ಉದ್ಯಮಿ ಕೊಲೆ: ಪತ್ನಿ ಸೇರಿ 6 ಮಂದಿ ಸೆರೆ

7

ಉದ್ಯಮಿ ಕೊಲೆ: ಪತ್ನಿ ಸೇರಿ 6 ಮಂದಿ ಸೆರೆ

Published:
Updated:

ಬೆಂಗಳೂರು: ಶ್ರೀನಗರ ಬಸ್ ನಿಲ್ದಾಣದ ಬಳಿ ನಡೆದಿದ್ದ ರಿಯಲ್ ಎಸ್ಟೇಟ್‌ಉದ್ಯ ಮಿ ಕುಮಾರ್ (36) ಕೊಲೆ ಪ್ರಕರಣವನ್ನು ಭೇದಿಸಿರುವ ಚಾಮರಾಜಪೇಟೆ ಉಪ ವಿಭಾಗದ ಪೊಲೀಸರು ಮೃತರ ಪತ್ನಿ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ.

ಕುಮಾರ್ ಅವರ ಪತ್ನಿ ಮಂಗಳಾ (25), ಜರಗನಹಳ್ಳಿಯ ಕಿರಣ್‌ಕುಮಾರ್ (21), ಅನಿಲ್‌ಕುಮಾರ್ (21), ದೀಪು (27), ನಾಗೇಶ (22) ಮತ್ತು ಬನಶಂಕರಿಯ ಕೇಶವಕುಮಾರ್ (27) ಬಂಧಿತರು.ಸಂಬಂಧಿಕರಾದ ಮಂಗಳಾ ಮತ್ತು ಕಿರಣ್‌ಕುಮಾರ್ ನಡುವೆ ಅನೈತಿಕ ಸಂಬಂಧವಿತ್ತು. ಈ ವಿಷಯ ತಿಳಿದು ಕೋಪಗೊಂಡಿದ್ದ ಕುಮಾರ್, ಪತ್ನಿಯೊಂದಿಗೆ ಜಗಳವಾಡಿದ್ದರು.  ಇದರಿಂದ ಅಸಮಾಧಾನಗೊಂಡಿದ್ದ ಮಂಗಳಾ, ಕಿರಣ್‌ಕುಮಾರ್ ಜತೆ ಸೇರಿಕೊಂಡು ಪತಿಯ ಹತ್ಯೆಗೆ ಸಂಚು ರೂಪಿಸಿದ್ದರು. ಪೂರ್ವಯೋಜಿತ ಸಂಚಿನಂತೆ ಅವರು, ಇತರೆ ಆರೋಪಿಗಳಿಗೆ ಮೂರು ಲಕ್ಷ ರೂಪಾಯಿ ಸುಪಾರಿ ಕೊಟ್ಟು ಈ ಕೊಲೆ ಮಾಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕುಮಾರ್ ಅವರು ಅ.19ರಂದು ಬೆಳಿಗ್ಗೆ ಮಕ್ಕಳನ್ನು ಸೀತಾ ಸರ್ಕಲ್ ಬಳಿಯ ಶಾಲೆಗೆ ಬಿಟ್ಟು ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಆರೋಪಿಗಳು ಅವರನ್ನು ಕಾರಿನಲ್ಲಿ ಹಿಂಬಾಲಿಸಿ ಬಂದು ಶ್ರೀನಗರ ಹತ್ತನೇ ಮುಖ್ಯರಸ್ತೆಯಲ್ಲಿ ಅಡ್ಡಗಟ್ಟಿದ್ದರು. ನಂತರ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಕಿರಣ್‌ಕುಮಾರ್, ವಿವೇಕಾನಂದ ತಾಂತ್ರಿಕ ಕಾಲೇಜಿನಲ್ಲಿ ಬಿ.ಇ ಓದುತ್ತಿದ್ದ. ಆತನ ಬಾಲ್ಯ ಸ್ನೇಹಿತ ಅನಿಲ್‌ಕುಮಾರ್ ಆಟೊ ಚಾಲಕ ಕೇಶವಕುಮಾರ್ ಗಣಪತಿಪುರದಲ್ಲಿ ಪ್ರಿಂಟಿಂಗ್ ಪ್ರೆಸ್ ಇಟ್ಟುಕೊಂಡಿದ್ದ. ದೀಪು ಕಾರು ಚಾಲಕನಾಗಿ ಮತ್ತು ನಾಗೇಶ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಕೊಲೆ ಮಾಡಿದ ನಂತರ ಆಂಧ್ರಪ್ರದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಸುಳಿವು ನೀಡಿದ ಮೊಬೈಲ್

`ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ಕುಮಾರ್ ಅವರು ಅಪಘಾತದಲ್ಲಿ ಸಾವನ್ನಪ್ಪಿರಬಹುದೆಂದು ಮೇಲ್ನೋಟಕ್ಕೆ ತಿಳಿದುಬಂದಿತ್ತು. ಆದರೆ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಅವರ ದೇಹದ ಮೇಲೆ ಮಚ್ಚು ಲಾಂಗ್‌ಗಳಿಂದ ಹಲ್ಲೆ ನಡೆಸಿರುವ ಗುರುತುಗಳಿವೆ ಎಂದು ವರದಿ ನೀಡಿದ್ದರು. ಈ ವರದಿ ಆಧರಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಯಿತು' ಎಂದು ಹಿರಿಯ ಅಧಿಕಾರಿಗಳು `ಪ್ರಜಾವಾಣಿ'ಗೆ ತಿಳಿಸಿದರು.`ಭೂ ವಿವಾದ ಅಥವಾ ಹಣಕಾಸು ವ್ಯವಹಾರದಲ್ಲಿನ ಭಿನ್ನಾಭಿಪ್ರಾಯದ ಕಾರಣಕ್ಕೆ ಈ ಕೊಲೆ ನಡೆದಿರಬಹುದೆಂದು ತನಿಖೆಯ ಆರಂಭದಲ್ಲಿ ಶಂಕಿಸಲಾಗಿತ್ತು. ಆದರೆ, ಮೃತರ ಸಂಬಂಧಿಕರು ಹಾಗೂ ಸ್ನೇಹಿತರು ಮಂಗಳಾ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಮಂಗಳಾ ಅವರ ಮೊಬೈಲ್ ಕರೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಅವರು, ಕಿರಣ್‌ಕುಮಾರ್ ಮೊಬೈಲ್‌ಗೆ ಹಲವು ಬಾರಿ ಕರೆ ಮಾಡಿ ಮಾತನಾಡಿರುವುದು ಗೊತ್ತಾಯಿತು. ಈ ಮಾಹಿತಿ ಆಧರಿಸಿ ಕಿರಣ್‌ಕುಮಾರ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂತು' ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry