ಉದ್ಯಮವಾಗುತ್ತಿರುವ ಮಾಧ್ಯಮ ಕ್ಷೇತ್ರ: ಆತಂಕ

7

ಉದ್ಯಮವಾಗುತ್ತಿರುವ ಮಾಧ್ಯಮ ಕ್ಷೇತ್ರ: ಆತಂಕ

Published:
Updated:

ತುಮಕೂರು: ಪ್ರಸ್ತುತ ಜಾಗತೀಕರಣದ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರ ವಾಣಿಜ್ಯೀಕರಣಗೊಂಡಿದೆ ಎಂದು `ಪ್ರಜಾವಾಣಿ~ ಸಹಾಯಕ ಸಂಪಾದಕ ದಿನೇಶ್ ಅಮಿನ್‌ಮಟ್ಟು ಅಭಿಪ್ರಾಯಪಟ್ಟರು.ನಗರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಶುಕ್ರವಾರ ಏರ್ಪಡಿಸಿದ್ದ 65ನೇ ರಾಷ್ಟ್ರೀಯ ಪತ್ರಕರ್ತರ ಸಮಾವೇಶದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಉತ್ಪಾದನಾ ವೆಚ್ಚಕ್ಕಿಂತ ಅತ್ಯಂತ ಕಡಿಮೆ ಬೆಲೆಗೆ ಪತ್ರಿಕೆ ಮಾರಾಟ ಮಾಡಲಾಗುತ್ತಿದೆ. ಜಾಹೀರಾತುದಾರರ ಋಣದಲ್ಲಿ ಪತ್ರಿಕೆಗಳು ಬದುಕುತ್ತಿವೆ. ಇಂತಹ ಸಂದರ್ಭದಲ್ಲಿ ಪತ್ರಕರ್ತ ಸಂವೇದನಾಶೀಲನಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಕಾರ್ಯಾಂಗ, ಶಾಸಕಾಂಗ ಕುಸಿಯುತ್ತಿವೆ. ನ್ಯಾಯಾಂಗ ಸಹ ಇದರಿಂದ ಹೊರತಾಗಿಲ್ಲ. ಸಂವೇದನಶೀಲತೆ ಮತ್ತು ಪ್ರಾಮಾಣಿಕತೆ ಸಮಾಜದಲ್ಲಿ ಇಲ್ಲದಿದ್ದಲ್ಲಿ ಪತ್ರಕರ್ತ ಮಾತ್ರ ಪ್ರಾಮಾಣಿಕವಾಗಿರಲು ಸಾಧ್ಯವಿಲ್ಲ. ಪತ್ರಕರ್ತನ ಕೆಲಸಕ್ಕೆ ಸಮಾಜದ ಪ್ರತಿಸ್ಪಂದನ ಅಗತ್ಯ. ಇಂದು ಚಳವಳಿಗಳೇ ಇಲ್ಲದ ಜಡ ಸಮಾಜವಿದೆ. ಚಳವಳಿ, ಹೋರಾಟಕ್ಕೆ ಪ್ರತಿಕ್ರಿಯೆ ಸಿಗುತ್ತಿಲ್ಲ. ಇದರಿಂದ ಪತ್ರಕರ್ತ ಸಿನಿಕನಾಗಿ ಮಾರ್ಪಡಾಗುತ್ತಿದ್ದಾನೆ ಎಂದರು.ಪತ್ರಕರ್ತನಿಗೆ ಜವಾಬ್ದಾರಿ ಮತ್ತು ಸಂವೇದನೆಶೀಲತೆ ಉಳಿಸಿಕೊಳ್ಳಲು ಹಲವು ಸವಾಲುಗಳಿವೆ. ಪತ್ರಕರ್ತ ವೃತ್ತಿ ಧಾವಂತದಲ್ಲಿ ಸಂವೇದನೆ ಕಳೆದು ಕೊಳ್ಳುತ್ತಿದ್ದಾರೆ ಎಂಬ ಆರೋಪವಿದೆ. ಸಂವೇದನಶೀಲ ಪತ್ರಕರ್ತ ಜಾತೀಯತೆಯಿಂದ ಹೊರಗುಳಿಯುತ್ತಾನೆ. ಜನಸಾಮಾನ್ಯರಿಗೆ ಕಾಣದ ಸತ್ಯ ಪತ್ರಕರ್ತನಿಗೆ ಕಾಣುತ್ತದೆ ಎಂದು ಅವರು ತಿಳಿಸಿದರು.ಪತ್ರಕರ್ತರಾದ ವಸಂತನಾಡಿಗೇರ್, ರವಿಹೆಗಡೆ ಮಾತನಾಡಿದರು. ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹಿರಿಯ ಪತ್ರಕರ್ತ ಜಯಶೀಲರಾವ್ ವಿಚಾರ ಸಂಕಿರಣ ಉದ್ಘಾಟಿಸಿದರು.ಉದ್ಘಾಟನೆ: ವಿಚಾರ ಸಂಕಿರಣಕ್ಕೂ ಮುನ್ನ ಸಮಾವೇಶ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಪತ್ರಕರ್ತರ ಸಬಲೀಕರಣಕ್ಕೆ ಅಗತ್ಯವಾದ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಹಿರಿಯ ಪತ್ರಕರ್ತರ ನಿವೃತ್ತಿ ವೇತನವನ್ನು ಮಾಸಿಕ ರೂ.3 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದರು.ಇಂದಿನ ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸುವ ಜವಬ್ದಾರಿ ಮಾಧ್ಯಮಗಳ ಮೇಲಿದೆ. ರಚನಾತ್ಮಕ ಬದಲಾವಣೆ ಮೂಲಕ ಕ್ರಾಂತಿಗೆ ಮಾಧ್ಯಮಗಳು ಮುಂದಾಗಬೇಕು ಎಂದು ಸ್ವಾತ್ರಂತ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹೇಳಿದರು.ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಐಎಫ್‌ಡಬ್ಲ್ಯುಜೆ ಉಪಾಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು. ಐಎಫ್‌ಡಬ್ಲ್ಯುಜೆ ಪ್ರಧಾನ ಕಾರ್ಯದರ್ಶಿ ಪರಮಾನಂದ ಪಾಂಡೆ, ಕೆಯುಡಬ್ಲ್ಯುಜೆ ಅಧ್ಯಕ್ಷ ಗಂಗಾಧರ ಮೊದಲಿಯಾರ್, ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಶಿವಣ್ಣ, ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಬಿ.ಸುರೇಶ್‌ಗೌಡ,ಬಿ.ಸಿ.ನಾಗೇಶ್, ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ, ನಗರಸಭೆ ಅಧ್ಯಕ್ಷ ದೇವಿಕಾ, ಜಿಲ್ಲಾಧಿಕಾರಿ ಆರ್.ಕೆ.ರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ್ ಮುಂತಾದವರು ಭಾಗವಹಿಸಿದ್ದರು. ಎಪಿಎಂಸಿ ನಿರ್ದೇಶಕ ಡಾ.ಸಿ.ಸೋಮಶೇಖರ್ ಪ್ರಾಸ್ತಾವಿಕ ಮಾತನಾಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry