ಹಿಂದೆ ಆಮಂತ್ರಣ ಪತ್ರಿಕೆ ಮುದ್ರಿಸಿ ಮುಂಜಾನೆ ಕಟ್ಟಡವನ್ನು ಉದ್ಘಾಟಿಸಬೇಕು ಎನ್ನುವಷ್ಟರಲ್ಲಿ ಹಾಸ್ಟೆಲ್ ಕಾಂಪೌಂಡ್‌ನಲ್ಲಿ ಗುಡಿಸಲು ಕಟ್ಟಿಕೊಂಡಿದ್ದ ಕೆಲವು ಗ್ರಾಮಸ್ಥರು ತಕರಾರು ತಗೆದಿದ್ದರಿಂದ ಕೊನೆಯ ಘಳಿಗೆಯಲ್ಲಿ ಹಾಸ್ಟೆಲ್ ಉದ್ಘಾಟನೆಯನ್ನು ರದ್ದುಗೊಳಿಸಲಾಯಿತು.ಇದರಿಂದಾಗಿ ಗ್ರಾಮದ ಹೊರವಲ ಯದಲ್ಲಿರುವ ನೂತನ ಹಾಸ್ಟೆಲ್ ಕಟ್ಟಡವು ಭೂತ ಬಂಗಲೆಯಂತಾಗಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ. ನೂತನ ಹಾಸ್ಟೆಲ್ ಕಟ್ಟಡ ಉದ್ಘಾಟನೆ ಕುರಿತಂತೆ ಕ್ಷುಲ್ಲಕ ರಾಜಕೀಯವೇ ಕಾರಣವೆಂದು ಹೇಳಲಾಗುತ್ತಿದ್ದು, ಅದು ಉದ್ಘಾಟನೆ ಆಗುತ್ತದೆಯೋ ಇಲ್ಲವೋ ಎನ್ನುವ ಸಂಶಯ ವಿದ್ಯಾರ್ಥಿಗಳಲ್ಲಿ ಹಾಗೂ ಪಾಲಕರಲ್ಲಿ ಮೂಡತೊಡಗಿದೆ.ತಾಲ್ಲೂಕು ಪಂಚಾಯಿತಿಯು 2012-13ನೇ ಸಾಲಿನ ಹಾಸ್ಟೆಲ್ ಪ್ರವೇಶಕ್ಕಾಗಿ ಈಗಾಗಲೇ ತಾಲ್ಲೂಕಿನ ವಿದ್ಯಾರ್ಥಿಗಳಿಂದ ಅರ್ಜಿ ಪಡೆದು ಕೊಳ್ಳುತ್ತಿದ್ದು, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಾದರೂ ಶಿಂಗಟಾಲೂರ ಗ್ರಾಮದ ಹಾಸ್ಟೆಲ್‌ನ ನೂತನ ಕಟ್ಟಡ ಉದ್ಘಾಟನೆಯಾಗುತ್ತದೆಯೊ ಇಲ್ಲವೊ ಎಂದು ವಿದ್ಯಾರ್ಥಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.ಪಟ್ಟಣವನ್ನು ಒಳಗೊಂಡಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಸಿಎಂ ಬಾಲಕ ಬಾಲಕಿಯರ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಒಟ್ಟು 13ವಸತಿ ನಿಲಯಗಳಲ್ಲಿ ಆರು ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರವು ಪ್ರತಿ  ತಿಂಗಳು ಬಾಡಿಗೆ ರೂಪದಲ್ಲಿ ಅಪಾರ ಪ್ರಮಾಣದ ಹಣವನ್ನು ಖರ್ಚು ಮಾಡುತ್ತಲಿದೆ.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಒಟ್ಟು ಐದು ವಸತಿ ನಿಲಯಗಳಿದ್ದು, ಕಳೆದ ಹಲವಾರು ದಶಕಗಳಿಂದ  ದುಬಾರಿ ಬಾಡಿಗೆ ತೆತ್ತು ಬಾಡಿಗೆ ಕಟ್ಟಡ ಗಳಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ.   ಸಮಾಜ ಕಲ್ಯಾಣ ಇಲಾಖೆಯು ಪಟ್ಟಣದಲ್ಲಿ ಕೆಲವು ವಸತಿ ನಿಲಯಗಳ ನಿರ್ಮಾಣಕ್ಕಾಗಿ ನಿವೇಶನಗಳನ್ನು ಗುರುತಿಸಿದ್ದು ಅವುಗಳಲ್ಲಿ ಕೆಲವು ನಿವೇಶನಗಳನ್ನು ಈಗಾಗಲೇ ಖರೀದಿಸ ಲಾಗಿದೆ ಎಂದು ಹೇಳಲಾಗುತ್ತಿದ್ದು, ಕಟ್ಟಡ ಕಾಮಗಾರಿ ಪೂರ್ಣಗೊಂಡು  ಅಲ್ಲಿ ವಿದ್ಯಾರ್ಥಿಗಳು ವಾಸಮಾಡ ಬೇಕೆಂದರೆ ಎಷ್ಟು ವರ್ಷ ಬೇಕಾಗುತ್ತ ದೆಯೊ ಎಂದು ವಿದ್ಯಾರ್ಥಿಗಳು ಮತ್ತು ಪಾಲಕರು ಪ್ರಶ್ನಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry