ಸೋಮವಾರ, ಆಗಸ್ಟ್ 10, 2020
24 °C

ಉದ್ದೇಶಿತ ಪ್ರಯಾಣಿಕ ರೈಲು ಸೇವೆ: ಪ್ರಯಾಣಿಕರಿಗೆ ಅನುಕೂಲಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉದ್ದೇಶಿತ ಪ್ರಯಾಣಿಕ ರೈಲು ಸೇವೆ: ಪ್ರಯಾಣಿಕರಿಗೆ ಅನುಕೂಲಕರ

ಬೆಂಗಳೂರು: `ಉದ್ದೇಶಿತ ಪ್ರಯಾಣಿಕ ರೈಲು ಸೇವೆ (ಕಮ್ಯುಟರ್ ರೈಲ್ ಸರ್ವೀಸ್) ಮೆಟ್ರೊ ರೈಲಿಗೆ ಪ್ರತಿಸ್ಪರ್ಧಿಯಲ್ಲ. ನಗರದ ಸಂಚಾರ ದಟ್ಟಣೆಯಿಂದ ಕಂಗೆಟ್ಟಿರುವ ನಗರ ಹಾಗೂ ಸುತ್ತಮುತ್ತಲಿನ ನಗರಗಳ ಪ್ರಯಾಣಿಕರಿಗೆ ಈ ಸೇವೆ ಅನುಕೂಲಕರವಾಗಲಿದೆ~ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ `ಮೂಲಸೌಕರ್ಯ, ಸುಸ್ಥಿರ ಸಾರಿಗೆ, ನಗರ ಯೋಜನೆ (ಸಿಸ್ಟುಪ್) ಕೇಂದ್ರ~ದ ಪ್ರಾಧ್ಯಾಪಕ ಪ್ರೊ. ಸೀತಾರಾಮನ್ ಅಭಿಪ್ರಾಯಪಟ್ಟರು.ಐಟಿಇಸಿ, ಪ್ರಜಾ, ಹಸಿರು ಉಸಿರು, ಕನ್ಸರ್ನ್, ಏಡ್ ಇಂಡಿಯಾ ಆಶ್ರಯದಲ್ಲಿ  `ಪ್ರಯಾಣಿಕ ರೈಲು ಸೇವೆ-ಬೆಂಗಳೂರಿಗೆ ಇರುವ ಅವಕಾಶ ಕಾರ್ಯಸಾಧುವೇ?~ ಕುರಿತು ನಗರದ ಎಸ್‌ಸಿಎಂ ಹೌಸ್‌ನಲ್ಲಿ ಭಾನುವಾರ ನಡೆದ ಸಾರ್ವಜನಿಕ ಚರ್ಚೆ ಹಾಗೂ ಸಂವಾದದಲ್ಲಿ ಅವರು ಆಶಯ ಭಾಷಣ ಮಾಡಿದರು.`ನಗರದ ಸಂಚಾರ ವ್ಯವಸ್ಥೆಯ ಸ್ಥಿತಿ ಗಂಭೀರವಾಗುತ್ತಿದೆ. ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ನಿರ್ವಹಿಸಲು ರಸ್ತೆ ವಿಸ್ತರಣೆ, ಮೇಲು ರಸ್ತೆಗಳು, ತಡೆರಹಿತ ರಸ್ತೆಗಳನ್ನು ನಿರ್ಮಿಸಿದರೂ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಬಿಬಿಎಂಪಿ, ಬಿಡಿಎ ಈ ಸಂಬಂಧ ಯೋಜನೆಗಳನ್ನು ರೂಪಿಸಿದರೂ ಶಾಶ್ವತ ಪರಿಹಾರ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಬಸ್ ವ್ಯವಸ್ಥೆ ಎಲ್ಲ ಕಡೆಗೆ ಸಕಾಲಿಕವಾಗಿ ಇಲ್ಲ~ ಎಂದರು.`ಈಗಿನ ಸಂಚಾರ ದಟ್ಟಣೆಯಿಂದಾಗಿ ನೆಲಮಂಗಲ, ಯಲಹಂಕ, ದೊಡ್ಡಬಳ್ಳಾಪುರ, ತುಮಕೂರು ಸೇರಿದಂತೆ ಹೊರವಲಯದ ಪ್ರದೇಶಗಳ ಜನರು ಆಸ್ಪತ್ರೆ ಸೇರಿದಂತೆ ತುರ್ತು ಕಾರ್ಯಗಳಿಗೆ ಆಗಮಿಸಿದ ವೇಳೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಕಾರಣದಿಂದ ಪ್ರಯಾಣಿಕ ರೈಲು ಸೇವೆ ಜನರಿಗೆ ವರದಾನವಾಗಲಿದೆ~ ಎಂದು ಅವರು ಅಭಿಪ್ರಾಯಪಟ್ಟರು.`ಕಡಿಮೆ ಇಂಧನ, ಮಿತ ಪ್ರಮಾಣದ ಭೂಸ್ವಾಧೀನ ಹಾಗೂ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಸೇವೆ ಒದಗಿಸಲು ಈ ಮೂಲಕ ಸಾಧ್ಯವಿದೆ. ಯೋಜನೆಯ ಲಾಭದ ಬಗ್ಗೆ ರೈಲ್ವೆ ಇಲಾಖೆಗೆ ಮನವರಿಕೆ ಮಾಡಿ ರಾಜ್ಯ ಸರ್ಕಾರವು ವಿಶೇಷ ಕಾರ್ಯಪಡೆಯೊಂದನ್ನು ರಚಿಸಿ ಆದಷ್ಟು ಶೀಘ್ರದಲ್ಲಿ ಈ ಸೇವೆಯ ಅನುಷ್ಠಾನಕ್ಕೆ ಒತ್ತು ನೀಡಬೇಕು~ ಎಂದರು.`ಪ್ರಜಾ ರಾಗ್~ ಸಂಘಟನೆಯ ಸಂಜೀವ ದ್ಯಾಮನ್ನವರ್ ಮಾತನಾಡಿ, `ಪ್ರಯಾಣಿಕ ರೈಲು ಸೇವೆಗೆ ಭೂಸ್ವಾಧೀನ ದೊಡ್ಡ ಸಮಸ್ಯೆಯಾಗುವುದಿಲ್ಲ. ಈಗಿರುವ ರೈಲಿನ ಮಾರ್ಗಗಳನ್ನೇ ಬಳಸಿಕೊಂಡು ಕನಿಷ್ಠ ಪ್ರಮಾಣದಲ್ಲಿ ಭೂಸ್ವಾಧೀನ ಮಾಡಿಕೊಂಡು ಯೋಜನೆ ಅನುಷ್ಠಾನ ಮಾಡಲು ಸಾಧ್ಯವಿದೆ.ಈ ರೈಲುಗಳು 24 ಗಂಟೆಗಳ ಕಾಲವೂ ಸಂಚರಿಸಲಿದ್ದು, ಪ್ರತಿ 10 ನಿಮಿಷಕ್ಕೊಂದು ರೈಲು ಇರಲಿದೆ. ಈ ರೈಲುಗಳು ಗಂಟೆಗೆ ಅಂದಾಜು 70 ಕಿ.ಮೀ. ವೇಗದಲ್ಲಿ ಸಂಚರಿಸಲಿವೆ. ಈ ರೈಲುಗಳು ವಿಳಂಬವಾಗದಂತೆ ನೋಡಿಕೊಳ್ಳಬೇಕು. ಆಗ ಸೇವೆಯ ಮೇಲೆ ಜನರಿಗೆ ವಿಶ್ವಾಸಾರ್ಹತೆ ಹೆಚ್ಚಾಗುತ್ತದೆ~ ಎಂದರು.`ನಮ್ಮ ಮೆಟ್ರೊದ ಒಂದನೇ ಮತ್ತು ಎರಡನೇ ಹಂತದ ಯೋಜನೆಗಳಿಂದ ಒಟ್ಟು 115 ಕಿ.ಮೀ. ಉದ್ದದ ಮಾರ್ಗ ನಿರ್ಮಾಣಕ್ಕೆ 38,000 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದ್ದು, 405 ಕಿ.ಮೀ. ಉದ್ದದ ಪ್ರಯಾಣಿಕ ರೈಲು ಸಂಪರ್ಕ ಜಾಲಕ್ಕೆ 8,000 ಕೋಟಿ ರೂಪಾಯಿ ಹೂಡಿಕೆ ಸಾಕಾಗುತ್ತದೆ.ಈ ಸೇವೆ ಅನುಷ್ಠಾನಗೊಂಡರೆ ಮೆಟ್ರೊ ರೈಲು ಬಳಸುವವರ ಸಂಖ್ಯೆಯೂ ಜಾಸ್ತಿಯಾಗಲಿದೆ. ಈ ರೈಲು ಮಾರ್ಗ ಕಾಲೇಜುಗಳು, ಆಸ್ಪತ್ರೆಗಳು ಹಾಗೂ ಉದ್ಯಮಗಳು ಅಧಿಕ ಸಂಖ್ಯೆಯಲ್ಲಿ ಇರುವಲ್ಲಿಯೇ ಸಾಗಲಿವೆ. ಇದೊಂದು ಜನಸ್ನೇಹಿ ರೈಲು~ ಎಂದು ಅವರು ಅಭಿಪ್ರಾಯಪಟ್ಟರು.`ಪ್ರಜಾ ರಾಗ್~ ಸಂಘಟನೆಯ ಪ್ರಣವ್, ಹಸಿರು ಉಸಿರು ಸಂಘಟನೆಯ ವಿನಯ್, ಶಹೀನ್, ಐಟಿಇಸಿ ಸಂಘಟನೆಯ ಸುರೇಶ್ ಕುಡೂರು ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.