ಭಾನುವಾರ, ಆಗಸ್ಟ್ 18, 2019
23 °C

ಉದ್ಯಮ; ಮೂರನೇ ಒಂದು ಭಾಗ ಸ್ಥಗಿತ!

Published:
Updated:

ನವದೆಹಲಿ(ಪಿಟಿಐ): ಭಾರತ ಪ್ರಗತಿಪಥದಲ್ಲಿ ಸಾಗುತ್ತಿದೆ ಎಂಬ ದೃಢವಾದ ನಂಬಿಕೆಯ ನಡುವೆಯೇ ಉದ್ಯಮ ಲೋಕದ ಇನ್ನೊಂದು (ನಷ್ಟದ) ಮುಖ ಕೇಂದ್ರ ಕಂಪೆನಿ ವ್ಯವಹಾರಗಳ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿ-ಅಂಶಗಳಿಂದ ಅನಾವರಣಗೊಂಡಿದೆ. ಆ ಅಂಕಿ-ಅಂಶಗಳು ಮಾತ್ರ ಬಹಳ ಕಳವಳಕಾರಿಯಾಗಿವೆ.



ದೇಶದಲ್ಲಿ ಸದ್ಯ ನೋಂದಾಯಿತವಾಗಿರುವ ಕಂಪೆನಿಗಳ ಸಂಖ್ಯೆ 13.29 ಲಕ್ಷ. ಆದರೆ, ಇವುಗಳಲ್ಲಿ 8.84 ಲಕ್ಷ ಕಂಪೆನಿಗಳು ಮಾತ್ರವೇ ಚಟುವಟಿಕೆ ನಡೆಸುತ್ತಾ ಮುಂದಕ್ಕೆ ಹೆಜ್ಜೆ ಇಡುತ್ತಾ ಹೋಗುತ್ತಿವೆ. ಉಳಿದಂತೆ ಮೂರನೇ ಒಂದು ಭಾಗ (ಅಂದಾಜು 4.45 ಲಕ್ಷ) ಕಂಪೆನಿಗಳು ಬಾಗಿಲು ಮುಚ್ಚಿವೆ. ಇನ್ನೂ ಕೆಲವು ನಷ್ಟದ ಹೊರೆ ಹೊರಲಾಗದೇ ಚಟುವಟಿಕೆ ಸ್ಥಗಿತಗೊಳಿಸಲು ಸೂಕ್ತ ಗಳಿಗೆಗಾಗಿ ಕಾಯುತ್ತಿವೆ.



ಇದೆಲ್ಲದರ ಮಧ್ಯೆ ಹೊಸ ಕಂಪೆನಿ  ಆರಂಭಿಸುವ ಪ್ರಮಾಣವಂತೂ ಹೆಚ್ಚುತ್ತಲೇ ಇದೆ. ಕಳೆದ ಒಂದೂವರೆ ವರ್ಷದಲ್ಲಿ 1.50 ಲಕ್ಷ ಹೊಸ ಕಂಪೆನಿಗಳು ದೇಶದ ವಿವಿಧೆಡೆ ನೋಂದಾಯಿಸಿಕೊಂಡಿವೆ. ಜೂನ್ ತಿಂಗಳೊಂದರಲ್ಲಿಯೇ 7,700  ಖಾಸಗಿ ಕಂಪೆನಿ ಸೇರಿದಂತೆ ಒಟ್ಟು 8,064 ಸಂಸ್ಥೆಗಳು ನೋಂದಾಯಿಸಿಕೊಂಡಿವೆ ಎಂಬ ಮಾಹಿತಿ ನೀಡಿದೆ ಸಚಿವಾಲಯದ ಅಧಿಕೃತ ದಾಖಲೆ.



ಈ ವರ್ಷದಲ್ಲಿ ಜೂನ್ ವೇಳೆಗೆಲ್ಲಾ 2.6 ಲಕ್ಷ ಉದ್ದಿಮೆಗಳು ವಿವಿಧ ಕಾರಣಗಳಿಂದಾಗಿ ಬಾಗಿಲು ಹಾಕಿದವು.   ಅಷ್ಟೇ ಅಲ್ಲ, ಚಟುವಟಿಕೆ ಸ್ಥಗಿತಗೊಳಿಸುವುದಕ್ಕಾಗಿ ಇನ್ನೂ 30,386 ಕಂಪೆನಿಗಳು ಸಾಲುಗಟ್ಟಿದ್ದು, ಅಧಿಕೃತ `ಬೀಗಮುದ್ರೆ' ಘೋಷಣೆ ಹೊರಡಿಸಲು ದಿನ ಎಣಿಸುತ್ತಿವೆ.

Post Comments (+)