ಉದ್ದೇಶಿತ ವಿಷ್ಣು ಸ್ಮಾರಕ ಸ್ಥಳಾಂತರಕ್ಕೆ ಚಿಂತನೆ

7
ಸರ್ಕಾರದ ಉದಾಸೀನ: ಅಭಿಮಾನಿಗಳ ಪ್ರತಿಭಟನೆ

ಉದ್ದೇಶಿತ ವಿಷ್ಣು ಸ್ಮಾರಕ ಸ್ಥಳಾಂತರಕ್ಕೆ ಚಿಂತನೆ

Published:
Updated:

ಬೆಂಗಳೂರು: ಅಭಿಮಾನ್ ಸ್ಟುಡಿಯೊ ಆವರಣದಲ್ಲಿ ನಟ ದಿ. ವಿಷ್ಣುವರ್ಧನ್ ಅವರ ಉದ್ದೇಶಿತ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಬೇಸತ್ತು ಅದನ್ನು ಮೈಸೂರಿಗೆ ಸ್ಥಳಾಂತರಿಸಲು ನಟಿ ಭಾರತಿ ವಿಷ್ಣುವರ್ಧನ್ ಚಿಂತಿಸಿದ್ದಾರೆ.ಶನಿವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಭಾರತಿ ಅವರು, `ವಿಷ್ಣು ನಿಧನರಾಗಿ ಮೂರು ವರ್ಷಗಳು ಕಳೆದಿವೆ. ಅವರ ಸ್ಮಾರಕ ನಿರ್ಮಾಣ ಕಾಮಗಾರಿ ಇನ್ನೂ ಆರಂಭವಾಗಿಲ್ಲ.  ಹಾಗಾಗಿ ಕಾಯುವುದರಲ್ಲಿ ಅರ್ಥವಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿಷ್ಣು ಪ್ರತಿಷ್ಠಾನ ಮತ್ತು ಸ್ಮಾರಕ ನಿರ್ಮಾಣಕ್ಕೆ ಐದು ಎಕರೆ ಜಮೀನಿನ ಅಗತ್ಯವಿದೆ. ಅಭಿಮಾನ್ ಸ್ಟುಡಿಯೊ ಒಡೆತನದ ವಿವಾದ ನ್ಯಾಯಾಲಯದಲ್ಲಿದೆ ಎಂದು ಹೇಳಿದರು.ಸೆಪ್ಟೆಂಬರ್ 18ರೊಳಗೆ ಸರ್ಕಾರ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಸ್ಮಾರಕ ನಿರ್ಮಾಣಕ್ಕೆ ಬೆಂಗಳೂರಿನ ಬೇರೆ ಕಡೆ ಸ್ಥಳ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದ್ದು, ಸರ್ಕಾರದ ತೀರ್ಮಾನ ಆಧರಿಸಿ ತಾವು ಮುಂದಿನ ಕ್ರಮ ಕೈಗೊಳ್ಳುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮೈಸೂರಿಗೂ  ವಿಷ್ಣುವರ್ಧನ್‌ಗೂ ವಿಶೇಷ ನಂಟಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿಯೇ ಸ್ಮಾರಕ ನಿರ್ಮಿಸುವುದು ಸೂಕ್ತ  ಎಂದು ಅಭಿಪ್ರಾಯಪಟ್ಟರು.  ಸುದ್ದಿಗೋಷ್ಠಿ ಮುಕ್ತಾಯವಾಗುತ್ತಿದ್ದಂತೆ ಭಾರತಿ ಅವರಿಗೆ ಮುತ್ತಿಗೆ ಹಾಕಿದ ವಿಷ್ಣು ಅಭಿಮಾನಿಗಳು, `ಯಾವುದೇ ಕಾರಣಕ್ಕೂ ಉದ್ದೇಶಿತ ಸ್ಮಾರಕವನ್ನು ಬೇರೆಡೆಗೆ ಸ್ಥಳಾಂತರಿಸಬಾರದು' ಎಂದು ಆಗ್ರಹಿಸಿದರು. ಈ ನಿರ್ಧಾರವನ್ನು ಕೈಬಿಡುವಂತೆ ಒತ್ತಾಯಿಸಿ ನಿವಾಸದ ಎದುರು ಧರಣಿ ನಡೆಸಿದರು.ಭೂಮಿ ಸಮಸ್ಯೆ: ಸಚಿವ ಅಂಬರೀಷ್

ಅಭಿಮಾನ್ ಸ್ಟುಡಿಯೋ ಮಾಲೀಕರಾಗಿದ್ದ ಚಿತ್ರನಟ ಬಾಲಕೃಷ್ಣ ಅವರ ಪುತ್ರಿಯು ವಿಷ್ಣುವರ್ಧನ್ ಸ್ಮಾರಕಕ್ಕೆ ಜಮೀನು ಬಿಟ್ಟುಕೊಡಲು ನಿರಾಕರಿಸುತ್ತಿರುವುದರಿಂದ ಸ್ಮಾರಕ ನಿರ್ಮಾಣಕ್ಕೆ ಸಮಸ್ಯೆ ಎದುರಾಗಿದೆ ಎಂದು ವಸತಿ ಸಚಿವ ಅಂಬರೀಷ್ ಹೇಳಿದರು. `ಅಭಿಮಾನ್ ಸ್ಟುಡಿಯೋದಲ್ಲಿ ಎರಡು ಎಕರೆ ಜಮೀನಿನಲ್ಲಿ ಸ್ಮಾರಕ ನಿರ್ಮಿಸುವ ಯೋಜನೆ ಇದೆ. ಆ ಜಮೀನಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರ ಸಿದ್ಧವಿದೆ. ಆದರೆ ಇದಕ್ಕೆ ಬಾಲಕೃಷ್ಣ ಪುತ್ರಿ ಒಪ್ಪುತ್ತಿಲ್ಲ. ಈ ಸಮಸ್ಯೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸುತ್ತೇನೆ' ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry