ಉದ್ಯಮದ ಹಿತವೂ ಗಮನದಲ್ಲಿಇರಲಿ

7

ಉದ್ಯಮದ ಹಿತವೂ ಗಮನದಲ್ಲಿಇರಲಿ

Published:
Updated:
ಉದ್ಯಮದ ಹಿತವೂ ಗಮನದಲ್ಲಿಇರಲಿ

ದೇಶದಲ್ಲಿ ಸದ್ಯಕ್ಕೆ ಜಾರಿಯಲ್ಲಿ ಇರುವ ಕಾರ್ಮಿಕ ಕಾಯ್ದೆಗಳು ಮತ್ತು ಅವುಗಳ ಸುಧಾರಣೆ ವಿಷಯ ತುಂಬ ಸಂಕೀರ್ಣವಾಗಿದ್ದು ಈ ಸಂಗತಿಯನ್ನು ತುಂಬ ಮುತುವರ್ಜಿಯಿಂದ ನಿಭಾಯಿಸಬೇಕಾದ ಅಗತ್ಯ ಇದೆ.



ಕೈಗಾರಿಕಾ ಬಾಂಧವ್ಯ ಮತ್ತು ಪ್ರಗತಿಯನ್ನು ಜತೆಯಲ್ಲಿಯೇ ಕಾಯ್ದುಕೊಂಡು ಹೋಗಲು ಮಾಲೀಕರು ಮತ್ತು ಕಾರ್ಮಿಕರು ಪರಸ್ಪರ ಹೊಂದಾಣಿಕೆಯಿಂದ ಇರಬೇಕಾಗುತ್ತದೆ.



ಕೈಗಾರಿಕೀಕರಣಗೊಂಡ ದೇಶಗಳ ಸಾಲಿನಲ್ಲಿ ಭಾರತ ತನ್ನದೇ ಆದ ಛಾಪು ಬೀರಬೇಕಾದರೆ ಮಾಲೀಕರ ಮತ್ತು ಕಾರ್ಮಿಕರ ಹಿತಾಸಕ್ತಿ ಒಂದೇ ಬಗೆಯಲ್ಲಿ ರಕ್ಷಣೆಯಾಗುವಂತಿರಬೇಕು.



ಸದ್ಯದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಉತ್ಪಾದನೆ ಹೆಚ್ಚಿಸ ಬೇಕಿದೆ. ಇಲ್ಲಿ ಕಾರ್ಮಿಕರ ಕಾಯ್ದೆ ಮತ್ತು ಸುಧಾರಣೆಗಳು ಮಹತ್ವದ ಪಾತ್ರ ನಿರ್ವಹಿಸಲಿವೆ. ಈ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳೂ ಇವೆ.



ದೇಶದಲ್ಲಿ ಸದ್ಯಕ್ಕೆ ಕೇಂದ್ರ ಸರ್ಕಾರದ 47 ಮತ್ತು  ರಾಜ್ಯ ಸರ್ಕಾರಗಳ 157 ಕಾಯಿದೆಗಳು ಜಾರಿಯಲ್ಲಿ ಇದ್ದು, ಇವು `ಕಾರ್ಮಿಕರ ಮಾರುಕಟ್ಟೆ~ಯಲ್ಲಿ ನೇರ ಪರಿಣಾಮ ಬೀರುತ್ತಿವೆ.

 

ಬಹುತೇಕ ನಿಯಂತ್ರಣ ಕ್ರಮಗಳು ಅಸಮಂಜಸವಾಗಿದ್ದು, ಅಗತ್ಯಕ್ಕಿಂತ ಅತಿ ಹೆಚ್ಚಿನ ಪ್ರಮಾಣದಲ್ಲಿ ಇವೆ ಎಂದೂ ಭಾಸವಾಗುತ್ತದೆ. ವ್ಯಾಪಕ ಪ್ರಮಾಣದ ಕಾಯಿದೆ- ಕಾನೂನುಗಳಿಂದಾಗಿ ಕೈಗಾರಿಕಾ ಸಂಸ್ಥೆಗಳು ಮತ್ತು ಕಾರ್ಮಿಕರಲ್ಲಿ  ತಮ್ಮ ಹಕ್ಕುಗಳು ಮತ್ತು ಹೊಣೆಗಾರಿಕೆ ಬಗ್ಗೆಯೇ ಸಾಕಷ್ಟು ಗೊಂದಲಗಳು ಇವೆ.



ತ್ವರಿತವಾಗಿ ಬದಲಾಗುತ್ತಿರುವ ಸದ್ಯದ ದಿನಗಳಲ್ಲಿ 60 ವರ್ಷಗಳಷ್ಟು ಹಳೆಯ ಕಾಯಿದೆಗಳೇ ಜಾರಿಯಲ್ಲಿ ಇರುವುದೂ ದುರ್ದೈವದ ಸಂಗತಿ. ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಕಾರ್ಮಿಕರ ಕಾಯಿದೆಗಳ ಬಗ್ಗೆ ಉದಾಸೀನ ಧೋರಣೆ ತಳೆದಿವೆ.



ದೋಷಪೂರಿತ ಕಾಯ್ದೆಗಳು ಉದ್ಯೋಗದಾತರಿಗೆ ಹಲವಾರು ಸಮಸ್ಯೆಗಳನ್ನು ತಂದೊಡ್ಡಿವೆ. ಆದರೆ, ಅದರ ಬಿಸಿಯನ್ನು ಕಾರ್ಮಿಕರೇ ಅನುಭವಿಸುವಂತಾಗಿದೆ. ಕಾರ್ಮಿಕರೇ ಹೆಚ್ಚು ಬವಣೆಗೆ ಗುರಿಯಾಗುತ್ತಿದ್ದಾರೆ.



ಅಂತರರಾಷ್ಟ್ರೀಯ ಕಾರ್ಮಿಕ ಕಾಯ್ದೆಗಳು, ಕೈಗಾರಿಕಾ ಕಾರ್ಮಿಕರನ್ನು ನಿರ್ದಾಕ್ಷಿಣ್ಯವಾಗಿ ಹೊರದಬ್ಬುವ ಸ್ವಾತಂತ್ರ್ಯವನ್ನು ಉದ್ದಿಮೆಗಳಿಗೆ ಕೊಟ್ಟಿದ್ದರೆ, ದೈಹಿಕವಾಗಿ ಶ್ರಮಪಡದ (ಬಿಳಿ ಕಾಲರಿನ) ಉದ್ಯೋಗಿಗಳ ಹಕ್ಕುಗಳನ್ನು ರಕ್ಷಿಸಲು ಅಗತ್ಯವಾದ ನಿಯಮಗಳನ್ನೂ ಒದಗಿಸಿವೆ.



ನಮ್ಮಲ್ಲಿನ ಸೇವಾ ವಲಯ ಅಥವಾ ಸರಕುಗಳ ತಯಾರಿಕಾ ಚಟುವಟಿಕೆ ಇಲ್ಲದ ಕೈಗಾರಿಕೆಗಳಲ್ಲಿನ ಉದ್ಯೋಗಿಗಳು, ತಮ್ಮನ್ನು ತಾತ್ಕಾಲಿಕವಾಗಿ ವಜಾ ಮಾಡುವುದರ ವಿರುದ್ಧ ಸಾಕಷ್ಟು ರಕ್ಷಣೆ ಪಡೆದಿಲ್ಲ.



ಇಂತಹ ಕೈಗಾರಿಕೆಗಳನ್ನು `ಕೈಗಾರಿಕಾ ವಿವಾದ ಕಾಯ್ದೆ~ವ್ಯಾಪ್ತಿಗೆ ತರದಿರುವುದೇ ಇದಕ್ಕೆ ಮುಖ್ಯ ಕಾರಣ. ಸೂಕ್ತವಾದ ಕಾನೂನು ಮಾರ್ಗದರ್ಶನ ಇಲ್ಲದಿರುವುದರಿಂದ ಹಲವಾರು ಉದ್ದಿಮೆ ಸಂಸ್ಥೆಗಳು ಕಾರ್ಮಿಕರನ್ನು ನಿರಂತರವಾಗಿ ಶೋಷಿಸುತ್ತಿವೆ.



ಕಷ್ಟಕಾಲದಲ್ಲಿ ವೆಚ್ಚಕ್ಕೆ ಕಡಿವಾಣ ಹಾಕಲು, ಅಗತ್ಯ ಇಲ್ಲದ ಕಾರ್ಮಿಕರನ್ನು ಮನೆಗೆ ಕಳಿಸುವುದು ತಕ್ಷಣದ ಮತ್ತು ಪರಿಣಾಮಕಾರಿ ಮಾರ್ಗವಾಗಿರುವುದು ನಿಜ. ಆದರೆ, ಬಹುತೇಕ ಮಾಲೀಕರು ಇಂತಹ ವಿಚಾರಗಳಲ್ಲಿ ಅಡಕವಾಗಿರುವ ಸೂಕ್ಷ್ಮತೆಯನ್ನೇ ಗ್ರಹಿಸುವುದಿಲ್ಲ.



ಉದ್ಯಮದ ಹಿತಾಸಕ್ತಿ ಕಾರಣಕ್ಕೆ ಕಾರ್ಮಿಕರನ್ನು ಸಂಸ್ಥೆಯಿಂದ ಹೊರಹಾಕುವುದು ಮಾಲೀಕರ ದೃಷ್ಟಿಕೋನದಲ್ಲಿ ನ್ಯಾಯಯುತವಾಗಿದ್ದರೂ, ಸೂಕ್ಷ್ಮತೆಯಿಂದ ವರ್ತಿಸಬೇಕು ಎನ್ನುವುದು ಹೆಚ್ಚು ಅಪೇಕ್ಷಣೀಯ.



ಕಾರ್ಮಿಕರ ವಿಷಯದಲ್ಲಿ ಸಾಮಾಜಿಕ ಸುರಕ್ಷತೆಯು ಮಹತ್ವದ ಸಂಗತಿಯಾಗಿದ್ದು, ಇದು ನಮ್ಮಲ್ಲಿನ ಅನೇಕ ಖಾಸಗಿ ಉದ್ದಿಮೆ ಸಂಸ್ಥೆಗಳಲ್ಲಿ ಕಂಡು ಬರುತ್ತಿಲ್ಲ. ಕಾರ್ಮಿಕನೊಬ್ಬ ತನ್ನ ಕುಟುಂಬದ ಕನಿಷ್ಠ ಮೂಲ ಅಗತ್ಯಗಳನ್ನು ಈಡೇರಿಸುವ, ಮಕ್ಕಳ ವಿದ್ಯಾಭ್ಯಾಸ ವೆಚ್ಚ ಭರಿಸುವಷ್ಟು ವೇತನ ನೀಡುವುದಕ್ಕೆ ಪರಮೋಚ್ಚ ಆದ್ಯತೆ ನೀಡಬೇಕು ಎನ್ನುವುದು ನ್ಯಾಯಯುತ ಬೇಡಿಕೆ. ಇಂತಹ ಕನಿಷ್ಠ ಕಾಳಜಿಯೇ ಅನೇಕ ಕಡೆ ಇರಲಾರದು.



ಕಾರ್ಮಿಕರ ಹಿತರಕ್ಷಣೆ ಮತ್ತು ತಾತ್ಕಾಲಿಕವಾಗಿ ವಜಾ ಮಾಡುವುದರ ವಿರುದ್ಧ ರಕ್ಷಣೆ ಒದಗಿಸುವ ನೆಪದಲ್ಲಿ, ಕೇಂದ್ರ ಸರ್ಕಾರವು ಉದ್ದಿಮೆ ಸಂಸ್ಥೆಗಳ ಲಾಭದ ಸಾ ುರ್ಥ್ಯಕ್ಕೆ ಕತ್ತರಿ ಹಾಕುತ್ತಿದೆ.



ನಿಯಮಗಳನ್ನು ಸಡಿಲಿಸಿ, ಸಣ್ಣ ಉದ್ದಿಮೆದಾರರಿಗೆ ಇನ್ನಷ್ಟು ಸರ್ಕಾರಿ ರಿಯಾಯ್ತಿಗಳನ್ನು ಜಾರಿಗೊಳಿಸಿದರೆ, ಉದ್ಯಮಿಗಳು ಹೆಚ್ಚು ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಂಡು ಸರಾಸರಿ ವೇತನ ನೀಡಲು ಸಾಧ್ಯವಾದೀತು.



ಕೇಂದ್ರೋದ್ಯಮಗಳಲ್ಲಿ ದುಡಿಯುವ ಕಾರ್ಮಿಕರಂತೂ ಗರಿಷ್ಠ ಮಟ್ಟದ ರಕ್ಷಣೆ ಪಡೆದಿದ್ದಾರೆ. ಕೆಲಸ ಮಾಡದಿದ್ದರೂ ಸಕಾಲಕ್ಕೆ ವೇತನ ಅವರ ಕೈಸೇರುತ್ತದೆ. ಇದೇ ಕಾರಣಕ್ಕೆ ಸರ್ಕಾರಿ ಉದ್ದಿಮೆಗಳಲ್ಲಿನ ಸೇವಾ ಗುಣಮಟ್ಟ ಅತ್ಯಂತ ಕೆಳಮಟ್ಟದಲ್ಲಿ ಇದೆ.



ಕೆಲಸ ಮಾಡದಿದ್ದರೂ, ಗುಣಮಟ್ಟಕ್ಕೆ ಗಮನ ನೀಡದಿದ್ದರೂ ಸುಲಭವಾಗಿ ಸಂಬಳ ಕೈಸೇರುವುದರಿಂದ ಕಾರ್ಮಿಕರಲ್ಲಿ ತಮ್ಮ ಕೆಲಸದ ಬಗ್ಗೆಯೇ ಉಡಾಫೆಯ ಮನೋಭಾವ ಬೇರೂರುತ್ತದೆ.



ಜಾಗತಿಕ ಸ್ಪರ್ಧೆ ಎದುರಿಸಲು ಕಾರ್ಮಿಕ ಕಾಯ್ದೆಗಳನ್ನು ಸರಳಗೊಳಿಸುವ ತುರ್ತು ಅಗತ್ಯ ಈಗ ಉದ್ಭವಿಸಿದೆ. ಅಲ್ಪಾವಧಿಯಲ್ಲಿ ಅದರ ಪರಿಣಾಮಗಳು ಪ್ರತಿಕೂಲವಾಗಿದ್ದರೂ, ದೀರ್ಘಾವಧಿಯಲ್ಲಿ ಒಟ್ಟಾರೆ ಪರಿಣಾಮ ಸಕಾರಾತ್ಮಕವಾಗಲಿದೆ.



ಅದರಿಂದ ಉತ್ಪಾದನೆ ಹೆಚ್ಚಳಗೊಳ್ಳಲಿದೆ. ಜತೆಗೆ ವಿದೇಶಿ ಬಂಡವಾಳ ಹೂಡಿಕೆ  ಪ್ರಮಾಣ ಏರಿಕೆಯಾಗಿ ಹೆಚ್ಚು ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ. ಕಾರ್ಮಿಕ ಕಾಯ್ದೆ ಹೆಚ್ಚು ವಿವೇಚನೆಯಿಂದ ಕೂಡಿರುವಂತಹ ಮಧ್ಯಮ ಮಾರ್ಗವನ್ನು ಖಾಸಗಿ ವಲಯ ಮತ್ತು ಸರ್ಕಾರ ಕಂಡುಕೊಳ್ಳಬೇಕಾಗಿದೆ.



ಬದಲಾದ ಕಾಲಕ್ಕೆ ತಕ್ಕಂತೆ ಹಳೆಯ ಕಾರ್ಮಿಕ ಕಾಯ್ದೆಗಳಲ್ಲಿ ಬದಲಾವಣೆ ತರದಿದ್ದರೆ, ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವುದಾಗಿ ನಾವು ಹೇಳಿಕೊಳ್ಳುವುದು ಬರೀ ಬಡಾಯಿ ಆಗಿಯೇ ಉಳಿದೀತು.



ಯೋಜನಾ ಆಯೋಗದ ಅಂದಾಜಿನ ಪ್ರಕಾರ, 2020-25ರ ಹೊತ್ತಿಗೆ 10 ಕೋಟಿಗಳಷ್ಟು ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗುವ ಅಗತ್ಯ ಇದೆ. ಇದರಿಂದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಸರಕುಗಳ ತಯಾರಿಕಾ ವಲಯದ ಕೊಡುಗೆಯು ಸದ್ಯದ ಶೇ 15ರಿಂದ ಶೇ 25ಕ್ಕೆ ಹೆಚ್ಚಲಿದೆ.



ಈ ಹಿನ್ನೆಲೆಯಲ್ಲಿ ಮಾಲೀಕ ಮತ್ತು ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸುತ್ತಲೇ, ಉತ್ಪಾದನಾ ಚಟುವಟಿಕೆ ಹೆಚ್ಚಿಸಲು ಪ್ರೇರಣೆ ನೀಡುವಂತಹ ಹೊಸ ಕಾರ್ಮಿಕ ಕಾನೂನಿನ ಅಗತ್ಯ ಹೆಚ್ಚಿದೆ.





 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry