ಉದ್ಯಮಿಗೆ ಕೊಲೆ ಬೆದರಿಕೆ

7

ಉದ್ಯಮಿಗೆ ಕೊಲೆ ಬೆದರಿಕೆ

Published:
Updated:

ಬೆಂಗಳೂರು: ಜಮೀನು ವಿವಾದದ ಸಂಬಂಧ ಸೆಕ್ಯುರಿಟಿ ಗಾರ್ಡ್‌ಗಳು ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ರಿಯಲ್ ಎಸ್ಟೇಟ್ ಉದ್ಯಮಿಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ವರ್ತೂರು ಸಮೀಪದ ಪಣತ್ತೂರು ದಿಣ್ಣೆಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.ಈ ಸಂಬಂಧ ಎಸ್‌ಜಿಆರ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀನಿವಾಸ್‌ರೆಡ್ಡಿ ಅವರು ದೂರು ಕೊಟ್ಟಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಎಸ್‌ಆರ್‌ಎಸ್ ಸೆಕ್ಯುರಿಟಿ ಸರ್ವಿಸ್ ಏಜೆನ್ಸಿಯ ಸೆಕ್ಯುರಿಟಿ ಗಾರ್ಡ್‌ಗಳಾದ ಜಾರ್ಖಂಡ್ ಮೂಲದ ನವನೀತ್ (25) ಮತ್ತು ಪಣತ್ತೂರು    ದಿಣ್ಣೆಯ ಚಂದ್ರಪ್ಪ (40) ಎಂಬುವರನ್ನು ಬಂಧಿಸಲಾಗಿದೆ ಎಂದು ವರ್ತೂರು ಪೊಲೀಸರು ಹೇಳಿದ್ದಾರೆ.ಪಣತ್ತೂರು ದಿಣ್ಣೆಯಲ್ಲಿ ಎಸ್‌ಜಿಆರ್ ಸಮೂಹ ಸಂಸ್ಥೆಗೆ ಸೇರಿದ ಜಮೀನಿದೆ. ಅದರ ಪಕ್ಕದಲ್ಲೇ ಮಂತ್ರಿ ಡೆವಲಪರ್ಸ್‌ ಸಂಸ್ಥೆಯ ಜಮೀನು ಇದ್ದು, ನವನೀತ್ ಮತ್ತು ಚಂದ್ರಪ್ಪ ಆ ಜಮೀನಿಗೆ ಕಾವಲುಗಾರರಾಗಿದ್ದರು. ಆ ಎರಡು ಜಮೀನುಗಳ ನಡುವಿನ ರಸ್ತೆಯ ವಿಷಯವಾಗಿ ವಿವಾದ ಸೃಷ್ಟಿಯಾಗಿತ್ತು.ಶ್ರೀನಿವಾಸ್‌ರೆಡ್ಡಿ ಅವರು ವ್ಯವಸ್ಥಾಪಕ ರಮೇಶ್ ಜತೆ ಬೆಳಿಗ್ಗೆ ಆ ರಸ್ತೆಯ ಮೂಲಕ ಜಮೀನಿಗೆ ಹೋಗುವ ಯತ್ನದಲ್ಲಿದ್ದಾಗ ನವನೀತ್ ಮತ್ತು ಚಂದ್ರಪ್ಪ, ಅವರ ಕಾರನ್ನು ತಡೆದಿದ್ದಾರೆ. ಈ ವೇಳೆ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆದು, ನವನೀತ್ ಬಂದೂಕಿನಿಂದ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಬಂಧಿತರ ವಿರುದ್ಧ ಕೊಲೆ ಯತ್ನ ಆರೋಪ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry