ಉದ್ಯಾನಕ್ಕೆ ಬಸವಣ್ಣನವರ ಹೆಸರು: ನಾಮಕರಣ ಸೃಷ್ಟಿಸಿದ ವಿವಾದ

7

ಉದ್ಯಾನಕ್ಕೆ ಬಸವಣ್ಣನವರ ಹೆಸರು: ನಾಮಕರಣ ಸೃಷ್ಟಿಸಿದ ವಿವಾದ

Published:
Updated:

ಯಲಹಂಕ: ವಾರ್ಡ್ ಸಂಖ್ಯೆ-4ರ ವ್ಯಾಪ್ತಿಯ ಉಪನಗರದ `ಎ' ಸೆಕ್ಟರ್‌ನ 3ನೇ `ಎ' ಮುಖ್ಯರಸ್ತೆಯ 11ನೇ `ಎ' ಅಡ್ಡರಸ್ತೆ ಹಾಗೂ 12ನೇ `ಎ' ಅಡ್ಡರಸ್ತೆ ನಡುವಿನಲ್ಲಿರುವ ಬಿಬಿಎಂಪಿ ಉದ್ಯಾನವನದಲ್ಲಿ ವೀರಶೈವ ಈಶ್ವರ ಸೇವಾ ಸಮಿತಿ ವತಿಯಿಂದ ವಿಶ್ವಗುರು ಬಸವಣ್ಣನವರ ಪುತ್ಥಳಿಯನ್ನು ಪ್ರತಿಷ್ಠಾಪಿಸಿ, ಉದ್ಯಾನಕ್ಕೆ ಬಸವಣ್ಣನವರ ಹೆಸರನ್ನು ನಾಮಕರಣ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.`ಸಾರ್ವಜನಿಕ ಸ್ಥಳಗಳಲ್ಲಿ ಪುತ್ಥಳಿ ಪ್ರತಿಷ್ಠಾಪಿಸಲು ಹಾಗೂ ಹೆಸರು ನಾಮಕರಣ ಮಾಡಲು ಅನುಸರಿಸಬೇಕಾದ ಕಾನೂನಿನ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಬಿಬಿಎಂಪಿಯಿಂದ ಅನುಮತಿ ಪಡೆಯದೆ ಪ್ರತಿಷ್ಠಾಪಿಸಿರುವ ಪುತ್ಥಳಿಯನ್ನು ಕೂಡಲೇ ತೆರವುಗೊಳಿಸಬೇಕು. ಉದ್ಯಾನದ ಹೆಸರನ್ನೂ ಬದಲಿಸಬೇಕು' ಸ್ಥಳೀಯರು ಒತ್ತಾಯಿಸಿದ್ದಾರೆ.`ಉದ್ಯಾನದಲ್ಲಿ ಪುತ್ಥಳಿಯನ್ನು ಪ್ರತಿಷ್ಠಾಪಿಸಲು ಹಾಗೂ ಉದ್ಯಾನಕ್ಕೆ ಹೆಸರಿಡಲು ಕಾಮಗಾರಿ ಆಗಸ್ಟ್ 12ರಂದು ಆರಂಭವಾಗಿತ್ತು. ಈ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಕೂಡಲೇ ಬಿಬಿಎಂಪಿ ಆಯುಕ್ತರಿಗೆ ದೂರು ನೀಡಲಾಗಿತ್ತು. ಅವರು ವಲಯ ಜಂಟಿ ಆಯುಕ್ತರಿಗೆ ಪತ್ರ ಬರೆದು ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಆದೇಶಿಸಿದ್ದರು. ನಂತರ ಜಂಟಿ ಆಯುಕ್ತರು ಈ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ನಡುವೆ ರಾತ್ರಿ ವೇಳೆ ಕಾಮಗಾರಿ ಕಾಮಗಾರಿ ನಡೆಸಿ ಆಗಸ್ಟ್ 15ರಂದು ಪುತ್ಥಳಿಯನ್ನು ಅನಾವರಣ ಮಾಡಲಾಯಿತು' ಎಂದು ಸ್ಥಳೀಯರಾದ ಜಿ.ಜಗದೀಶ್ ಗಿರಿ ಹಾಗೂ ಪಿ.ಸುಂದರ್ ರಾವ್ ದೂರಿದರು.`ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅನುಮತಿ ದೊರೆತಿರುವುದನ್ನು ಖಚಿತಪಡಿಸಿದರು. ಬಳಿಕ ಕಂದಾಯ ಇಲಾಖೆಯ ಉಪ ಆಯುಕ್ತರು ಹಾಗೂ ಅಧಿಕಾರಿಗಳಲ್ಲಿ ಪ್ರಶ್ನಿಸಿದಾಗ ಉದ್ಯಾನದಲ್ಲಿ ಪುತ್ಥಳಿ ಅನಾವರಣಗೊಳಿಸುವ ಅಥವಾ ಹೆಸರನ್ನು ನಾಮಕರಣ ಮಾಡುವ ಮೊದಲು ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ತಿಳಿಸಿದ್ದರು. ಸಾರ್ವಜನಿಕ ಆಕ್ಷೇಪಣೆ ಮತ್ತು ಸಲಹೆಗಳನ್ನು ಸ್ವೀಕರಿಸಿ ಅನುಸರಿಸಬೇಕಾದ ನಿಯಮಗಳ ಕುರಿತ ಪತ್ರ ನೀಡಿದರು' ಎಂದು ಅವರು ಮಾಹಿತಿ ನೀಡಿದರು.`ಬಿಎಂಟಿಎಫ್ ಹೆಚ್ಚುವರಿ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದಾಗ ಕಾರಣ ಕೇಳಿ ಜಂಟಿ ಆಯುಕ್ತರಿಗೆ ಪತ್ರ ಬರೆದರು. ಇದರಿಂದ ಎಚ್ಚೆತ್ತುಕೊಂಡ ಬಿಬಿಎಂಪಿಯು ಪುತ್ಥಳಿ ಹಾಗೂ ನಾಮಫಲಕವನ್ನು ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಿಸಿತು. ಉದ್ಯಾನಕ್ಕೆ ಹೊಸ ಹೆಸರು ಇಡುವ ಬಗ್ಗೆ ಸಾರ್ವಜನಿಕರು ಆಕ್ಷೇಪಣೆಗಳಿದ್ದರೆ ಅರ್ಜಿ ಸಲ್ಲಿಸಬಹುದು ಎಂದು ಬಿಬಿಎಂಪಿ ಸೆಪ್ಟೆಂಬರ್ 26ರಂದು ಜಾಹೀರಾತು ನೀಡಿತು. ಆಕ್ಷೇಪಣೆ ಸೂಚಿಸಿ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಮೇಯರ್, ಆಯುಕ್ತರು, ಬಿಎಂಟಿಎಫ್ ಸೇರಿದಂತೆ ಅಧಿಕಾರಿಗಳಿಗೆ ಎರಡು ತಿಂಗಳ ಹಿಂದೆ ಪತ್ರ ಬರೆಯಲಾಗಿತ್ತು. ಆದರೆ, ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮೀನಾಮೇಷ ಎಣಿಸುತ್ತಿದ್ದಾರೆ' ಎಂದು ಆರೋಪಿಸಿದರು.`ಪುತ್ಥಳಿಯನ್ನು ಕೂಡಲೇ ತೆರವುಗೊಳಿಸಿ, ಉದ್ಯಾನದ ಹೆಸರು ಬದಲಿಸಲು ಪಾಲಿಕೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಸ್ಥಳೀಯರ ಸಭೆ ಕರೆದು ಕಾನೂನು ಹೋರಾಟ ಸೇರಿದಂತೆ ಮುಂದಿನ ಹೋರಾಟದ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು' ಎಂದು ಅವರು ಎಚ್ಚರಿಸಿದ್ದಾರೆ.`ಜಾತಿಯ ಹೆಸರಿನಲ್ಲಿ ಉದ್ಯಾನವನ್ನು ಆಕ್ರಮಿಸಿಕೊಂಡು ಪ್ರತಿಮೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಇದು ಪ್ರಜಾತಂತ್ರ ವ್ಯವಸ್ಥೆಗೂ ವಿರುದ್ಧ. ಈ ಉದ್ಯಾನಕ್ಕೆ ಸ್ವಾತಂತ್ರ್ಯ ಹೋರಾಟಗಾರರು, ವಿಜ್ಞಾನಿಗಳು ಅಥವಾ ಪರಿಸರ ಹೋರಾಟಗಾರರ ಹೆಸರು ಇಡಬೇಕು' ಎಂದು ಸ್ಥಳೀಯರಾದ ರಮಾಮಣಿ ಒತ್ತಾಯಿಸಿದರು.`ಮುಂದಿನ ಸಭೆಯಲ್ಲಿ ತೀರ್ಮಾನ'

