ಶುಕ್ರವಾರ, ಮೇ 27, 2022
22 °C
ಗುಲ್ಬರ್ಗ ವಿವಿ ಕ್ಯಾಂಪಸ್ ಆಕರ್ಷಣೆಗೆ ಯೋಜನೆ

ಉದ್ಯಾನದಲ್ಲಿ ಪ್ರಾಣಿ, ಪಕ್ಷಿಗಳ ಪ್ರತಿಕೃತಿ

ಪ್ರಜಾವಾಣಿ ವಾರ್ತೆ / ಮಹೇಶ ಕನ್ನೇಶ್ವರ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯದ ಜ್ಞಾನಗಂಗಾ ಕ್ಯಾಂಪಸ್‌ನ್ನು ಆಕರ್ಷಣೆಗೊಳಿಸುವ ಹೊಸ ಯೋಜನೆ ಸಿದ್ಧವಾಗಿದೆ.ವಿಶ್ವವಿದ್ಯಾಲಯದ 18 ಎಕರೆ ಪ್ರದೇಶದಲ್ಲಿ ಹಂತ ಹಂತವಾಗಿ ಈ ಯೋಜನೆ  ಕಾರ್ಯರೂಪಕ್ಕೆ ಬರಲಿದೆ. ಮೊದಲ ಹಂತದಲ್ಲಿ ಅಂದಾಜು 7 ಲಕ್ಷ ರೂಪಾಯಿ  ವೆಚ್ಚದಲ್ಲಿ 4 ಎಕರೆ ಪ್ರದೇಶದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡುವುದು. ಆನೆ, ಡೈನೋಸಾರ್, ನವಿಲು, ಜಿರಾಫೆ ಸೇರಿದಂತೆ ವಿವಿಧ ಪ್ರಾಣಿ ಪಕ್ಷಿ ಸಂಕುಲದ  ಪ್ರತಿಕೃತಿಯನ್ನು ನಿರ್ಮಿಸುವುದು ಹಾಗೂ ವಾಯು ವಿಹಾರಿಗಳಿಗಾಗಿ ಮಾರ್ಗವನ್ನು ರೂಪಿಸಲಾಗುತ್ತಿದೆ.ಇದಕ್ಕಾಗಿ ಜುಲೈ 25 ರಂದು ವಿವಿ ಆವರಣದಲ್ಲಿ ಔಪಚಾರಿಕ ಕಾರ್ಯಾಗಾರಕ್ಕೆ ಚಾಲನೆ ಸಿಗಲಿದೆ. ಗುಲ್ಬರ್ಗ ವಿಶ್ವವಿದ್ಯಾಲಯದ ವಿಜುವಲ್ ಆರ್ಟ್ ವಿಭಾಗದ ವಿದ್ಯಾರ್ಥಿಗಳು, ಬೋಧಕರು ಹಾಗೂ ರಾಜ್ಯದ ಪ್ರಮುಖ 10 ಶಿಲ್ಪ ಕಲಾವಿದರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ.ಕಬ್ಬಿಣದಿಂದ ನಿರ್ಮಾಣ ಮಾಡಲಾಗುವ ಪ್ರತಿಕೃತಿಗಳಿಗೆ ಸಿಮೆಂಟ್ ಕಾಂಕ್ರೀಟ್  ಹಾಗೂ ಬಣ್ಣಗಳ ಲೇಪನ ಮಾಡುವ ಮೂಲಕ ಆವರಣದ ಉದ್ಯಾನಕ್ಕೆ ಜೀವ ತುಂಬುವ ಕಾರ್ಯಕ್ಕೆ ಕಲಾವಿದರು, ಶಿಲ್ಪಿಗಳು ಮುನ್ನುಡಿ ಬರೆಯಲಿದ್ದಾರೆ.4 ಎಕರೆ ಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಹಸಿರು ಕಂಗೊಳಿಸಲಿದೆ. ಇದಕ್ಕಾಗಿ ನೀಲನಕ್ಷೆ ಕೂಡಾ ತಯಾರಿಸಲಾಗಿದೆ. ನಗರದ ಸುತ್ತಮುತ್ತಲಿನ ಜನರಿಗೆ ಪ್ರವಾಸಿ ತಾಣ ಇಲ್ಲ ಎಂಬ ಕೊರಗು ದೂರವಾಗಲಿದೆ. ಬುದ್ಧ ವಿಹಾರವೂ ಇದೇ ಮಾರ್ಗದಲ್ಲಿರುವುದರಿಂದ ಇದೊಂದು ಆಕರ್ಷಣೀಯ ಪ್ರಮುಖ ಪ್ರವಾಸಿ ತಾಣವಾಗಲಿದೆ.`ವಿಶ್ವವಿದ್ಯಾಲಯದ ಕ್ಯಾಂಪಸ್‌ನ 18 ಎಕರೆ ಪ್ರದೇಶವನ್ನು ಹಂತ ಹಂತವಾಗಿ  ಸುಂದರಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಆವರಣದಲ್ಲಿ ಮಾತ್ರ ಇಂಥ ಪ್ರಯತ್ನ ಮಾಡಲಾಗಿದೆ. ಇದೀಗ ನಮ್ಮ ವಿಶ್ವವಿದ್ಯಾಲಯವು ಅದೇ  ಹಾದಿಯಲ್ಲಿ ಸಾಗಿದೆ' ಎಂದು ಕುಲಪತಿ ಪ್ರೊ.ಈ.ಟಿ. ಪುಟ್ಟಯ್ಯ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.ಕಲಿಕೆ ಮತ್ತು ಉಳಿಕೆ: `ಕಲಿಕೆ ಮತ್ತು ಉಳಿಕೆ' ಪರಿಕಲ್ಪನೆ ಅಡಿಯಲ್ಲಿ ಕಾರ್ಯಾಗಾರವನ್ನು  ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳ ಕಲಿಕೆಗೆ ಇದೊಂದು ಉತ್ತಮ ಮಾರ್ಗವಾಗಲಿದೆ. ಕಾರ್ಯಾಗಾರದಲ್ಲಿ ನುರಿತ ಶಿಲ್ಪಿಗಳ ಜೊತೆ ವಿದ್ಯಾರ್ಥಿಗಳು ಸೇರಿ ಕೆಲಸ ಮಾಡುವುದರಿಂದ ಅವರ ಕೌಶಲವನ್ನು ಹೆಚ್ಚಿಸಬಹುದು. ಅಲ್ಲದೇ ಕಾರ್ಯಾಗಾರದಲ್ಲಿ ನಿರ್ಮಿಸಿದ ಪ್ರತಿಕೃತಿಗಳು ಉದ್ಯಾನದಲ್ಲಿ ಉಳಿಯಲಿವೆ. ಈಗಾಗಲೇ ಆವರಣದಲ್ಲಿ ಸಸಿ ನೆಡುವ ಕಾರ್ಯ ಮುಂದುವರಿದೆ. ವಿಹಾರಕ್ಕಾಗಿ ದಾರಿ ನಿರ್ಮಾಣ, ನೀರಿನ ವ್ಯವಸ್ಥೆ, ಸಿಮೆಂಟ್ ಆಸನ, ಮಕ್ಕಳಿಗೆ ವಿವಿಧ ಬಗೆಯ ಆಟಿಕೆ ಸಾಮಾಗ್ರಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಉದ್ಯಾನ ನಿರ್ಮಾಣ ಕಾರ್ಯದ ಉಸ್ತುವಾರಿಯನ್ನು ಪ್ರೊ. ಪಿ.ಕೆ.ಖಂಡೋಬಾ ಅವರಿಗೆ ನೀಡಲಾಗಿದೆ ಎಂದು ವಿವಿ ಮೂಲಗೂ ತಿಳಿಸಿವೆ.`ಹಣ ಮೀಸಲು'

`ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಇದ್ದಕ್ಕಾಗಿ ಪ್ರಸ್ತಾವನೆ ಸಲ್ಲಿಸಿ, ಅಗತ್ಯ ಹಣ ಮೀಸಲಿಡಲಾಗಿದೆ. ವಿವಿ ಆವರಣದಲ್ಲಿ ಪ್ರತಿದಿನ ಬೆಳಿಗ್ಗೆ ನೂರಾರು ಜನ ವಿಹಾರಕ್ಕೆ ಬರುತ್ತಾರೆ. ಇದನ್ನು ಗಮನಿಸಿ ಉದ್ಯಾನ ಹಾಗೂ ಪ್ರಾಣಿ, ಪಕ್ಷಿಗಳ ಪ್ರತಿಕೃತಿಗಳ ನಿರ್ಮಾಣ ಕಾರ್ಯಕ್ಕೆ ಮುಂದಾಗ್ದ್ದಿದೇವೆ'

-ಪ್ರೊ. ಈ.ಟಿ.ಪುಟ್ಟಯ್ಯ ಕುಲಪತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.