ಶನಿವಾರ, ಮೇ 15, 2021
24 °C
ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ

ಉದ್ಯಾನನಗರಿಗೆ ಶಂಕಿತ ಉಗ್ರರ ಆಗಮನ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರತಿಷ್ಠಿತ ತಾಜ್ ಸಮೂಹದ ಹೋಟೆಲ್‌ಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿಕೊಂಡು ಮೂವರು ಶಂಕಿತ ಉಗ್ರರು ಶನಿವಾರ ಸಂಜೆ ನಗರಕ್ಕೆ ನುಸುಳಿರುವ ಶಂಕೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಹೈ-ಅಲರ್ಟ್ ಆಗಿದ್ದರು.ಮೂವರು ಶಂಕಿತ ಉಗ್ರರು ನ್ಯಾನೊ ಕಾರಿನಲ್ಲಿ ನಗರಕ್ಕೆ ನುಸಳಿರುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಸಂಜೆ 5ಗಂಟೆ ಸುಮಾರಿಗೆ ಮಾಹಿತಿ ನೀಡಿದೆ.  ಮಾಹಿತಿ ಆಧರಿಸಿದ ಪೊಲೀಸರು, ಕೂಡಲೇ ನಗರದೆಲ್ಲೆಡೆ ವಾಹನಗಳ ತಪಾಸಣೆ ನಡೆಸಿ ಶಂಕಿತ ಉಗ್ರರಿಗಾಗಿ ಶೋಧ ನಡೆಸಿದರು. ಅಲ್ಲದೇ, ಮುಂಜಾಗ್ರತಾ ಕ್ರಮವಾಗಿ ತಾಜ್ ಸಮೂಹದ ಹೋಟೆಲ್‌ಗಳ ಬಳಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿದರು.`ಪಾನಮತ್ತರಾಗಿ ವಾಹನ ಚಾಲನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ವಾರಂತ್ಯದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತದೆ. ಅಂತೆಯೇ, ಈ ವಾರವೂ ವಾಹನಗಳ ತಪಾಸಣೆ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ಉಗ್ರರು ನಗರಕ್ಕೆ ಬಂದಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ' ಎಂದು ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸರು ತಿಳಿಸಿದರು.`ಗುಪ್ತಚರ ಇಲಾಖೆ ಭಯೋತ್ಪಾದನಾ ಚಟುವಟಿಕೆ ಹಾಗೂ ಉಗ್ರರ ಬಗ್ಗೆ ಆಗಾಗ್ಗೆ ರಾಜ್ಯ ಪೊಲೀಸ್ ಇಲಾಖೆಗೆ ಮಾಹಿತಿ ನೀಡುತ್ತಿರುತ್ತದೆ. ಆದರೆ, ಉಗ್ರರು ಬೆಂಗಳೂರಿಗೆ ಬಂದಿರುವ ಸಂಬಂಧ ಕೇಂದ್ರ ಗುಪ್ತಚರ ಇಲಾಖೆಯಿಂದ ಶನಿವಾರ ಯಾವುದೇ ಮಾಹಿತಿ ಬಂದಿಲ್ಲ' ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ `ಪ್ರಜಾವಾಣಿ'ಗೆ ತಿಳಿಸಿದರು.`ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಭಯೋತ್ಪಾದನಾ ಚಟುವಟಿಕೆಗಳ ಬಗ್ಗೆ ಯಾವುದೇ ಮಾಹಿತಿ ನೀಡದಿದ್ದರೂ ರಾಜ್ಯದ ಪೊಲೀಸರು ಆ ಬಗ್ಗೆ ಸದಾ ಎಚ್ಚರದಿಂದಿರುತ್ತಾರೆ' ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.