ಶನಿವಾರ, ಮೇ 8, 2021
26 °C

ಉದ್ದೇಶಿತ ಮುಷ್ಕರ ಕೈಬಿಟ್ಟ ಕಿಂಗ್‌ಫಿಷರ್ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಬುಧವಾರದಿಂದ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ಕೈಬಿಡಲು ಕಿಂಗ್‌ಫಿಷರ್ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ನಿರ್ಧರಿಸಿದ್ದಾರೆ.

ಕಂಪೆನಿಯ ಪ್ರವರ್ತಕ ವಿಜಯ್ ಮಲ್ಯ ನೀಡಿದ ಲಿಖಿತ ಭರವಸೆ ಮೇರೆಗೆ ಬುಧವಾರದಿಂದ ಕೆಲಸಕ್ಕೆ ಹಾಜರಾಗಲು ಸಿಬ್ಬಂದಿ ಒಪ್ಪಿದ್ದಾರೆ.ಮಲ್ಯ ಅವರು ಕಂಪೆನಿಯ ಪೈಲಟ್‌ಗಳು, ಎಂಜಿನಿಯರ್‌ಗಳು ಸೇರಿದಂತೆ ವಿವಿಧ ವರ್ಗದ ಸಿಬ್ಬಂದಿಯೊಂದಿಗೆ ಸೋಮವಾರ ತಡರಾತ್ರಿ ಮಾತುಕತೆ ನಡೆಸಿ, ಏಪ್ರಿಲ್ 10ರ ವೇಳೆಗೆ ಹಂತಹಂತವಾಗಿ ಬಾಕಿ ವೇತನ ಪಾವತಿಸುವುದಾಗಿ ಮಾತು ಕೊಟ್ಟ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ತೆರೆಬಿದ್ದಿದೆ. ಈ ಮುನ್ನ ನೌಕರರು ತಮಗೆ ನೀಡಬೇಕಿರುವ ಬಾಕಿ ವೇತನದಲ್ಲಿ ಸ್ವಲ್ಪ ಭಾಗವನ್ನಾದರೂ ಮಂಗಳವಾರ ರಾತ್ರಿ 8ರೊಳಗೆ ನೀಡದಿದ್ದರೆ ಮುಷ್ಕರ ನಡೆಸುವುದಾಗಿ ಪಟ್ಟು ಹಿಡಿದಿದ್ದರು.ಅಲ್ಲದೇ, ಪೈಲಟ್‌ಗಳು ಸೇರಿದಂತೆ ಕೆಲವು ಸಿಬ್ಬಂದಿ ಬಾಕಿ ವೇತನಕ್ಕಾಗಿ ಒತ್ತಾಯಿಸಿ ಸೋಮವಾರ ಕೆಲಸಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ 10 ವಿಮಾನ ಸಂಚಾರ ದಿಢೀರ್ ರದ್ದುಗೊಂಡಿತ್ತು. ಆದರೆ, ಕಂಪೆನಿಯ ಸೇವಾ ಲೋಪ ಇನ್ನಷ್ಟು ಕಳಪೆಯಾದರೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಕಂಪೆನಿಯ ವಿಮಾನ ಹಾರಾಟ ಪರವಾನಗಿಯನ್ನು ರದ್ದುಪಡಿಸುವ ಅಪಾಯವಿದೆ ಎಂದು ಮಲ್ಯ ಮಾತುಕತೆ ವೇಳೆ ಸಿಬ್ಬಂದಿಗೆ ಮನವರಿಕೆ ಮಾಡಿಕೊಟ್ಟರು.ಭದ್ರತಾ ಸಿಬ್ಬಂದಿ ಸೇರಿದಂತೆ ಎಲ್ಲ ಜೂನಿಯರ್ ಸಿಬ್ಬಂದಿಯ ಬಾಕಿ ವೇತನವನ್ನು ಬುಧವಾರದೊಳಗೆ ಹಾಗೂ ಪೈಲಟ್- ಎಂಜಿನಿಯರುಗಳ ಬಾಕಿಯನ್ನು ಏಪ್ರಿಲ್ 9 ಮತ್ತು ಏ.10ರಂದು ಪಾವತಿಸುವುದಾಗಿ ಮಲ್ಯ ತಿಳಿಸಿದರು.ಎಲ್ಲ ಪ್ರಮುಖ ವಿಮಾನ ನಿಲ್ದಾಣಗಳಿಗೆ ವಾರಕ್ಕೆ ಒಂದು ದಿನ ಭೇಟಿ ನೀಡಿ ಸಂಸ್ಥೆಯ ಸಿಬ್ಬಂದಿಯ ಅಹವಾಲುಗಳನ್ನು ಆಲಿಸುವುದಾಗಿಯೂ ಮಲ್ಯ ಮಾತುಕತೆ ವೇಳೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.