ಪುತ್ಥಳಿ ಅನಾವರಣ ವಿಚಾರ ವಿವಾದಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆಕ್ಷೇಪಣೆಗಳನ್ನು ಆಹ್ವಾನಿಸಿ, ಕೇಂದ್ರ ಕಚೇರಿಯ ಕಂದಾಯ ಆಯುಕ್ತರಿಗೆ ಕಳುಹಿಸಿಕೊಡಲಾಗಿದೆ. ಆಕ್ಷೇಪಣೆಗಳನ್ನು ಸ್ಥಾಯಿ ಸಮಿತಿ ಮುಂದೆ ಮಂಡಿಸಿ, ಮುಂದಿನ ಪಾಲಿಕೆ ಸಭೆಯಲ್ಲಿ ತೀರ್ಮಾನವಾಗುವ ಹಂತದಲ್ಲಿದೆ.  ಸದ್ಯಕ್ಕೆ ಪುತ್ಥಳಿ ಹಾಗೂ ನಾಮಫಲಕವನ್ನು ಹೊದಿಕೆಯಿಂದ ಮುಚ್ಚಲಾಗಿದೆ. ನಿರ್ಣಯದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

-ರಾಮಚಂದ್ರಮೂರ್ತಿ, ಬಿಬಿಎಂಪಿ ಜಂಟಿ ಆಯುಕ್ತ, ಯಲಹಂಕ ವಲಯಪ್ರತಿಮೆ ಸ್ಥಳಾಂತರಕ್ಕೆ ಸೂಚನೆ

ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ ಪುತ್ಥಳಿಯನ್ನು ಕೂಡಲೇ ಸ್ಥಳಾಂತರಿಸಲು ಸಮಿತಿಯವರಿಗೆ ಸೂಚಿಸಲಾಗಿದ್ದು, ಮೂರ‌್ನಾಲ್ಕು ದಿನಗಳಲ್ಲಿ ಪ್ರತಿಮೆಯನ್ನು ಬೇರೆಡೆಗೆ ಸ್ಥಳಾಂತರ ಮಾಡುವುದಾಗಿ ಭರವಸೆ ನೀಡಿದ್ದಾರೆ.

-ಮೊಹಮದ್ ಆಲಿ ಪಿಂಜಾರ್

  ತೋಟಗಾರಿಕಾ ಇಲಾಖೆ ಅಧೀಕ್ಷಕ, ಬಿಬಿಎಂಪಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry