ಗುರುವಾರ , ಮೇ 19, 2022
20 °C

ಉದ್ಯಮಿಖಾನ್ ವಿದೇಶಿ ಆಸ್ತಿ ಪತ್ತೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ ಮುಂಬೈ (ಪಿಟಿಐ): ಕಳೆದ 10 ವರ್ಷಗಳಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ತೆರಿಗೆ ವಂಚಿಸಿರುವ ಪುಣೆ ಮೂಲದ ಉದ್ಯಮಿ ಹಸನ್ ಅಲಿ ಖಾನ್ ಅವರ ವಿದೇಶಿ ಆಸ್ತಿಪಾಸ್ತಿಯ ಪತ್ತೆ ಯತ್ನಕ್ಕೆ ತೆರಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ತೀವ್ರ ವಿವಾದಕ್ಕೆ ಗುರಿಯಾಗಿರುವ ಕಪ್ಪುಹಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಸರ್ಕಾರ ಇಂತಹ ಕ್ರಮ ಕೈಗೊಂಡಿದೆ.ಬ್ರಿಟನ್, ಸ್ವಿಟ್ಜರ್‌ಲೆಂಡ್ ಸೇರಿದಂತೆ ಖಾನ್ ಆಸ್ತಿ ಹೊಂದಿರಬಹುದಾದ ಶಂಕೆ ಇರುವ ಕೆಲ ದೇಶಗಳಿಗೆ ‘ದುಪ್ಪಟ್ಟು ತೆರಿಗೆ ತಪ್ಪಿಸುವ ಒಪ್ಪಂದ’ದ (ಡಿಟಿಎಎ) ಮೂಲಕ ಹೊಸ ಮನವಿ ಸಲ್ಲಿಸಲು ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಗಳು ಯೋಜಿಸಿವೆ.ಸ್ವಿಸ್ ಸರ್ಕಾರದ ಜೊತೆಗಿನ ಡಿಟಿಎಎ ಪರಿಷ್ಕೃತ ಒಪ್ಪಂದದಿಂದ ಖಾನ್ ಬಗ್ಗೆ ಹೊಸ ಮಾಹಿತಿ ಲಭ್ಯವಾಗಬಹುದು ಎಂಬ ಭಾರಿ ವಿಶ್ವಾಸವನ್ನು ಹಣಕಾಸು ಸಚಿವಾಲಯ ಹೊಂದಿದೆ. ಅವರಿಗೆ ದಂಡ ವಿಧಿಸುವಂತಹ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಪೂರಕವಾಗಿ ತೆರಿಗೆ ಅಧಿಕಾರಿಗಳು ವಿದೇಶಿ ಮೂಲಗಳಿಂದ ಲಭ್ಯವಾದ ಮಾಹಿತಿ ಮೇರೆಗೆ ಸಾಕ್ಷ್ಯ ಸಿದ್ಧಪಡಿಸುತ್ತಿರುವುದಾಗಿ ಮೂಲಗಳು ತಿಳಿಸಿವೆ.ಕಪ್ಪುಹಣ ಜಾಲದ ಪ್ರಮುಖ ಆರೋಪಿಯಾಗಿರುವ ಖಾನ್ ಅವರನ್ನು ಫೆಬ್ರುವರಿ 18ರಂದು ಮುಂಬೈನಲ್ಲಿ ಆದಾಯ ತೆರಿಗೆ ಇಲಾಖೆ ವಿಚಾರಣೆಗೆ ಒಳಪಡಿಸಿತ್ತು. ಅಲ್ಲದೆ ದೇಶದಲ್ಲಿ ಅವರು ಹೂಡಿರಬಹುದಾದ ಬಂಡವಾಳಕ್ಕೆ ಸಂಬಂಧಿಸಿದ ಮಾಹಿತಿಗೆ ಜಾರಿ ನಿರ್ದೇಶನಾಲಯ ಕೋರಿತ್ತು.ಪುಣೆಯಲ್ಲಿರುವ ಕೋರೆಗಾಂವ್ ಪಾರ್ಕ್ ಪ್ರದೇಶದಲ್ಲಿರುವ ಖಾನ್ ಅವರ ನಿವಾಸದ ಮೇಲೆ 2007ರ ಜನವರಿಯಲ್ಲಿ ಆದಾಯ ತೆರಿಗೆ ದಾಳಿ ನಡೆದಿತ್ತು. ಆ ಸಂದರ್ಭದಲ್ಲಿ, ಜೂರಿಚ್ ಬ್ಯಾಂಕಿನಲ್ಲಿ ಅವರು 8.04 ಶತಕೋಟಿ ಡಾಲರ್ ಹಣ ಹೊಂದಿದ್ದುದು ತಿಳಿದುಬಂದಿತ್ತು.ಖಾನ್ ದೇಶ ತ್ಯಜಿಸದಂತೆ ನೋಡಿಕೊಳ್ಳುವ ಭರವಸೆ ನೀಡಲು ಸುಪ್ರೀಂಕೋರ್ಟ್ ಇದೇ 11ರಂದು ಸರ್ಕಾರವನ್ನು ಕೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.