ಉದ್ದೇಶಿತ ಇಡಬ್ಲ್ಯುಎಸ್ ವಸತಿಗೃಹಗಳ ಜಾಗದಿಂದ ಸ್ಥಳಾಂತರ

7

ಉದ್ದೇಶಿತ ಇಡಬ್ಲ್ಯುಎಸ್ ವಸತಿಗೃಹಗಳ ಜಾಗದಿಂದ ಸ್ಥಳಾಂತರ

Published:
Updated:

ಬೆಂಗಳೂರು: ಉದ್ದೇಶಿತ ಇಡಬ್ಲ್ಯುಎಸ್ ವಸತಿಗೃಹಗಳ ಜಾಗದಿಂದ ತಮ್ಮನ್ನು ಸ್ಥಳಾಂತರಿಸುವುದನ್ನು ವಿರೋಧಿಸಿ ಆರ್ಥಿಕವಾಗಿ ಹಿಂದುಳಿದ ಅಪಾರ ಸಂಖ್ಯೆಯ ನಿವಾಸಿಗಳು ಸೋಮವಾರ ಈಜಿಪುರದಲ್ಲಿ ಪ್ರತಿಭಟನೆ ನಡೆಸಿದರು.ಬಿಬಿಎಂಪಿಯು ತಮ್ಮನ್ನು ಸ್ಥಳಾಂತರಗೊಳಿಸಲಿದೆ ಎಂಬ ಮಾಹಿತಿ ಅರಿತ ನಿವಾಸಿಗಳು ಒಗ್ಗೂಡಿ ಪ್ರತಿಭಟನೆ ನಡೆಸಿದರು. ತಮ್ಮನ್ನು ಬೇರೆಡೆ ಸ್ಥಳಾಂತರಿಸುವ ಬದಲು ಸ್ಥಳದಲ್ಲಿಯೇ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಮೂಲಕ ವಸತಿಗೃಹಗಳನ್ನು ನಿರ್ಮಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಬಿಬಿಎಂಪಿಯು ಅನಧಿಕೃತವಾಗಿ ಮೇವರಿಕ್ ಹೋಲ್ಡಿಂಗ್ಸ್ ಸಂಸ್ಥೆಯ ಜತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ವಸತಿಗೃಹಗಳನ್ನು ನಿರ್ಮಿಸಲು ಹೊರಟಿದೆ. ಅಲ್ಲದೆ, ಜಾಗದ ಸಮೀಪದಲ್ಲಿಯೇ ವಾಣಿಜ್ಯ ಸಂಕೀರ್ಣ ನಿರ್ಮಿಸುವುದಕ್ಕೂ ಅವಕಾಶ ಕಲ್ಪಿಸಿದೆ ಎಂದು ಅವರು ಆರೋಪಿಸಿದರು.ಆರ್ಥಿಕವಾಗಿ ಹಿಂದುಳಿದಂತಹ ನಿವಾಸಿಗಳಿಗೆ ಮೀಸಲಾದ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸುವುದಕ್ಕೆ ಅವಕಾಶ ಕಲ್ಪಿಸಿರುವ ಕ್ರಮ ಸರಿಯಲ್ಲ ಎಂದು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಬಿಬಿಎಂಪಿ ಮೂಲಗಳ ಪ್ರಕಾರ, ಹೈಕೋರ್ಟ್ ಆದೇಶನದನ್ವಯ 1512 ಕುಟುಂಬಗಳಿಗೆ ಬಹುಮಹಡಿ ಕಟ್ಟಡದಲ್ಲಿ ಮನೆಗಳನ್ನು ನಿರ್ಮಿಸಿಕೊಡಲಾಗುತ್ತದೆ.ಅದಕ್ಕಾಗಿ ಸ್ಥಳೀಯ ನಿವಾಸಿಗಳನ್ನು ಆನೇಕಲ್ ಬಳಿಯ ಇಗ್ಗಲೂರಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗುತ್ತದೆ. ಆದರೆ, ತಮ್ಮನ್ನು ಸ್ಥಳದಿಂದ ಒಕ್ಕಲೆಬ್ಬಿಸದೆಯೇ ಮನೆಗಳನ್ನು ನಿರ್ಮಿಸಿಕೊಡಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯ.ಈ ನಡುವೆ, ಸಮತಾನಗರದಿಂದ ಬಂದು ನೆಲೆಸಿರುವ 100 ಕುಟುಂಬಗಳು ಹಾಗೂ ಮಾರೇನಹಳ್ಳಿಯ 97 ಕುಟುಂಬಗಳಿಗೂ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಈಜಿಪುರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ 1,512 ಮನೆಗಳ ಬಹುಮಹಡಿ ಕಟ್ಟಡವನ್ನು ಪಾಲಿಕೆಯ ಜಂಟಿ ಸಹಭಾಗಿತ್ವದಲ್ಲಿ ನಿರ್ಮಿಸಿ ಫಲಾನುಭವಿಗಳಿಗೆ ಹಸ್ತಾಂತರಿಸುವ ಗುತ್ತಿಗೆಯನ್ನು ಮೇವರಿಕ್ ಹೋಲ್ಡಿಂಗ್ಸ್ ಅಂಡ್ ಇನ್ವೆಸ್ಟ್‌ಮೆಂಟ್ ಸಂಸ್ಥೆಗೆ ವಹಿಸಲಾಗಿದೆ.1991-92ರಲ್ಲಿ ಸುರಿದ ಭಾರಿ ಮಳೆಯಿಂದ ಈ ಜಾಗದಲ್ಲಿ ಕಟ್ಟಡಗಳು ಶಿಥಿಲಗೊಂಡು ಭಾಗಶಃ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಸಂಪೂರ್ಣ ನೆಲಸಮ ಮಾಡಿ ಖಾಸಗಿ ಸಂಸ್ಥೆಯ ಜಂಟಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲು ಪಾಲಿಕೆ ನಿರ್ಧರಿಸಿತ್ತು.ಅದರಂತೆ, ಪಾಲಿಕೆಯು ಮೇವರಿಕ್ ಹೋಲ್ಡಿಂಗ್ಸ್ ಅಂಡ್ ಇನ್ವೆಸ್ಟ್‌ಮೆಂಟ್ ಸಂಸ್ಥೆಗೆ ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ನೀಡಿದೆ. ಒಪ್ಪಂದದನ್ವಯ, ಸಂಸ್ಥೆಯು ಈಜಿಪುರದ ಸುಮಾರು 15.64 ಎಕರೆ ವಿಸ್ತೀರ್ಣದ ಜಾಗದ ಪೈಕಿ 7.82 ಎಕರೆ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸುಮಾರು 320 ಚದರ ಅಡಿ ವಿಸ್ತೀರ್ಣದ 1512 ಮನೆಗಳನ್ನು ನಿರ್ಮಿಸಿಕೊಡಬೇಕಾಗುತ್ತದೆ. ಅಲ್ಲದೆ, ಬಹುಮಹಡಿ ಕಟ್ಟಡದ ಸುತ್ತಲಿನ ಜಾಗವನ್ನು 30 ವರ್ಷಗಳ ಕಾಲ ಸಂಸ್ಥೆಯೇ ನಿರ್ವಹಣೆ ಮಾಡಬೇಕಾಗುತ್ತದೆ.ಉಳಿದ 7.82 ಎಕರೆ ಪ್ರದೇಶದಲ್ಲಿ ಸಂಸ್ಥೆಯು ಶೇ 50ರ ಅನುಪಾತದಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ ಪಾಲಿಕೆಗೆ ಹಸ್ತಾಂತರಿಸಬೇಕಾಗುತ್ತದೆ. ಈ ಎಲ್ಲ ವೆಚ್ಚವನ್ನೂ ಮೇವರಿಕ್ ಸಂಸ್ಥೆಯೇ ಭರಿಸಬೇಕಾಗುತ್ತದೆ. ಪಾಲಿಕೆಗೆ ಹಸ್ತಾಂತರಿಸುವ ಕಟ್ಟಡವನ್ನು ಕೂಡ ಸಂಸ್ಥೆಯೇ 30 ವರ್ಷಗಳ ಕಾಲ ನಿರ್ವಹಣೆ ಮಾಡಬೇಕಾಗುತ್ತದೆ. ಇದರಿಂದ ಪಾಲಿಕೆಗೆ, ವಾರ್ಷಿಕ 6.90 ಕೋಟಿ ರೂಪಾಯಿ ಆದಾಯ ಬರಲಿದೆ. ಒಪ್ಪಂದದಂತೆ ಈ ದರವು ಐದು ವರ್ಷಗಳಿಗೊಮ್ಮೆ ಹೆಚ್ಚಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry